ಹೆಸರಿಗಷ್ಟೇ ಸೀಮಿತವಾದ ಸಿಸಿಟಿವಿ ಕ್ಯಾಮರಾ; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ
ಯಾದಗಿರಿ ನಗರದಲ್ಲಿ ಕಳ್ಳತನ ಪ್ರಕರಣ ಹಾಗೂ ಅಪಘಾತ ಪ್ರಕರಣಗಳು ನಡೆದರೆ ಶೀಘ್ರವೇ ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮರಾಗಳು ಅನುಕೂಲ ಆಗುತ್ತದೆ ಎನ್ನುವ ಉದ್ದೇಶಕ್ಕೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಸಿಸಿಟಿವಿ ಇದ್ದರೂ ಕಳ್ಳತನ ಪ್ರಕರಣಗಳು ನಡೆಯುತ್ತಿವೆ.
ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿಸಿಟಿವಿ ಕ್ಯಾಮರಾಗಳನ್ನು (CCTV Camera) ಅಳವಡಿಸಲಾಗಿದ್ದು, ಅದು ಕೆಲಸಕ್ಕೆ ಬಾರದಂತಾಗಿವೆ. ಏಕೆಂದರೆ ಯಾದಗಿರಿ ನಗರದ ಪ್ರಮುಖ ಸರ್ಕಲ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಐದು ವರ್ಷ ಕಳೆದರೂ ಅವುಗಳು ಮಾತ್ರ ಕಾರ್ಯನಿರ್ವಹಿಸುತ್ತಿಲ್ಲ. ಯಾದಗಿರಿ ಜಿಲ್ಲಾ ಕೇಂದ್ರವಾದ ಬಳಿಕ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ. ಇನ್ನು ನಗರ ಕೂಡ ದೊಡ್ಡದಾಗಿ ಬೆಳೆಯುತ್ತಿದ್ದು, ಕಳ್ಳತನ ಸೇರಿದಂತೆ ಸಾಕಷ್ಟು ಅಪರಾಧ ಪ್ರಕರಣಗಳು ನಡೆಯುತ್ತಿದೆ. ಇದೇ ಕಾರಣಕ್ಕೆ ಯಾದಗಿರಿ ಜಿಲ್ಲಾ ಪೊಲೀಸರು ಯಾದಗಿರಿ ನಗರಸಭೆ ಸಹಕಾರದೊಂದಿಗೆ 8 ಕಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ. ಆದರೆ 8 ಕ್ಯಾಮರಾಗಳು ಇದ್ದರೂ ಒಂದೆ ಒಂದು ಕ್ಯಾಮರಾ ಕಾರ್ಯನಿರ್ವಹಿಸುತ್ತಿಲ್ಲ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಎಂಟು ಕಡೆ ಸಿಸಿಟಿವಿ ಕ್ಯಾಮರಾ ಯಾದಗಿರಿ ನಗರದ ಜನ ಸಂದಣಿ ಇರುವಂತ ಎಂಟು ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಗರದ ಸುಭಾಷ್ ವೃತ್ತ, ಶಾಸ್ತ್ರೀ ವೃತ್ತ, ಗಂಜ್ ಏರಿಯಾ, ಗಾಂಧಿ ವೃತ್ತ, ಕನಕ ಸರ್ಕಲ್ ಸೇರಿದಂತೆ ಎಂಟು ಕಡೆ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಿದ್ದಾರೆ. ಆದರೆ ಕೇವಲ ಸಿಸಿಟಿವಿ ಕ್ಯಾಮರಗಳನ್ನು ಕುರಿಸಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ ಬಿಟ್ಟರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.
ಲಕ್ಷಾಂತರ ರೂ. ಖರ್ಚು ಕಳೆದ ಐದು ವರ್ಷಗಳ ಹಿಂದೆ ಯಾದಗಿರಿ ನಗರಸಭೆ ವತಿಯಿಂದ 8 ಹೈಟೇಕ್ ಸಿಸಿಟಿವಿ ಕ್ಯಾಮರಾಗಳನ್ನು ಕುರಿಸಲಾಗಿದೆ. ಇದಕ್ಕಾಗಿ ಲಕ್ಷಾಂತರ ರೂ. ಸಾರ್ವಜನಿಕರ ತೆರಿಗೆ ಹಣವನ್ನು ಬಳಕೆ ಮಾಡಲಾಗಿದೆ. ಆದರೆ ಹಣ ಖರ್ಚು ಮಾಡಿ ಕ್ಯಾಮರಾಗಳನ್ನು ಕುರಿಸಿದರೂ ಸಾರ್ವಜನಿಕರಿಗೆ ನಯಾ ಪೈಸೆಯಷ್ಟು ಉಪಯೋಗವಾಗುತ್ತಿಲ್ಲ ಎಂದು ಕರವೇ ಮುಖಂಡ ಮಲ್ಲು ಮಾಳಿಕೇರಿ ಹೇಳಿದ್ದಾರೆ.
ಸಿಸಿಟಿವಿ ಇದ್ದರೂ ಬೇಧಿಸಲಾಗುತ್ತಿಲ್ಲ ಕಳ್ಳತನ ಪ್ರಕರಣ ಯಾದಗಿರಿ ನಗರದಲ್ಲಿ ಕಳ್ಳತನ ಪ್ರಕರಣ ಹಾಗೂ ಅಪಘಾತ ಪ್ರಕರಣಗಳು ನಡೆದರೆ ಶೀಘ್ರವೇ ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮರಾಗಳು ಅನುಕೂಲ ಆಗುತ್ತದೆ ಎನ್ನುವ ಉದ್ದೇಶಕ್ಕೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಸಿಸಿಟಿವಿ ಇದ್ದರೂ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಇನ್ನು ಪೊಲೀಸರಿಗೆ ಕಳ್ಳತನ ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಸಿಸಿಟಿವಿ ಕ್ಯಾಮರಾವಿದ್ದರು ರಿಕಾರ್ಡ್ ಮಾತ್ರ ಆಗುತ್ತಿಲ್ಲ. ಹೀಗಾಗಿ ಪೊಲೀಸರು ಕಳ್ಳತನ ಕೇಸ್ ಬೇಧಿಸಲು ಹರಸಹಾಸ ಪಡುವಂತಾಗಿದೆ.
ಯಾದಗಿರಿ ನಗರದಲ್ಲಿ ನಡೆಯುವ ಪ್ರಕರಣಗಳನ್ನು ಬೇಧಿಸಲು ಅನುಕೂಲ ಆಗುತ್ತದೆ ಎನ್ನುವ ಕಾರಣಕ್ಕೆ ಸಿಸಿಟಿವಿ ಕ್ಯಾಮರಗಳನ್ನು ಕುರಿಸಲಾಗಿದೆ. ಆದರೆ ಕ್ಯಾಮರಗಳು ವರ್ಕ್ ಆಗುತ್ತಿಲ್ಲ ಎನ್ನುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ಯಾಮರಾಗಳನ್ನು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ ಎಂದು ಯಾದಗಿರಿ ಎಸ್ ಪಿ ಡಾ.ಸಿ ಬಿ ವೇದಮೂರ್ತಿ ಹೇಳಿದ್ದಾರೆ.
ವರದಿ: ಅಮೀನ್ ಹೊಸುರ್
ಇದನ್ನೂ ಓದಿ: ಮಂಗಳೂರಿನಲ್ಲಿ ಮಗನ ಮೇಲೆ ಅಪ್ಪನಿಂದ ಫೈರಿಂಗ್ ಪ್ರಕರಣ; ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆ
ವಿಜಯಪುರ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಹೆಸರಿಗೆ ಮಾತ್ರ ಚೆಕ್ಪೋಸ್ಟ್; ತಪಾಸಣೆ ನಡೆಸದೆ ಸಿಬ್ಬಂದಿ ನಿರ್ಲಕ್ಷ್ಯ