ನಿರ್ಬಂಧವಿದ್ದರೂ ಬೆಳ್ಳಂಬೆಳಗ್ಗೆಯೇ ಬ್ಯಾಟ್​ ಹಿಡಿದು ಮೈದಾನಕ್ಕಿಳಿದ ಯುವಕರು; ನಿಯಮ ಪಾಲನೆಗಿಂತಲೂ ಕ್ರಿಕೆಟ್​ ಆಡಲು ಹೆಚ್ಚು ಉತ್ಸಾಹ

ನಿರ್ಬಂಧವಿದ್ದರೂ ಬೆಳ್ಳಂಬೆಳಗ್ಗೆಯೇ ಬ್ಯಾಟ್​ ಹಿಡಿದು ಮೈದಾನಕ್ಕಿಳಿದ ಯುವಕರು; ನಿಯಮ ಪಾಲನೆಗಿಂತಲೂ ಕ್ರಿಕೆಟ್​ ಆಡಲು ಹೆಚ್ಚು ಉತ್ಸಾಹ
ನಿಯಮ ಪಾಲನೆ ಮರೆತು ಮೈದಾನಕ್ಕಿಳಿದ ಯುವಕರು

ಕೊಪ್ಪಳದಲ್ಲಿ ಆಟದ ಮೈದಾನ ಬಂದ್ ಆಗಿದ್ದರೂ ಕ್ರಿಕೆಟ್ ಆಡಲು ಬಂದಿರುವ ಯುವಕರು ಜಿಲ್ಲಾ ಕ್ರೀಡಾಂಗಣದಲ್ಲೇ ಬೆಳ್ಳಂಬೆಳಗ್ಗೆ ಆಟ ಶುರುಮಾಡಿಕೊಂಡಿದ್ದಾರೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸದೇ ಮಾಸ್ಕ್ ಧರಿಸದೇ ಆಟದಲ್ಲಿ ತೊಡಗಿರುವ ಯುವಕರ ಬಗ್ಗೆ ಕೆಲ ಪ್ರಜ್ಞಾವಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Skanda

| Edited By: preethi shettigar

Apr 21, 2021 | 8:09 AM

ಕೊಪ್ಪಳ: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಅತ್ಯಂತ ವೇಗವಾಗಿ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಹೆಚ್ಚಳವಾಗುತ್ತಿದೆ. ಜೊತೆಗೆ ಆಸ್ಪತ್ರೆಗಳಲ್ಲಿಯೂ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗುತ್ತಿರುವುದರಿಂದ ರಾಜ್ಯ ಸರ್ಕಾರ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೆಲ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಸರ್ಕಾರದ ಆದೇಶದನ್ವಯ ಸಿನಿಮಾ ಹಾಲ್​, ಶಾಪಿಂಗ್ ಮಾಲ್​, ಜಿಮ್​, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಮನೋರಂಜನಾ ಪಾರ್ಕ್, ಸ್ವಿಮ್ಮಿಂಗ್ ಪೂಲ್​, ಬಾರ್, ಆಡಿಟೋರಿಯಂ, ಆಟದ ಮೈದಾನ, ಮಸೀದಿ, ಮಂದಿರ, ಚರ್ಚ್​ಗಳನ್ನು ಬಂದ್​ ಮಾಡಬೇಕಿದೆ. ಆದರೆ, ಬಹುತೇಕ ಕಡೆಗಳಲ್ಲಿ ಈ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಜನರು ಎಂದಿನಂತೆ ಮನರಂಜನೆಯಲ್ಲಿ ತೊಡಗಿದ್ದಾರೆ.

ಕೊಪ್ಪಳದಲ್ಲಿ ಆಟದ ಮೈದಾನ ಬಂದ್ ಆಗಿದ್ದರೂ ಕ್ರಿಕೆಟ್ ಆಡಲು ಬಂದಿರುವ ಯುವಕರು ಜಿಲ್ಲಾ ಕ್ರೀಡಾಂಗಣದಲ್ಲೇ ಬೆಳ್ಳಂಬೆಳಗ್ಗೆ ಆಟ ಶುರುಮಾಡಿಕೊಂಡಿದ್ದಾರೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸದೇ ಮಾಸ್ಕ್ ಧರಿಸದೇ ಆಟದಲ್ಲಿ ತೊಡಗಿರುವ ಯುವಕರ ಬಗ್ಗೆ ಕೆಲ ಪ್ರಜ್ಞಾವಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಜಿಲ್ಲಾ ಕ್ರೀಡಾಂಗಣದಲ್ಲಿ ಹೀಗೆ ನಿಯಮ ಉಲ್ಲಂಘನೆ ಮಾಡುತ್ತಿರುವವರಿಗೆ ಸರ್ಕಾರಿ ಅಧಿಕಾರಿಗಳ ಬೆಂಬಲವಿದೆ, ಅವರೂ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಚಿತ್ರದುರ್ಗ: ನಗರದಲ್ಲಿ ಕೊರೊನಾ ನಿಯಮಾವಳಿಗಳ ಪಾಲನೆಗೆ ಕನಿಷ್ಠ ಆದ್ಯತೆ ನೀಡಲಾಗಿದ್ದು, ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್,‌ ಸಾಮಾಜಿಕ ಅಂತರವಿಲ್ಲದೆ ಜನ ಜಮಾಯಿಸಿದ್ದಾರೆ. ನಾಳೆಯಿಂದ ತರಕಾರಿ ಮಾರುಕಟ್ಟೆ ತಾತ್ಕಾಲಿಕ ಸ್ಥಳಾಂತರ ಮಾಡುತ್ತೇವೆ. ಸೈನ್ಸ್ ಕಾಲೇಜು ಬಳಿಯ ಜಯದೇವ ಕ್ರೀಡಾಂಗಣಕ್ಕೆ ತಾತ್ಕಾಲಿಕ ಶಿಫ್ಟ್ ಮಾಡಲಾಗುತ್ತದೆ. ಮಾಸ್ಕ್, ಸಾಮಾಜಿಕ ಅಂತರದ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಬಾಯಿ ಮಾತಿಗೆ ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ ಕಣ್ಣ ಮುಂದೆಯೇ ನಿಯಮ ಉಲ್ಲಂಘನೆ ಆಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಮೌನ ವಹಿಸಿದ್ದಾರೆ.

ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಮಾರುಕಟ್ಟೆಯಲ್ಲಿ ನಿಯಮಾವಳಿಗಳನ್ನು ಸಂಪೂರ್ಣ ಗಾಳಿಗೆ ತೂರಲಾಗುತ್ತಿದ್ದರೂ ಯಾವುದೇ ಅಧಿಕಾರಿಗಳು ಅತ್ತ ಸುಳಿದಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆಯೇ ಕೊರೊನಾ ಹರಡುವ ಕೇಂದ್ರ ಆಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ಕೈಕಟ್ಟಿ ಕುಳಿತ ಜಿಲ್ಲಾಡಳಿತದ ನಡೆಯನ್ನು ಹಲವರು ಪ್ರಶ್ನಿಸಿದ್ದಾರೆ.

ಬೀದರ್​ನಲ್ಲಿ ಇಪ್ಪತ್ತು ದಿನಗಳ ಅಂತರದಲ್ಲಿ 32 ಕೊರೊನಾ ಸೋಂಕಿತರು ಮೃತ ಬೀದರ್: ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಕೇವಲ ಇಪ್ಪತ್ತೇ ಇಪ್ಪತ್ತು ದಿನಗಳಲ್ಲಿ 32 ಜನರು ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ 5058 ಜನರಿಗೆ ಸೋಂಕು ತಗುಲಿದ್ದು, ಕೊವಿಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಪರದಾಡುತ್ತಿದೆ. ಸದ್ಯ 459 ಜನರಿಗೆ ಕೊವಿಡ್ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ತೀವ್ರ ನಿಗಾ ಘಟಕದಲ್ಲಿ 48 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದವರನ್ನು ಮನೆಯಲ್ಲೇ ಇರಿಸಿ ನಿಗಾ ವಹಿಸಲಾಗುತ್ತಿದೆ.

ಬೆಂಗಳೂರಿನಿಂದ ಬರುವವರಿಂದಲೇ ಹೆಚ್ಚು ಕಂಟಕ ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದ್ದು, ನಿನ್ನೆ ಸಂಜೆ ವೇಳೆಗೆ 1055 ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೇ ನಿನ್ನೆ ಒಬ್ಬರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ನೈಟ್ ಕರ್ಪ್ಯೂ ಇದ್ದರೂ ಸೊಂಕಿತರ ಪ್ರಮಾಣದಲ್ಲಿ ಗಣನೀಯ ಏರಿಕೆ ಆಗುತ್ತಿದ್ದು, ಬೆಂಗಳೂರಿನಿಂದ ತುಮಕೂರಿಗೆ ಬರುವವರಿಂದಲೇ ಹೆಚ್ಚು ಕಂಟಕ ಎಂಬ ಮಾತು ಕೇಳಿಬರುತ್ತಿದೆ.

ಇದನ್ನೂ ಓದಿ: ಬೆಳಗಾವಿಯ ಕಾಡಂಚಿನ ಗ್ರಾಮದಲ್ಲಿ ಅರ್ಧಕ್ಕರ್ಧ ಜನರಿಗೆ ಕೊರೊನಾ ಪಾಸಿಟಿವ್: ಇಡೀ ಊರನ್ನೇ ಸೀಲ್​ಡೌನ್ ಮಾಡಿದ ಅಧಿಕಾರಿಗಳು 

Karnataka Weekend Curfew: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್​ ಕರ್ಫ್ಯೂ ಘೋಷಿಸಿದ ಸರ್ಕಾರ, ಶಾಲಾ-ಕಾಲೇಜುಗಳು ಕ್ಲೋಸ್​

Follow us on

Related Stories

Most Read Stories

Click on your DTH Provider to Add TV9 Kannada