ಈ ಜಿಲ್ಲೆಯನು ಕಾಡುತಿದೆ.. ಹಿಂದೆಂದೂ ಕಾಣದ ಕುಡಿಯುವ ನೀರಿನ ಸಮಸ್ಯೆ

  • TV9 Web Team
  • Published On - 18:16 PM, 27 May 2020
ಈ ಜಿಲ್ಲೆಯನು ಕಾಡುತಿದೆ.. ಹಿಂದೆಂದೂ ಕಾಣದ ಕುಡಿಯುವ ನೀರಿನ ಸಮಸ್ಯೆ

ಹಿಂದೆಂದೂ ಕಂಡು ಕೇಳರಿಯದ ಕುಡಿಯುವ ನೀರಿನ ಸಮಸ್ಯೆ ಆ ಜಿಲ್ಲೆಗೆ ಬಂದೊದಗಿದೆ. ಬರಗಾಲದ ಭೀಕರತೆಗೆ ಜಲ ಮೂಲವೇ ಬತ್ತಿಹೋಗಿದ್ದು ಕುಡಿಯುವ ನೀರಿಗಾಗಿ ಜನರು ಹಾಹಾಕಾರ ಪಡುವಂತಾಗಿದೆ. ಹನಿ ಹನಿ ನೀರಿಗೂ ಕೂಡಾ ಬಂಗಾರದ ಬೆಲೆ ಬಂದಿದ್ದು ನೀರನ್ನ ಕೊಂಡು ಬಳಸುವಂತಾ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಶೇಕಡಾ 60 ರಷ್ಟು ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದ್ದು ನೀರಿಗಾಗಿ ಜನರು ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ಬರದ ನಾಡು, ಗಡಿ ಜಿಲ್ಲೆ ಬೀದರ್ ನೀರಿನ ಸಮಸ್ಯೆ
ಹೌದು ಬರದ ನಾಡು, ಗಡಿ ಜಿಲ್ಲೆ ಬೀದರ್ ಗೆ ನೀರಿನ ಸಮಸ್ಯೆ ಉದ್ಭವವಾಗಿದೆ. ಹನಿ ನೀರಿಗೂ ಇಲ್ಲಿ ಹೊಡೆದಾಟ ಬಡಿದಾಟಗಳಾಗುತ್ತಿದ್ದು ಜಗಳವಾಡಿಕೊಳ್ಳುತ್ತಿದ್ದು ಪೊಲೀಸರಿಗೂ ಕೂಡಾ ನೀರಿನ ಸಮಸ್ಯೆಯ ಜಗಳ ಬಗೆಹರಿಸುವುದೇ ಕಷ್ಟವಾಗಿ ಬಿಟ್ಟಿದೆ. ಪ್ರತಿನಿತ್ಯ ಕುಡಿಯುವ ನೀರಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ.

ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಬಾವಿ ಬೋರವೆಲ್ ಸಂಪೂರ್ಣವಾಗಿ ಬತ್ತಿ ಹೋಗಿದ್ದು ಕಿಲೋ ಮೀಟರ್ ಗಟ್ಟಲೇ ಹೋಗಿ ನೀರು ತಂದು ಕುಡಿಯ ಬೇಕಾಗಿದೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ಭೀಕರ ಬರಗಾಲ ಎದುರಾಗಿದೆ. ಬಾವಿ, ಬೋರವೇಲ್ ಗಳೇ ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ ಆಧಾರವಾಗಿವೆ. ಆದರೆ ಕಳೆದ ಎರಡು ತಿಂಗಳಿಂದ ಶೇಕಡಾ 60 ರಷ್ಟು ಬಾವಿ ಬೋರವೆಲ್ ಗಳು ಸಹ ಬತ್ತಿ ಹೋಗಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಾವಿಯಲ್ಲಿ ಸಿಗುವ ಸ್ವಲ್ಪ ನೀರಿಗಾಗಿ ಹಗಲು ರಾತ್ರಿ ಕಾದು ಕಾದು ಜಗಳವಾಡಿ ನೀರು ಪಡೆಯುವ ಪರಿಸ್ಥಿತಿ ಎದುರಾಗಿದೆ.

ವಿದ್ಯುತ್ ಕಣ್ಣಾಮುಚ್ಚಾಲೇ..
ಇನ್ನು ಕೆಲವು ಬೋರವೆಲ್ ಗಳಲ್ಲಿ ಅಲ್ಪ ಸ್ವಲ್ಪ ನೀರಿದ್ದರೂ ವಿದ್ಯುತ್ ಕಣ್ಣಾಮುಚ್ಚಾಲೇ ಆಟದಿಂದ ಊರಲ್ಲಿರುವ ಬೂರವೇಲ್ ಗಳಲ್ಲಿನ ನೀರನ್ನ ಸಹಿತ ಸದುಪಯೋಗ ಪಡಿಸಿಕೊಳ್ಳದಂತಾ ಸ್ಥಿತಿ ಎದುರಾಗಿದೆ. ಜಿಲ್ಲಾಢಳಿತ ಕೂಡಾ ನೀರಿನ ಸಮಸ್ಯೆಯನ್ನ ಬಗೆಹರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ. ಜಿಲ್ಲೆಯ ಔರಾದ್ ತಾಲೂಕಿನ ಗ್ರಾಮೀಣ ಜನರ ಪಾಡಂತೂ ಹೇಳತೀರದ್ದಾಗಿದ್ದು ತಾಲೂಕಿನ ಬಹುತೇಕ ಗ್ರಾಮದಲ್ಲಿರುವ ಬಾವಿ ಬೋರವೆಲ್ ಗಳು ಬತ್ತಿವೆ. ಇದರಿಂದ ಕುಡಿಯಲು ನೀರು ಸಿಗದೇ ಜನರು ತತ್ತರಿಸಿ ಹೋಗಿದ್ದಾರೆ.

ಕೂಗಳೆತೆ ದೂರದಲ್ಲಿ ಮಾಂಜ್ರಾ ನದಿ
ಕೂಗಳೆತೆ ದೂರದಲ್ಲಿ ಮಾಂಜ್ರಾ ನದಿ ಹರಿಯುತ್ತಿದ್ದರು ನದಿಯಲ್ಲಿ ನೀರಿಲ್ಲದ ಕಾರಣ ಬಾವಿ ಬೋರ್ ವೆಲ್ ನಲ್ಲಿಯೂ ನೀರು ಬತ್ತಿಹೋಗಿದ್ದು ಈ ಗ್ರಾಮದ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಹೀಗಾಗಿ, ಊರಿನಲ್ಲೇ ಕೊರೆಸಿರುವ ಕೆಲವು ಬೋರ್ ವೆಲ್ ನಲ್ಲಿ ಸ್ವಲ್ಪ-ಸ್ವಲ್ಪ ನೀರು ಬರುತ್ತಿದ್ದು ಅದನ್ನೇ ಕುಡಿಯುವುದು ಅನಿವಾರ್ಯವಾಗಿದೆ.

168 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಇನ್ನು ಕೆಲವರು ಗಂಟೆಗಟ್ಟಲೇ ಕಾದು ನೀರು ತುಂಬಿಕೊಂಡರೆ.. ಕೆಲವರು ಗ್ರಾಮದಿಂದ ಸುಮಾರು ಎರಡು ಕಿಲೋ ಮೀಟರ್ ಹೋಗಿ ಹೊಲದಲ್ಲಿರುವ ಬೋರವೆಲ್ ನಿಂದ ನೀರು ತರಬೇಕಾದ ಸ್ಥಿತಿ ಇದೆ. ಇನ್ನೂ ಜಿಲ್ಲೆಯಲ್ಲಿ ಸುಮಾರು 168 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅತಿ ಹೆಚ್ಚಾಗಿ ಕಂಡು ಬಂದಿದ್ದು ಇದರಲ್ಲಿ ಸುಮಾರು 18 ಗ್ರಾಮಗಳಿಗೆ ಟ್ಯಾಂಕರ್ ನಿಂದ ಕುಡಿಯುವ ನೀರು ಈಗಾಗಲೇ ಸರಬರಾಜು ಮಾಡಲಾಗುತ್ತಿದೆ. ಇದರ ಜೊತೆಗೆ ಕೆಲವೂ ಗ್ರಾಮಗಳಲ್ಲಿ ಬೋರ್ ವೆಲ್ ಕೊರೆಸಲಾಗಿದ್ದು, ಕೆಲವು ಗ್ರಾಮಗಳಲ್ಲಿ ರೈತರ ಹೊಲದಲ್ಲಿದ್ದ ಬೋರ್ ವೆಲ್ ನ ನೀರನ್ನೇ ಖರೀದಿಸಿ ಜನರಿಗೆ ಕೊಡಲಾಗತ್ತಿದೆ.

ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿದೆ
ಬೀದರ್ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಭಾಲ್ಕಿ ಹಾಗೂ ಔರಾದ್ ತಾಲೂಕಿನಲ್ಲಿ ಅತೀ ಹೆಚ್ಚು ಗ್ರಾಮಗಳು ಸೇರಿದಂತೆ ಹಲವೆಡೆ ಕುಡಿಯುವ ನೀರಿಗಾಗಿ ಜನರ ಹಾಹಾಕಾರ ಪಡುವಂತಾಗಿದೆ. ಆದರೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಎಲ್ಲಾ ರೀತಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರೂ ಕೆಲವು ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆಯನ್ನ ಬಗೆಹರಿಸಲು ಸಾಧ್ಯವಾಗದಿರುವುದು ಜಿಲ್ಲಾಡಳಿತಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ತಲೆನೋವಾಗಿ ಪರಿಣಮಿಸಿದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.