ಅನ್ಯಕೋಮಿನ ಯುವತಿಯ ಜೊತೆ ಬಸ್ನಲ್ಲಿ ಪ್ರಯಾಣ; ಯುವಕನಿಗೆ ಚಾಕು ಇರಿದು ನೈತಿಕ ಪೊಲೀಸ್ ಗಿರಿ
ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್ನಲ್ಲಿ ಈ ಯುವಕ ಅನ್ಯಧರ್ಮೀಯ ಯುವತಿ ಜೊತೆ ಪಯಣಿಸುತ್ತಿದ್ದ ಮಾಹಿತಿ ಪಡೆದು ರಾತ್ರಿ ವೇಳೆಗೆ ಬಸ್ ತಡೆದ ಕೆಲ ಯುವಕರು, ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಯುವತಿಯನ್ನೂ ಥಳಿಸಿದ್ದಾರೆ.

ಮಂಗಳೂರು: ಅನ್ಯಧರ್ಮೀಯ ಯುವತಿಯೊಂದಿಗೆ ಬಸ್ನಲ್ಲಿ ತೆರಳುತ್ತಿದ್ದ ಕಾರಣಕ್ಕಾಗಿ 23 ವರ್ಷದ ಯುವಕನೋರ್ವನಿಗೆ ಥಳಿಸಿ, ಚಾಕು ಇರಿದ ಘಟನೆ ಮಂಗಳೂರು ನಗರದ ಪಂಪ್ವೆಲ್ ಬಳಿ ಗುರುವಾರ ರಾತ್ರಿ ನಡೆದಿದೆ. ಬೈಕಂಪಾಡಿ-ಜೋಕಟ್ಟೆ ನಿವಾಸಿ ಅಸ್ವಿದ್ ಅನ್ವರ್ ಮುಹಮ್ಮದ್ ಎನ್ನುವವರ ಮೇಲೆ ಹಲ್ಲೆ ನಡೆದಿದ್ದು, ನಾಲ್ಕೈದು ಮಂದಿಯ ತಂಡ ದಾಳಿ ಮಾಡಿರುವುದಾಗಿ ತಿಳಿದುಬಂದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್ನಲ್ಲಿ ಈ ಯುವಕ ಅನ್ಯಧರ್ಮೀಯ ಯುವತಿ ಜೊತೆ ಪಯಣಿಸುತ್ತಿದ್ದ ಮಾಹಿತಿ ಪಡೆದು ರಾತ್ರಿ ವೇಳೆ ಬಸ್ ತಡೆದ ಕೆಲ ಯುವಕರು, ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಯುವತಿಯನ್ನೂ ಥಳಿಸಿದ್ದಾರೆ. ಹಲ್ಲೆಗೊಳಗಾದ ಯುವಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಯುವತಿಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.
ಯುವತಿ ಚಲಿಸುತ್ತಿದ್ದ ಬಸ್ ಮೇಲೆ ಹಿಂದು ಸಂಘಟನೆ ದಾಳಿ ಪ್ರಕರಣಕ್ಕೆ ಸಂಬಂಧಿಸಿ, ಕಂಕನಾಡಿ ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳ್ನು ಬಂಧಿಸಿದ್ದಾರೆ. ಅತ್ತಾವರ ನಿವಾಸಿ ಬಾಲಚಂದ್ರ, ಕಂದುಕ ನಿವಾಸಿ ಧನುಷ್ ಭಂಡಾರಿ, ಶಕ್ತಿನಗರ ನಿವಾಸಿ ಜಯಪ್ರಶಾಂತ್, ಉರ್ವ ನಿವಾಸಿ ಅನಿಲ್ ಕುಮಾರ್ ಬಂಧಿತರು. ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನವಾಗಿದೆ.
ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಬಂಧ ಏಳರಿಂದ ಎಂಟು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನಿತರ ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚುವುದಾಗಿ ತಿಳಿಸಿದ್ದರು. ಕಳೆದ ಒಂದು ತಿಂಗಳಲ್ಲಿ ಬೆಳ್ತಂಗಡಿ, ಸುರತ್ಕಲ್, ಮಂಗಳೂರು ಸೇರಿದಂತೆ ಕೆಲವು ಕಡೆ ಈ ರೀತಿಯ ನೈತಿಕ ಪೊಲೀಸ್ ಗಿರಿ ಮರುಕಳಿಸುತ್ತಿದ್ದು, ಇಂತಹ ಘಟನೆಗಳನ್ನು ನಿಯಂತ್ರಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ಹಲವರು ಆಗ್ರಹಿಸಿದ್ದಾರೆ.
Published On - 9:27 pm, Fri, 2 April 21



