Suraj Revanna: ಎಂಎಲ್​ಸಿ ಅಭ್ಯರ್ಥಿ ಸೂರಜ್ ರೇವಣ್ಣಗೆ ಹೊಸ ಸಂಕಷ್ಟ; ನಾಮಪತ್ರ ತಿರಸ್ಕರಿಸಲು ಕೋರಿ ರಿಟ್ ಅರ್ಜಿ ಸಲ್ಲಿಕೆ

TV9 Digital Desk

| Edited By: Sushma Chakre

Updated on: Dec 03, 2021 | 6:09 PM

ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸುವಾಗ ಸಲ್ಲಿಸಿದ ಅಫಿಡವಿಟ್​ನಲ್ಲಿ ತನ್ನ ಮದುವೆ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆಂದು ಆರೋಪ ಕೇಳಿಬಂದಿದೆ. ತಮ್ಮ ಆಸ್ತಿಯನ್ನು ಮಾತ್ರ ಘೋಷಣೆ ಮಾಡಿರುವ ಸೂರಜ್ ರೇವಣ್ಣ ತಮ್ಮ ಪತ್ನಿ, ಆಕೆಯ ಆಸ್ತಿಯ ಮಾಹಿತಿ ನೀಡಿಲ್ಲವೆಂದು ಆರೋಪಿಸಲಾಗಿದೆ.

Suraj Revanna: ಎಂಎಲ್​ಸಿ ಅಭ್ಯರ್ಥಿ ಸೂರಜ್ ರೇವಣ್ಣಗೆ ಹೊಸ ಸಂಕಷ್ಟ; ನಾಮಪತ್ರ ತಿರಸ್ಕರಿಸಲು ಕೋರಿ ರಿಟ್ ಅರ್ಜಿ ಸಲ್ಲಿಕೆ
ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದ್ದು, ಪಕ್ಷಗಳ ಅಭ್ಯರ್ಥಿಗಳ ಹೆಸರನ್ನು ಕೂಡ ಘೋಷಿಸಲಾಗಿದೆ. ಜೆಡಿಎಸ್​ನಿಂದ ಹಾಸನದಿಂದ ಮಾಜಿ ಸಚಿವ ಹೆಚ್​ಡಿ ರೇವಣ್ಣನವರ ಮಗ ಡಾ. ಸೂರಜ್ ರೇವಣ್ಣ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಮಾಜಿ ಪ್ರಧಾನಮಂತ್ರಿ ದೇವೇಗೌಡರ ಮತ್ತೋರ್ವ ಮೊಮ್ಮಗ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಎಂಎಲ್​ಸಿ ಚುನಾವಣೆಗೆ ಸೂರಜ್ ರೇವಣ್ಣನವರ ಸ್ಪರ್ಧೆಗೆ ಆಕ್ಷೇಪ ವ್ಯಕ್ತವಾಗಿದೆ. ಸೂರಜ್ ರೇವಣ್ಣನವರ ನಾಮಪತ್ರವನ್ನು ತಿರಸ್ಕರಿಸುವಂತೆ ಕೋರಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಕುಂದೂರು ಗ್ರಾಮ ಪಂಚಾಯ್ತಿ ಸದಸ್ಯ ಕೆ.ಎಲ್. ಹರೀಶ್​​ ಅವರಿಂದ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎಂಎಲ್​ಸಿ ಅಭ್ಯರ್ಥಿ ಸೂರಜ್ ರೇವಣ್ಣಗೆ ನೋಟಿಸ್ ನೀಡಲಾಗಿದೆ. ಚುನಾವಣಾ ಆಯೋಗಕ್ಕೂ ಹೈಕೋರ್ಟ್ ನೋಟಿಸ್ ನೀಡಲಾಗಿದೆ. ಸೂರಜ್ ರೇವಣ್ಣ ನಾಮಪತ್ರ ಸಲ್ಲಿಸುವಾಗ ಸಲ್ಲಿಸಿದ ಅಫಿಡವಿಟ್​ನಲ್ಲಿ ತನ್ನ ಮದುವೆ ಬಗ್ಗೆ ಮಾಹಿತಿ ಮುಚ್ಚಿಟ್ಟಿದ್ದಾರೆಂದು ಆರೋಪ ಕೇಳಿಬಂದಿದೆ. ತಮ್ಮ ಆಸ್ತಿಯನ್ನು ಮಾತ್ರ ಘೋಷಣೆ ಮಾಡಿರುವ ಸೂರಜ್ ರೇವಣ್ಣ ತಮ್ಮ ಪತ್ನಿ, ಆಕೆಯ ಆಸ್ತಿಯ ಮಾಹಿತಿ ನೀಡಿಲ್ಲವೆಂದು ಆರೋಪಿಸಲಾಗಿದೆ. ಮದುವೆ ಕಾಲಂನಲ್ಲಿ ಅನ್ವಯ ಇಲ್ಲ ಎಂದು ಉಲ್ಲೇಖ ಮಾಡಲಾಗಿರುವುದರಿಂದ ಅವರ ನಾಮಪತ್ರ ತಿರಸ್ಕರಿಸುವಂತೆ ತಕರಾರು ಮಾಡಲಾಗಿತ್ತು. ಆದರೆ, ಚುನಾವಣಾಧಿಕಾರಿ ಆ ತಕರಾರನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ‌ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಹೆಚ್​ಡಿ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ವೃತ್ತಿಯಲ್ಲಿ ವೈದ್ಯರಾಗಿದ್ದು, ಹಾಸನ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ನಡೆಯಲಿರುವ ಚುನಾವಣೆಗೆ ಕಳೆದ ಬುಧವಾರ ನಾಮಪತ್ರ ಸಲ್ಲಿಸಿದ್ದರು. ವೃತ್ತಿಯಲ್ಲಿ ವೈದ್ಯನಾಗಿರುವ ಸೂರಜ್ ರೇವಣ್ಣ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಘೋಷಣೆ ಮಾಡಿರುವಂತೆ ತಮ್ಮ 33 ನೇ ವಯಸ್ಸಿಗೆ ಸುಮಾರು ರೂ. 65 ಕೋಟಿಗೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ.

ಅಫಿಡವಿಟ್ ಪ್ರಕಾರ, ಸೂರಜ್ ರೇವಣ್ಣನವರ ಹೆಸರಲ್ಲಿ ರೂ. 3.53 ಕೋಟಿ ಚರಾಸ್ತಿ ಮತ್ತು ರೂ. 61.68 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ. ಡಾ. ಸೂರಜ್ ತಮ್ಮ ತಾತ-ಅಜ್ಜಿ, ಅತ್ತೆಯಂದಿರು, ಹಾಗೂ ತಂದೆ-ತಾಯಿಯಿಂದ ಸುಮಾರು 15 ಕೋಟಿ ರೂ. ಸಾಲ ಪಡೆದಿದ್ದಾರೆ. ಸೂರಜ್ ಅವರ ಬಳಿ ಸುಮಾರು 46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 18 ಕೆಜಿ ಬೆಳ್ಳಿಯಿದೆ. ಆದರೆ, ಅವರು ತಮ್ಮ ಅಫಿಡವಿಟ್​ನಲ್ಲಿ ತಮ್ಮ ಪತ್ನಿಯ ಹೆಸರಲ್ಲಿರುವ ಆಸ್ತಿಯನ್ನು ಬಹಿರಂಗಪಡಿಸಿರಲಿಲ್ಲ. ಹಾಗೇ, ಮದುವೆಯಾಗಿದೆ ಎಂಬ ಬಗ್ಗೆಯೂ ಉಲ್ಲೇಖಿಸಿರಲಿಲ್ಲ.

ಮಾಜಿ ಪ್ರಧಾನಮಂತ್ರಿ ಹೆಚ್​ಡಿ ದೇವೇಗೌಡರ ಮೊಮ್ಮಗ ಹಾಗೂ ಹೆಚ್​ಡಿ ರೇವಣ್ಣ- ಭವಾನಿ ದಂಪತಿಯ ಮಗನಾಗಿರುವ ಸೂರಜ್ ರೇವಣ್ಣ 2020ರಲ್ಲಿ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಆದರೆ, ಇದುವರೆಗೂ ವಿಧಾನಸಭೆ, ವಿಧಾನ ಪರಿಷತ್, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸೂರಜ್ ರೇವಣ್ಣ ಎಂಎಲ್​ಸಿ ಚುನಾವಣೆ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಡಾ. ಸೂರಜ್ ರೇವಣ್ಣ ನಾಮಪತ್ರ ಸಲ್ಲಿಕೆ; ಜೆಡಿಎಸ್​ನಲ್ಲಿ ದೇವೇಗೌಡರ ಕುಟುಂಬದ್ದೇ ದರ್ಬಾರ್

ಕೋಟಿ ಕೋಟಿ ಆಸ್ತಿ ಒಡೆಯ ಹೆಚ್​ಡಿ ರೇವಣ್ಣ ಪುತ್ರ ಡಾ.ಸೂರಜ್ ರೇವಣ್ಣ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada