ಕೋವಿಡ್ ತ್ಯಾಜ್ಯ ವಿಲೇವಾರಿಗೆ ಧಾರವಾಡ ಮಾದರಿಯಾಯ್ತು! ಹೇಗೆ?
ಧಾರವಾಡ: ಕೊರೊನಾ ಹಾವಳಿ ಶುರುವಾದಾಗಿನಿಂದ ಎಲ್ಲೆಡೆ ಆತಂಕದ್ದೇ ಮಾತು. ಯಾವ ಕಡೆಯಿಂದ, ಯಾರ ಕಡೆಯಿಂದ ಕೊರೊನಾ ಬರುತ್ತೋ ಅನ್ನೋ ಆತಂಕ ಎಲ್ಲರಿಗೂ ಇದ್ದೇ ಇದೆ. ಅಂಥದ್ದರಲ್ಲಿ ಈ ಕೊರೊನಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಮಾಸ್ಕ್, ಪಿಪಿಇ ಕಿಟ್ ಹಾಗೂ ಇನ್ನಿತರ ವಸ್ತುಗಳನ್ನು ವಿಲೇವಾರಿ ಮಾಡೋದೇ ದೊಡ್ಡ ಸಮಸ್ಯೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಈ ಅಪಾಯಕಾರಿ ಜೈವಿಕ ವೈದ್ಯಕೀಯ ತ್ಯಾಜ್ಯದ ವಿಲೇವಾರಿಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಜೊತೆಗೆ ತ್ಯಾಜ್ಯ ವಿಲೇವಾರಿ ಮೇಲ್ವಿಚಾರಣೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸಿದ್ದಪಡಿಸಿದ […]
ಧಾರವಾಡ: ಕೊರೊನಾ ಹಾವಳಿ ಶುರುವಾದಾಗಿನಿಂದ ಎಲ್ಲೆಡೆ ಆತಂಕದ್ದೇ ಮಾತು. ಯಾವ ಕಡೆಯಿಂದ, ಯಾರ ಕಡೆಯಿಂದ ಕೊರೊನಾ ಬರುತ್ತೋ ಅನ್ನೋ ಆತಂಕ ಎಲ್ಲರಿಗೂ ಇದ್ದೇ ಇದೆ. ಅಂಥದ್ದರಲ್ಲಿ ಈ ಕೊರೊನಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ಮಾಸ್ಕ್, ಪಿಪಿಇ ಕಿಟ್ ಹಾಗೂ ಇನ್ನಿತರ ವಸ್ತುಗಳನ್ನು ವಿಲೇವಾರಿ ಮಾಡೋದೇ ದೊಡ್ಡ ಸಮಸ್ಯೆ.
ಆದರೆ ಧಾರವಾಡ ಜಿಲ್ಲೆಯಲ್ಲಿ ಈ ಅಪಾಯಕಾರಿ ಜೈವಿಕ ವೈದ್ಯಕೀಯ ತ್ಯಾಜ್ಯದ ವಿಲೇವಾರಿಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಜೊತೆಗೆ ತ್ಯಾಜ್ಯ ವಿಲೇವಾರಿ ಮೇಲ್ವಿಚಾರಣೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸಿದ್ದಪಡಿಸಿದ ಪೋರ್ಟಲ್‌ನಲ್ಲಿ ತ್ಯಾಜ್ಯ ವಿಲೇವಾರಿಯ ಮಾಹಿತಿ ಸಂಗ್ರಹಿಸುವ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.
ತಾರಿಹಾಳದಲ್ಲಿ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಜಿಲ್ಲೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ನೀಡಿದ ಹಾಗೂ ಸೋಂಕಿತರು ಬಳಸಿದ ತ್ಯಾಜ್ಯ, ನಿಗದಿಪಡಿಸಿದ ಕೋವಿಡ್ ಆಸ್ಪತ್ರೆ, ಕೋವಿಡ್ ಸೋಂಕು ಪರೀಕ್ಷಾ ಪ್ರಯೋಗಾಲಯಗಳು, ಕೋವಿಡ್ ಕ್ವಾರಂಟೈನ್ ಕೇಂದ್ರಗಳು, ಫೀವರ್ ಕ್ಲಿನಿಕ್‌ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಿರ್ದಿಷ್ಟ ಎರಡು ವಾಹನಗಳಲ್ಲಿ ಸಂಗ್ರಹ ಮಾಡಲಾಗುತ್ತಿದೆ. ನಂತರ ಹುಬ್ಬಳ್ಳಿಯ ತಾರಿಹಾಳದಲ್ಲಿರುವ ರಿಯೋ ಗ್ರೀನ್ ಎಂಬ ಕಂಪನಿಯಲ್ಲಿ ವೈಜ್ಞಾನಿಕವಾಗಿ ಸುಡಲಾಗುತ್ತಿದೆ. ನಂತರ ಪ್ರತಿದಿನದ ಸಂಗ್ರಹ ಮತ್ತು ವಿಲೇವಾರಿ ಮಾಹಿತಿಯನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತಿದೆ.
ತ್ಯಾಜ್ಯ ವಿಲೇವಾರಿಗೆ ರಿಯೋ ಗ್ರೀನ್ ಸಂಸ್ಥೆ ಜತೆ ಒಪ್ಪಂದ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಕೋವಿಡ್ ತ್ಯಾಜ್ಯ ವಿಲೇವಾರಿಗೆ ರಿಯೋ ಗ್ರೀನ್ ಅನ್ನೋ ಸಂಸ್ಥೆಯಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಸಂಸ್ಥೆ ಗೊತ್ತುಪಡಿಸಿದ ವಾಹನಗಳ ಮೂಲಕ ವ್ಯವಸ್ಥಿತವಾಗಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯ ಸಂಗ್ರಹಣೆಯಿಂದ ವಿಲೇವಾರಿ ಹಂತದವರೆಗೆ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ, ಸಿಬ್ಬಂದಿಗೆ ಪಿಪಿಇ ಕಿಟ್ ಪೂರೈಸಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳಲಾಗಿದೆ.
24 ಗಂಟೆಯೊಳಗೆ ಕೋವಿಡ್ ತ್ಯಾಜ್ಯ ವಿಲೇವಾರಿ ಸಾಮಾನ್ಯವಾಗಿ ಆಸ್ಪತ್ರೆಗಳಿಂದ ಸಂಗ್ರಹಿಸಲಾದ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು 48 ಗಂಟೆಯವರೆಗೆ ಇಡಲು ಅವಕಾಶವಿದೆ. ಆದರೆ, ಅಪಾಯಕಾರಿ ಕೊವಿಡ್ ತ್ಯಾಜ್ಯವನ್ನು 24 ಗಂಟೆಯೊಳಗೆ ಸುಡಬೇಕು. ಹೀಗಾಗಿ ನಿರಂತರವಾಗಿ ಸಂಗ್ರಹವಾಗಿ ಬರುತ್ತಿರುವ ಕೋವಿಡ್ ತ್ಯಾಜ್ಯವನ್ನು ಪ್ರತಿ ಗಂಟೆಗೊಮ್ಮೆ ಅತಿ ಹೆಚ್ಚು ಉಷ್ಣಾಂಶದಲ್ಲಿ ಸುಡಲಾಗುತ್ತಿದೆ. ಬಳಿಕ ಎಲ್ಲ ವಿವರಗಳನ್ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪೋರ್ಟಲ್‌ಗೆ ಮಾಹಿತಿ ರವಾನೆ ಮಾಡಲಾಗುತ್ತದೆ. ಹೀಗಾಗಿ ಯಾವುದೇ ತ್ಯಾಜ್ಯ ಹೊರಗಡೆ ಹೋಗಲು ಸಾಧ್ಯವಿಲ್ಲ.
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಪ್ರತಿದಿನ 450-500 ಕೆ.ಜಿ ತ್ಯಾಜ್ಯ ಸಂಗ್ರಹ ಜಿಲ್ಲೆಯಲ್ಲಿ ಕೊವಿಡ್‌ಗೆ ಚಿಕಿತ್ಸೆ ನೀಡುತ್ತಿರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಸೇರಿದಂತೆ ಇತರ ಪ್ರಯೋಗಾಲಯಗಳಿಂದ ಪ್ರತಿದಿನ 450 ರಿಂದ 500 ಕೆ.ಜಿ. ವರೆಗೆ ತ್ಯಾಜ್ಯ ಸಂಗ್ರಹವಾಗುತ್ತದೆ. ಅದರಂತೆ ಏಪ್ರಿಲ್ 10 ರಿಂದ ಜುಲೈ 5 ರವರೆಗೆ ಒಟ್ಟು 35396 ಕೆ.ಜಿ. ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಹೀಗೆ ಸಂಗ್ರಹಿಸಲಾದ ಎಲ್ಲ ತ್ಯಾಜ್ಯವನ್ನು ವೈಜ್ಞಾನಿಕವಾಗಿ ದಹಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಸುಡುವುದರಿಂದ ಪರಿಸರಕ್ಕೂ ಯಾವುದೇ ಹಾನಿಯಿಲ್ಲ -ನರಸಿಂಹಮೂರ್ತಿ ಪ್ಯಾಟಿ