10-15 ವರ್ಷದಿಂದ ಬೆಳೆದಿದ್ದ ಶ್ರೀಗಂಧ ಕಳವು, ರೈತರ ಕಣ್ಣೀರು..

10-15 ವರ್ಷದಿಂದ ಬೆಳೆದಿದ್ದ ಶ್ರೀಗಂಧ ಕಳವು, ರೈತರ ಕಣ್ಣೀರು..

ಬೀದರ್: ಜಿಲ್ಲೆಯ ಔರಾದ್ ತಾಲೂಕಿನ 5 ಗ್ರಾಮಗಳ ರೈತರು ಕಷ್ಟಪಟ್ಟು ಶ್ರೀಗಂಧದ ಮರಗಳನ್ನ ಬೆಳೆಸಿದ್ರು. ಸುಮಾರು 10-15ವರ್ಷಗಳಿಂದ ಬೆಳೆದಿದ್ದ ಶ್ರೀಗಂಧದ ಮರಗಳನ್ನ ಇನ್ನೇನು ಕಟಾವು ಮಾಡಬೇಕು ಅನ್ನೋ ಚಿಂತನೆಯಲ್ಲಿ ರೈತರು ಇದ್ರು. ಆದ್ರೆ, ಈಗ ರೈತರಿಗೆ ಹೊಸ ಸಂಕಷ್ಟ ಶುರುವಾಗಿದೆ.

ಕರ್ನಾಟಕವನ್ನ ಶ್ರೀಗಂಧದ ನಾಡು ಅಂತಾ ಕರೀತಾರೆ. ಕರ್ನಾಟಕದಲ್ಲಿ ಬೆಳೆಯೋ ಶ್ರೀಗಂಧದಷ್ಟು ಉತ್ಕೃಷ್ಟ ದರ್ಜೆ ಶ್ರೀಗಂಧ ಬೇರೆಲ್ಲೂ ಬೆಳೆಯಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ನೈಸರ್ಗಿಕವಾಗಿಯೇ ಶ್ರೀಗಂಧ ಬೆಳೆಯುತ್ತೆ.

ಜೊತೆಗೆ ಗಂಧದ ಮರಗಳು ಕಣ್ಮರೆಯಾಗ್ತಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ರೈತರ ಹೊಲಗಳಲ್ಲಿ ಶ್ರೀಗಂಧ ಬೆಳೆಯಲು ಉತ್ತೇಜನ ನೀಡಿತ್ತು. ಹೀಗೆ ಬೆಳೆದ ಶ್ರೀಗಂಧ ಕಳ್ಳರ ಪಾಲಾದ್ರೆ ಏನ್ಮಾಡೋದು ಹೇಳಿ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ರೈತರು ಕಷ್ಟಪಟ್ಟು ಶ್ರೀಗಂಧದ ಮರಗಳನ್ನ ಬೆಳೆಸಿದ್ರು. ಇಲ್ಲಿನ ಜಮೀನುಗಳಲ್ಲಿ ಶ್ರೀಗಂಧದ ಮರಗಳು ನೈಸರ್ಗಿಕವಾಗಿ ಬೆಳೆದಿದ್ವು.

ಕೆಲವು ರೈತರು ಶ್ರೀಗಂಧದ ಪ್ಲಾಂಟೇಷನ್ ಕೂಡ ಮಾಡಿದ್ರು. ಆದ್ರೆ, ರೈತರಿಗೆ ಶ್ರೀಗಂಧಕ್ಕೆ ಮಾರುಕಟ್ಟೆ ಎಲ್ಲಿದೆ ಅಂತಾ ಗೊತ್ತಿಲ್ಲ. ಹೀಗಾಗಿ ಕಟಾವಿಗೆ ಬಂದಿರೋ ಮರಗಳು ಕಳ್ಳರ ಪಾಲಾಗ್ತಿವೆ. ಈ ಕುರಿತು ಪೊಲೀಸರಿಗೆ, ಅರಣ್ಯ ಇಲಾಖೆಗೆ ದೂರು ಕೊಟ್ಟರೂ ಪ್ರಯೋಜನ ಆಗ್ತಿಲ್ಲ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ.

ರಾತ್ರಿ ವೇಳೆ ಕಳ್ಳರು ಯಂತ್ರಗಳ ಸಹಾಯದಿಂದ ಶ್ರೀಗಂಧದ ಮರಗಳನ್ನ ಕಡಿದುಕೊಂಡು ಹೋಗ್ತಿದ್ದಾರೆ. ಇಲ್ಲಿನ ಕೆಲವು ರೈತರು ಜಮೀನಿನಲ್ಲಿಯೇ ಕುರಿ, ಮೇಕೆಗಳನ್ನ ಸಾಕ್ತಿದ್ದಾರೆ. ಆಯುಧಗಳ ಸಮೇತ ಆಗಮಿಸೋ ಕಳ್ಳರು ಈಗ ಗಂಧದ ಮರಗಳನ್ನ ಕದೀತಿದ್ದಾರೆ. ಮುಂದೊಂದು ದಿನ ಅದೇ ಆಯುಧಗಳನ್ನ ತೋರಿಸಿ, ರೈತರ ಪ್ರಾಣಿಗಳನ್ನ ಕದ್ದೊಯ್ಯೋ ಸಾಧ್ಯತೆ ಇದೆ ಅಂತಿದ್ದಾರೆ ರೈತ ಮುಖಂಡರು.

ಇನ್ನಾದ್ರೂ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರ ಆಟಕ್ಕೆ ಕಡಿವಾಣ ಹಾಕಬೇಕಿದೆ. ಇಲ್ಲದೇ ಹೋದ್ರೆ ಈಗಾಗಲೇ ಸಂಕಷ್ಟದಲ್ಲಿರೋ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಲಿದ್ದಾರೆ.

ಜೊತೆಗೆ ಅರಣ್ಯ ಇಲಾಖೆ ರೈತರಿಗೆ ಗಂಧವನ್ನ ಎಲ್ಲಿ ಮಾರಾಟ ಮಾಡಬೇಕು ಅನ್ನೋ ಜಾಗೃತಿ ಮೂಡಿಸಬೇಕಿದೆ. ಮಾರುಕಟ್ಟೆಯ ಕುರಿತು ರೈತರಿಗೆ ತಿಳುವಳಿಕೆ ಮೂಡಿಸಿದ್ರೆ ಕಳ್ಳರ ಈ ಕೃತ್ಯಗಳಿಗೆ ತಡೆಯೊಡ್ಡಬಹುದು. ಹೀಗಾಗಿ ಇನ್ನಾದ್ರೂ ಪೊಲೀಸರು, ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳುತ್ತಾ ಅಂತಾ ಕಾದು ನೋಡ್ಬೇಕಿದೆ.

Click on your DTH Provider to Add TV9 Kannada