ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅವಘಡ; ಚಿಮಣಿಯ ಮೇಲಿಂದ ಬಿದ್ದು ಕಾರ್ಮಿಕ ಸಾವು
ಇಂಡಿಯನ್ ಬ್ಯಾಗ್ ಪ್ರೈವೇಟ್ ಲಿಮಿಟೆಡ್ ಮೂಲಕ ಎನ್ಟಿಪಿಸಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಿಶನಕುಮಾರ ಎಂಬ ವ್ಯಕ್ತಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಚಿಮಣಿಯಲ್ಲಿ ಕೇಬಲ್ ಅಳವಡಿಸುತ್ತಿದ್ದ ವೇಳೆ ಆಯತಪ್ಪಿ 130 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿದ್ದಾರೆ.

ವಿಜಯಪುರ, ಮೇ.15: ಕೊಲ್ಹಾರ ತಾಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅವಘಡ ಸಂಭವಿಸಿದೆ. ಸ್ಥಾವರದ ಚಿಮಣಿಯ ಮೇಲಿಂದ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾನೆ (Death). ಚಿಮಣಿಯಲ್ಲಿ ಕೇಬಲ್ ಅಳವಡಿಸುತ್ತಿದ್ದ ಕಾರ್ಮಿಕ ಆಯತಪ್ಪಿ 130 ಅಡಿ ಎತ್ತರದಿಂದ ಕಳೆಗೆ ಬಿದ್ದು ಮೃತಪಟ್ಟಿದ್ದಾನೆ. ಉತ್ತರಪ್ರದೇಶದ ಗಾಜಿಪುರ ಮೂಲದ ಕಿಶನಕುಮಾರ ಭಾರದ್ವಾಜ್ (32) ಮೃತ ದುರ್ದೈವಿ.
ಇಂಡಿಯನ್ ಬ್ಯಾಗ್ ಪ್ರೈವೇಟ್ ಲಿಮಿಟೆಡ್ ಮೂಲಕ ಎನ್ಟಿಪಿಸಿಯಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಿಶನಕುಮಾರ ನಿನ್ನೆ ಸಾಯಂಕಾಲ ಮೃತಪಟ್ಟಿದ್ದಾನೆ. ಕಾರ್ಮಿಕನ ಸಾವಿಗೆ ಆಕ್ರೋಶ ವ್ಯಕ್ತವಾಗಿದ್ದು ಸೂಕ್ತ ರಕ್ಷಣೆ ಇಲ್ಲದೇ ಕೆಲಸ ಮಾಡಿಸಲಾಗುತ್ತಿದೆ ಎಂದು ಎನ್ಟಿಪಿಸಿ ಎದುರು ಇತರೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ. ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್ನಿಂದಾಗಿ ಹೊತ್ತಿ ಉರಿದ ಮನೆ
ಕಲಬುರಗಿ ತಾಲೂಕಿನ ಆಲಗೂಡ ಗ್ರಾಮದಲ್ಲಿ ಸೈಬಣ್ಣ ಎಂಬುವವರ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆ ಹೊತ್ತಿ ಉರಿದಿದ್ದು ಅಗ್ನಿ ಅವಘಡದಲ್ಲಿ ಮನೆಯಲ್ಲಿದ್ದ 20 ಸಾವಿರ ನಗದು, ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿವೆ. ಕಲಬುರಗಿ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಹೆಸರಘಟ್ಟ ಕೆರೆ ಸ್ವಚ್ಛತಾ ಕಾರ್ಯಕ್ಕೆ ಮುಂದಾದ ರೈತ ಸಂಘ, ಹಸಿರು ಸೇನೆ; ಸ್ವಚ್ಛತಾ ಅಭಿಯಾನ ಶುರು
ಅಕ್ರಮವಾಗಿ ಸಂಗ್ರಹಿಸಿದ್ದ 15 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ
ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಸ್ಲಂ ಬೋರ್ಡ್ನ ಒಂಟಿ ಸೈಯದ್ ಮನೆಯಲ್ಲಿ 15 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಲಾಗಿದೆ. ಅನ್ನ ಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಲಾಗಿತ್ತು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೆರೆಗೆ ಆಹಾರ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ 30 ಬ್ಯಾಗ್ ನಲ್ಲಿ ಸಂಗ್ರಹಿಸಿದ 15 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಇನ್ನು ಆರೋಪಿ ಮನೆ ಮನೆಗೆ ತೆರಳಿ ಅನ್ನ ಭಾಗ್ಯ ಅಕ್ಕಿ ಜನರಿಂದ ಖರೀದಿ ಮಾಡ್ತಿದ್ದ. ನಂತರ ಮನೆಯಲ್ಲಿ ಸಂಗ್ರಹ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಪಕ್ಕ ನಿಂತಿದ್ದ ವೇಳೆ ಸಿಡಿಲು ಬಡಿದು ಸಾವು
ಉಡುಪಿಯಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿದ್ದಾನೆ. ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಘಟನೆ ನಡೆದಿದ್ದು, ಸುರೇಶ್ ಶೆಟ್ಟಿ ಎಂಬಾತ ಮೃತಪಟ್ಟಿದ್ದಾನೆ. ಸಂಜೆ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿರುವ ಹೊತ್ತಲ್ಲಿ ಮನೆಯ ಪಕ್ಕ ನಿಂತಿದ್ದ ವೇಳೆ ಸಿಡಿಲು ಬಿಡಿದಿದೆ. ಈ ವೇಳೆ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ