Vijayapura: ಕೇಂದ್ರ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ
ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ ಪ್ರಯಾಣ ಮಾಡುತ್ತಿದ್ದ ಕಾರು ವಿಜಯಪುರ ತಾಲೂಕಿನ ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಜುಮನಾಳ ಗ್ರಾಮದ ಬಳಿ ಗುರುವಾರ ಸಂಜೆ ಅಪಘಾತಕ್ಕೀಡಾಗಿದೆ.
ವಿಜಯಪುರ: ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯ ರಾಜ್ಯ ಸಚಿವೆ ಸಾಧ್ವಿ ನಿರಂಜನಾ ಜ್ಯೋತಿ (Sadhvi Niranjan Jyoti) ಪ್ರಯಾಣ ಮಾಡುತ್ತಿದ್ದ ಕಾರು ವಿಜಯಪುರ (Vijayapura) ತಾಲೂಕಿನ ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಜುಮನಾಳ ಗ್ರಾಮದ ಬಳಿ ಗುರುವಾರ ಸಂಜೆ ಅಪಘಾತಕ್ಕೀಡಾಗಿದೆ. ವಿಜಯಪುರ – ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೇಂದ್ರ ಸಚಿವೆ ಪ್ರಯಾಣ ಮಾಡುತ್ತಿದ್ದ ಕಾರು ಹಾಗೂ ಕ್ಯಾಂಟರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕೇಂದ್ರ ಸಚಿವೆಗೆ ಹಾಗೂ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯಪುರ ನಗರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಕೇಂದ್ರ ಸಚಿವೆ ಬಾಗಲಕೋಟೆಯತ್ತ ಪ್ರಯಾಣಿಸುತ್ತಿದ್ದರು.
ಜಿಲ್ಲಾ ಆಸ್ಪತ್ರೆಯಲ್ಲಿ ಕೇಂದ್ರ ಸಚಿವೆಗೆ ಸ್ಕ್ಯಾನಿಂಗ್ ಮಾಡಲಾಗಿದೆ. ಅವರ ತಲೆ ಮತ್ತು ಕಾಲಿಗೆ ಅಲ್ಪ ಪ್ರಮಾಣದ ಏಟಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅವರ ಕಾರು ಚಾಲಕ ಇಮಾಮ್ ಶೇಖ್ ತಲೆಗೆ ಗಾಯಗಳಾಗಿವೆ.
ದೇವರ ದಯದಿಂದ ಪಾರಾಗಿದ್ದೇವೆ; ಸಚಿವೆ
ದೇವರ ದಯದಿಂದ ಯಾವುದೇ ಅಪಾಯವಾಗಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದೇವೆ. ಚಾಲಕನಿಗೆ ಸ್ವಲ್ಪ ಮಟ್ಟಿನ ಗಾಯಗಳಾಗಿವೆ. ಗಾಬರಿಯಾಗುವ ಅವಶ್ಯಕತೆಯಿಲ್ಲ ಎಂದು ಪ್ರಾಥಮಿಕ ಚಿಕಿತ್ಸೆ ಬಳಿಕ ಸಚಿವೆ ಪ್ರತಿಕ್ರಿಯಿಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಯಿಂದ ಪ್ರವಾಸಿ ಗೃಹಕ್ಕೆ ತೆರಳಿದ್ದಾರೆ. ಡಿಸಿ ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಹೆಚ್ಡಿ ಆನಂದಕುಮಾರ, ಸಚಿವ ಗೋವಿಂದ ಕಾರಜೋಳ ಪುತ್ರ ಉಮೇಶ ಕಾರಜೋಳ, ನಗರ ಶಾಸಕ ಯತ್ನಾಳ ಪುತ್ರ ರಾಮನಗೌಡ ಪಾಟೀಲ್ ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ಸಚಿವೆಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.
ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರ ಧಾವಿಸಿ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲು ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿರೋಧಿಸಿದರೂ ಬೆಳಗಾವಿ ಗಡಿ ಪ್ರದೇಶದಲ್ಲಿ ಆರೋಗ್ಯ ಯೋಜನೆ ಜಾರಿಗೊಳಿಸಿಯೇ ಸಿದ್ಧ; ಮಹಾರಾಷ್ಟ್ರ ಶಾಸಕ
ಸಾಧ್ವಿ ನಿರಂಜನಾ ಜ್ಯೋತಿ 2019ರ ಮೇ 30 ರಂದು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯ ರಾಜ್ಯ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಇವರು 20144ರಿಂದ ಉತ್ತರ ಪ್ರದೇಶದ ಫತೇಹ್ಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ದೆಹಲಿಯಲ್ಲಿ ರಾಮನ ಮಕ್ಕಳು ಆಡಳಿತ ನಡೆಸಬೇಕೇ ಅಥವಾ ಕಿಡಿಗೇಡಿಗಳ ಮಕ್ಕಳು ಆಡಳಿತ ನಡೆಸಬೇಕೇ ಎಂಬುದನ್ನು ಸಾರ್ವಜನಿಕರು ನಿರ್ಧರಿಸಬೇಕಿದೆ ಎಂದು ಪ್ರತಿಪಕ್ಷಗಳ ನಾಯಕರನ್ನು ಉಲ್ಲೇಖಿಸಿ ಇವರು 2014ರ ಡಿಸೆಂಬರ್ 1ರಂದು ನೀಡಿದ್ದ ಹೇಳಿಕೆ ವಿವಾದಕ್ಕೆ ಗ್ರಾಸವಾಗಿತ್ತು. ಸಂಸತ್ತಿನಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿತ್ತು. ಬಳಿಕ ಅವರು ಸಂಸತ್ತಿನಲ್ಲಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Thu, 16 March 23