ನೋಟಿಸ್ಗೆ ಉತ್ತರ ನೀಡದ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ತಾರಾ ವರಿಷ್ಠರು? ಬಿಜೆಪಿ ಹೈಕಮಾಂಡ್ ಮುಂದಿನ ನಡೆಯೇನು?
ಒಂದೆಡೆ ಬಂಡಾಯ ಶಾಸಕ ಬಸನಗೌಡ ಪಾಟೀಲಗೆ ಶೋಕಾಸ್ ನೋಟಿಸ್ ನೀಡಿದ ಬಳಿಕ ಅವರ ಬಣ ಮೌನಕ್ಕೆ ಶರಣಾಗಿದೆ. ಮತ್ತೊಂದೆಡೆ ಫೆಬ್ರವರಿ 20ರಂದು ಎಲ್ಲವೂ ಸರಿಯಾಗಲಿದೆ ಎಂದು ರಾಜ್ಯಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಹಾಗಾದರೆ ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುತ್ತಾ? ಮುಂದಿನ ನಡೆ ಏನಿರಬಹುದು ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಬೆಂಗಳೂರು, ಫೆಬ್ರವರಿ 18: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್ಗೆ ಉತ್ತರ ಕೊಟ್ಟಿರುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಇದರ ಮಧ್ಯೆಯೇ ಫೆಬ್ರವರಿ 20 ರಂದು ಬೆಂಗಳೂರಿನಲ್ಲಿ ಯತ್ನಾಳ್ ಬಣ ಮತ್ತೊಂದು ಸಭೆ ಸೇರಲು ಸಿದ್ಧತೆ ನಡೆಸಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಿವೈ ವಿಜಯೇಂದ್ರರನ್ನು ಬದಲಿಸಬೇಕು ಎಂದು ಸಮರ ಸಾರಿ, ಭಿನ್ನಮತೀಯರ ಗುಂಪು ಕಟ್ಕೊಂಡು ದೆಹಲಿ ಯಾತ್ರೆ ಮಾಡಿದ್ದ ಯತ್ನಾಳ್‌ಗೆ ಹೈಕಮಾಂಡ್ ಶಾಕ್ ಕೊಟ್ಟಿತ್ತು. ಕೇಂದ್ರ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿ 72 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿತ್ತು. ಆದರೆ ಗಡುವು ಮುಗಿದರೂ ಯತ್ನಾಳ್ ಉತ್ತರ ನೀಡಿರುವ ಮಾಹಿತಿ ಇಲ್ಲ. ಈ ಬಗ್ಗೆ ಹೈಕಮಾಂಡ್ ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಮಧ್ಯೆ ಯತ್ನಾಳ್ ಆರ್‌ಎಸ್‌ಎಸ್ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ.
ಫೆಬ್ರವರಿ 20ಕ್ಕೆ ಡೆಡ್‌ಲೈನಾ? ವಿಜಯೇಂದ್ರ ಮಾತಿನ ಮರ್ಮವೇನು?
ಫೆಬ್ರವರಿ 20 ರೊಳಗೆ ಎಲ್ಲವೂ ತೀರ್ಮಾನ ಆಗಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ. ಈ ಮಾತಿನ ಮರ್ಮವೇನು ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಯತ್ನಾಳ್ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಅದನ್ನೆಲ್ಲ ನಮ್ಮ ರಾಷ್ಟ್ರೀಯ ನಾಯಕರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ. ಅಂತೇಳಿದ್ದಾರೆ.
ಇದನ್ನೂ ಓದಿ: ದಿಲ್ಲಿಯಲ್ಲಿ ರಾಜಕೀಯ ಆಟವಾಡುತ್ತಿರುವ ಯತ್ನಾಳ್‌ಗೆ ಮತ್ತೊಮ್ಮೆ ಬಿಗ್ ಶಾಕ್ ಕೊಟ್ಟ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ
ಯತ್ನಾಳ್‌ಗೆ ಶಿಸ್ತು ಸಮಿತಿ ನೋಟಿಸ್ ಬಳಿಕ ಭಿನ್ನಮತೀಯರ ಬಣ ಮೌನಕ್ಕೆ ಶರಣಾಗಿದೆ. ಅದರೆ ಈಗ ಮತ್ತೆ ವಿಜಯೇಂದ್ರ ಬದಲಾವಣೆಗೆ ಒತ್ತಾಯಿಸಿ ಸಭೆ ಸೇರಲು ಮುಂದಾಗಿದೆ. 20 ರಂದು ಬೆಂಗಳೂರಿನ ಕುಮಾರ್ ಬಂಗಾರಪ್ಪ ನಿವಾಸದಲ್ಲೇ ಸಭೆ ಕರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಾ ಎಂಬ ಪ್ರಶ್ನೆ ಜೊತೆಗೆ ಯತ್ನಾಳ್ ತಂಡದ ಮುಂದಿನ ನಡೆಯೇನು ಎಂಬುದು ಸದ್ಯ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ.