SSLC ಫಲಿತಾಂಶ ಕುಸಿತ: ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್
ಯಾದಗಿರಿ ಶೈಕ್ಷಣಿಕವಾಗಿ ತೀರ ಹಿಂದಳಿದ ಜಿಲ್ಲೆಯಾಗಿದೆ. ಪ್ರತಿ ಬಾರಿ ಎಸ್ಎಸ್ಎಲ್‌ಸಿ ಫಲಿತಾಂಶ ಬಂದಾಗ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿ ಇರುತ್ತದೆ. ಆದರೆ, ಈ ಬಾರಿ ಕೊನೆ ಸ್ಥಾನದಿಂದ ಸ್ವಲ್ಪ ಮೇಲೆ ಬಂದಿದೆ. ಶೈಕ್ಷಣಿಕವಾಗಿ ಜಿಲ್ಲೆಯನ್ನು ಮುಂದೆ ತರಬೇಕು ಅಂತ ಅಧಿಕಾರಿಗಳು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಆಗುತ್ತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಈ ಬಾರಿ ಫಲಿತಾಂಶ ಕಡಿಮೆ ಬರಲು ಕಾರಣ ಕೇಳಿ ಶಾಲೆ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ಶಿಕ್ಷಕರ ಸಂಘ ಬೇಸರ ಹೊರ ಹಾಕಿದೆ.

ಯಾದಗಿರಿ, ಜುಲೈ 19: ಯಾದಗಿರಿ (Yadgiri) ಜಿಲ್ಲೆ ಸತತ ಐದು ವರ್ಷಗಳಿಂದ ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ (SSLC Result) ಕೊನೆ ಸ್ಥಾನದಲ್ಲಿದೆ. ಫಲಿತಾಂಶ ಕಡಿಮೆಯಾಗಲು ಕಾರಣ ಕೇಳಿ ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಅವರು ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಎರಡು ಹಂತದಲ್ಲಿ ನೋಟಿಸ್ ನೀಡಿದ್ದಾರೆ. ಶೇ. 40 ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳಿಗೆ ಬೇರೆ ನೋಟಿಸ್, ಶೇ. 60ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳಿಗೆ ಬೇರೆ ನೋಟಿಸ್ ಜಾರಿ ಮಾಡಿದ್ದಾರೆ. “ನಿಮ್ಮ ಶಾಲೆಯ ಫಲಿತಾಂಶ ಕಡಿಮೆಯಾಗಲು ಕಾರಣವೇನು? ಎಂದು ನೋಟಿಸ್ ನೀಡಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಎಸ್ಎಸ್ಎಲ್‌ಸಿ ಫಲಿತಾಂಶ ಕುಸಿಯಲು ಹಲವು ಕಾರಣಗಳಿವೆ. ಕೇವಲ ಶಿಕ್ಷಕರು ಸರಿಯಾಗಿ ಪಾಠ ಮಾಡಿಲ್ಲ ಅಂತ ಮಾತ್ರಕ್ಕೆ ಫಲಿತಾಂಶ ಕಡಿಯಾಗಿದೆ ಅಂತ ಹೇಳಲು ಆಗಲ್ಲ. ಉತ್ತಮ ಫಲಿತಾಂಶ ಬರಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಸರ್ಕಾರ ಮಾಡಬೇಕಿದೆ. ಜೊತೆಗೆ ಶಾಲೆಗಳಿಗೆ ಅಗತ್ಯಕ್ಕೆ ತಕ್ಕ ಹಾಗೆ ಶಿಕ್ಷಕರನ್ನು ನಿಯೋಜನೆ ಮಾಡಬೇಕು. ಜಿಲ್ಲೆಯಲ್ಲಿರುವ ಒಂದೇ ಒಂದು ಶಾಲೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಶಿಕ್ಷಕರನ್ನು ನೇಮಕ ಮಾಡಿಲ್ಲ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಕೆಲ ಶಾಲೆಗಳು ಒಬ್ಬರೇ ಶಿಕ್ಷಕರ ಮೇಲೆ ನಡೆಯುತ್ತಿವೆ. ಹೀಗಿರುವಾಗ ಉತ್ತಮ ಫಲಿತಾಂಶ ಬರಲು ಹೇಗೆ ಸಾಧ್ಯ?.
ಇದನ್ನೂ ಓದಿ: ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಕಲಬುರಗಿಗೆ ಕೊನೆಯ ಸ್ಥಾನ
ಜಿಲ್ಲೆಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದ ಶಿಕ್ಷಕರ ಕೊರತೆ ಕೂಡ ಹೆಚ್ಚಿದೆ. ಈ ಬಾರಿ ಇಂತಹ ಸಮಸ್ಯೆಗಳ ಮಧ್ಯೆಯೂ ಸುಮಾರು 15036 ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇವರಲ್ಲಿ 7759 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿ ವಿಷಯವಾರು ಶಿಕ್ಷಕರಿಂದ ಉತ್ತರ ಪಡೆದು ನೀಡುವಂತೆ ಹೇಳಿದ್ದಕ್ಕೆ ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ಆಕ್ರೋಶ ಹೊರಹಾಕಿದೆ. ಫಲಿತಾಂಶ ಕಡಿಮೆಯಾಗಲು ಕೇವಲ ಶಿಕ್ಷಕರನ್ನು ಹೊಣೆಗಾರಿಕೆಯನ್ನಾಗಿ ಮಾಡುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹಿಂದುಳಿದ ಜಿಲ್ಲೆ ಅಂತ ಹಣೆ ಪಟ್ಟಿ ಕಟ್ಟಿಕೊಂಡಿರುವ ಯಾದಗಿರಿ ಶೈಕ್ಷಣಿಕವಾಗಿಯೂ ಸಹ ತೀರ ಹಿಂದುಳಿದಿದೆ. ಫಲಿತಾಂಶ ಕಡಿಮೆಯಾಗಿದೆ ಅಂತ ಶಿಕ್ಷಕರ ಮೇಲೆ ಗೂಬೆ ಕೂರಿಸುವ ಬದಲಿಗೆ ಉತ್ತಮ ವ್ಯವಸ್ಥೆ ನಿರ್ಮಾಣ ಮಾಡಿ ಶಿಕ್ಷಕರ ನೇಮಕಾತಿ ಮಾಬೇಕಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:17 pm, Sat, 19 July 25







