ನವದೆಹಲಿ/ಬೆಂಗಳೂರು, (ಮೇ 23): ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ (Prajwal Revanna Case) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದಿದ್ದು, ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್‌ಪೋರ್ಟ್ (Diplomatic passport) ರದ್ದು ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಸಿದ್ದರಾಮಯ್ಯ (Siddaramaiah) ಮತ್ತೊಂದು ಪತ್ರ ಬರೆದ ಬೆನ್ನಲ್ಲೇ ಕೇಂದ್ರ ಸರ್ಕಾರವು ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ಆದ್ರೆ, ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವುದು ಅಷ್ಟು ಸುಲಭ ಇಲ್ಲ. ಅದರದ್ದೇಯಾದ ಕಾನೂನು ಪ್ರಕ್ರಿಯೆಗಳು ಇವೆ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಬೇಕೆಂದರೆ ಮುಖ್ಯವಾಗಿ ಮೊದಲು ನ್ಯಾಯಾಲಯದ ಅನುಮತಿಬೇಕು.
ಭಾರತೀಯ ವಿದೇಶಾಂಗ ಇಲಾಖೆಗೆ ಎಸ್‌ಐಟಿ ಅಧಿಕಾರಿಗಳು ರಾಜ್ಯ ಗೃಹ ಇಲಾಖೆ ಮುಖಾಂತರ ಪತ್ರ ರವಾನಿಸಿದ್ದಾರೆ. ಈ ಹಿಂದೆ ಸಿಎಂ ಪತ್ರ ಬರೆದಿದ್ದ ವೇಳೆ ನ್ಯಾಯಾಲಯದ ಆದೇಶ ಬೇಕು ಎಂದು ಕೇಂದ್ರ ಗೃಹ ಇಲಾಖೆ ಹೇಳಿತ್ತು. ಹಾಗಾಗಿ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಪಡೆದು ಎಸ್‌ಐಟಿಯವರು ಪುನಃ ಪತ್ರ ಬರೆದಿದ್ದಾರೆ. ಹೀಗಾಗಿ ಭಾರತೀಯ ವಿದೇಶಾಂಗ ಇಲಾಖೆಯು ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆಯನ್ನು ಆರಂಭ ಮಾಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ಪ್ರಧಾನಿ ಮೋದಿಗೆ ಮತ್ತೊಮ್ಮೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ಭಾರತೀಯ ರಾಜತಾಂತ್ರಿಕರು, ಸರ್ಕಾರಿ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ಪರ ಪ್ರತಿನಿಧಿಸುವ ವ್ಯಕ್ತಿಗಳಿಗೆ ಈ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಅನ್ನು ನೀಡಲಾಗುತ್ತದೆ. ಸಾಮಾನ್ಯ ಪಾಸ್ ಪೋರ್ಟ್ ಬದಲಿಗೆ ರಾಜತಾಂತ್ರಿಕ ಪಾಸ್ ಪೋರ್ಟ್ ಪಡೆದಿರುತ್ತಾರೆ. ಸಾಮಾನ್ಯ ಪಾರ್ಸ್ ಪೋರ್ಟ್ ಸರಂಡರ್ ಮಾಡಿದ ಬಳಿಕವೇ ರಾಜತಾಂತ್ರಿಕ ಪಾಸ್ ಪೋರ್ಟ್ ಕೊಟ್ಟಿರುತ್ತಾರೆ. ಹೀಗಾಗಿ ಇರುವ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವುದು ಅಷ್ಟು ಸುಲಭ ಇಲ್ಲ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡಲು ಕೋರ್ಟ್ ಅನುಮತಿ ಬೇಕಾಗುತ್ತದೆ. ಅದರಂತೆ ಪ್ರಜ್ವಲ್ ರೇವಣ್ಣರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ವಿದೇಶಾಂಗ ಇಲಾಖೆ ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ. ಇದು 1967ರ ಪಾಸ್‌ಪೋರ್ಟ್ ಕಾಯ್ದೆಯ ವ್ಯಾಪ್ತಿಗೆ ಬರುವುದರಿಂದ ಅದರ ನಿಬಂಧನೆಗಳಂತೆ ನ್ಯಾಯಾಲಯದಿಂದ ನಿರ್ದೇಶನ ಬರಬೇಕು. ಬಳಿಕ ಗೃಹ ಇಲಾಖೆ ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದ್ರೆ, ವಿದೇಶಾಂಗ ಇಲಾಖೆ ಪಾಸ್‌ಪೋರ್ಟ್ ರದ್ದು ಮಾಡುತ್ತೆ. ಒಮ್ಮೆ ರದ್ದಾದ್ರೆ ಎಲ್ಲಾ ದೇಶಗಳ ಇಮಿಗ್ರೇಷನ್‌ಗೆ ಮಾಹಿತಿ ಹೋಗುತ್ತೆ. ಹೀಗಾಗಿ ಭಾರತಕ್ಕೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹೀಗಿರುವಾಗ ಭಾರತಕ್ಕೆ ಮರಳದೇ ಪ್ರಜ್ವಲ್ಗೆ ಬೇರೆ ದಾರಿ ಇರುವುದಿಲ್ಲ.
ಒಮ್ಮೆ ಪಾಸ್‌ಪೋರ್ಟ್ ರದ್ದಾದರೆ ಈ ಬಗ್ಗೆ ಎಲ್ಲ ದೇಶಗಳ ಇಮಿಗ್ರೇಷನ್‌ಗೂ ಮಾಹಿತಿಯನ್ನು ರವಾನೆ ಮಾಡಲಾಗುತ್ತದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಇಲ್ಲವೇ ಐಡೆಂಟಿಟಿ ಬದಲಾಯಿಸಿ ತಲೆಮರೆಸಿಕೊಂಡು ಓಡಾಡಬೇಕು. ಹೀಗಾಗಿ ಒಂದು ವೇಳೆ ಪಾರ್ಸ್ಪೋರ್ಟ್ ರದ್ದಾದರೆ ಪ್ರಜ್ವಲ್ ರೇವಣ್ಣಗೆ ಮತ್ತುಷ್ಟ ಸಂಕಷ್ಟ ಎದುರಾಗಲಿದೆ. ಹೀಗಾಗಿ ಅವರು ಭಾರತಕ್ಕೆ ಶೀಘ್ರದಲ್ಲೇ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ವೀಸಾ ಇಲ್ಲದೆ ಪ್ರಜ್ವಲ್ ರೇವಣ್ಣ ದಿಢೀರ್ ಜರ್ಮನಿಗೆ ಹಾರಿದ್ದೇಗೆ? ಇಲ್ಲಿದೆ ಸಂಪೂರ್ಣ ವಿವರ
ಒಂದು ವೇಳೆ ಪಾಸ್‌ಪೋರ್ಟ್ ರದ್ದು ಮಾಡಿದರೆ, ಎರಡು ವಿಧಾನಗಳಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಭಾರತಕ್ಕೆ ಕರೆತರಬಹುದು. ಪ್ರಜ್ವಲ್ ಯಾವ ದೇಶದಲ್ಲಿದ್ದಾರೋ ಅಲ್ಲಿ ಅವರನ್ನು ಹಸ್ತಾಂತರ ಪ್ರಕ್ರಿಯೆ (Extradition) ಅಡಿ ವಾಪಸ್ ಕರೆತರಬಹುದಾಗಿದೆ. ಆದರೆ, ಆ ದೇಶದ ನಡುವೆ ಭಾರತವು ಈ ಮೊದಲು ಒಪ್ಪಂದ ಮಾಡಿಕೊಂಡಿರಬೇಕು. ಇಲ್ಲವಾದಲ್ಲಿ, ಗಡಿಪಾರು ಪ್ರಕ್ರಿಯೆ (Deportation) ಮೂಲಕವೂ ಪ್ರಜ್ವಲ್ ಅವರನ್ನು ಕರೆತರಬಹುದು.
ಇನ್ನು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಮೂಲಕವೂ ಪ್ರಜ್ವಲ್ ರೇವಣ್ಣ ಅವರನ್ನು ಕರೆತರಬಹುದಾಗಿದೆ. ಜರ್ಮನ್ ಕಾನೂನುಗಳಲ್ಲಿ ಅಂತಹ ಹಿಂತೆಗೆದುಕೊಳ್ಳುವಿಕೆಯನ್ನು ಅಗತ್ಯವಿದ್ದರೆ, ಜರ್ಮನ್ ಸರ್ಕಾರವು ಸ್ವತಂತ್ರವಾಗಿ ಅದನ್ನು ಮಾಡಬಹುದು. ಭಾರತ ಮತ್ತು ಜರ್ಮನಿಯ ಸರ್ಕಾರಗಳ ನಡುವಿನ ಒಪ್ಪಂದಗಳಲ್ಲಿ ಇದ್ದರೆ ಪಾಸ್ ಪೋರ್ಟ್ ವಾಪಸ್ ಪಡೆಯಬಹುದು. ಅಂದರೆ ವ್ಯಕ್ತಿಗಿಂತ ಎರಡು ದೇಶಗಳ ಒಪ್ಪಂದ ದೊಡ್ಡಾಗಿದ್ದರೆ ಪಾಸ್ ಪೋರ್ಟ್ ಹಿಂತೆಗೆದುಕೊಳ್ಳಬಹುದು
ಪಾಸ್ ಪೋರ್ಟ್ ರದ್ದು ಮಾಡಿದ ಬಳಿಕ ಪ್ರಜ್ವಲ್ ರೇವಣ್ಣ ಇರುವ ಪ್ರದೇಶವನ್ನು ಗುರುತಿಸಿ ಆ ದೇಶಗಳ ರಾಜತಾಂತ್ರಿಕ ಸಂಬಂಧ ಗಳ ಮೂಲಕ ಆತನನ್ನು ಭಾರತಕ್ಕೆ ಕರೆಸಬಹುದಾಗಿದೆ. ಅಲ್ಲದೆ ರಾಜ್ಯದ ತನಿಖಾ ಸಂಸ್ಥೆಗಳೆ ಕೇಂದ್ರ ಸರಕಾರದ ಅನುಮತಿ ಪಡೆದು ವಿದೇಶಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ಕರೆತರಬಹುದಾಗಿದೆ. ಕರ್ನಾಟಕ ಪೊಲೀಸರು ಸೆನೆಗಲ್‌ಗೆ ತೆರಳಿ ಆರೋಪಿಯನ್ನು ಬಂಧಿಸಿರುವ ಉದಾಹರಣೆಗಳು ಕೂಡ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Thu, 23 May 24