iPhone ವಿಸ್ಟ್ರಾನ್ ದಾಂಧಲೆ ಪ್ರಕರಣ: ನೆಗಡಿಯೆಂದು ಮೂಗು ಕೊಯ್ದುಕೊಂಡರೇ ಕಾರ್ಮಿಕರು?
ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಌಪಲ್ iPhone ತಯಾರಕ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಮೇಲೆ ಕಾರ್ಮಿಕರು ನಡೆಸಿದ ದಾಳಿಯಲ್ಲಿ ಸಂಸ್ಥೆಗೆ ಸುಮಾರು 437.70 ಕೋಟಿ ರೂಪಾಯಿ ನಷ್ಟವಾಗಿದೆ. ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ 119 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.

ಕೋಲಾರ: ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಌಪಲ್ iPhone ತಯಾರಿಕಾ ಕಂಪನಿ ವಿಸ್ಟ್ರಾನ್ ಇನ್ಫೋಕಾಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೇಲೆ ಕಾರ್ಮಿಕರು ನಡೆಸಿದ ದಾಳಿಯಲ್ಲಿ ಸಂಸ್ಥೆಗೆ ಸುಮಾರು 437.70 ಕೋಟಿ ರೂಪಾಯಿ ನಷ್ಟವಾಗಿದೆ. ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ 300 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ವಿಸ್ಟ್ರಾನ್ ಕಂಪನಿ ತಮಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಹಾಗೂ ಕೆಲಸದ ಅವಧಿ ಮೀರಿ ಡ್ಯೂಟಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಕಾರ್ಮಿಕರು ಕಳೆದ ಶನಿವಾರ ದಾಳಿ ನಡೆಸಿದ್ದರು. ಈ ಸಂಬಂಧ ಈಗಾಗಲೇ ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ವರದಿ ನೀಡಿದ್ದು ಅದರನ್ವಯ ಕಾರ್ಮಿಕರು ಹಾಗೂ ಆಡಳಿತ ವರ್ಗದ ನಡುವೆ ಕೈಗಾರಿಕಾ ಬಾಂಧವ್ಯ ಉತ್ತಮವಾಗಿಲ್ಲದಿರುವುದು ಘಟನೆಗೆ ಮುಖ್ಯ ಕಾರಣವೆಂದು ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದಾರೆ.
ಕಂಪನಿಯು 6 ಖಾಸಗಿ ಏಜೆನ್ಸಿಗಳ ಮೂಲಕ 8,490 ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನಿಯೋಜಿಸಿಕೊಂಡಿತ್ತು. ಜೊತೆಗೆ 1,343 ಕಾರ್ಮಿಕರನ್ನು ಖಾಯಂ ನೌಕರರಾಗಿ ನೇಮಿಸಿಕೊಂಡಿತ್ತು. ಏಜೆನ್ಸಿಗಳು ಗುತ್ತಿಗೆ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಸದ ಕಾರಣ ಅವರು ಆಕ್ರೋಶಗೊಂಡು ಕಂಪನಿ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಂಪನಿಯಲ್ಲಿ ಕಾರ್ಮಿಕ ಸಂಘಗಳು ಅಸ್ತಿತ್ವದಲ್ಲಿಲ್ಲ. ವೇತನದ ವಿಚಾರವಾಗಿ ಕಾರ್ಮಿಕರು ಈವರೆಗೆ ಯಾವುದೇ ದೂರು ಕೊಟ್ಟಿಲ್ಲ. ಕಾರ್ಮಿಕ ದಾಳಿ ನಡೆಯುವವರೆಗೂ ಕಂಪನಿಯಲ್ಲಿ ಯಾವುದೇ ಕೈಗಾರಿಕಾ ವಿವಾದವಿರಲಿಲ್ಲ ಎಂದು ಸಹ ವರದಿಯಿಂದ ತಿಳಿದುಬಂದಿದೆ. ಅಷ್ಟೇ ಅಲ್ಲ, ಕಾರ್ಮಿಕರ ವೇತನ ಬಾಕಿ ಉಳಿಸಿಕೊಂಡಿರುವ ಸಂಬಂಧ ಕಾರ್ಮಿಕ ಅಧಿಕಾರಿಯು ಕಂಪನಿ ಪ್ರತಿನಿಧಿಗಳಿಗೆ ನೋಟಿಸ್ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.
ಇನ್ನು, ಘಟನೆ ಸಂಬಂಧ ವಿಸ್ಟ್ರಾನ್ ಕಂಪನಿ ಮುಖ್ಯ ಆಡಳಿತಾಧಿಕಾರಿ T.D.ಪ್ರಶಾಂತ್, ಸಹಾಯಕ ವ್ಯವಸ್ಥಾಪಕಿ ಮಾಲಿನಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಕಂಪನಿ ಕಾರ್ಮಿಕರಿಂದ ಹಲ್ಲೆಗೊಳಗಾದ ವೇಮಗಲ್ ಠಾಣೆ ಪೇದೆ ಮುನಿರಾಜು ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಕಾನೂನುಬಾಹಿರವಾಗಿ ಗುಂಪುಗೂಡುವಿಕೆ, ದೊಂಬಿ, ಗಲಭೆ, ಅತಿಕ್ರಮ ಪ್ರವೇಶ, ಡಕಾಯಿತಿ, ಶಾಂತಿ ಕದಡುವಿಕೆ, ಅಪರಾಧ ಸಂಚು, ಮಾರಕಾಸ್ತ್ರಗಳಿಂದ ಹಲ್ಲೆ, ಸರ್ಕಾರಿ ನೌಕರನ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ, ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ವರದಿ ನೀಡಿದೆ.
ಇನ್ನು, ದೂರಿನ ಬೆನ್ನಲ್ಲೇ ಪೊಲೀಸರು ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸುತ್ತಿದ್ದಂತೆ ಅವರ ಪೋಷಕರು ನೂರಾರು ಸಂಖ್ಯೆಯಲ್ಲಿ ಎಸ್.ಪಿ ಕಚೇರಿ ಎದುರು ಜಮಾಯಿಸಿದರು. ಕಾರ್ಮಿಕರ ಪರವಾಗಿ ತಮ್ಮನ್ನು ಬಂಧಿಸುವಂತೆ ಪೊಲೀಸರ ಎದುರು ಅಂಗಲಾಚಿದರು. ಕಂಪನಿಯಲ್ಲಿ ಕೆಲವು ಕಿಡಿಗೇಡಿಗಳು ಮಾಡಿದ ತಪ್ಪಿಗೆ ಎಲ್ಲರನ್ನು ಹೊಣೆ ಮಾಡಬೇಡಿ ಎಂದು ಮನವಿ ಮಾಡಿದರು.
‘ಅಮಾಯಕ ಕಾರ್ಮಿಕರ ಬಂಧನವಾಗಿಲ್ಲ’ ಇತ್ತ, ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಇದುವರೆಗೂ ಎಷ್ಟು ನಷ್ಟವಾಗಿದೆ ಎಂದು ಅಂದಾಜಿಸಿಲ್ಲ. ಕೃತ್ಯದಲ್ಲಿ ಭಾಗಿಯಾಗಿರುವ 149 ಕಾರ್ಮಿಕರನ್ನ ಬಂಧಿಸಲಾಗಿದೆ. 25 ಹೆಚ್ಚುವರಿ ಕಾರ್ಮಿಕರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಮಾಯಕ ಕಾರ್ಮಿಕರ ಬಂಧನವಾಗಿಲ್ಲ, ವಿಡಿಯೋ ಆಧರಿಸಿ 3 ಜನರನ್ನ ರಿಲೀಸ್ ಮಾಡಲಾಗಿದೆ ಎಂದು ಎಸ್ಪಿ ಕಾರ್ತಿಕ್ ಹೇಳಿದರು. ಜೊತೆಗೆ, 149 ಕಾರ್ಮಿಕರೂ ಯುವಕರೆ, ಯುವತಿಯರನ್ನ ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
454 ಸಿಸಿಟಿವಿ ಕ್ಯಾಮರಾಗಳ HD ಕ್ವಾಲಿಟಿ ಇರುವ ವಿಡಿಯೋ ಸಿಕ್ಕಿದೆ. 10 ಪೊಲೀಸ್ ತಂಡಗಳು ಹಾಗೂ ಕಂಪನಿ ಸಿಬ್ಬಂದಿಯಿಂದ ವಿಚಾರಣೆ ನಡೆಯುತ್ತಿದೆ. ಕಂಪನಿಯಲ್ಲಿ ಪ್ರತಿ ಕಾರ್ಮಿಕರ ಮಾಹಿತಿ ಸಿಕ್ಕಿದೆ. ಜೊತೆಗೆ, ಕಳುವಾಗಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ಗಳ ರಿಕವರಿಯಾಗಿದೆ ಎಂದು ಹೇಳಿದರು. -ರಾಜೇಂದ್ರಸಿಂಹ
ವೇತನ ನೀಡದ್ದಕ್ಕೆ ಕಚೇರಿ ಧ್ವಂಸ: ನರಸಾಪುರದ iPhone ತಯಾರಿಕಾ ಕಂಪನಿ ಮೇಲೆ ಕಾರ್ಮಿಕರಿಂದ ಕಲ್ಲು ತೂರಾಟ
Published On - 11:54 am, Mon, 14 December 20