ಚಿನ್ನದ ಬೆಲೆ ಸದ್ಯದ ಮಟ್ಟಿಗೆ ಇಳಿಕೆಯ ಹಾದಿಯಲ್ಲಿದೆ. ಸದ್ಯದ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಇದು ಗಮನಾರ್ಹ ಪ್ರಮಾಣದಲ್ಲಿ ಏರಿಕೆ ದಾಖಲಿಸುವುದೂ ಅನುಮಾನ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಪೇಟೆಯು ಕರಡಿ ಹಿಡಿತದಲ್ಲಿದ್ದಾಗ, ಅಂದರೆ ಇಳಿಕೆಯ ಹಾದಿಯಲ್ಲಿದ್ದಾಗ ಹೂಡಿಕೆ ಮಾಡಿ, ಗೂಳಿ ಓಟ ಆರಂಭವಾದಾಗ ಲಾಭ ಎತ್ತಿಕೊಳ್ಳುವುದು ಹಲವರು ಅನುಸರಿಸುವ ಹೂಡಿಕೆ ತಂತ್ರ. ಸ್ಥಿರ ಹೂಡಿಕೆಗೆ ಹೇಳಿಮಾಡಿಸಿದ ಮಾರ್ಗ ಎಂಬ ಶ್ರೇಯವನ್ನು ಚಿನ್ನದ ಹೂಡಿಕೆ ಹೊಂದಿದೆ. ಚಿನ್ನದ ಬೆಲೆಯ ಏರುಗತಿ ನೋಡಿ ದೂರವೇ ನಿಂತವರು ಇನ್ನು ಹೂಡಿಕೆ ಆರಂಭಿಸಬಹುದು. ಚಿನ್ನದ ಧಾರಣೆ ಕುಸಿದರೂ ಅದು ಒಂದು ಮಿತಿಯಲ್ಲಿ ಮಾತ್ರವೇ ಇರುತ್ತದೆ. ದೀರ್ಘಾವಧಿಯಲ್ಲಿ ನಿಮ್ಮ ಪೋರ್ಟ್ಫೋಲಿಯೊಗೆ ಸ್ಥಿರತೆ ಮತ್ತು ನೀವು ಅಂದುಕೊಂಡ ಹಣಕಾಸಿನ ಗುರಿಯನ್ನು ಯಶಸ್ವಿಯಾಗಿ ತಲುಪಿಸಲು ಚಿನ್ನ ನಿಮ್ಮ ನೆರವಿಗೆ ಒದಗಿಬರುತ್ತದೆ.
ಚಿನ್ನ ಖರೀದಿಸುವ ಮೊದಲು ನಿಮ್ಮ ಉದ್ದೇಶಗಳನ್ನು ಸ್ಪಷ್ಟಪಡಿಸಿಕೊಳ್ಳಿ. ಚಿನ್ನಾಭರಣಗಳ ಖರೀದಿಯನ್ನು ದಯವಿಟ್ಟು ಹೂಡಿಕೆ ಎಂದುಕೊಳ್ಳಬೇಡಿ. ಅದು ನಿಮ್ಮ ಖುಷಿಗೆ ನೀವು ಮಾಡುವ ಆತ್ಮತೃಪ್ತಿಯ ಕೆಲಸ ಎಂದುಕೊಳ್ಳಿ. ಕೈಲಿ ಕಾಸಿದ್ದು, ಒಡವೆ ಖರೀದಿಸುವ ಮನಸ್ಸಿದ್ದರೆ ನಗರದ ತುಂಬಾ ಇರುವ ಜ್ಯುವೆಲ್ಲರಿ ಅಂಗಡಿಗಳು ನಿಮಗಾಗಿ ಕಾದಿವೆ. ಒಂದು ವೇಳೆ ನಿಮ್ಮ ಉದ್ದೇಶ ಹೂಡಿಕೆ ಎಂದಾದರೆ ಚಿನ್ನಾಭರಣಗಳಿಗಿಂತಲೂ ಸೂಕ್ತವಾದ ಹಲವು ಸಾಧನಗಳಿವೆ. ಈ ಪೈಕಿ ಕಳೆದ ಮೂರು ತಿಂಗಳಿನಿಂದ ಜನಪ್ರಿಯವಾಗುತ್ತಿರುವ ಗೋಲ್ಡ್ ಇಟಿಎಫ್ (Gold Exchange Traded Fund – ETF) ಅತಿಮುಖ್ಯವಾದುದು.
ಏನಿದು ಗೋಲ್ಡ್ ಇಟಿಎಫ್?
ಗೋಲ್ಡ್ ಇಟಿಎಫ್ಗಳು ಸಾಮಾನ್ಯವಾಗಿ ಒಂದು ಗ್ರಾಂ ಚಿನ್ನದ ಬೆಲೆಯನ್ನೇ ಅನುಸರಿಸುತ್ತವೆ. ನೀವು ಒಂದು ಯೂನಿಟ್ ಗೋಲ್ಡ್ ಇಟಿಎಫ್ ಖರೀದಿಸಿದರೆ, ಒಂದು ಗ್ರಾಂ ಚಿನ್ನ ಖರೀದಿಸಿದಿರಿ ಎಂದೇ ಅರ್ಥ. ಆದರೆ ಆ ಚಿನ್ನ ನಿಮ್ಮ ಕೈಲಿರುವ ಭೌತಿಕ ಚಿನ್ನವಾಗಿರುವುದಿಲ್ಲ. ಬದಲಿಗೆ, ಡಿಮ್ಯಾಟ್ ರೂಪದ ಅಂಕಿಸಂಖ್ಯೆಗಳಲ್ಲಿರುತ್ತದೆ. ನಿಮ್ಮ ಪರವಾಗಿ ನೀವು ಆರಿಸಿಕೊಳ್ಳುವ ಎಎಂಸಿ (Asset Management Company – AMC) ಚಿನ್ನ ಖರೀದಿಸಿಟ್ಟುಕೊಂಡಿರುತ್ತೆ. ಹೀಗಾಗಿ ಕೊಳ್ಳುವುದು-ಮಾರುವುದು ಸುಲಭ.
ಈಗ ಖರೀದಿ ಏಕೆ ಸೂಕ್ತ?
ಬಹುತೇಕ ಇಟಿಎಫ್ಗಳು ಇದೀಗ ಒಂದು ವರ್ಷದ ಕನಿಷ್ಠ ಮಟ್ಟದಲ್ಲಿ (₹ 4000 ಆಸುಪಾಸು) ವಹಿವಾಟು ನಡೆಸುತ್ತಿವೆ. ಷೇರುಪೇಟೆಯಲ್ಲಿ ಷೇರುಗಳನ್ನು ಖರೀದಿಸಿದಂತೆಯೇ ಇಟಿಎಫ್ಗಳನ್ನೂ ಖರೀದಿಸಬಹುದು. ಒಂದು ಇಟಿಎಫ್ ಖರೀದಿಸುವುದು ಎಂದರೆ ಒಂದು ಗ್ರಾಂ ಚಿನ್ನವನ್ನು ಖರೀದಿಸಿದಂತೆಯೇ ಸರಿ. ಕೊಂಡಷ್ಟೇ ಸರಳವಾಗಿ ಷೇರುಪೇಟೆಯಲ್ಲಿ ಇಟಿಎಫ್ಗಳನ್ನು ಮಾರಬಹುದು. ಭೌತಿಕ ಚಿನ್ನದಂತೆ ಸಂರಕ್ಷಿಸುವ ಜಂಜಡ, ಲಾಕರ್ ಶುಲ್ಕದ ಕಿರಿಕಿರಿ ಇರುವುದಿಲ್ಲ.
ಇಟಿಎಫ್ ಖರೀದಿಸುವುದು ಹೇಗೆ?
ಗೋಲ್ಡ್ ಇಟಿಎಫ್ ಖರೀದಿಸಲು ನಿಮಗೆ ಡಿಮ್ಯಾಟ್ ಅಕೌಂಟ್ ಅತ್ಯಗತ್ಯ. ನೀವು ಆಫ್ಲೈನ್ನಲ್ಲಿ ಷೇರುವಹಿವಾಟು ನಡೆಸುವವರಾದರೆ ನಿಮ್ಮ ಷೇರು ಬ್ರೋಕರ್ ಮೂಲಕ ಇಟಿಎಫ್ ಖರೀದಿಸಬಹುದು. ಆನ್ಲೈನ್ ವಹಿವಾಟುದಾರರಾದರೆ ನೀವೇ ಇತರ ಷೇರುಗಳನ್ನು ಖರೀದಿಸುವಂತೆ ಇಟಿಎಫ್ ಖರೀದಿಸಿಟ್ಟುಕೊಳ್ಳಬಹುದು. ಷೇರುಪೇಟೆಯಲ್ಲಿ ಹಲವು ಕಂಪನಿಗಳು ಇಟಿಎಫ್ ಸೇವೆ ಒದಗಿಸುತ್ತಿವೆಯಾದರೂ, ಬಹುತೇಕ ಎಲ್ಲ ಇಟಿಎಫ್ಗಳೂ ಹೆಚ್ಚೂಕಡಿಮೆ ಒಂದೇ ರೀತಿ ಕಾರ್ಯನಿರ್ವಹಿಸುತ್ತವೆ. ನಿರ್ವಹಣಾ ವೆಚ್ಚ ಮತ್ತು ದ್ರವ್ಯತೆ (Administration Cost & Liquidity) ಸಹ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಹೀಗಾಗಿ ಯಾವ ಕಂಪನಿಯ ಇಟಿಎಫ್ ಖರೀದಿಸಿದರೂ ಅಂಥ ವ್ಯತ್ಯಾಸವೇನೂ ಆಗುವುದಿಲ್ಲ.
ಮುಖ್ಯ ಇಟಿಎಫ್ಗಳು ಯಾವುದು?
ಯುಟಿಐ, ಎಸ್ಬಿಐ, ಬಿರ್ಲಾ, ಇನ್ವೆಸ್ಕೊ, ಕೋಟಕ್, ಎಚ್ಡಿಎಫ್ಸಿ, ನಿಪ್ಪಾನ್ ಇಂಡಿಯಾ ಮತ್ತು ಆಕ್ಸಿಸ್ ಕಂಪನಿಗಳ ಇಟಿಎಫ್ಗಳನ್ನು ಹೂಡಿಕೆದಾರರು ಆದ್ಯತೆ ಮೇರೆಗೆ ಖರೀದಿಸುತ್ತಾರೆ. ಈ ಮೊದಲೇ ಹೇಳಿದಂತೆ ನಿಮ್ಮ ಷೇರು ದಲ್ಲಾಳಿ ಅಥವಾ ನಿಮ್ಮ ಹಣಕಾಸು ಸಲಹೆಗಾರರ ಮಾರ್ಗದರ್ಶನದಂತೆ ಮುಂದುವರಿಯಿರಿ. ಎಲ್ಲ ಗೋಲ್ಡ್ ಇಟಿಎಫ್ಗಳೂ ಒಂದು ಗ್ರಾಂ ಚಿನ್ನದ ಬೆಲೆಯನ್ನೇ ಅನುಸರಿಸುವುದರಿಂದ ಯಾವ ಕಂಪನಿಯ ಇಟಿಎಫ್ ಖರೀದಿಸಿದರೂ ಪ್ರತಿಫಲದಲ್ಲಿ ಹೇಳಿಕೊಳ್ಳುವಂಥ ವ್ಯತ್ಯಾಸವಾಗುವುದಿಲ್ಲ.
ನನ್ನ ಬಳಿ ಡಿಮ್ಯಾಟ್ ಖಾತೆಯಿಲ್ಲ, ನನಗೆ ಗೋಲ್ಡ್ಫಂಡ್ ಹೂಡಿಕೆ ಅಸಾಧ್ಯವೇ?
ಷೇರುಪೇಟೆಯಲ್ಲಿ ಇಟಿಎಫ್ ಖರೀದಿಸಲು ಡಿಮ್ಯಾಟ್ ಖಾತೆ ಕಡ್ಡಾಯ. ನಿಮ್ಮ ಬಳಿ ಡಿಮ್ಯಾಟ್ ಖಾತೆಯಿಲ್ಲ ಮತ್ತು ಡಿಮ್ಯಾಟ್ ಖಾತೆ ಮಾಡಿಸುವ ಮನಸ್ಸೂ ನಿಮಗಿಲ್ಲ ಎಂದಾದರೆ ನೀವು ಮ್ಯೂಚುವಲ್ ಫಂಡ್ಗಳ ಗೋಲ್ಡ್ ಫಂಡ್ ಆಫ್ ಫಂಡ್ಗಳ ಮೂಲಕ ಇಟಿಎಫ್ಗಳಲ್ಲಿ ಹೂಡಿಕೆ ಮಾಡಬಹುದು. ಪ್ಯಾನ್ ಸಂಖ್ಯೆ ಮತ್ತು ಕೆವೈಸಿ ನಿಯಮಗಳನ್ನು ಪೂರೈಸುವ ಮೂಲಕ ಯಾವುದೇ ಎಎಂಸಿಯಲ್ಲಿ ನೀವು ಫೋಲಿಯೋ (ಖಾತೆ) ತೆರೆದು ಗೋಲ್ಡ್ಫಂಡ್ನಲ್ಲಿ ಹಣ ಹೂಡಬಹುದು. ಈ ಹಣವನ್ನು ಕಂಪನಿಯು ಅದೇ ಕಂಪನಿಯ ಇಟಿಎಫ್ಗಳಲ್ಲಿ ತೊಡಗಿಸುತ್ತದೆ. ಅಂದರೆ ನೀವು ಡಿಮ್ಯಾಟ್ ಖಾತೆ ಇಲ್ಲದಿದ್ದರೂ, ಗೋಲ್ಡ್ ಇಟಿಎಫ್ ಖರೀದಿಸಿದಂತೆ ಆಗುತ್ತದೆ.
ಭಾರತದಲ್ಲಿ ಚಿನ್ನದ ಧಾರಣೆ ಕುಸಿಯುತ್ತಿದೆ ಏಕೆ?
ಚಿನ್ನದ ಧಾರಣೆ ಸದ್ಯಕ್ಕೆ ಇಳಿಯುತ್ತಿದೆ. ಉತ್ತುಂಗ ಸ್ಥಿತಿಯಲ್ಲಿದ್ದ ಮಟ್ಟಕ್ಕೆ ಹೋಲಿಸಿದರೆ ಶೇ 20ರಷ್ಟು ಕಡಿಮೆಯಾಗಿದೆ. ಕೇಂದ್ರ ಬಜೆಟ್ನಲ್ಲಿ ಚಿನ್ನ ಮೇಲಿನ ಸುಂಕ ಕಡಿತಗೊಳಿಸಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಧಾರಣೆ ಕಡಿಮೆಯಾದದ್ದು ಮತ್ತು ಜಾಗತಿಕವಾಗಿ ಹಣದುಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಬಾಂಡ್ ಫಂಡ್ಗಳ ಪ್ರತಿಫಲದ ಮೊತ್ತ ಹೆಚ್ಚಾಗಿದ್ದು ಚಿನ್ನದ ಧಾರಣೆ ಕಡಿಮೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಚಿನ್ನದ ಮೇಲಿನ ಹೂಡಿಕೆಗೆ ಇದು ಸಕಾಲವೇ?
ಯೆಸ್ ಸೆಕ್ಯುರಿಟಿಸ್ನ ಸಂಶೋಧನಾ ವಿಭಾಗದ ಮುಖ್ಯಸ್ಥ ಅಮರ್ ಅಂಬಾನಿ ಮತ್ತು ಇತರ ಹೂಡಿಕೆ ಸಲಹೆಗಾರರ ಲೆಕ್ಕಾಚಾರ ನಿಜವೇ ಆದರೆ ಇನ್ನು 4 ವರ್ಷ ಚಿನ್ನದ ಧಾರಣೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುವುದಿಲ್ಲ. ಪ್ರತಿ ಆಸ್ತಿ ವರ್ಗಕ್ಕೂ ತನ್ನದೇ ಆದ ಆವರ್ತನಗಳಿರುತ್ತವೆ. ಸರಳವಾಗಿ ಹೇಳಬೇಕಾದರೆ ಮೇಲೆ ಹೋಗಿದ್ದು, ಕೆಳಗಿಳಿಯಬೇಕೆಂಬ ತತ್ವ. ಚಿನ್ನ ಇದೀಗ ಉತ್ತುಂಗ ಸ್ಥಿತಿಯಿಂದ ಜಾರುತ್ತಿದೆ. ಕೆಲ ವರ್ಷಗಳ ಅವಧಿ ಚಿನ್ನದ ಧಾರಣೆ ಹೆಚ್ಚಾಗುವುದಿಲ್ಲ. ಆದರೆ ನಂತರ ಇದೇ ತತ್ವದಂತೆಯೇ ಮೇಲೇರಲಿದೆ. ಈಗ ಚಿನ್ನದಲ್ಲಿ ಹೂಡಿಕೆ ಆರಂಭಿಸಿದರೆ, ದರ ಧಾರಣೆ ಸುಧಾರಿಸಿದಾಗ ಸಾಕಷ್ಟು ಲಾಭ ತಂದುಕೊಡಬಲ್ಲದು ಎನ್ನುತ್ತಾರೆ ಅವರು. ನಿಮ್ಮ ಬಳಿ 4ರಿಂದ 6 ವರ್ಷಗಳ ಹೂಡಿಕೆ ಅವಧಿಯಿದ್ದರೆ ಚಿನ್ನದಲ್ಲಿ ಹೂಡಿಕೆಯನ್ನು ಗಂಭೀರವಾಗಿ ಪರಿಗಣಿಸಿ. ತಕ್ಷಣದ ಲಾಭ ಬೇಕಿದ್ದರೆ ಕ್ಷಮಿಸಿ, ಇದು ನಿಮಗಲ್ಲ.
ಈಗ ಎಷ್ಟಿದೆ ಚಿನ್ನದ ಬೆಲೆ?
ಕಳೆದ ಶುಕ್ರವಾರ 10 ಗ್ರಾಂ ಚಿನ್ನದ ದರ ₹ 44,271ಕ್ಕೆ ಬಂದಿತ್ತು. ಇದು ಒಂದುವರ್ಷದ ಕನಿಷ್ಠ ಮಟ್ಟವಾದ ₹ 44,150ಕ್ಕೆ ಸನಿಹದ ಧಾರಣೆಯಾಗಿದೆ. ಕಳೆದ ವರ್ಷ ₹ 44,000ದಿಂದ ಮೇಲೇರಲು ಆರಂಭಿಸಿದ ಚಿನ್ನ ₹ 56,000 ಮುಟ್ಟಿ ಮತ್ತೆ ಇಳಿಯಲು ಆರಂಭಿಸಿದೆ. ಒಂದು ವರ್ಷದ ಗರಿಷ್ಠ ಮೊತ್ತಕ್ಕೆ ಹೋಲಿಸಿದರೆ ಈಗ ಚಿನ್ನವು ₹ 12,000 ಕಡಿಮೆ ಮೊತ್ತಕ್ಕೆ ವಹಿವಾಟು ನಡೆಸುತ್ತಿದೆ. ಈ ವರ್ಷದ ಆರಂಭದಲ್ಲಿ ನಡೆಯುತ್ತಿದ್ದ ಮೊತ್ತಕ್ಕೆ ಹೋಲಿಸಿದರೆ ಪ್ರತಿ 10 ಗ್ರಾಂ ಚಿನ್ನದ ಬೆಲೆ ಕಳೆದ ಮೂರು ತಿಂಗಳಲ್ಲಿ ₹ 6000ದಷ್ಟು ಕಡಿಮೆಯಾಗಿದೆ. ಎಂಸಿಎಕ್ಸ್ನಲ್ಲಿ ಚಿನ್ನದ ಧಾರಣೆ ಸೋಮವಾರ ₹ 44,218, ಮಂಗಳವಾರ ₹ 44,857, ಬುಧವಾರ ₹ 44,792 ರೂಪಾಯಿ ಹಾಗೂ ಗುರುವಾರ ₹ 44,879 ಇತ್ತು. ಮೊದಲೇ ಹೇಳಿದಂತೆ ಶುಕ್ರವಾರದ ಗೋಲ್ಡ್ ಫ್ಯೂಚರ್ಸ್ ₹ 44,271ರಲ್ಲಿ ವಹಿವಾಟು ಅಂತ್ಯಕಂಡಿತ್ತು.
ಇಟಿಎಫ್ಗಳಲ್ಲಿ ಹೂಡಿಕೆ ಹೆಚ್ಚಾಗುತ್ತಿದೆಯೇ?
ಚಿನ್ನದ ಫಂಡ್ಗಳಲ್ಲಿ ಕಳೆದ ಮೂರು ತಿಂಗಳಿನಿಂದ ಗಮನಾರ್ಹ ಮೊತ್ತದ ಹೂಡಿಕೆ ಕಂಡುಬರುತ್ತಿದೆ. ಫೆಬ್ರುವರಿಯಲ್ಲಿ ₹ 491 ಕೋಟಿ, ಜನವರಿಯಲ್ಲಿ ₹ 625 ಕೋಟಿ ಹಾಗೂ ಡಿಸೆಂಬರ್ ತಿಂಗಳಲ್ಲಿ ₹ 431 ಕೋಟಿ ರೂಪಾಯಿ ಹೂಡಿಕೆ ಆಗಿದೆ ಎಂದು ‘ದಿ ಮಿಂಟ್’ ಜಾಲತಾಣ ವರದಿ ಮಾಡಿದೆ.
ಚಿನ್ನದಲ್ಲಿ ಹೂಡಿಕೆ ಬಗ್ಗೆ ಇನ್ನಷ್ಟು ಮಾಹಿತಿಗೆ ಕೆಳಗಿನ ಲಿಂಕ್ ಲಿಕ್ ಮಾಡಿ..
1) ಚಿನ್ನ ಅಂದ್ರೆ ಆಪತ್ಕಾಲಕ್ಕಾಗುವ ರಮಣ ಅಂತಾರೆ ಶರವಣ
2) ಗೋಲ್ಡ್ ETFನಲ್ಲಿ ಹೂಡಿಕೆ ತುಂಬ ಸರಳ.. ಸಾವರಿನ್ ಗೋಲ್ಡ್ ಬಾಂಡ್ ಖರೀದಿ ಲಾಭದಾಯಕ
Published On - 7:57 pm, Sun, 14 March 21