ಪ್ರಭಾಸ್ ಹೊಸ ಸಿನಿಮಾ ನಾಯಕಿಗೆ ಪಾಕಿಸ್ತಾನ ಸೇನೆಯ ನಂಟು, ನಿಷೇಧಕ್ಕೆ ಆಗ್ರಹ
Prabhas heroine: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ ನಟ-ನಟಿಯರ ಮೇಲೆ ನಿಷೇಧ ಹೇರುವ ಚರ್ಚೆ ಜೋರಾಗಿದೆ. ಪ್ರಭಾಸ್ ನಟನೆಯ ಹೊಸ ಸಿನಿಮಾ ‘ಫೌಜಿ’ಯ ನಾಯಕಿ ಸಹ ಪಾಕ್ ಮೂಲದವರಾಗಿದ್ದು, ಅವರ ಮೇಲೂ ನಿಷೇಧ ಹೇರಬೇಕು ಎಂಬ ಒತ್ತಾಯ ಕೆಲ ನೆಟ್ಟಿಗರಿಂದ ಕೇಳಿ ಬಂದಿದೆ. ಇದೀಗ ಈ ಬಗ್ಗೆ ಸ್ವತಃ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಭಾಸ್ (Prabhas) ಪ್ರಸ್ತುತ ‘ಫೌಜಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ‘ಸೀತಾ ರಾಮಂ’ (Seetha Ramam) ಖ್ಯಾತಿಯ ರಘು ಹನುಪುಡಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ನಾಯಕಿಯಾಗಿ ಇಮಾನ್ವಿ ಇಸ್ಲಾಮಿಯನ್ನು ಆಯ್ಕೆ ಮಾಡಲಾಗಿದೆ. ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಇತ್ತೀಚೆಗೆ ನಡೆದ ಪಹಲ್ಗಾಮ್ ದಾಳಿಯ ಬಳಿಕ ನಟಿ ಇಮಾನ್ವಿ ಇಸ್ಲಾಮಿಯ ಪಾಕ್ ಮೂಲದ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಇಮಾಮ್ ಇಸ್ಲಾಮಿಯನ್ನು ಪ್ರಭಾಸ್ ಸಿನಿಮಾದಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ, ಇಲ್ಲವಾದರೆ ಸಿನಿಮಾಕ್ಕೆ ನಿಷೇಧ ಹೇರುವ ಬೆದರಿಕೆಯನ್ನು ಕೆಲವರು ಹಾಕಿದ್ದಾರೆ.
ವಿಕಿಪೀಡಿಯಾ ಹಾಗೂ ಇತರೆ ಇಂಟರ್ನೆಟ್ನಲ್ಲಿ ಲಭ್ಯ ಮಾಹಿತಿಗಳ ಪ್ರಕಾರ ನಟಿ ಇಮಾನ್ವಿ ಇಸ್ಲಾಮಿಯ ಮೂಲ ಪಾಕಿಸ್ತಾನ, ಅವರ ಜನನ ಕರಾಚಿಯಲ್ಲಿ ಆಗಿದೆಯಂತೆ. ಇಮಾನ್ವಿಯ ತಂದೆ ಇಕ್ಬಾಲ್ ಇಸ್ಮಾಯಿಲ್ ಖಾನ್ ಪಾಕಿಸ್ತಾನ ಸೇನೆಯ ಅಧಿಕಾರಿಯಾಗಿದ್ದವರು. ಇಮಾನ್ವಿಗೆ ಎಂಟು ವರ್ಷ ವಯಸ್ಸಾಗಿದ್ದಾಗ ಅವರು ಪಾಕಿಸ್ತಾನದಿಂದ ಕ್ಯಾಲಿಫೋರ್ನಿಯಾಕ್ಕೆ ವಲಸೆ ಹೋಗಿ ಅಲ್ಲಿಯೇ ನೆಲೆಸಿದ್ದಾರೆ. ಪಾಕಿಸ್ತಾನ ಸೇನೆಯೊಟ್ಟಿಗೆ ನಂಟು ಹೊಂದಿರುವ ಇಮಾನ್ವಿಯ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಎದುರಾಗುತ್ತಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಇಮಾನ್ವಿ, ‘ನನ್ನ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಿಬಿಡಲಾಗುತ್ತಿದೆ. ನನ್ನ ಕುಟುಂಬದ ಯಾರೂ ಸಹ ಎಂದಿಗೂ ಸಹ ಯಾವುದೇ ರೀತಿಯಲ್ಲಿಯೂ ಪಾಕಿಸ್ತಾನದ ಸೇನೆಯೊಟ್ಟಿಗೆ ಕೆಲಸ ಮಾಡಿಲ್ಲ. ನಾನು ಪಾಕಿಸ್ತಾನದವಳಲ್ಲ, ನಾನೊಬ್ಬ ಹೆಮ್ಮೆಯ ಭಾರತೀಯ ಮೂಲದ ಅಮೆರಿಕನ್ ಪ್ರಜೆ. ನಾನು ಹಿಂದಿ, ತೆಲುಗು, ಗುಜರಾತಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತನಾಡಬಲ್ಲವಳಾಗಿದ್ದೇನೆ. ನಾನು ಹುಟ್ಟಿರುವುದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲ್ಸ್ನಲ್ಲಿ. ನನ್ನ ಪೋಷಕರು ಯುವಕರಾಗಿದ್ದಾಗಲೇ ಅಮೆರಿಕಕ್ಕೆ ವಲಸೆ ಬಂದಿದ್ದರು. ನಾನು ಕಲೆ, ನಟನೆ ಮತ್ತು ನೃತ್ಯದ ಅಭ್ಯಾಸ ಮಾಡಿದ್ದೇನೆ. ನನ್ನ ಜೀವನದ ಮೇಲೆ ಭಾರತೀಯ ಸಿನಿಮಾದ ಪ್ರಭಾವ ಸಾಕಷ್ಟಿದೆ. ಈಗ ಅದೇ ಚಿತ್ರರಂಗದಿಂದ ನನಗೆ ಅವಕಾಶ ಸಿಕ್ಕಿರುವುದು ನನಗೆ ಖುಷಿ ಇದೆ’ ಎಂದಿದ್ದಾರೆ.
ಇದನ್ನೂ ಓದಿ:ಪ್ರಭಾಸ್ ಪಿಆರ್ಓ ವಿರುದ್ಧ ಪೊಲೀಸ್ ದೂರು ದಾಖಲು, ಕಾರಣವೇನು?
‘ದುಃಖಮಯವಾದ ಈ ಸನ್ನಿವೇಶದಲ್ಲಿ ನಾವು ಪ್ರೀತಿಯನ್ನು ಹರಡಬೇಕಿದೆ, ಒಬ್ಬರ ಬೆಂಬಲಕ್ಕೆ ಇನ್ನೊಬ್ಬರು ನಿಲ್ಲಬೇಕಿದೆ. ಇತಿಹಾಸ ಹೇಳುವಂತೆ ಕಲೆ ಎಂದಿಗೂ ಸಹ ಸಮಾಜದಲ್ಲಿ ಜಾಗೃತಿ, ಪ್ರೀತಿ, ಮಾನವೀಯತೆಯನ್ನು ಹುಟ್ಟುಹಾಕುತ್ತಾ ಬಂದಿದೆ. ಈ ಪರಂಪರೆ ಮುಂದುವರೆಸುವ ಪ್ರಯತ್ನವನ್ನು ನಾನು ಶಕ್ತಿಮೀರಿ ಮಾಡಲಿದ್ದೇನೆ’ ಎಂದಿದ್ದಾರೆ ನಟಿ ಇಮಾನ್ವಿ.
ಇಮಾನ್ವಿ ಇಸ್ಮಾಯಿಲ್ ಬಹಳ ಒಳ್ಳೆಯ ನೃತ್ಯಗಾರ್ತಿಯಾಗಿದ್ದು ಅಮೆರಿಕದಲ್ಲಿ ನೃತ್ಯ ತರಬೇತುದಾರೆಯಾಗಿ ಕೆಲಸ ಮಾಡುತ್ತಿದ್ದರು. ಇನ್ಸ್ಟಾಗ್ರಾಂನಲ್ಲಿ ಡ್ಯಾನ್ಸ್ ವಿಡಿಯೋ ಹಂಚಿಕೊಳ್ಳುತ್ತಿದ್ದ ಅವರ ನೃತ್ಯ ಹಿಡಿಸಿ ನಿರ್ದೇಶಕ ರಘು ಹನುಪುಡಿ ಅವರು ಇಮಾನ್ವಿಗೆ ಸಿನಿಮಾ ಅವಕಾಶ ನೀಡಿದ್ದಾರೆ. ಪ್ರಭಾಸ್ ನಟನೆಯ ‘ಫೌಜಿ’ ಇಮಾನ್ವಿಯ ಮೊದಲ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ