ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ: ಅಶೋಕ್​ಗೆ ಸಿದ್ದರಾಮಯ್ಯ ಹೀಗೆಂದಿದ್ದೇಕೆ?

|

Updated on: May 31, 2024 | 9:56 AM

ಪ್ರತಿಪಕ್ಷ ನಾಯಕ ಆರ್ ಅಶೋಕ್​ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್ ಎಂದು ವ್ಯಂಗ್ಯವಾಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಹೀಗೆಂದಿದ್ದೇಕೆ? ಏನು ಹೇಳಿದ್ದರು ಅಶೋಕ್? ಪೂರ್ಣ ವಿವರ ಇಲ್ಲಿದೆ.

ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ: ಅಶೋಕ್​ಗೆ ಸಿದ್ದರಾಮಯ್ಯ ಹೀಗೆಂದಿದ್ದೇಕೆ?
ಸಿದ್ದರಾಮಯ್ಯ & ಆರ್ ಅಶೋಕ್
Follow us on

ಬೆಂಗಳೂರು, ಮೇ 31: ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಪಕ್ಷ ನಾಯಕ ಆರ್ ಅಶೋಕ್​ ಅವರನ್ನುದ್ದೇಶಿಸಿ ವ್ಯಂಗ್ಯವಾಡಿದ್ದಾರೆ. ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್​ಗಳಿಗೆ ಕೇರಳದ ಮಲಯಾಳಿ ಹುಡುಗರನ್ನು ಚಾಲಕರನ್ನಾಗಿ ನೇಮಿಸುತ್ತಿರುವ ಬಗ್ಗೆ ಮತ್ತು ಇಲ್ಲಿನ ಚಾಲಕರಿಗೆ ಸರಿಯಾದ ವೇತನ ನೀಡದಿರುವ ಅವ್ಯವಸ್ಥೆ ಬಗ್ಗೆ ‘ಟಿವಿ9’ ಗುರುವಾರ ವಿಸ್ತೃತ ವರದಿ ಪ್ರಕಟಿಸಿತ್ತು. ಇದನ್ನು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಉಲ್ಲೇಖಿಸಿದ್ದ ಆರ್ ಅಶೋಕ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೀಗ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಅಶೋಕ್ ಎಕ್ಸ್ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಸ್ವಾಮಿ ವಿರೋಧ ಪಕ್ಷದ ನಾಯಕರೇ, ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆ. ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ ಆಯುಷ್ಯ ಕಡಿಮೆ. ನಮ್ಮ ಸತ್ಯದ ಒಂದು ಏಟಿಗೆ ಅದು ಕುಸಿದುಬೀಳುತ್ತಲೇ ಇದೆ. ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್’ ಎಂದು ಉಲ್ಲೇಖಿಸಿದ್ದಾರೆ.

ಸಿದ್ದರಾಮಯ್ಯ ಎಕ್ಸ್​ ಸಂದೇಶ


ಮುಂದುವರಿದು, ಈಗ ಸತ್ಯದ ಮಾತುಗಳನ್ನು ಕೇಳುವಂತವರಾಗಿ ಅಶೋಕ್ ಅವರೇ, ಪ್ರಪ್ರಥಮವಾಗಿ ಸಾರಿಗೆ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯು ಕೇಂದ್ರ ಬಿಜೆಪಿ ಸರ್ಕಾರದ ನೀತಿ ಯೋಜನೆಯಂತೆ ಜಾರಿಯಾಗಿದೆ. ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರಿಗೆ ಸಂಸ್ಥೆಗಳು ನೇರವಾಗಿ ಖರೀದಿಸುವಂತಿಲ್ಲ, ಖಾಸಗಿ ಕಂಪನಿಯವರು ಮಾಲೀಕತ್ವ ಹೊಂದಿರುತ್ತಾರೆ, ಅವರಿಗೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ನೇರವಾಗಿ ನೀಡುತ್ತದೆ ಹಾಗೂ ಚಾಲಕರನ್ನು ನಿಯೋಜಿಸುವ ಕಾರ್ಯವು ಖಾಸಗಿ ಅವರಿಗೆ ನೀಡಲಾಗಿದೆ‌. ಚಾಲಕರ ವೇತನ, ಆಯ್ಕೆ ಯಾವುದರಲ್ಲಿಯೂ ಸಾರಿಗೆ ಸಂಸ್ಥೆಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಬಸ್ಸುಗಳ ಕಾರ್ಯಾಚರಣೆ ಹೊಣೆ ಮಾತ್ರ ಸಾರಿಗೆ ಸಂಸ್ಥೆಗಳದ್ದು, ಈ ವಿಷಯವನ್ನು ಹತ್ತು ಹಲವಾರು ಬಾರಿ ನಮ್ಮ ಸಾರಿಗೆ ಸಚಿವರು ಪ್ರತಿಯೊ‌ಂದು ವೇದಿಕೆಯಲ್ಲಿಯೂ ಸ್ಪಷ್ಟಪಡಿಸಿರುತ್ತಾರೆ. ತಮಗೆ ಅದು ಅರ್ಥವಾಗದಿರುವುದು ನಿಜಕ್ಕೂ ಶೋಚನೀಯ ಎಂದು ಉಲ್ಲೇಖಿಸಿದ್ದಾರೆ.

ಯುವಕರಿಗೆ ಅದರಲ್ಲಿಯೂ ರಾಜ್ಯದ ಯುವಕರಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಲು ಕಾರಣವಾದ ಕೇಂದ್ರ ಸರ್ಕಾರದ ಈ ಯೋಜನೆಯ ಬಗೆಗಿನ ತಮ್ಮ ನೋವು, ದುಃಖ ಮತ್ತು ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ತವಕ ನಿಮ್ಮಲ್ಲಿದ್ದರೆ ದಯವಿಟ್ಟು ನಿಮ್ಮ ಪೂಜ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿ ಉತ್ತರ ಪಡೆಯಿರಿ, ಅಸಂಬದ್ಧ ಟ್ವೀಟ್ ಗಳ ಮೂಲಕ ನಿಮ್ಮ ಅಜ್ಞಾನವನ್ನು ಪ್ರದರ್ಶಿಸಬೇಡಿ ಅಶೋಕ್ ಅವರೇ. ರಾಜ್ಯದ ಬಿಜೆಪಿ ನಾಯಕರೇ, ನಿಮ್ಮ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ಮೇಲೆ 5,900 ಕೋಟಿ ರೂ. ಸಾಲ ಮಾಡಿ ಆ ಹೊರೆಯನ್ನು ನಮ್ಮ‌ ತಲೆ ಮೇಲೆ ಹೊರೆಸಿ ಹೋಗಿದ್ದೀರಿ. ಶಾಂತಿನಗರ ಟಿ.ಟಿ.ಎಂ.ಸಿ ಯನ್ನು ಸಾಲ ಪಡೆಯಲು ಅಡವಿಟ್ಟಿದ್ದು, ತಮ್ಮ ಆಡಳಿತ ಅವಧಿಯಲ್ಲಿಯೇ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಸಾರಿಗೆ ಸಂಸ್ಥೆಗಳಲ್ಲಿ 14,000 ಹುದ್ದೆಗಳು ಖಾಲಿಯಿದ್ದರೂ, ತಮ್ಮ ಅವಧಿಯಲ್ಲಿ ಒಂದೇ ಒಂದು ನೇಮಕಾತಿ ಮಾಡದೆ, ನಮ್ಮ ಅವಧಿಯಲ್ಲಿ ಹೊರಡಿಸಲಾಗಿದ್ದ ನೇಮಕಾತಿ‌ ಪ್ರಕಟಣೆಗಳಿಗೂ ತಡೆತಂದಿರುವುದನ್ನು ಮರೆತು ಬಿಟ್ಟಿದ್ದೀರಾ? ನಮ್ಮ ಸರ್ಕಾರ ಬಂದೊಡನೆಯೇ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು, ಈಗಾಗಲೇ 1,650 ಚಾಲಕ/ ನಿರ್ವಾಹಕರು ಹಾಗೂ 250 ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಭರದಿಂದ ಸಾಗಿದೆ. ನಾಲ್ಕು ಸಾರಿಗೆ ನಿಗಮಗಳಲ್ಲಿ‌ ಕಳೆದ ಒಂದು ವರ್ಷದ ಅವಧಿಯಲ್ಲಿ 500 ಕ್ಕೂ ಹೆಚ್ಚು ಅನುಕಂಪದ ಆಧಾರದ‌ ಮೇಲೆ‌ ನೇಮಕಾತಿ‌ ಪತ್ರವನ್ನು ಸಿಬ್ಬಂದಿಗಳ ಅವಲಂಬಿತರಿಗೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಯುವಕರಿಗೆ ನಿರುದ್ಯೋಗ ಭಾಗ್ಯ ಕರುಣಿಸಿ, ಸಾರಿಗೆ ಸಂಸ್ಥೆಗಳನ್ನು ಅವನತಿಯತ್ತ ಕೊಂಡ್ಯೊಯ್ದ ಹೆಗ್ಗಳಿಕೆ ತಮ್ಮದೇ ಅಲ್ಲವೇ ಅಶೋಕ್ ಅವರೇ? ನಾವು ನುಡಿದಂತೆ ನಡೆಯುವವರು, ತಮ್ಮಂತೆ ಬರೀ ಭಾಷಣದಲ್ಲಿ ಕೋಟಿ ಕೋಟಿ ಉದ್ಯೋಗ ಭಾಗ್ಯ ಕರುಣಿಸಿ, ಯುವಜನರನ್ನು ಶೋಷಿಸುವ ಕಾರ್ಯ ಮಾಡಿಲ್ಲ. ಸಾರಿಗೆ ಸಂಸ್ಥೆಗಳಲ್ಲಿ ಕಳೆದ 5 ವರ್ಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಮಾಡದೇ, ಡಕೋಟ ಬಸ್ಸುಗಳನ್ನು ದಯಪಾಲಿಸಿರುವ ನೀವು ಮಾತನಾಡುವ ಪರಿಗೆ ವಿಷಾದವಲ್ಲದೇ ಮತ್ತೇನು ವ್ಯಕ್ತಪಡಿಸಲು ಸಾಧ್ಯ? ತಮ್ಮ ಬೇಜಾವಬ್ದಾರಿ, ಆಧಾರರಹಿತ, ತಪ್ಪು ಹೇಳಿಕೆಗಳಿಗೆ ಸಂತಾಪ ಸೂಚಿಸುತ್ತಾ ನಿಮಗೆ ನೀವು ನಂಬಿರುವ ದೇವರು ಸತ್ಯ ಹೇಳುವ ಸದ್ಬುದ್ದಿಯನ್ನು ಕರುಣಿಸಲು ಎಂದು ಹಾರೈಸುತ್ತೇನೆ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ಗಳಿಗೆ ಕೇರಳದ ಮಲಯಾಳಿ ಹುಡುಗರೀಗ ಚಾಲಕರು! ಕನ್ನಡ ಬಾರದವರ ಜತೆ ಕಂಡಕ್ಟರ್​ಗಳು ಕಂಗಾಲು

ಇನ್ನು ‘ಟಿವಿ9’ ವರದಿಯನ್ನು ಉಲ್ಲೇಖಿಸಿ ಎಕ್ಸ್ ಸಂದೇಶ ಪ್ರಕಟಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಯತ್ನಾಳ್ ಎಕ್ಸ್​ ಸಂದೇಶ


‘ಇದೆಂಥ ನ್ಯಾಯ? ನ್ಯಾಯಯುತವಾಗಿ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗವನ್ನು ಪಕ್ಕದ ರಾಜ್ಯದವರಿಗೆ ಕೊಡುವ ತರ್ಕವೇನು? ಇದು ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ. ಈ ಮೂರ್ಖತನದ ನಿರ್ಧಾರವನ್ನು ಕೂಡಲೇ ಹಿಂಪಡೆದು, ನಮ್ಮ ಕನ್ನಡಿಗರಿಗೆ ಚಾಲಕರ ಕೆಲಸವನ್ನು ನೀಡಬೇಕು. ಇಷ್ಟಕ್ಕೂ, ಬೆಂಗಳೂರಿನ ರೂಟ್ ಗೊತ್ತಿಲ್ಲದ, ಕನ್ನಡ ಭಾಷೆ ಗೊತ್ತಿಲದೇ, ಕೇವಲ ಕಡಿಮೆ ಸಂಬಳಕ್ಕೆ ಸಿಕ್ಕರೂ ಎಂದು ನೇಮಕ ಮಾಡಿಕೊಳ್ಳುವುದು ಬಿ.ಎಂ.ಟಿ.ಸಿ ಮಾಡಿರುವ ತಪ್ಪು ನಿರ್ಧಾರ. ಬಿಎಂಟಿಸಿಯಲ್ಲಿ ಚಾಲಕರಾಗಬೇಕು ಎಂದರೆ ನಿಯಮ ಪ್ರಕಾರ SSLC ಉತ್ತೀರ್ಣರಾಗಿರಬೇಕು. ಹೆವಿ ಡ್ರೈವಿಂಗ್ ಪರವಾನಗಿ (heavy driving license) ಇರಬೇಕು ಮತ್ತು ಎರಡು ವರ್ಷ ಅನುಭವ ಇರಬೇಕು. ಆದರೆ ಖಾಸಗಿ ಎಲೆಕ್ಟ್ರಿಕ್ ಬಸ್ ಕಂಪನಿಗಳು ನಿಯಮ ಉಲ್ಲಂಘಿಸಿ ಅನುಭವವೇ ಇಲ್ಲದ ಸಣ್ಣಪುಟ್ಟ ಹುಡುಗರನ್ನು ನೇಮಕ ಮಾಡಿಕೊಂಡು, ಪ್ರಯಾಣಿಕರ ಜೀವಕ್ಕೂ ಕುತ್ತು ತರುತ್ತಿದೆ. ಈ ಕೂಡಲೇ ಈ ನಿರ್ಧಾರವನ್ನು ಹಿಂಪಡೆದು ನಿಯಮಾನುಸಾರ ನೇಮಕಾತಿ ಮಾಡಿಕೊಂಡು, ಶೇಕಡಾ 100 ರಷ್ಟು ಉದ್ಯೋಗಗಳು ಕನ್ನಡಿಗರಿಗೆ ನೀಡಬೇಕು’ ಎಂದು ಯತ್ನಾಳ್ ಆಗ್ರಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ