
ಬೆಂಗಳೂರು, (ಆಗಸ್ಟ್ 22): ಹಾಲಿನ ಕೊಬ್ಬಿನ ಬದಲಿಗೆ ಸಸ್ಯಜನ್ಯ ಎಣ್ಣೆ ಬಳಸಿ ತಯಾರಿಸುವ ‘ಅನಲಾಗ್ ಪನ್ನೀರ್’ (ಕೃತಕ ಪನ್ನೀರ್) (Analogue Paneer)ಅನ್ನು ‘ಪನ್ನೀರ್’ ಹೆಸರಿನಲ್ಲಿ ಮಾರಾಟ ಮಾಡುವುದು ಮತ್ತು ಆಹಾರದಲ್ಲಿ ಬಳಸುವುದನ್ನು ರಾಜ್ಯಾದ್ಯಂತ ಒಂದು ವರ್ಷ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶಿಸಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಹೋಟೆಲ್‌ಗಳು ಹಾಗೂ ವ್ಯಾಪಾರಿಗಳು ಈ ನಕಲಿ ಪನ್ನೀರ್ ಬಳಕೆ ಅಥವಾ ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ರಾಜ್ಯದಲ್ಲಿ ಅನಲಾಗ್ ಅಥವಾ ನಾನ್-ಡೈರಿ ಪನ್ನೀರ್ ಅನ್ನು “ಪನ್ನೀರ್” ಎಂಬ ಹೆಸರಿನಲ್ಲಿ ಉತ್ಪಾದಿಸುವುದು, ಸಂಸ್ಕರಿಸುವುದು, ಪ್ಯಾಕ್ ಮಾಡುವುದು, ದಾಸ್ತಾನು ಮಾಡುವುದು, ಸಾಗಾಟ ಮಾಡುವುದು, ಸಗಟು ಹಾಗೂ ಚಿಲ್ಲರೆ ಮಾರಾಟ ಮಾಡುವುದು ಮತ್ತು ಪ್ರದರ್ಶಿಸುವುದನ್ನು 1 ವರ್ಷದವರೆಗೆ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಆದೇಶವು ಜಾರಿಯಾದ ದಿನದಿಂದಲೇ ರಾಜ್ಯಾದ್ಯಂತ ಅನ್ವಯವಾಗಲಿದೆ.
ಹಾಲಿನ ಕೊಬ್ಬು ಅಥವಾ ಹಾಲಿನ ಘನಾಂಶವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಸಸ್ಯಜನ್ಯ ಎಣ್ಣೆ ಸಸ್ಯಜನ್ಮ ಕೊಬ್ಬು ಅಥವಾ ಇತರೆ ನಾನ್-ಡೈರಿ ಪದಾರ್ಥಗಳಿಂದ ಬದಲಾಯಿಸಿ ಪನ್ನೀರ್‌ನಂತೆ ತಯಾರಿಸಲಾದ ಉತ್ಪನ್ನವನ್ನು ‘ಅನಲಾಗ್ / ನಾನ್-ಡೈರಿ ಪನ್ನೀರ್” ಎಂದು ಪರಿಗಣಿಸಲಾಗುತ್ತದೆ. ಇಂತಹ ಉತ್ಪನ್ನವನ್ನು “ಪನ್ನೀರ್” ಎಂದು ಹೆಸರಿಸಿ, ಮಾರಾಟ ಮಾಡಿ ಅಥವಾ ಗ್ರಾಹಕರಿಗೆ ಪನೀರ್ ಎಂದು ಬಿಂಬಿಸುವಂತಿಲ್ಲ. ಈ ನಿಷೇಧವು ನಿರ್ದಿಷ್ಟ ಗುಣಮಟ್ಟದ ಮಾನದಂಡಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸದ ಮತ್ತು ಪ್ರಮಾಣೀಕರಿಸದ ಡೈರಿ ಅನಲಾಗ್ ಉತ್ಪನ್ನಗಳಿಗೆ ಮಾತ್ರ ಅನ್ವಯಿಸುತ್ತದೆ. ಈಗಾಗಲೇ ಪ್ರತ್ಯೇಕ ಮಾನದಂಡಗಳನ್ನು ಹೊಂದಿರುವ Frozen Dessert, Processed Cheese ಮತ್ತು Mixed Fat Spread ಮುಂತಾದ ಪ್ರಮಾಣೀಕೃತ ಆಹಾರ ಉತ್ಪನ್ನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಆಹಾರ ಸುರಕ್ಷತಾ ಇಲಾಖೆ ಸ್ಪಷ್ಟಪಡಿಸಿದೆ.
ಅಸಲಿ ಪನ್ನೀರ್-ಅನಲಾಗ್ ಪನ್ನೀರ್ ನಡುವಿನ ವ್ಯತ್ಯಾಸವೇನು? ಅಸಲಿ ಪನ್ನೀರ್ ಯಾವುದರಿಂದ ತಯಾರಿಸಲಗುತ್ತೆ? ಇನ್ನು ಅನಲಾಗ್ ಪನ್ನೀರ್ ಅಂದ್ರೆ ಕೃತಕ ಪನ್ನೀರ್ ಯಾವುದರಿಂದ ತಯಾರು ಮಾಡಲಾಗುತ್ತದೆ ಎನ್ನುವುದನ್ನು ನೋಡುವುದಾದರೆ, ಆಹಾರ ಸುರಕ್ಷತಾ ನಿಯಮಾವಳಿ ಪ್ರಕಾರ, ಪನ್ನೀರ್ ಎಂಬುದು ಕೇವಲ ಹಾಲಿನಿಂದ ಮಾತ್ರ ತಯಾರಾಗುವ ಶುದ್ಧ ಉತ್ಪನ್ನವಾಗಿದೆ. ಹಾಲಿನ ನೈಸರ್ಗಿಕ ಕೊಬ್ಬು ಇದರ ಪ್ರಮುಖ ಅಂಶವಾಗಿದೆ.

ಇನ್ನು ಅನಲಾಗ್ ಪನ್ನೀರ್ (ಕೃತಕ ಪನ್ನೀರ್) ಅಂದರೆ, ಹಾಲಿನ ಅಂಶ ಅಥವಾ ಹಾಲಿನ ಕೊಬ್ಬಿನ ಬದಲಿಗೆ ಸಂಪೂರ್ಣವಾಗಿ ಅಥವಾ ಭಾಗಶಃ ಸಸ್ಯಜನ್ಯ ಎಣ್ಣೆ (ವೆಜಿಟೇಬಲ್ ಆಯಿಲ್), ವನಸ್ಪತಿ ಅಥವಾ ಹಾಲೇತರ ವಸ್ತುಗಳನ್ನು ಬೆರೆಸಿ ತಯಾರಿಸಲಾಗುವ ಕೃತಕ ಉತ್ಪನ್ನವನ್ನು ‘ಅನಲಾಗ್ ಪನ್ನೀರ್’ ಎನ್ನಲಾಗುತ್ತದೆ. ಇದನ್ನು “ಪನ್ನೀರ್” ಎಂದು ಗ್ರಾಹಕರಿಗೆ ಬಿಂಬಿಸಿ ಮಾರಾಟ ಮಾಡುವುದು ಕಾನೂನುಬಾಹಿರ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Sat, 22 August 26