ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ ಕುರ್ಚಿ ಬಿಡಬೇಕು: ಸಚಿವ ಶರಣಬಸಪ್ಪ ದರ್ಶನಾಪುರ
ನಾನು ಇರಬೇಕು ಎಂದರೆ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ಸಚಿವರಿಗೆ ನೀಡಲಾಗಿದೆ. ಇದರಲ್ಲಿ ವಿಫಲವಾದರೆ ಅವರ ಕುರ್ಚಿಗೆ ಕಂಟಕ ಬರಲಿದೆ ಎಂಬ ವದಂತಿಗಳೂ ನಂತರ ಹರಿದಾಡಿದ್ದವು. ಇದಿಗ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿಕೆ ಅದಕ್ಕೆ ಪುಷ್ಟಿ ನೀಡಿದೆ.
ಯಾದಗಿರಿ, ಏಪ್ರಿಲ್ 16: ಲೋಕಸಭೆ ಚುನಾವಣೆ (Lok Sabha Elections) ಬಳಿಕ ರಾಜ್ಯದ ಹಲವು ಸಚಿವರ ಕುರ್ಚಿಗೆ ಕಂಟಕ ಒದಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಮತ್ತು ಇತರ ಕೆಲವು ಮಂದಿ ಕಾಂಗ್ರೆಸ್ ನಾಯಕರು ಈ ಬಗ್ಗೆ ಪರೋಕ್ಷ ಹೇಳಿಕೆಗಳನ್ನು ನೀಡಿದ್ದಾರೆ. ಇದೀಗ ಸಚಿವ ಶರಣಬಸಪ್ಪ ದರ್ಶನಾಪುರ (Sharanabasappa Darshanapur) ಆಡಿದ ಮಾತು ಅದನ್ನು ಪುಷ್ಟೀಕರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದಿದ್ದರೆ ಕುರ್ಚಿ ಬಿಡಬೇಕಾಗುತ್ತದೆ ಎಂದು ಅವರು ಪರೋಕ್ಷವಾಗಿ ಮಂತ್ರಿಗಿರಿ ಬಿಟ್ಟುಕೊಡಬೇಕಾಗಬಹುದು ಎಂಬ ಸುಳಿವು ನೀಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಪ್ರಚಾರ ಭಾಷಣದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
‘ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೇ ಹೋದರೆ ಆ ಕುರ್ಚಿಯನ್ನು (ಮಂತ್ರಿ) ಅಲ್ಲಿಗೇ ಬಿಡಬೇಕಾಗುತ್ತದೆ. ನಾವೇ ಲೀಡ್ ಕೊಡದಿದ್ರೆ ನಾವೇನು ಮುಖ ತೋರಿಸಬೇಕು ಎಂದು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.
ನೀಜ ಹೇಳಬೇಕಂದರೆ ನನಗೆ ಮಂತ್ರಿ ಹುದ್ದೆಯನ್ನೇ ಕೊಡಬಾರದಾಗಿತ್ತು. ಯಾಕೆಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 20 ಸಾವಿರ ಲೀಡ್ ಆಗಿತ್ತು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮುನ್ನಡೆ ಸಿಗದಿದ್ದರೆ ತಪ್ಪು ಸಂದೇಶ ಹೋಗುತ್ತದೆ. ನಿಮ್ಮ (ವಿಧಾನಸಭೆ) ಚುನಾವಣೆಯನ್ನು ಶ್ರಮ ಹಾಕಿ ಗೆಲ್ಲುತ್ತೀರಿ. (ಲೋಕಸಭೆ) ಚುನಾವಣೆಯಲ್ಲಿ ಪಕ್ಷಕ್ಕೆ ಲೀಡ್ ತಂದುಕೊಡುವುದಿಲ್ಲ ಎಂಬ ಭಾವನೆ ಬರುತ್ತದೆ ಎಂದು ಅವರು ಹೇಳಿದ್ದಾರೆ.
‘ಅವರನ್ನು ಗೆಲ್ಲಿಸಿ ನನ್ನ ಕೈ ಬಲಪಡಿಸಿ!’
ಈ ಬಾರಿ ಲೀಡ್ ಕೊಡದಿದ್ರೆ ಬಹಳ ಸಂಕಷ್ಟ ಆಗಲಿದೆ. ಅದಕ್ಕಾಗಿ ರಾಜಾ ವೇಣುಗೋಪಾಲ ನಾಯಕ, ಜಿ ಕುಮಾರ ನಾಯಕರನ್ನು ಗೆಲ್ಲಿಸಬೇಕು. ಅವರನ್ನು ಗೆಲ್ಲಿಸಿ ನನ್ನ ಕೈ ಬಲಪಡಿಸಿ ಎಂದು ಬೆಂಬಲಿಗರಲ್ಲಿ, ಕಾರ್ಯಕರ್ತರಲ್ಲಿ ಹಾಗೂ ಮತದಾರರಲ್ಲಿ ಸಚಿವ ದರ್ಶನಾಪುರ ಮನವಿ ಮಾಡಿದ್ದಾರೆ.
ಮೈಸೂರಿನ ವರುಣಾ ಕ್ಷೇತ್ರದ ಬಿಳಿಗೆರೆ ಗ್ರಾಮದಲ್ಲಿ ಇತ್ತೀಚೆಗೆ ಚುನಾವಣಾ ಪ್ರಚಾರ ನಡೆಸಿದ್ದ ಸಿಎಂ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಯಲ್ಲಿ 48 ಸಾವಿರ ಮತಗಳಿಂದ ಗೆಲ್ಲಿಸಿದ್ದೀರಿ. ಈಗ (ಲೋಕಸಭೆ ಚುನಾವಣೆ) ವರುಣ ಕ್ಷೇತ್ರದಲ್ಲಿ 60 ಸಾವಿರ ಮತಗಳ ಲೀಡ್ ಕೊಡಿ. ಆಗ ನನ್ನ ಯಾರು ಮುಟ್ಟಲು ಆಗಲ್ಲ, ನಾನು ಇರಬೇಕಾ ಬೇಡ್ವಾ? ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ನಾನು ಇರಬೇಕು ಅಂದ್ರೆ ವರುಣಾದಲ್ಲಿ 60 ಸಾವಿರ ಲೀಡ್ ಕೊಡಿ: ಸಿದ್ದರಾಮಯ್ಯ ಈ ರೀತಿ ಹೇಳಿಕೆ ಹಿಂದಿನ ಮರ್ಮವೇನು?
ಅದಕ್ಕೂ ಕೆಲವು ದಿನಗಳ ಮೊದಲು, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸೀಟ್ ಗೆಲ್ಲಿಸಲಿಲ್ಲ ಎಂದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಶಾಸಕ ಗುಬ್ಬಿ ಶ್ರೀನಿವಾಸ್ ಹೇಳಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ