ಪ್ರಜ್ವಲ್ ರೇವಣ್ಣರನ್ನು ಹೆಚ್ಡಿ ದೇವೇಗೌಡರೇ ವಿದೇಶಕ್ಕೆ ಕಳುಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ ಆರೋಪ
ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರೇ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಎಲ್ಲ ವಿಚಾರ ಗೊತ್ತಿದ್ದರೂ ಪ್ರಜ್ವಲ್ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಯಾಕೆ ಟಿಕೆಟ್ ಕೊಟ್ಟಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ.
ಯಾದಗಿರಿ, ಮೇ 1: ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣರನ್ನು (Prajwal Revanna) ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರೇ (HD Deve Gowda) ಯೋಜನೆ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಆರೋಪಿಸಿದರು. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾದ ವೇಳೆ ಮಾತನಾಡಿದ ಅವರು, ವೀಸಾ ಕೊಡುವುದು ಯಾರು? ಕೇಂದ್ರದ ಬಿಜೆಪಿಯವರೇ ತಾನೇ ಎಂದು ಪ್ರಶ್ನಿಸಿದರು. ಅಲ್ಲದೆ, ಪ್ರಜ್ವಲ್ ಪ್ರಕರಣಕ್ಕೂ ಡಿಸಿಎಂ ಡಿಕೆ ಶಿವಕುಮಾರ್ಗೂ ಸಂಬಂಧ ಇಲ್ಲ ಎಂದರು.
ಸೂರಜ್ ರೇವಣ್ಣ ಜೊತೆ ಫೋಟೋ ಇದ್ದರೆ ಏನಾಗುತ್ತೆ? ಕುಮಾರಸ್ವಾಮಿ ಜೊತೆಗೂ ಡಿಕೆ ಶಿವಕುಮಾರ್ ಫೋಟೋ ಇದೆ. ನನ್ನ ಜೊತೆಗೆ ಹೆಚ್ಡಿ ರೇವಣ್ಣ ಇರುವ ಫೋಟೋ ಕೂಡ ಇದೆ. ಹಾಗಾದ್ರೆ ಅವರನ್ನು ರಕ್ಷಣೆ ಮಾಡುತ್ತೇನೆ ಎಂದು ಅರ್ಥವಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಪೆನ್ಡ್ರೈವ್ ಹಿಂದೆ ಡಿಕೆ ಶಿವಕುಮಾರ್ ಕೈವಾಡ ಇದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕಾರ್ತಿಕ್ ಎಂಬಾತ ಪ್ರಜ್ವಲ್ ರೇವಣ್ಣರ ಚಾಲಕ ಆಗಿದ್ದ. ಕಾರ್ತಿಕ್ ಬಿಜೆಪಿ ಮುಖಂಡನ ಕೈಯಲ್ಲಿ ಪೆನ್ಡ್ರೈವ್ ಕೊಟ್ಟಿದ್ದ. ಅದನ್ನು ಆತನೇ ಹೇಳಿಕೊಂಡಿದ್ದಾನೆ. ಹೆಚ್ಡಿಕೆ ಕೇವಲ ರಾಜಕಾರಣಕ್ಕಾಗಿ ಡಿಕೆ ಶಿವಕುಮಾರ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಎಲ್ಲ ವಿಚಾರ ಗೊತ್ತಿದ್ದರೂ ಯಾಕೆ ಪ್ರಜ್ವಲ್ಗೆ ಟಿಕೆಟ್ ಕೊಟ್ಟರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಎಸ್ಐಟಿ ಅಧಿಕಾರಿಗಳು ಪಾರದರ್ಶಕವಾಗಿ ತನಿಖೆ ಮಾಡುತ್ತಾರೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಸಿಎಂ ಹೇಳಿದರು.
ಪ್ರಜ್ವಲ್ ಸ್ಟೇ ತೆಗೆದುಕೊಂಡಾಗಲೇ ಅನುಮಾನವಿತ್ತು: ರಾಜಣ್ಣ
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ನಿನ್ನೆ ಮೊನ್ನೆಯದ್ದಲ್ಲ. ಆರು ತಿಂಗಳ ಮುಂಚೆಯೇ ಪ್ರಜ್ವಲ್ ಸ್ಟೇ ತೆಗೆದುಕೊಂಡಿದ್ದಾರೆ. ಆಗಲೇ ನನಗೆ ಅನುಮಾನ ಇತ್ತು ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಸುಮ್ಮನೇ ಯಾರು ಸ್ಟೇ ತೆಗೆದುಕೊಳ್ಳಲ್ಲ ಎಂದರು.
ಇದನ್ನೂ ಓದಿ: ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ: ವಿಡಿಯೋ ಮೂಲ ಹುಡುಕುವುದು ಹೇಗೆ, ಹೇಗಿರಲಿದೆ ಎಸ್ಐಟಿ ತನಿಖೆ? ಇಲ್ಲಿದೆ ಮಾಹಿತಿ
ಅಸಹಾಯಕ ಮಹಿಳೆಯರ ದುರ್ಬಳಕೆ ಖಂಡನೀಯ. ಮನೆಗೆಲಸದ ಮಹಿಳೆಯನ್ನೂ ಇವರು ಬಳಸಿಕೊಂಡಿದ್ದಾರೆ. ವಿಡಿಯೋ ಮಾಡಿಕೊಂಡಿದ್ದು ಒಂದು ಭಯಾನಕ ದುಷ್ಕೃತ್ಯ. ಆದರೆ, ಅದನ್ನು ಹೊರ ಹಾಕಿದ್ದು ಕೂಡ ಅಷ್ಟೇ ಭಯಾನಕ ಎಂದು ರಾಜಣ್ಣ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Wed, 1 May 24