AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಹಲ್ಲೆಗೊಳಗಾಗಿದ್ದ ಸಮಾಜ ಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿ ಸಾವು; ನಾಲ್ವರು ಆರೋಪಿಗಳು ವಶ

ಯಾದಗಿರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅಂಜಲಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಅವರು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಿಸದೆ ಹೈದರಾಬಾದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಪರಾರಿಯಾಗಿದ್ದಾರೆ.

ಯಾದಗಿರಿ: ಹಲ್ಲೆಗೊಳಗಾಗಿದ್ದ ಸಮಾಜ ಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿ ಸಾವು; ನಾಲ್ವರು ಆರೋಪಿಗಳು ವಶ
ಸಮಾಜ ಕಲ್ಯಾಣ ಇಲಾಖೆ ಮಹಿಳಾ ಅಧಿಕಾರಿ ಕೊಲೆ ಆರೋಪಿಗಳಾದ ಜಗದೀಶ್, ಕಾಶಿನಾಥ್, ಯಮುನಪ್ಪ ಮತ್ತು ದತ್ತಾತ್ರೇಯ ಬಂಧನ
ಅಮೀನ್​ ಸಾಬ್​
| Edited By: |

Updated on: Nov 15, 2025 | 1:01 PM

Share

ಯಾದಗಿರಿ, ನವೆಂಬರ್ 15: ಯಾದಗಿರಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ (Social Welfare Officer) ಅಂಜಲಿ (35) ಮೇಲೆ ನ. 12 ರಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದಅವರು ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಹೈದರಾಬಾದಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಂಜಲಿ ಸಾವನ್ನಪ್ಪಿದ್ದಾರೆ.

ಅಧಿಕಾರಿಯ ಹತ್ಯೆಗೈದ ದುಷ್ಕರ್ಮಿಗಳು ವಶಕ್ಕೆ

ಅಧಿಕಾರಿಯ ಮೇಲೆ ಹಳೆಯ ದ್ವೇಷ ಹೊಂದಿದ್ದ ದುಷ್ಕರ್ಮಿಗಳು ಕೊಡಲಿ ಸೇರಿದಂತೆ ಇನ್ನಿತರ ಮಾರಾಕಾಸ್ತ್ರಗಳಿಂದ ದಾಳಿ ಮಾಡಿದ್ದು, ಕೊಲೆ ಮಾಡುವ ಉದ್ದೇಶದಿಂದಲೇ ಪ್ಲಾನ್ ಮಾಡಿ ದಾಳಿ ಮಾಡಿದ್ದರೆಂದು ಶಂಕಿಸಲಾಗಿತ್ತು. ಈ ಕೃತ್ಯಕ್ಕೆ ಸಂಬಂಧಿಸಿದ ಯಲ್ಲಪ್ಪ, ಕಾಶಿನಾಥ, ದತ್ತಾತ್ರೇಯ ಮತ್ತು ಜಗದೀಶ್ ಎಂಬ ನಾಲ್ವರು ಹಂತಕರನ್ನು ಯಾದಗಿರಿ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ.

ಸ್ವಿಫ್ಟ್ ಕಾರಿನಲ್ಲಿ ಬಂದು ಕೊಲೆ ಮಾಡಿ ಮಹಾರಾಷ್ಟ್ರದ ಕಡೆಗೆ ಪರಾರಿಯಾಗುತ್ತಿದ್ದ ವೇಳೆ ಇವರನ್ನು ಸೆರೆಹಿಡಿಯಲಾಗಿದೆ. ಶಹಾಬಾದ್ ಮೂಲದ ವಿಜಯ್ ಹಾಗೂ ಶಂಕರ್ ಅವರು ಅಂಜಲಿ ಕೊಲೆಗೆ ಸುಪಾರಿ ನೀಡಿದ್ದಾರೆಂದು ಆರೋಪಿಗಳು ತನಿಖೆಯ ವೇಳೆ ಒಪ್ಪಿಕೊಂಡಿದ್ದಾರೆ. 4 ವರ್ಷಗಳ ಹಿಂದೆ ಅಂಜಲಿಯ ಪತಿ ಗಿರೀಶ್​ರನ್ನೂ ಸಹ ದುಷ್ಕರ್ಮಿಗಳಾದ ವಿಜಯ್ ಮತ್ತು ಶಂಕರ್ ಭೀಕರವಾಗಿ ಹತ್ಯೆಗೈದಿದ್ದರು.  ಇದೇ ದ್ವೇಷದಿಂದ ಅಧಿಕಾರಿ  ಕಳೆದ ಸೆಪ್ಟೆಂಬರ್‌ನಲ್ಲಿ ಶಂಕರ್ ಮೇಲೆ ಹಲ್ಲೆ ನಡೆಸಿರಬಹುದೆಂಬ ಶಂಕೆಯಿಂದ  ಪ್ರತೀಕಾರವಾಗಿ ಈ ಕೊಲೆ ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗಿದೆ. ಸುಪಾರಿ ನೀಡಿದ ಪ್ರಮುಖ ಆರೋಪಿಗಳಾದ ವಿಜಯ್ ಮತ್ತು ಶಂಕರ್ ಇದೀಗ ಪರಾರಿಯಾಗಿದ್ದು, ಅವರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಅಧಿಕಾರಿ ಸಾವು

ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕಿ (SDA)ಯಾಗಿ ಕೆಲಸ ಮಾಡುತ್ತಿದ್ದ ಅಂಜಲಿ,ಯಾದಗಿರಿ ನಗರದ ಗ್ರೀನ್ ಸಿಟಿ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಕಚೇರಿಗೆ ಹೋಗುತ್ತಿರುವಾಗ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಅವರ ಕಾರಿನ ಗಾಜನ್ನು ಒಡೆದು, ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಹಿನ್ನೆಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಲ್ಲೆ ನಡೆದ ನಂತರ ಕಾರಿನಲ್ಲಿಯೇ ರಕ್ತದ ಮಡುವಿನಲ್ಲಿದ್ದ ಅಧಿಕಾರಿಯನ್ನು ಅವರ ಕಾರು ಚಾಲಕ ಕೂಡಲೇ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ತದನಂತರ ಅಂಜಲಿಯನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.  ಪತಿ ಗಿರೀಶ್ ಕೊಲೆಯ ಬಳಿಕ ಎಸ್​​ಸಿ, ಎಸ್​​ಟಿ ದೌರ್ಜನ್ಯ ಕಾಯ್ದೆಯಡಿ ಅಂಜಲಿ ನೌಕರಿಗೆ ಸೇರಿದ್ದರೆಂದು ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.