ಮಂಡ್ಯ: ಮಾಡಬಾರದ್ದನ್ನು ಮಾಡಲು ಹೊದ್ರೆ ಅದರ ಪರಿಣಾಮ ಏನಾಗುತ್ತೆ ಅನ್ನೋದನ್ನ ಮಂಡ್ಯದಲ್ಲಿ ಹುಡುಗಿಯೊಬ್ಬಳು ಕೀಟಲೆ ಮಾಡಿದ ಯುವಕನಿಗೆ ಎಲ್ಲರೆದುರೇ ಕಪಾಳಮೊಕ್ಷ ಮಾಡಿ ತೋರಿಸಿದ್ದಾಳೆ.
ಹೌದು ಮಂಡ್ಯದ ಬಸ್ ಸ್ಟ್ಯಾಂಡ್‌ನಲ್ಲಿ ಪಾಂಡವಪುರಕ್ಕೆ ಹೋಗಬೇಕಿದ್ದ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಹುಡುಗಿಯೊಬ್ಬಳು ಬಸ್ ಹತ್ತಬೇಕಾದ್ರೆ ಪಡ್ಡೆ ಹುಡುಗನೊಬ್ಬ ಕಿಟಲೆ ಮಾಡಲು ಯುವತಿ ಕಾಲಿಗೆ ಕಾಲು ತಾಗಿಸಿ ಸ್ಪರ್ಶಾನಂದ ಪಡೆಯಲು ಹೋಗಿದ್ದಾನೆ. ಇದರಿಂದ ಕೆರಳಿ ಕೆಂಡವಾದ ಹುಡುಗಿ ಅಬ್ಬೆಪಾರಿ ಹುಡಗನ ಕತ್ತಿನ ಪಟ್ಟಿ ಹಿಡಿದು ಬರೋಬ್ಬರಿ ಬಾರಿಸಿದ್ದಾಳೆ.
ಯಾಕೊ ಹೀಗ್ ಮಾಡ್ತಿಯಾ? ಇದೇ ಪ್ಲೇಸ್ ನಲ್ಲಿ ನಿನ್ನ ಅಕ್ಕ ತಂಗಿ ಇದ್ದಿದ್ರೂ ಹೀಗೆ ಮಾಡ್ತಿದ್ದಾ? ಎಂದು ಏಟ್ ಮೇಲೆ ಏಟು ಕೊಟ್ಟಿದ್ದಾಳೆ. ಈ ವೇಳೆ ಕಾಲು ನೋವಿದೆ ಬಿಡಿ ಮೇಡಂ ಎನ್ನುತ್ತಲೆ ಯುವತಿಯ ಕೈ ಬಿಡಿಸಿಕೊಂಡು ಯುವಕ ಬಸ್‌ನಿಂದ ಕೆಳಗಿಳಿದಿದ್ದಾನೆ. ಈ ವೇಳೆ ಹಿಡಿದುಕೊಳ್ಳಿ ಆತನನ್ನು, ನಿಮ್ಮ ಮನೆ ಹೆಣ್ಣು ಮಕ್ಕಳಾಗಿದ್ರೆ ಹೀಗೆ ಬಿಟ್ ಬಿಡ್ತಿದ್ರಾ ಎಂದು ಯುವತಿ ಅಲ್ಲಿದ್ದವರನ್ನ ಕೇಳಿಕೊಂಡಿದ್ದಾಳೆ.
ಈ ವೇಳೆ ಬಸ್ ನಿಂದ ಇಳಿದು ಹಿಡಿಯಲು ಬಂದವರಿಂದಲೂ ತಪ್ಪಿಸಿಕೊಂಡು ಯುವಕ ಓಡಿ ಹೋಗಿದ್ದಾನೆ. ಈ ಎಲ್ಲ ದೃಶ್ಯವನ್ನ ಬಸ್‌ನಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.