ಮುಂಬೈನಲ್ಲಿ ಟೆಕ್ಕಿಯಾಗಿದ್ದ ಯುವಕ ಅಲ್ಲಿನ ಉದ್ಯೋಗ ಬಿಟ್ಟು, ಕುಂದಾಪುರದಲ್ಲಿ ದೇಶಿ ಹಸುಗಳ ಪೋಷಣೆಯಲ್ಲಿ ತೊಡಗಿದ್ದಾರೆ
ಮುಂಬೈನಗರದ ಪ್ರತಿಷ್ಠಿತ ಕಂಪೆನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿ, ಚಿಕ್ಕಮಗಳೂರಿನಲ್ಲಿ ವಿವಿಧ ಉದ್ಯಮಗಳನ್ನು ನಡೆಸಿ ಯಶಸ್ಸು ಕಂಡಿದ್ದ ಕುಮಾರ ಕಾಂಚನ್ ಅವರು ತನ್ನೆಲ್ಲಾ ಉದ್ಯಮಗಳನ್ನು ತೊರೆದು ಇಂದು ತನ್ನ ಹುಟ್ಟೂರಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ನೆಲೆಸಿದ್ದಾರೆ.
ಸಂಸ್ಕೃತದಲ್ಲಿ ಗಾವೋ ವಿಶ್ವಸ್ಯ ಮಾತರಃ ಅಂದರೆ, ಗೋವು ಸಕಲ ಚರಾಚರಗಳಿಗೆ ಹಾಲುಣಿಸುವ ಮಹಾತಾಯಿ ಎಂದು ಬಣ್ಣಿಸಲಾಗಿದೆ. ಈಗಂತೂ ಬಿಡಿ ನಮ್ಮ ದೇಶದಲ್ಲಿಯೇ ದೇಶಿ ತಳಿಯ ಹಸುಗಳ ಕೊರತೆ ಕಾಣುತ್ತಿದೆ. ಅಧಿಕ ಹಾಲು ಮತ್ತು ಮಾಂಸದ ಉದ್ದೇಶಕ್ಕೆ ಲ್ಯಾಬ್ಗಳಲ್ಲಿ ಅಭಿವೃದ್ಧಿ ಪಡಿಸಲಾದ ಹಸುಗಳು ಈಗ ಎಲ್ಲೆಲ್ಲೂ ಕಂಡು ಬರುತ್ತಿದೆ. ಆದರೆ ಕುಂದಾಪುರದ ಒಂದು ಗ್ರಾಮದಲ್ಲಿ ದೇಸಿ ಹಸುಗಳನ್ನೇ ಸಾಕುವ ಮೂಲಕ ದೇಶಿ ತಳಿಯ ಮಹತ್ವವನ್ನ ಓರ್ವ ಯುವಕ ಸಾರುತ್ತಿದ್ದಾರೆ. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಶತ- ಶತಮಾನಗಳಿಂದಲೂ ಗೋವನ್ನು ಪೂಜಿಸುತ್ತಾ ಬಂದಿದ್ದು, ಗೋವಿನಲ್ಲಿರುವ ದೈವಿಕ ಶಕ್ತಿಯನ್ನು ಕೊಂಡಾಡುತ್ತ ಕಲಿಯುಗದ ಕಾಮಧೇನು ಎಂದು ಕರೆಯಲಾಗಿದೆ. ಆದರೆ ವಿಪರ್ಯಾಸವೆಂದರೆ ದೇಶಿಯ ಗೋವುಗಳ ( Indigenous Cow) ಮಹತ್ವ ಮತ್ತು ದೈವಿಕ ಶಕ್ತಿಯನ್ನು ಅರಿಯದೆ ನಾವಿಂದು ಬೆಳ್ಳಗಿರೋದೆಲ್ಲಾ ಹಾಲೆಂದು ಸೇವಿಸುತ್ತಿದ್ದೇವೆ. ವಿದೇಶಿ ತಳಿಯ ಗೋವುಗಳ ಹಾಲಿನಲ್ಲಿ ನಮ್ಮ ಆರೋಗ್ಯಕ್ಕೆ ಮಾರಕವಾಗುವ ಅಂಶಗಳಿದ್ದರೂ ಸಹ ಅದರ ಸೇವನೆ ಮಾಡುತ್ತಿದ್ದೇವೆ. ಇದು ನಮ್ಮ ದೇಹದಲ್ಲಿ ಅದೆಷ್ಟೋ ಕಾಯಿಲೆಗಳ ಉತ್ಪತ್ತಿಗೆ ಕಾರಣವಾಗಿದೆ. ಹೀಗಾಗಿ ದೇಸಿ ಗೋವುಗಳ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉತ್ತಮ ಸಂದೇಶದ ಜೊತೆಗೆ ಸ್ವಾವಲಂಬನೆಯ ಬದುಕು ಕಂಡುಕೊಳ್ಳುವ ನಿಟ್ಟಿನಲ್ಲಿ ಕುಂದಾಪುರ (Kundapura) ತಾಲೂಕು ಬೀಜಾಡಿ (Beejadi) ಗ್ರಾಮದ ಈ ಯುವಕ ಹೊಸ ಭಾಷ್ಯ ಬರೆದಿದ್ದಾರೆ (Success Story).
ಮುಂಬೈನಗರದ ಪ್ರತಿಷ್ಠಿತ ಕಂಪೆನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿ, ಚಿಕ್ಕಮಗಳೂರಿನಲ್ಲಿ ವಿವಿಧ ಉದ್ಯಮಗಳನ್ನು ನಡೆಸಿ ಯಶಸ್ಸು ಕಂಡಿದ್ದ ಕುಮಾರ ಕಾಂಚನ್ ಅವರು ತನ್ನೆಲ್ಲಾ ಉದ್ಯಮಗಳನ್ನು ತೊರೆದು ಇಂದು ತನ್ನ ಹುಟ್ಟೂರಾದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ಕಪಿಲೆ ಗೋ ಸಮ್ರದ್ದಿ ಟ್ರಸ್ಟ್ ನ್ನು ಪ್ರಾರಂಭಿಸಿದ್ದಾರೆ.
ದೇಶಿಯ ಗೋ ತಳಿಗಳ ರಕ್ಷಣೆಯ ಮಹತ್ವಾಕಾಂಕ್ಷೆ ಹೊಂದಿರುವ ಇವರು ಗುಜರಾತ್ ಮೂಲದ ಗಿರ್, ಸಾಹಿವಾಲ್, ರಾಟಿ ನಮ್ಮ ಕರ್ನಾಟಕ ಮೂಲದ ಮಲೆನಾಡು ಗಿಡ್ಡದಂತಹ ದೇಶಿಯ ತಳಿಯ ಗೋವುಗಳನ್ನು ಸಾಕುತ್ತಿದ್ದಾರೆ. ಗೋ ವಿಜ್ಞಾನ ಮತ್ತು ಅನುಸಂಧಾನ ಕೇಂದ್ರ ನಾಗ್ಪುರ, ಮಹಾರಾಷ್ಟ್ರ ಮತ್ತು ದೇಶದ ಬೇರೆ ಬೇರೆ ಭಾಗಗಳಿಗೆ ಭೇಟಿ ನೀಡಿ ದೇಶಿಯ ಗೋ ತಳಿಗಳ ರಕ್ಷಣೆಯ ಜೊತೆಗೆ ಪಂಚಗವ್ಯ ಔಷಧದ ಉತ್ಪಾದನೆ ಕುರಿತು ತರಬೇತಿ ಪಡೆದುಕೊಂಡಿದ್ದಾರೆ.
ಗೋವುಗಳ ಹಾಲಿನ ನೈಜತೆ ಹಾಗೂ ಗುಣಮಟ್ಟ ಕಾಯ್ದಕೊಳ್ಳಲು ಯಾವುದೇ ರೀತಿಯ ಕೃತಕ ಆಹಾರವನ್ನು ಗೋವುಗಳಿಗೆ ನೀಡದೆ ತಾವೇ ಸಾವಯವ ಗೊಬ್ಬರ ಬಳಸಿ ಬೆಳೆಸಿದ ಹಸಿರು ಸಸ್ಯ, ಜೋಳದ ಸಸ್ಯವನ್ನು ಗೋವುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ. ಇವರು ಸರಿಸುಮಾರು 25 ಬಗೆಯ ಔಷಧೀಯ ಉತ್ಪನ್ನವನ್ನು ದೇಶಿಯ ಗೋವುಗಳ ಹಾಲು, ಸಗಣಿ, ಮೂತ್ರ, ತುಪ್ಪ, ಮೊಸರಿನಿಂದ ತಯಾರಿಸುತ್ತಿದ್ದಾರೆ. ಗೋ ಮೂತ್ರದಿಂದ 4 ರಿಂದ 5 ಬಗೆಯ ಅರ್ಕ, ಹಾಲು ಮತ್ತು ಸಗಣಿಯನ್ನು ಬಳಸಿಕೊಂಡು ಹಲವಾರು ಬಗೆಯ ಸೋಪ್ ಗಳನ್ನು, ನೋವಿನಎಣ್ಣೆ ಯನ್ನು ತಯಾರಿಸುತ್ತಿದ್ದಾರೆ. ಮಾರಕ ಕಾಯಿಲೆಗಳಿಗೆ ಪಂಚಗವ್ಯ ಔಷಧಿ, ಗೋಮುತ್ರದಿಂದ ಗೋ ಫಿನಾಯಿಲ್, ಸಗಣಿಯಿಂದ ಪಾತ್ರೆ ತೊಳೆಯುವ ಸೋಪ್ ಹಾಗೂ ಸೊಳ್ಳೆ ನಿವಾರಕ ಬತ್ತಿಗಳನ್ನು ಸಹ ತಯಾರಿಸುತ್ತಿದ್ದಾರೆ.
ಒಟ್ಟಾರೆಯಾಗಿ ಕುಂದಾಪುರದ ಪರಿಸರದಲ್ಲಿ ದೇಶಿಯ ಗೋವಿನ ಹಾಲನ್ನು ಬೇಡಿಕೆಯ ಮೇರೆಗೆ ದಿನನಿತ್ಯ ಸರಬರಾಜು ಮಾಡುತ್ತಿದ್ದಾರೆ. ತಮ್ಮ ಗೋ ಶಾಲೆಗೆ ದೇಶದ ಬೇರೆಬೇರೆ ಭಾಗದಿಂದ ಭೇಟಿ ನೀಡುವವರಿಗೆ ಮತ್ತು ಸಂಘ ಸಂಸ್ಥೆಗಳ ಸದಸ್ಯರಿಗೆ ದೇಶಿಯ ಗೋವುಗಳ ಮಹತ್ವ ಹಾಗೂ ಪಂಚಗವ್ಯ ಔಷಧದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡುತ್ತಿದ್ದಾರೆ. ಇವರ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಲವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ವರದಿ: ಪ್ರಜ್ವಲ್ ಅಮಿನ್, ಟಿವಿ9, ಉಡುಪಿ