
ಯಾದಗಿರಿ, ಆ.27: ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗಿಯಾಗಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು ಘಟನೆ ನಡೆದ 9 ತಿಂಗಳ ಬಳಿಕ ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಯಾದಗಿರಿ ಡಿಡಿಪಿಐ (DDPI) ಚನ್ನಬಸಪ್ಪ ಮುದೋಳ್ ಅವರು ಈ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.
ಇನ್ನು ಅಮಾನತು ಆಗಿರುವ ಹುಣಸಗಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಗುರುರಾಜ್ ಜೋಶಿ ಹಾಗೂ ಹುಣಸಗಿ ತಾಲೂಕಿನ ಕುಪ್ಪಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಣ್ಣಾಸಾಹೇಬ್ ದೇಶಮುಖ ಎಂದು ಹೇಳಲಾಗಿದೆ.
ಆರ್‌ಎಸ್‌ಎಸ್ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಲ್ಲಿ ವಿಜಯಪುರ ಜಿಲ್ಲೆಯ ತಾಳಿಕೋಟಿ ಪಟ್ಟಣದಲ್ಲಿ ಪಥಸಂಚಲನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಈ ಇಬ್ಬರು ಶಿಕ್ಷಕರು ಭಾಗವಹಿಸಿದ್ದರು. ಸರ್ಕಾರಿ ಸೇವೆಯಲ್ಲಿದ್ದುಕೊಂಡು ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ‘ಅಂಬೇಡ್ಕರ್ ಸ್ವಾಭಿಮಾನಿ ಸೇನೆ’ ಮುಖಂಡರು ನಿರಂತರವಾಗಿ ದೂರು ನೀಡಿದ್ದರು.
ಇದನ್ನೂ ಓದಿ: ಹನೂರು ಎನ್ ಕೌಂಟರ್ ಬೆನ್ನಲ್ಲೇ ಬಯಲಾಯ್ತು ಅಂತರರಾಷ್ಟ್ರೀಯ ಜಾಲ: ಚಾಮರಾಜನಗರದಿಂದ ಚೀನಾ, ಮಲೇಷಿಯಾಗೆ ಚಿಪ್ಪುಹಂದಿ ಸ್ಮಗ್ಲಿಂಗ್
ಈ ಕುರಿತು ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಮುಖಂಡರು ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಪ್ರಿಯಾಂಕ್ ಖರ್ಗೆ ಅವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಇಲಾಖೆಯು, ಇಬ್ಬರೂ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿ ಈಗ ಅಧಿಕೃತ ಆದೇಶ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ