ಪ್ರಭಾಸ್ ಪಿಆರ್ಓ ವಿರುದ್ಧ ಪೊಲೀಸ್ ದೂರು ದಾಖಲು, ಕಾರಣವೇನು?
Prabhas: ನಟ ಪ್ರಭಾಸ್ ಅವರ ಪಿಆರ್ಓ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬಾತನ ಮೇಲೆ ಕೊಲೆ ಬೆದರಿಕೆ ಆರೋಪದಲ್ಲಿ ಹೈದರಾಬಾದ್ನಲ್ಲಿ ದೂರು ದಾಖಲಾಗಿದೆ. ಪ್ರಭಾಸ್ ಕುರಿತು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಇತ್ತೀಚೆಗೆ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿತ್ತು. ಈ ವಿಡಿಯೋಕ್ಕೆ ಸಂಭಂಧಿಸಿದಂತೆ ಪ್ರಭಾಸ್ ಪಿಆರ್ಓ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಯೂಟ್ಯೂಬ್ ಚಾನೆಲ್ ಪತ್ರಕರ್ತನಿಗೆ ಬೆದರಿಕೆ ಹಾಕಿದ್ದಾನಂತೆ.

ತಾನು ಪ್ರಭಾಸ್ (Prabhas) ಪಿಆರ್ಓ (ಪಬ್ಲಿಕ್ ರಿಲೇಷನ್ ಆಫೀಸರ್) ಎಂದು ಹೇಳಿಕೊಂಡಿರುವ ಸುರೇಶ್ ಕೊಂಡಿ ಹೆಸರಿನ ವ್ಯಕ್ತಿಯ ವಿರುದ್ಧ ಹೈದರಾಬಾದ್ನಲ್ಲಿ ಪೊಲೀಸ್ ದೂರು ದಾಖಲಾಗಿದೆ. ವ್ಯಕ್ತಿಯೊಬ್ಬಾತನಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಸುರೇಶ್ ವಿರುದ್ಧ ಕೇಸು ನಮೂದಾಗಿದೆ. ಸುರೇಶ್, ಎಂಬಾತ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿರುವ ಪತ್ರಕರ್ತ ಒಬ್ಬರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಕೊಲೆ ಬೆದರಿಕೆ ಹಾಕಲು ಪ್ರಭಾಸ್ ಬಗ್ಗೆ ಪ್ರಕಟವಾಗಿದ್ದ ಸುದ್ದಿ ಕಾರಣವಂತೆ.
ಜ್ಯೂಬ್ಲಿಹಿಲ್ಸ್ ರಸ್ತೆಯಲ್ಲಿ ಕಚೇರಿ ಹೊಂದಿರುವ ಯೂಟ್ಯೂಬ್ ಚಾನೆಲ್ ಒಂದು ಇತ್ತೀಚೆಗೆ ಪ್ರಭಾಸ್ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿತ್ತು. ಪ್ರಭಾಸ್ಗೆ ಭಾರಿ ಅನಾರೋಗ್ಯ ಎದುರಾಗಿದೆ ಕೆಲವೇ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಪ್ರಭಾಸ್ ಒಳಗಾಗಲಿದ್ದಾರೆ ಎಂದು ಸುದ್ದಿಯಲ್ಲಿ ಹೇಳಲಾಗಿತ್ತು. ಆ ವಿಡಿಯೋ ಅನ್ನು ದೊಡ್ಡ ಸಂಖ್ಯೆಯ ಜನ ನೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ವಿಡಿಯೋ ಪ್ರಕಟವಾದ ಮರುದಿನ ಯೂಟ್ಯೂಬ್ ಚಾನೆಲ್ನ ಪತ್ರಕರ್ತನಿಗೆ ಕರೆ ಮಾಡಿದ ಸುರೇಶ್ ಕೊಂಡಿ, ತಾನು ಪ್ರಭಾಸ್ ಅವರ ಪಿಆರ್ಓ ಎಂದು ಪರಿಚಯಿಸಿಕೊಂಡಿದ್ದು, ನೀವು ಹಾಕಿರುವ ಸುದ್ದಿಗೆ ಸಾಕ್ಷಿ ಕೊಡಿ ಎಂದು ಕೇಳಿದ್ದಾನೆ. ಮುಂದುವರೆದು, ಪ್ರಭಾಸ್ ಆರೋಗ್ಯದ ಬಗ್ಗೆ ಹಾಕಲಾಗಿರುವ ವಿಡಿಯೋ ಅನ್ನು ಡಿಲೀಟ್ ಮಾಡದೇ ಇದ್ದರೆ ಗಲಾಟೆ ಮಾಡುವುದಾಗಿಯೂ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದಾಗಿ ಯೂಟ್ಯೂಬ್ ಚಾನೆಲ್ನ ಪತ್ರಕರ್ತ ಆರೋಪಿಸಿದ್ದು, ಪೊಲೀಸ್ ಠಾಣೆಗೆ ದೂರು ಸಹ ನೀಡಿದ್ದಾರೆ.
ಇದನ್ನೂ ಓದಿ:ಕಡೆಗೂ ಮದುವೆಗೆ ಮನಸ್ಸು ಮಾಡಿದ ಟಾಲಿವುಡ್ ನಟ ಪ್ರಭಾಸ್
ಆ ನಂತರ ಆ ಯೂಟ್ಯೂಬ್ ಚಾನೆಲ್ನ ಪತ್ರಕರ್ತನಿಗೆ ಹಲವಾರು ಪ್ರಭಾಸ್ ಅಭಿಮಾನಿಗಳ ಕರೆ ಮತ್ತು ಸಂದೇಶಗಳು ಎಡಬಿಡದೇ ಬರುತ್ತಿದ್ದು, ವಿಡಿಯೋ ಡಿಲೀಟ್ ಮಾಡದಿದ್ದರೆ ಕಚೇರಿಗೆ ಬೆಂಕಿ ಇಡುವುದಾಗಿ ಬೆದರಿಕೆ ಸಹ ಹಾಕಿದ್ದಾರಂತೆ ಕೆಲವರು. ಇದೇ ಕಾರಣಕ್ಕೆ ಈಗ ಆ ಪತ್ರಕರ್ತ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗಿರುವ ಸುರೇಶ್ ಕೊಂಡಿ ಹೈದರಾಬಾದ್ನಲ್ಲಿ ಪಿಆರ್ಓ ಆಗಿದ್ದು, ಪ್ರಭಾಸ್ ಮಾತ್ರವೇ ಅಲ್ಲದೆ ಹಲವು ಸಿನಿಮಾಗಳಿಗೆ ಪಿಆರ್ಓ ಆಗಿ ಕಾರ್ಯ ನಿವರ್ಹಿಸುತ್ತಿದ್ದಾರೆ.
ಪ್ರಭಾಸ್ರ ಆರೋಗ್ಯ, ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಕೆಲ ತಿಂಗಳ ಹಿಂದೆ ಸಹ ಪ್ರಭಾಸ್ ಆರೋಗ್ಯದ ಬಗ್ಗೆ ಸುದ್ದಿ ಹರಡಿತ್ತು, ಪ್ರಭಾಸ್ ವಿದೇಶಕ್ಕೆ ಹೋಗಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನಲಾಗಿತ್ತು.
ಸಿನಿಮಾ ವಿಷಯಗಳಿಗೆ ಮರಳುವುದಾದರೆ ಪ್ರಭಾಸ್ ಪ್ರಸ್ತುತ ‘ರಾಜಾ ಸಾಬ್’ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. ರಘು ಹನುಪುಡಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ಸಹ ನಟಿಸಲಿದ್ದಾರೆ. ಈ ಮೂರು ಸಿನಿಮಾಗಳ ಬಳಿಕವಷ್ಟೆ ಅವರು ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್ 2’ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Sun, 30 March 25