ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳು ವಿಳಂಬವಾಗ್ತಿರೋದೇಕೆ? ಕೇಂದ್ರ ಸರ್ಕಾರ ಕೊಟ್ಟ ಕಾರಣ ಇಲ್ಲಿದೆ

ಕೇಂದ್ರ ಸರ್ಕಾರವು ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಬೃಹತ್ ಅನುದಾನ ನೀಡಿದ್ದರೂ, ರಾಜ್ಯ ಸರ್ಕಾರದ ಭೂಸ್ವಾಧೀನ ವಿಳಂಬದಿಂದಾಗಿ ಹಲವು ಯೋಜನೆಗಳು ಸ್ಥಗಿತಗೊಂಡಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳು ವಿಳಂಬವಾಗ್ತಿರೋದೇಕೆ? ಕೇಂದ್ರ ಸರ್ಕಾರ ಕೊಟ್ಟ ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ

Updated on: Dec 12, 2025 | 8:58 AM

ನವದೆಹಲಿ, ಡಿಸೆಂಬರ್ 12: ಕರ್ನಾಟಕದಲ್ಲಿ (Karnataka) ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಗಣನೀಯವಾಗಿ ಬಜೆಟ್ ಬೆಂಬಲ ಹೆಚ್ಚಿಸಿದೆ. ರೈಲ್ವೆ ಯೋಜನೆಗಳಿಗೂ ಅನುದಾನಗಳನ್ನು ಘೋಷಿಸಲಾಗಿದೆ. ಆದರೆ, ರಾಜ್ಯ ಸರ್ಕಾರವು ಭೂಸ್ವಾಧೀನ ವಿಳಂಬ ಮಾಡುತ್ತಿರುವುದರಿಂದಾಗಿ ಹಲವಾರು ಪ್ರಮುಖ ರೈಲ್ವೆ ಯೋಜನೆಗಳು ಸ್ಥಗಿತಗೊಂಡಿವೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಮಾಹಿತಿ ನೀಡಿದ ಅವರು, ಒಟ್ಟಾರೆಯಾಗಿ ಕರ್ನಾಟಕಕ್ಕೆ ವಿವಿಧ ರೈಲ್ವೆ ಯೋಜನೆಗಳಿಗೆ 9,020 ಹೆಕ್ಟೇರ್ ಭೂಮಿ ಬೇಕಾಗುತ್ತದೆ. ಅದರಲ್ಲಿ ಶೇ 63 (5,679 ಹೆಕ್ಟೇರ್)ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ 3,341 ಹೆಕ್ಟೇರ್ ಭೂಸ್ವಾಧೀನ ಇನ್ನೂ ಬಾಕಿ ಇದೆ ಎಂದು ಹೇಳಿದ್ದಾರೆ.

50:50 ವೆಚ್ಚದಲ್ಲಿ ಧಾರವಾಡ-ಬೆಳಗಾವಿ ಮೂಲಕ ಕಿತ್ತೂರು ಹೊಸ ಮಾರ್ಗ ಯೋಜನೆ (73 ಕಿಮೀ) ಮಂಜೂರಾಗಿತ್ತು. ಆದರೆ, ಭೂಸ್ವಾಧೀನ ಬಾಕಿ ಇರುವುದರಿಂದ ಯೋಜನೆಯ ಅನುಷ್ಠಾನ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಒಪ್ಪಂದದ ಪ್ರಕಾರ, ಈ ರೈಲ್ವೆ ಯೋಜನೆಗೆ ರಾಜ್ಯವು ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಉಚಿತವಾಗಿ ನೀಡಬೇಕು.

ಭೂಸ್ವಾಧೀನದಿಂದ ವಿಳಂಬವಾಗುತ್ತಿರುವ ಇತರ ರೈಲ್ವೆ ಯೋಜನೆಗಳು

ಶಿವಮೊಗ್ಗ-ರಾಣೆಬೆನ್ನೂರು ಹೊಸ ಮಾರ್ಗಕ್ಕೆ (96 ಕಿಮೀ) 333 ಹೆಕ್ಟೇರ್, ಬೆಳಗಾವಿ-ಧಾರವಾಡ ಹೊಸ ಮಾರ್ಗಕ್ಕೆ (73 ಕಿಮೀ) 581 ಹೆಕ್ಟೇರ್, ಶಿವಮೊಗ್ಗ-ಹರಿಹರ ಹೊಸ ಮಾರ್ಗಕ್ಕೆ (79 ಕಿಮೀ) 488 ಹೆಕ್ಟೇರ್, ವೈಟ್‌ಫೀಲ್ಡ್-ಕೋಲಾರ ಹೊಸ ಮಾರ್ಗಕ್ಕೆ (53 ಕಿಮೀ) 337 ಹೆಕ್ಟೇರ್ ಮತ್ತು ಹಾಸನ-ಬೇಲೂರು ಹೊಸ ಮಾರ್ಗಕ್ಕೆ (32 ಕಿಮೀ) 206 ಹೆಕ್ಟೇರ್ ಭೂಸ್ವಾಧೀನ ಬಾಕಿ ಉಳಿದಿವೆ. ಇದೇ ಕಾರಣಕ್ಕೆ ಈ ಯೋಜನೆಗಳ ಅನುಷ್ಠಾನ ಭಾರಿ ವಿಳಂಬವಾಗುತ್ತಿದೆ.

ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದು, ಭೂಸ್ವಾಧೀನ, ಶಾಸನಬದ್ಧ ಅನುಮತಿಗಳು, ಅರಣ್ಯ ಇಲಾಖೆ ಅನುಮತಿಗಳು ಇತರ ಪರಿಸ್ಥಿತಿಗಳನ್ನು ಅವಲಂಬಿಸಿ ರೈಲ್ವೆ ಯೋಜನೆಗಳ ವೆಚ್ಚ ಹೆಚ್ಚಾಗಬಹುದು ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ರಾಜ್ಯ ಸರ್ಕಾರದ ಬೆಂಬಲ ಅತೀ ಅಗತ್ಯ: ಅಶ್ವಿನಿ ವೈಷ್ಣವ್

ಕರ್ನಾಟಕದ ರೈಲ್ವೆ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಆದರೆ, ಯೋಜನೆಗಳ ಸಕಾಲಿಕ ಪ್ರಗತಿಯು ರಾಜ್ಯ ಸರ್ಕಾರದ ಬೆಂಬಲ ಮತ್ತು ಸಹಕಾರವನ್ನು ಹೆಚ್ಚಾಗಿ ಅವಲಂಬಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಂತರಾಜ್ಯ ಪ್ರಯಾಣಿಕರಿಗೆ ಗುಡ್ ನ್ಯೂಸ್; 8 ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ಮಾಹಿತಿ 

ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳ ವಾರ್ಷಿಕ ವೆಚ್ಚ 2009–14ರಲ್ಲಿ 835 ಕೋಟಿ ರೂ. ಇದ್ದುದು 2025–26ರಲ್ಲಿ 7,564 ಕೋಟಿ ರೂ.ಗಳಿಗೆ ಹೆಚ್ಚಿದೆ. ಇದು ಸುಮಾರು ಒಂಬತ್ತು ಪಟ್ಟು ಹೆಚ್ಚಾದಂತಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ