ನಗರ ಜೀವನ-ಕೆಲಸದ ಜಂಜಾಟದ ನಡುವೆ ಉತ್ತಮ ಜೀವನಶೈಲಿಗೆ ಈ ನಿಯಮಗಳನ್ನು ಪಾಲಿಸಿ

ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಜನರು ಆರೋಗ್ಯ ಮತ್ತು ಜೀವನಕ್ರಮವನ್ನು ಕಾಪಾಡಲು ವಿಫಲರಾಗುತ್ತಾರೆ. ಪ್ಲಾನ್ ಮಾಡಿಕೊಂಡರೂ ಅದನ್ನು ಅಳವಡಿಸಲು ಕಷ್ಟಪಡುತ್ತಾರೆ. ಸುಸ್ತು, ಒತ್ತಡ, ಊಟ ತಪ್ಪಿಸಿಕೊಳ್ಳುವುದು, ಫಾಸ್ಟ್​ಫುಡ್ ಸೇವನೆ ಹೀಗೆ ಕೆಲವಷ್ಟು ಅನಾರೋಗ್ಯಕರ ಜೀವನಶೈಲಿಗೆ ಒಗ್ಗಿಕೊಳ್ಳುತ್ತಾರೆ.

  • TV9 Web Team
  • Published On - 6:37 AM, 15 Mar 2021
ನಗರ ಜೀವನ-ಕೆಲಸದ ಜಂಜಾಟದ ನಡುವೆ ಉತ್ತಮ ಜೀವನಶೈಲಿಗೆ ಈ ನಿಯಮಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ

ನಗರ ಜೀವನದ ಜಂಜಾಟದ ನಡುವೆ ಬದುಕು ಸುಲಭವಲ್ಲ ಅನಿಸಿದರೆ ಏನು ಮಾಡಬೇಕು? ಜೀವನಶೈಲಿ ಚೆನ್ನಾಗಿರಲು ಹೇಗಿರಬೇಕು? ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ಸರಿಯಾಗಿ ಇಟ್ಟುಕೊಳ್ಳೋದು ಹೇಗೆ? ಕೆಲಸದ ಒತ್ತಡದ ನಡುವೆ ಎಲ್ಲಾ ಕಷ್ಟ ಅಂತಲೇ ಅನಿಸುತ್ತೆ.. ಇಂಥಾ ಭಾವನೆಗಳು ನಿಮಗೂ ಬಂದಿರಬಹುದು. ಇದು ತಪ್ಪೇನಲ್ಲ. ಆದರೆ, ಈ ಸಮಸ್ಯೆಗಳನ್ನು ಮೀರಿ ಬದುಕೋದು ಮುಖ್ಯ. ಅದಕ್ಕಾಗಿ ನಮ್ಮ ಜೀವನಕ್ರಮದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳುವುದು ಕೂಡ ಅವಶ್ಯಕ.

ಸಾಮಾನ್ಯವಾಗಿ ಕೆಲಸಕ್ಕೆ ಹೋಗುವ ಜನರು ಆರೋಗ್ಯ ಮತ್ತು ಜೀವನಕ್ರಮವನ್ನು ಕಾಪಾಡಲು ವಿಫಲರಾಗುತ್ತಾರೆ. ಪ್ಲಾನ್ ಮಾಡಿಕೊಂಡರೂ ಅದನ್ನು ಅಳವಡಿಸಲು ಕಷ್ಟಪಡುತ್ತಾರೆ. ಸುಸ್ತು, ಒತ್ತಡ, ಊಟ ತಪ್ಪಿಸಿಕೊಳ್ಳುವುದು, ಫಾಸ್ಟ್​ಫುಡ್ ಸೇವನೆ ಹೀಗೆ ಕೆಲವಷ್ಟು ಅನಾರೋಗ್ಯಕರ ಜೀವನಶೈಲಿಗೆ ಒಗ್ಗಿಕೊಳ್ಳುತ್ತಾರೆ. ಇದು ಸಣ್ಣ ಅವಧಿಗೆ ಯಾವುದೇ ತೊಂದರೆ ಕೊಡದಿದ್ದರೂ ದೀರ್ಘಾವದಿ ಯೋಚನೆ ಮಾಡಿದರೆ ಬಹಳಷ್ಟು ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಮಧುಮೇಹ, ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳಬಹುದು. ಬೆಳಗಾದ್ರೆ ರಾತ್ರಿಯವರೆಗೂ ಇಂಥಾ ಜಂಜಾಟದ ಬದುಕು ಸಾಗಿಸುತ್ತಿರುವವರು ನೀವಾದರೆ ಸ್ವಲ್ಪ ಸಮಯ ಮಾಡಿಕೊಂಡು ಈ ಬರಹ ಓದಿ.

ಬೆಳಗೆದ್ದು ವಾಕಿಂಗ್ ಮಾಡಿ
ದಿನ ಹೇಗೆ ಆರಂಭವಾಗುತ್ತದೆ ಎಂಬುದರ ಮೇಲೆ ನಮ್ಮ ದಿನವಿಡೀ ಅವಲಂಬಿಸಿರುತ್ತದೆ. ಉತ್ತಮ ಬೆಳಗು ನಮ್ಮದಾದರೆ ಆ ದಿನವೂ ಆನಂದಮಯವಾಗಿರುತ್ತದೆ. ಹಾಗಾಗಿ ಬೆಳಗಿನ ಚಟುವಟಿಕೆಗಳನ್ನು ಸರಿಯಾಗಿ ಶುರು ಮಾಡುವುದು ಮುಖ್ಯ. ಚೆನ್ನಾಗಿ ನಿದ್ದೆ ಮಾಡಿದ ಬಳಿಕ ಬೆಳಗ್ಗೆ ಖುಷಿಯಾಗಿ ಎದ್ದೇಳಿ. ತುಸು ಹೆಚ್ಚೇ ಮಲಗಬೇಕು ಎಂಬ ಉದಾಸೀನ ಬಿಟ್ಟುಬಿಡಿ. ವಾಕ್ ಮಾಡಲು ಆರಂಭಿಸಿ! ವಾಕಿಂಗ್ ನಿಮ್ಮನ್ನು ದಿನಪೂರ್ತಿ ಲವಲವಿಕೆಯಿಂದ ಇರಲು ಸಹಾಯ ಮಾಡಬಲ್ಲದು. ವಾಕಿಂಗ್​ನಿಂದ ಕೊಂಚ ದೈಹಿಕ ವ್ಯಾಯಾಮವೂ ಆಗುತ್ತದೆ. ರಕ್ತದೊತ್ತಡ, ಹೃದಯದ ಆರೋಗ್ಯ, ಮಧುಮೇಹದಂಥಾ ಸಮಸ್ಯೆ ದೂರೀಕರಿಸಲು ಸಹಾಯ ಮಾಡುತ್ತದೆ.

ತಿಂಡಿ ತಿನ್ನೋದು ತಪ್ಪಿಸಬೇಡಿ
ಬೆಳಗ್ಗಿನ ಉಪಹಾರ ಸೇವಿಸುವುದು ತುಂಬಾ ಅಗತ್ಯ. ಹಲವಾರು ಮಂದಿ ತಡವಾಗಿ ಎದ್ದು, ಗಡಿಬಿಡಿಯಲ್ಲಿ ಕೆಲಸಕ್ಕೆ ಹೋಗುತ್ತಾರೆ. ಬೆಳಗಿನ ತಿಂಡಿ ತಿನ್ನುವುದೇ ಇಲ್ಲ. ಬಳಿಕ, ಮಧ್ಯಾಹ್ನದ ಊಟವನ್ನೂ ಬೆಳಗಿನ ತಿಂಡಿಯನ್ನೂ ಒಟ್ಟಿಗೇ ತಿಂದುಬಿಡುತ್ತಾರೆ. ಆದರೆ ಇದು ಸರಿಯಾದ ಕ್ರಮವಲ್ಲ. ಆರೋಗ್ಯಕರ ಆಹಾರ ಸೇವನೆ ರೂಢಿಸಿಕೊಳ್ಳಿ. ಹೊಟ್ಟೆಗೆ ಹಿತ ಎನಿಸುವಷ್ಟು ತಿಂಡಿ ಸೇವಿಸಿ. ಕೆಲಸಕ್ಕೆ ಹೋಗುವ ಮುನ್ನ ಆರೋಗ್ಯಕರ ತಿಂಡಿ ಸೇವಿಸುವುದು ಕೆಲಸದಲ್ಲಿ ಏಕಾಗ್ರತೆ, ಕ್ಷಮತೆ ಹೆಚ್ಚಿಸಲು ಸಹಾಯ ಮಾಡುತ್ತದೆ.

ಸರಿಯಾದ ಸಮಯಕ್ಕೆ ಆಹಾರ ಸೇವನೆ ರೂಢಿಸಿಕೊಳ್ಳಿ
ಕೆಲಸ ಮುಖ್ಯ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಆರೋಗ್ಯವೂ ಮುಖ್ಯ ಎಂದು ನಾವು ತಿಳಿದಿರಬೇಕು. ನಾವು ಮಾಡುವ ಕೆಲಸ ಉತ್ಸಾಹದಿಂದ ಸಾಗಲು ಮತ್ತು ದೀರ್ಘಾವಧಿಯ ಜೀವನದಲ್ಲಿ ಕೆಲಸದ ಉತ್ಸಾಹ ಉಳಿಸಿಕೊಳ್ಳಲು ಈಗ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಏನೇ ಕಷ್ಟವಿದ್ದರೂ ಸರಿಯಾದ ಸಮಯಕ್ಕೆ ಊಟ ಮಾಡುವುದನ್ನು ರೂಢಿಸಿಕೊಳ್ಳಿ. ಗಡಿಬಿಡಿಯಲ್ಲಿ ಫಾಸ್ಟ್​ಫುಡ್ ಅಥವಾ ಕುರುಕಲು ತಿಂಡಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಡಿ. ತರಕಾರಿ, ಹಣ್ಣುಗಳಿಂದ ಕೂಡಿದ ಊಟವೇ ನಿಮ್ಮ ಹೊಟ್ಟೆ ಸೇರಲಿ.

ರಾತ್ರಿ ಮಿತವಾದ ಆಹಾರ ನಿಮ್ಮ ಬಟ್ಟಲಿನಲ್ಲಿ ಇರಲಿ
ಹಲವಷ್ಟು ಮಂದಿ ಬೆಳಗ್ಗೆ ತಿಂಡಿ ತಿನ್ನೋದಿಲ್ಲ. ಮಧ್ಯಾಹ್ನ ಊಟ-ತಿಂಡಿ ಜೊತೆಗೇ ಮಾಡುತ್ತಾರೆ. ರಾತ್ರಿ ಮಾತ್ರ ಹೊಟ್ಟೆ ಬಿರಿಯುವಷ್ಟು ಉಣ್ಣುತ್ತಾರೆ. ಈ ಕ್ರಮ ಸರಿಯಲ್ಲ. ಬೆಳಗ್ಗೆ, ಮಧ್ಯಾಹ್ನ ಊಟ ಹೇಗಿರಬೇಕು ಎಂದು ಮೇಲೆ ತಿಳಿಸಿದಂತೆ ನಡೆದುಕೊಂಡು, ಬಳಿಕ ರಾತ್ರಿಯ ಊಟದ ಶಿಸ್ತನ್ನೂ ಪಾಲಿಸಬೇಕು. ರಾತ್ರಿ ಹಿತ-ಮಿತವಾದ ಆಹಾರ ಸೇವನೆ ಮಾಡಬೇಕು.

ನೀರು ಕುಡಿಯುತ್ತಿರಿ
ಬೆಂಗಳೂರಿನಂಥಾ ಒಣ ಹವೆ ಹೊಂದಿರುವ ಪ್ರದೇಶಗಳಲ್ಲಿ ಅಥವಾ ಎಸಿ ಕಚೇರಿಗಳಲ್ಲಿ ಬಾಯಾರಿಕೆ ಆಗದಿರಬಹುದು. ಹಾಗೆಂದು ನೀರು ಕುಡಿಯುವುದು ಕಡಿಮೆ ಮಾಡಬೇಡಿ. ಆಗಾಗ ನೀರು ಕುಡಿಯುತ್ತಿರಿ. ಆರೋಗ್ಯ ಚೆನ್ನಾಗಿರುತ್ತದೆ. ದೇಹ ನಿರ್ಜಲೀಕರಣ ಆಗದಂತೆಯೂ ತಡೆಯುತ್ತದೆ.

ಹಣ್ಣು, ತರಕಾರಿ, ಹಸಿರು ಸೊಪ್ಪುಗಳಿರಲಿ
ಊಟ ಎಂದರೆ ಏನೋ ತಿನ್ನೋದಲ್ಲ. ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಹಸಿರು ಸೊಪ್ಪುಗಳಿರುವ ಪದಾರ್ಥ ಊಟದಲ್ಲಿರಲಿ. ಊಟದ ಬಳಿಕ, ಊಟದ ಮೊದಲು, ಕೆಲಸದ ನಡುವೆ ಹೀಗೆ ಹಸಿ ಹಣ್ಣು, ತರಕಾರಿ ಸೇವಿಸುವುದು ಉತ್ತಮ. ಆಗಾಗ್ಗ ಕುರುಕಲು ತಿಂಡಿ, ಕರಿದ ತಿನಿಸುಗಳನ್ನು ತಿನ್ನುವ ಬದಲು ಹಣ್ಣು-ತರಕಾರಿ ಒಳ್ಳೆಯದು.

ಒಂದು ದಿನಚರಿ ಪಾಲಿಸುವುದು ಅತಿ ಅವಶ್ಯಕ
ಹೀಗೆ ಆಹಾರ ಸೇವನೆ, ನೀರು ಸಮಯಕ್ಕೆ ಸರಿಯಾಗಿ ಸೇವಿಸಿ. ವ್ಯಾಯಾಮ, ವಾಕಿಂಗ್ ಮಾಡಿ. ಇವೆಲ್ಲವನ್ನೂ ಇಂತದ್ದೇ ಸಮಯದಲ್ಲಿ ಮಾಡುತ್ತೇನೆ ಎಂದು ಹೊಂದಿಸಿಕೊಂಡು ಕೆಲಸ ಮಾಡಿದರೆ ಉತ್ತಮ ದಿನಚರಿ ನಿಮ್ಮದಾಗುವುದು. ಕೆಲಸವನ್ನೂ ಒತ್ತಡ ರಹಿತವಾಗಿ, ಉಲ್ಲಸಿತರಾಗಿ ಮಾಡಲು ಆಗುವುದು. ಈ ಎಲ್ಲಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಾ ಬೇಕಾದಲ್ಲಿ ದಿನಚರಿಯನ್ನೂ ಬರೆದಿಟ್ಟುಕೊಳ್ಳಿ. ಅದರಂತೆ ದಿನ ಕಳೆಯಿರಿ. ದಿನಚರಿ ಪಾಲಿಸುವಲ್ಲಿ ಕಾಂಪ್ರಮೈಸ್ ಆಗಬೇಡಿ.

ಇದನ್ನೂ ಓದಿ: ಮನೆಯಲ್ಲಿ ಕೆಲಸ, ಮನದಲ್ಲಿ ದುಗುಡ: ವರ್ಕ್​ ಫ್ರಮ್ ಹೋಮ್​ಗೆ ಒಂದು ವರ್ಷ

Simple Tips: ಆಫೀಸಿನಲ್ಲಿ ಖುಷ್ ಖುಷಿಯಾಗಿ ಕೆಲಸ ಮಾಡೋದು ಹೇಗೆ?