ಭೀಮಾತೀರದ ಹಂತಕನ ಹತ್ಯೆ ಹಿಂದೆ ಇದೆಯಾ ಅಡುಗೆ ಕೆಲಸದವಳ ಕೈವಾಡ? ಬಾಗಪ್ಪ ಹರಿಜನ್ ಪುತ್ರಿಯರು ಹೇಳಿದ್ದಿಷ್ಟು
ವಿಜಯಪುರದಲ್ಲಿ ಬಾಗಪ್ಪ ಹರಿಜನರ ಹತ್ಯೆ ಪ್ರಕರಣದ ತನಿಖೆ ಭರದಿಂದ ಸಾಗಿದೆ. ಪುತ್ರಿಯರಾದ ಗಂಗೂಬಾಯಿ ಮತ್ತು ಇಂದ್ರಾಬಾಯಿ ಅವರು ತಮ್ಮ ತಂದೆಯ ಸಂಬಂಧಿಯಾದ ಸಂಜನಾ ಹಾಗೂ ಇತರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಳೆಯ ವೈಷಮ್ಯ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಜಯಪುರ, ಫೆಬ್ರವರಿ 12: ಭೀಮಾತೀರದ ಹಂತಕ ಬಾಗಪ್ಪ ಹರಿಜನ್ (Bhimateerad Hantaka Bagappa Harijan) ಹತ್ಯೆ ಪ್ರಕರಣವನ್ನು ಪೊಲೀಸರು ಹಲವು ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ತಮ್ಮ ತಂದೆಯ ಹತ್ಯೆ ಕುರಿತು ಭಾಗಪ್ಪ ಹರಿಜನ್ ಪುತ್ರಿಯರಾದ ಗಂಗೂಬಾಯಿ ಹಾಗೂ ಇಂದ್ರಾಬಾಯಿ ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಾಗಪ್ಪ ಹರಿಜನ್ ವಿಜಯಪುರ ಹೊರ ವಲಯದ ಮದೀನಾ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದನು. ಇಲ್ಲಿ, ಅಡುಗೆ ಕೆಲಸಕ್ಕಾಗಿ ತನ್ನ ಸಂಬಂಧಿಯಾದ ಸಂಜನಾ ಎಂಬ ಮಹಿಳೆಯನ್ನು ಇರಿಸಿದ್ದನು. ಬಾಗಪ್ಪ ಹರಿಜನ್ ಮೇಲೆ ನಡೆದಿದ್ದ ಫೈರಿಂಗ್ ಪ್ರಕರಣದ ವಿಚಾರಣೆ ಫೆಬ್ರವರಿ 19 ರಂದು ನ್ಯಾಯಾಲಯದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲೆಂದು ಬಾಗಪ್ಪ ಹರಿಜನ್ ಒಂದಿಷ್ಟು ದಿನ ವಿಜಯಪುರದಲ್ಲಿನ ಬಾಡಿಗೆ ಮನೆಗೆ ಬಂದು ವಾಸವಾಗಿದ್ದನು. ಇನ್ನು, ಬಾಗಪ್ಪ ವಿಜಯಪುರದ ಬಾಡಿಗೆ ಮನೆ ಮಾಡಿರುವುದು ಆತನ ವಿರೋಧಿಗಳಿಗೆ ಗೊತ್ತಿರಲಿಲ್ಲವಂತೆ. ಆದರೆ, ಏಕಾಏಕಿ ಮಂಗಳವಾರ ಬಾಗಪ್ಪ ಹರಿಜನ್ ಮೇಲೆ ದಾಳಿ ಮಾಡಲಾಗಿದೆ. ಈ ದಾಳಿ ಹಿಂದೆ ಬಾಗಪ್ಪನ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಆತನ ಸಂಬಂಧಿ ಸಂಜನಾ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಬಾಗಪ್ಪ ಪುತ್ರಿಯರಾದ ಗಂಗೂಬಾಯಿ ಹಾಗೂ ಇಂದ್ರಾಬಾಯಿ ಮಾತನಾಡಿ, “ಬಾಡಿಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಂಜನಾಳ ಮೇಲೆ ನಮಗೆ ಅನುಮಾನವಿದೆ. ಯಲ್ಲಪ್ಪನ ಹರಿಜನ ಮಗ ಭೀಮಶಿ ಹರಿಜನ ಇವರೆಲ್ಲರೂ ಸೇರಿ ಹತ್ಯೆ ಮಾಡಿರಬಹುದು. ಹಾಗೇ, ನಮ್ಮ ತಂದೆ ಹತ್ಯೆ ಬಳಿಕ ಅವರ ಫೋಟೋವನ್ನು ಪಿಂಟ್ಯೂ ಅಲಿಯಾಸ್ ಪ್ರಕಾಶ್ ಹಾಕಿಕೊಂಡಿದ್ದಾನೆ. ನನ್ನ ಸಹೋದರನ ಆತ್ಮಕ್ಕೆ ಶಾಂತಿ ಸಿಕ್ತು ಅಂತ ಸ್ಟೇಟಸ್ ಹಾಕಿಕೊಂಡಿದ್ದಾಬೆ. ಹೀಗಾಗಿ ನಮ್ಮ ತಂದೆ ಬಾಗಪ್ಪ ಹತ್ಯೆ ಪಿಂಟ್ಯೂ ಮಾಡಿದ್ದಾನೆ. ಪಿಂಟ್ಯೂ ಸೇರಿ ಇತರರು ಹತ್ಯೆ ಮಾಡಿದ್ದಾರೆ. ನಮ್ಮ ತಂದೆ ಹತ್ಯೆಗೆ ನ್ಯಾಯ ಸಿಗಬೇಕು. ಪಿಂಟ್ಯೂ ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದರು.
ಬಾಗಪ್ಪ ಹರಿಜನ್ ಕೊಲೆ ಹಿಂದೆ ಇದೆಯಾ ಹಳೇ ವೈಷಮ್ಯ?
2024 ರ ಆಗಷ್ಟ 12 ರಂದು ರವಿ ಹತ್ಯೆಯಾಗಿತ್ತು. ವಿಜಯಪುರ ನಗರದ ಬಸವ ನಗರ ರಸ್ತೆಯ ಮೇಲೆ ಸ್ಕೂಟಿ ಮೇಲೆ ತೆರಳುತ್ತಿದ್ದ ರವಿ ಮೇಲೆ ಇನೋವಾ ಕಾರ್ ಹರಿಸಲಾಗಿತ್ತು. ಇನೋವಾ ಕಾರಿನ ಅಡಿಯಲ್ಲಿ ರವಿ ಶವ ಸಿಕ್ಕಿಹಾಕಿಕೊಂಡಿತ್ತು. ಶವವನ್ನು 2-3 ಕಿಮೀ ದೂರ ಎಳೆದುಕೊಂಡು ಹೋಗಿದ್ದ ಇನೋವಾ ಕಾರನಲ್ಲಿ ತುಳಸಿರಾಮ್ ಹರಿಜನ್ ಹಾಗೂ ಸಹಚರರಿದ್ದರು.
ಇದನ್ನೂ ಓದಿ: ಭೀಮಾತೀರದ ಹಂತಕ ಚಂದಪ್ಪನ ಶಿಷ್ಯನಾಗಿದ್ದ ಬಾಗಪ್ಪ ಹರಿಜನ್; ಈತನ ಅಪರಾಧ ಹಿನ್ನೆಲೆ ಇಲ್ಲಿದೆ
ಈ ಪ್ರಕರಣದಲ್ಲಿ ತುಳಸಿರಾಮನಿಗೆ ಭಾಗಪ್ಪ ಹರಿಜನ್ ಬೆಂಬಲ ನೀಡಿದ್ದಾನೆ ಆರೋಪ ಕೇಳಿ ಬಂದಿತ್ತು. ಬಾಗಪ್ಪ ಹತ್ಯೆಯಾದ ಬಳಿಕ ರವಿ ಸಹೋದರ ಪ್ರಕಾಶ್ ಅಲಿಯಾಸ್ ಪಿಂಟ್ಯಾ ಅಣ್ಣನ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ಸ್ಟೇಟಸ್ ಹಾಕಿದ್ದನು ಎನ್ನಲಾಗಿದೆ.
ಈ ಕಾರಣದಿಂದ ಪಿಂಟ್ಯಾ ಹಾಗೂ ಇತರ ಸಹಚರರು ಭಾಗಪ್ಪನ ಹತ್ಯೆ ಮಾಡಿದ್ದಾರೆ ಎಂದು ಭಾಗಪ್ಪ ಪುತ್ರಿಯರಾದ ಗಂಗೂಬಾಯಿ ಹಾಗೂ ಇಂದಿರಾಬಾಯಿ ಆರೋಪ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Wed, 12 February 25