ಬಟ್ಟಿ ಧೂಳಿನಿಂದ ಗ್ರಾಮಸ್ಥರು ಹೈರಾಣು; ಗ್ರಾಮದ ಸುತ್ತಲೂ ತಲೆಯೆತ್ತಿದ ಅನಧಿಕೃತ ಇಟ್ಟಿಗೆ ಫ್ಯಾಕ್ಟರಿ
ಹಗಲಿರುಳು ಇಟ್ಟಿಗೆ ಬಟ್ಟಿಗಳಲ್ಲಿ ಕೆಲಸ ನಡೆಯುತ್ತಿರುವ ಕಾರಣ ಇಟ್ಟಿಗೆ ತಯಾರಿಸುವಾಗ ಹೊರ ಸೂಸುವ ಮಣ್ಣಿನ ಕಣಗಳು ಇಡೀ ಊರಿಗೆ ಊರನ್ನೇ ನುಂಗಿ ಹಾಕಿವೆ. ಇನ್ನು ರಸ್ತೆಯಲ್ಲಿ ಹೊರಟರೆ ಸಾಕು ಧೂಳು ಆವರಿಸಿಕೊಂಡು ಸರಿಯಾಗಿ ರಸ್ತೆ ಕಣ್ಣಿಗೆ ಕಾಣೋದಿಲ್ಲ. ವಿಪರೀತ ಎನ್ನುವ ರೀತಿಯಲ್ಲಿ ಇಟ್ಟಿಗೆ ಬಟ್ಟಿಗಳಿಂದ ಮಣ್ಣು ಹೊರ ಸೂಸುತ್ತಿದೆ.
ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಗುಳೇದಗುಡ್ಡ ರೈಲ್ವೇ ನಿಲ್ದಾಣ ವ್ಯಾಪ್ತಿಯ ಪ್ರದೇಶದಲ್ಲಿ ಧೂಳು ಹೆಚ್ಚಾಗಿದ್ದು, ಇಲ್ಲಿನ ಗ್ರಾಮಸ್ಥರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರಕ್ಕೆ ಒಳಪಡುವ ಊರು ಇದಾಗಿದ್ದು, ಬಾದಾಮಿ ರೇಲ್ವೆ ಸ್ಟೇಷನ್ ಎಂದು ಕರೆಯಲ್ಪಡುತ್ತದೆ. ಸುಮಾರು 80-90 ಮನೆಗಳನ್ನು ಹೊಂದಿರುವ ಈ ಗ್ರಾಮದ ಜನರು ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ. ಇದಕ್ಕೆ ಮುಖ್ಯ ಕಾರಣ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ನೂರಾರು ಇಟ್ಟಿಗೆ ಫ್ಯಾಕ್ಟರಿಗಳು. ಈ ಫ್ಯಾಕ್ಟರಿಗಳಿಂದ ನಿತ್ಯವೂ ಹೊರ ಸೂಸುವ ಸುಟ್ಟ ಮಣ್ಣಿನ ಕಣಗಳಿಂದ ಇಲ್ಲಿನ ಜನ ಅಕ್ಷರಶಃ ಜರ್ಝರಿತರಾಗಿ ಹೋಗಿದ್ದಾರೆ.
ವಿಷಕಾರಿ ಧೂಳು ಇಡೀ ಗ್ರಾಮವನ್ನೇ ಆವರಿಸಿದೆ. ಜೊತೆಗೆ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿನ ಬೆಳೆಗಳ ಮೇಲೂ ಸುಟ್ಟ ಕಪ್ಪು ಮಣ್ಣಿನ ಕಣಗಳು ಬಿದ್ದಿವೆ. ಕೇವಲ ಬೆಳೆಗಳಷ್ಟೇ ಅಲ್ಲದೇ ಮನೆಗಳಲ್ಲಿನ ಪಾತ್ರೆಗಳ ಮೇಲೂ ಧೂಳು ಆವರಿಸಿ ಜನರ ಜೀವ ಹಿಂಡುತ್ತಿದೆ. ಹಲವಾರು ವರ್ಷಗಳಿಂದ ಹೀಗೆ ಇದ್ದು, ವೃದ್ಧರಾದಿಯಾಗಿ ಎಲ್ಲರಿಗೂ ಕಾಯಿಲೆಗಳ ಭೀತಿ ಶುರುವಾಗಿದೆ.
ಗುಳೇದಗುಡ್ಡ ರೈಲ್ವೆ ಸ್ಟೇಷನ್ ಗ್ರಾಮದಿಂದ ಕೆಲವಡಿ, ಗುಳೇದಗುಡ್ಡ ಪಟ್ಟಣಕ್ಕೆ ಹೋಗುವ ರಸ್ತೆ ಮಾರ್ಗದುದ್ದಕ್ಕೂ ಈ ಇಟ್ಟಿಗೆ ಬಟ್ಟಿಗಳು ಕಣ್ಣಿಗೆ ರಾಚುತ್ತವೆ. ಹಗಲಿರುಳು ಇಟ್ಟಿಗೆ ಬಟ್ಟಿಗಳಲ್ಲಿ ಕೆಲಸ ನಡೆಯುತ್ತಿರುವ ಕಾರಣ ಇಟ್ಟಿಗೆ ತಯಾರಿಸುವಾಗ ಹೊರ ಸೂಸುವ ಮಣ್ಣಿನ ಕಣಗಳು ಇಡೀ ಊರಿಗೆ ಊರನ್ನೇ ನುಂಗಿ ಹಾಕಿವೆ. ಇನ್ನು ರಸ್ತೆಯಲ್ಲಿ ಹೊರಟರೆ ಸಾಕು ಧೂಳು ಆವರಿಸಿಕೊಂಡು ಸರಿಯಾಗಿ ರಸ್ತೆ ಕಣ್ಣಿಗೆ ಕಾಣೋದಿಲ್ಲ. ಹೀಗೆ ವಿಪರೀತ ಎನ್ನುವ ರೀತಿಯಲ್ಲಿ ಇಟ್ಟಿಗೆ ಬಟ್ಟಿಗಳಿಂದ ಮಣ್ಣು ಹೊರ ಸೂಸುತ್ತಿದೆ.
ಆ ಸ್ಥಳದಲ್ಲಿ ಒಟ್ಟು 46 ಇಟ್ಟಿಗೆ ಬಟ್ಟಿಗಳಿವೆ. ಅವುಗಳಲ್ಲಿ ಕೇವಲ ನಾಲ್ಕೈದು ಬಟ್ಟಿಯವರು ಮಾತ್ರ ಭೂಮಿಯನ್ನು ಎನ್ಎ (ಕೃಷಿಯೇತರ ಭೂಮಿ) ಮಾಡಿಸಿಕೊಂಡು ಇಟ್ಟಿಗೆ ಬಟ್ಟಿ ಆರಂಭಿಸಿದ್ದಾರೆ. ಉಳಿದ ಯಾವುದೇ ಇಟ್ಟಿಗೆ ಬಟ್ಟಿಗೆ ಅನುಮತಿ ಇಲ್ಲ. ಭೂಮಿ ಕೂಡ ಎನ್ಎ ಆಗಿಲ್ಲ. ಸ್ಥಳೀಯರ ದೂರಿನ ಮೇರೆಗೆ ಈಗಾಗಲೇ ಆ ಬಟ್ಟಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಒಂದು ತಿಂಗಳಲ್ಲಿ ಎನ್ಎ ಮಾಡಿಸಿಕೊಂಡು ಅನುಮತಿ ಪಡೆಯಲು ಕಾಲಾವಕಾಶ ನೀಡಲಾಗುವುದು. ನಂತರ ಇದಕ್ಕೆ ತಪ್ಪಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗುಳೇದಗುಡ್ಡ ತಹಸೀಲ್ದಾರರಾದ ಜಿ.ಎಮ್.ಕುಲಕರ್ಣಿ ಹೇಳಿದ್ದಾರೆ.
ಮಣ್ಣಿನ ಕಣಗಳು ಕ್ರಮೇಣ ದೇಹ ಸೇರುತ್ತಿದೆ. ಇದರಿಂದ ನಾನಾ ರೋಗ-ರುಜಿನಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಯಾವುದೇ ಅನುಮತಿ ಪಡೆಯದಿದ್ದರೂ ರಾಜಾರೋಷವಾಗಿ ಆಕ್ರಮವಾಗಿ ಇಟ್ಟಿಗೆಯನ್ನು ಇಲ್ಲಿ ತಯಾರಿಸುತ್ತಿದ್ದಾರೆ. ಮಣ್ಣಿನ ಧೂಳಿನಿಂದ ಇದರ ಪರಿಣಾಮದಿಂದ ನಮ್ಮನ್ನು ಮುಕ್ತಿಗೊಳಿಸಿ ಎಂದು ಸ್ಥಳೀಯರಾದ ಮಲ್ಲಯ್ಯ ತಿಳಿಸಿದ್ದಾರೆ.
ಇಲ್ಲಿ ಸುಮಾರು ವರ್ಷಗಳಿಂದ ಇಟ್ಟಿಗೆ ಬಟ್ಟಿ ಮಾಡುತ್ತಿದ್ದೇವೆ. ನಾವೊಬ್ಬರೇ ಅಲ್ಲ, ಸಾಕಷ್ಟು ಜನ ಇದೆ ಕೆಲಸ ಮಾಡುತ್ತಿದ್ದಾರೆ. ಬಂದ್ ಮಾಡಿಸುವುದಾದರೆ ಎಲ್ಲರ ಬಟ್ಟಿ ಬಂದ್ ಮಾಡಿಸಲಿ. ಆದರೆ ಯಾರಿಗೂ ಏನು ಮಾಡಿಳ್ಳುವುದಕ್ಕೆ ಆಗೋದಿಲ್ಲ, ಎಲ್ಲಾ ಅಧಿಕಾರಿಗಳಿಗೂ ಏನು ತಲುಪಿಸಬೇಕು ತಲುಪಿಸುತ್ತಿದ್ದೇವೆ ಎಂದು ಇಟ್ಟಿಗೆ ಬಟ್ಟಿ ಮಾಲೀಕ ನೂರ ಅಹ್ಮದ್ ಖಾಜಿ ಹೇಳಿದ್ದಾರೆ.
ಒಟ್ಟಿನಲ್ಲಿ ಇಟ್ಟಿಗರ ಬಟ್ಟಿಗಳಿಂದ ಇಡೀ ಗುಳೇದಗುಡ್ಡ ರೈಲ್ವೆ ಸ್ಟೇಷನ್ ಗ್ರಾಮ ಧೂಳುಮಯವಾಗಿದೆ. ವಿಪರೀತ ಧೂಳು ಆವರಿಸಿದ ಕಾರಣ ಜನ ಇನ್ನಿಲ್ಲದ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಆಕ್ರಮ ದಂಧೆಗೆ ಕಡಿವಾಣ ಹಾಕಿ ಜನರ ಆರೋಗ್ಯ ಕಾಪಾಡಬೇಕಾಗಿದೆ.
(ರವಿ ಮೂಕಿ 9980914144)
ಇದನ್ನೂ ಓದಿ: Farmers Protest: ರೈತ ಹೋರಾಟ ಡಿಸೆಂಬರ್ವರೆಗೂ ಮುಂದುವರಿಯಬಹುದು: ರೈತ ಮುಖಂಡ ರಾಕೇಶ್ ಟಿಕಾಯತ್
(Villagers suffering from different diseases as illegal bricks factory outlet dust spreading over air in Bagalkot)