
ವಿಜಯಪುರ, ಜೂನ್ 04: ಲೋಹದ ಹಕ್ಕಿ ವಿಮಾನದಲ್ಲಿ ಹಾರಾಟಬೇಕೆಂಬ ವಿಜಯಪುರ ಜನರ ಕನಸಿಗೆ ಎರಡು ದಶಕಗಳು ಆಗುತ್ತಾ ಬಂದಿದೆ. ಕಳೆದ 17 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. 2021 ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಮಾನ ನಿಲ್ದಾಣ (Vijayapura airport) ಕಾಮಗಾರಿ ಆರಂಭವಾಗಿತ್ತು. ಇದೀಗ ಕಾಮಗಾರಿ ಮುಗಿದಿದ್ದು, ಉದ್ಘಾಟನೆಗೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್‌ನ (Supreme Court) ಹಸಿರು ಪೀಠ ಇದಕ್ಕೆ ಕೊಕ್ಕೆ ಹಾಕಿದೆ. ಹಿಂದಿನ ಬಿಜೆಪಿ ಸರ್ಕಾರ ಮಾಡಿದ ತಪ್ಪು ಇದಕ್ಕೆ ಕಾರಣವೆಂದು ಆಡಳಿತ ಪಕ್ಷ ಆರೋಪ ಮಾಡಿದೆ.
ವಿಜಯಪುರ ವಿಮಾನ ನಿಲ್ದಾಣಕ್ಕೆ ಮತ್ತೆ ತಡೆಯಾಗಿದೆ. ವಿಜಯಪುರ ವಿಮಾನ ನಿಲ್ದಾಣ ಸೇರಿದಂತೆ ದೇಶದ ಇತರೆ ವಿಮಾನ ನಿಲ್ಧಾಣಗಳು ಆಸ್ಪತ್ರೆಗಳು ಕೈಗಾರಿಕೆಗಳ ಕಟ್ಟಡಗಳು ಸೇರಿದಂತೆ 245 ಕ್ಕೂ ಅಧಿಕ ಪ್ರಕರಣಗಲ್ಲಿ ಹಸಿರು ಪೀಠದಿಂದ ಪರವಾನಿಗೆ ಪಡೆಯದೇ ಕಟ್ಟಡ ಕಾಮಗಾರಿ ಮಾಡಿದ್ದನ್ನು ಪ್ರಶ್ನಿಸಿ ಎನ್ಜಿಓ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟಿನ ಹಸಿರು ಪೀಠ ವಿಚಾರಣೆ ನಡೆಸಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಕಾನೂನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾಗಿದೆ. ಕಾನೂನು ಪ್ರಕಾರ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವುದಕ್ಕೆ ಮುನ್ನ ಹಸಿರು ಪೀಠದಿಂದ ಎನ್ವಿರಾನ್ಮೆಂಟ್ ಕ್ಲಿಯರರ್ಸ್ ಪಡೆದಿಲ್ಲ ಎಂದು ತಗಾದೆ ತೆಗೆದಿತ್ತು. ಮುಂದಿನ ಕಾಮಗಾರಿ ಸೇರಿದಂತೆ ಯಾವುದೇ ಕೆಲಸ ಕಾಮಗಾರಿ ಮಾಡಬಾರದು ಹಾಗೂ ಉದ್ಘಾಟನೆಯನ್ನೂ ಮಾಡಬಾರದು ಎಂದು ಆದೇಶ ಮಾಡಿದೆ. ಇದು ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಬೇಲಿ ಹಾಕಿದಂತಾಗಿದೆ.
ಇದನ್ನೂ ಓದಿ: ಧಾರವಾಡದಲ್ಲಿ ಹೈಟೆಕ್ ಕೈಗಾರಿಕಾ ಘಟಕ ಆರಂಭ: 3 ಸಾವಿರ ಜನರಿಗೆ ಉದ್ಯೋಗವಕಾಶ
2008 ರಲ್ಲಿ ವಿಜಯಪುರ ತಾಲೂಕಿನ ಮದಬಾವಿ ಬುರಣಾಪುರ ಬಳಿ 727.01 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಂದು ಸಿಎಂ ಆಗಿದ್ದ ಯಡಿಯೂರಪ್ಪ ಶಿಲಾನ್ಯಾಸ ಮಾಡಿದ್ದರು. ನಂತರ ಅವರೇ 2021 ರಲ್ಲಿ ಸಿಎಂ ಆಗಿದ್ದಾಗ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ವೇಳೆ ಹಸಿರು ಪೀಠದಿಂದ ಯಾವುದೇ ಪ್ರಮಾಣ ಪತ್ರ ಪಡೆಯದೇ ಕಾಮಗಾರಿ ಆರಂಭಿಸಿದ್ದರು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮುಂದಿನ ಕಾಮಗಾರಿಗಳನ್ನು ಮಾಡಿದೆ. ಸದ್ಯ ಗ್ರೀನ್ ಬೆಂಚ್ನಿಂದ ಎನ್ವಿರಾನ್ಮೆಂಟ್ ಕ್ಲಿಯರರ್ಸ್ ಪಡೆಯದ ಕಾರಣ ಸುಪ್ರೀಂ ನಲ್ಲಿ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಮನ್ವಯತೆಯಿಂದ ಗ್ರೀನ್ ಬೆಂಚ್ನಲ್ಲಿನ ವ್ಯಾಜ್ಯವನ್ನು ಬಗೆ ಹರಿಸಿಕೊಂಡು ಬೇಗನೇ ಏರ್ ಪೋರ್ಟ್ ಉದ್ಘಾಟನೆ ಮಾಡುತ್ತೇವೆಂದು ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ವಿಚಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ತ್ವರಿತವಾಗಿ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿ ವಿಚಾರ ಹಸಿರು ಪೀಠದಲ್ಲಿ ಎನ್ಜಿಓವೊಂದು ಸಲ್ಲಿಸಿದ್ದ ದಾವೆಯಿಂದ ವಾದ ಪ್ರತಿವಾದ ನಡೆದಿತ್ತು. ಹಸಿರು ಪೀಠದಲ್ಲಿ ವಿಚಾರಣೆ ಮುಗಿದಿದೆ. ಆದಷ್ಟು ಬೇಗ ಉದ್ಘಾಟನೆ ಆಗುತ್ತದೆ ಎಂದಿದ್ದಾರೆ. ಬಿಜೆಪಿ ಪಕ್ಷದ ಅಧಿಕಾರದಲ್ಲೇ ಹಸಿರು ಪೀಠದಿಂದ ಎನ್ವಿರಾನ್ಮೆಂಟ್ ಕ್ಲಿಯರರ್ಸ್ ಪಡೆಯದೇ ಕಾಮಗಾರಿ ಆರಂಭಿಸಲಾಗಿತ್ತು. ಕೆಲವರು ಚುನಾವಣೆಯಲ್ಲಿ ಮತಗಳನ್ನು ಪಡೆಯುವ ಆಸೆಯಿಂದ ಗಡಿಬಿಡಿ ಮಾಡಿರುತ್ತಾರೆಂದು ಪರೋಕ್ಷವಾಗಿ ಆಗ ಸಿಎಂ ಆಗಿದ್ದ ಯಡಿಯೂರಪ್ಪ ಹಾಗೂ ಬೆಂಬಲಿಗರ ವಿರುದ್ದ ಯತ್ನಾಳ ಕಿಡಿ ಕಾರಿದರು.
ಇದನ್ನೂ ಓದಿ: ವಿಜಯಪುರ ಕೆನರಾ ಬ್ಯಾಂಕ್ನಲ್ಲಿದ್ದ 58 ಕೆಜಿ ಚಿನ್ನ ಕಳ್ಳತನ! ಪೊಲೀಸರ ದಿಕ್ಕು ತಪ್ಪಿಸಲು ವಾಮಾಚಾರ
ಕಳೆದ 2021 ರಿಂದಲೇ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಿದೆ. ಸದ್ಯ ರನ್‍ವೇ, ಎಸಿಟಿ, ಟ್ಯಾಕ್ಸಿ ವೇ, ಎಪ್ರಾನ್, ಪ್ಯಾಸೆಂಜರ್ ಟರ್ಮಿನಲ್ ಬಿಲ್ಡಿಂಗ್, ಇಸೋಲೇಶನ್ ಬೇ, ಒಳ ರಸ್ತೆಗಳು, ಪೆರಿಪೆರಲ್ ರಸ್ತೆಗಳು ಹಾಗೂ ಇತರೆ ಕಾಮಗಾರಿಗಳು ಮುಕ್ತಾಯವಾಗಿವೆ. ಭಾರತೀಯ ವಿಮಾನಯಾನದ ಕೇಂದ್ರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದೂ ಆಗಿದೆ. ಫೈರ್ ಫೈಟರ್ಸ್ ಗಾಗಿ ಆರ್ಡರ್ ಮಾಡಲಾಗಿದೆ. ಹಸಿರು ಪೀಠದಲ್ಲಿ ಹಿನ್ನೆಡೆಯಾಗಿದ್ದು, ಸರಿಯಾದ ಬಳಿಕವಷ್ಟೇ ಉದ್ಘಾಟನೆಗೆ ಹಸಿರು ನಿಶಾನೆ ಸಿಗಲಿದೆ. ಅಲ್ಲಿಯವರೆಗೂ ಕಾಯೋದು ಅನಿವಾರ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.