ವಾಷಿಂಗ್ಟನ್: ಅಮೆರಿಕದ ಜನಸಾಮಾನ್ಯರು ಕಮಲಾ ಹ್ಯಾರಿಸ್ರನ್ನು ‘ಫೀಮೇಲ್ ಒಬಾಮಾ’ ಎಂದೇ ಗುರುತಿಸುತ್ತಾರೆ. ಅಮೆರಿಕದ ಉಪಾಧ್ಯಕ್ಷೆಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ ಕಮಲಾ ಹಲವು ಪ್ರಥಮಗಳನ್ನು ಮುಡಿಗೇರಿಸಿಕೊಂಡರು.
ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೇರಿದ ಮೊದಲ ಮಹಿಳೆ, ಮೊದಲ ಕಪ್ಪು ಮತ್ತು ಮೊದಲ ಭಾರತೀಯ ಮೂಲದ ಅಮೆರಿಕ ಉಪಾಧ್ಯಕ್ಷೆ ಎಂಬ ಶ್ರೇಯಕ್ಕೂ ಪಾತ್ರರಾದರು.
ಕಳೆದ ನವೆಂಬರ್ ತಿಂಗಳಲ್ಲಿ ತಮ್ಮ ಗೆಲುವು ಖಚಿತವಾದ ನಂತರ ಮಾಡಿದ್ದ ಐತಿಹಾಸಿಕ ಭಾಷಣದಲ್ಲಿ ಕಮಲಾ ಹ್ಯಾರಿಸ್ ತಮ್ಮ ತಾಯಿ ಶ್ಯಾಮಲಾ ಗೋಪಾಲನ್ ಅವರನ್ನು ನೆನಪಿಸಿಕೊಂಡಿದ್ದರು. ಭಾರತ ಮೂಲದ ಶ್ಯಾಮಲಾ ಕ್ಯಾನ್ಸರ್ ಸಂಶೋಧಕಿ ಮಾತ್ರವಲ್ಲ, ನಾಗರಿಕ ಹಕ್ಕುಗಳ ಹೋರಾಟಗಾರ್ತಿಯೂ ಆಗಿದ್ದರು. ‘ಅಮ್ಮ ಬಹುಕಾಲದಿಂದ ನನ್ನನ್ನು ಈ ದೊಡ್ಡ ದಿನಕ್ಕಾಗಿ ಸಿದ್ಧಪಡಿಸಿದ್ದರು. ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಸದಾ ದೂರುತ್ತಾ ಇರಬೇಡ. ಸರಿಪಡಿಸಲು ಏನಾದ್ರೂ ಮಾಡು’ ಎಂಬ ಅವರ ಮಾತು ನನ್ನ ಮುಂದಿನ ಹಾದಿಗೆ ಸ್ಫೂರ್ತಿಯಾಯಿತು ಎಂದು ಕಮಲಾ ಆಗಾಗ ನೆನಪಿಸಿಕೊಳ್ಳುತ್ತಿರುತ್ತಾರೆ.
ಉಪಾಧ್ಯಕ್ಷರ ಜವಾಬ್ದಾರಿ ತೆಗೆದುಕೊಂಡ ಮೊದಲಿಗಳು ನಾನಾಗಿರಬಹುದು, ಆದರೆ ಖಂಡಿತ ಕೊನೆಯವಳು ಅಲ್ಲ ಎಂದು ಕಮಲಾ ಆತ್ಮವಿಶ್ವಾಸದಿಂದ ನುಡಿದಿದ್ದರು. ಇದೀಗ 56ರ ಹರೆಯದಲ್ಲಿರುವ ಕಮಲಾ ಈ ಹಿಂದೆಯೂ ಹಲವು ಮಹತ್ವದ ಸ್ಥಾನಗಳನ್ನು ಅಲಂಕರಿಸಿ, ಇತಿಹಾಸ ಸೃಷ್ಟಿಸಿದ್ದರು.
ಸ್ಯಾನ್ ಫ್ರಾನ್ಸಿಸ್ಕೊ ಜಿಲ್ಲಾ ಅಟಾರ್ನಿ ಹುದ್ದೆಗೇರಿದ ಮೊದಲ ಆಫ್ರಿಕನ್-ಅಮೆರಿಕನ್ ಮತ್ತು ಮೊದಲ ಭಾರತೀಯ ಸಂಜಾತೆಯಾಗಿದ್ದರು. ಇದೀಗ ಅಮೆರಿಕ ಉಪಾಧ್ಯಕ್ಷೆಯಾದ ಮೊದಲ ಆಫ್ರಿಕನ್-ಅಮೆರಿಕನ್ ಮತ್ತು ಮೊದಲ ಭಾರತೀಯ ಸಂಜಾತೆ ಎಂಬ ಶ್ರೇಯವೂ ಅವರದ್ದಾಗಿದೆ.
ಅಮೆರಿಕಕ್ಕೆ ವಲಸೆ ಬಂದಿದ್ದ ಜಮೈಕಾದ ಡೊನಾಲ್ಡ್ ಹ್ಯಾರಿಸ್ ಮತ್ತು ಭಾರತದ ಶ್ಯಾಮಲಾ ಗೋಪಾಲನ್ ಪುತ್ರಿ ಕಮಲಾ ತಮ್ಮನ್ನು ತಾವು ‘ಅಮೆರಿಕನ್’ ಎಂದಷ್ಟೇ ಕರೆಸಿಕೊಳ್ಳಲು ಇಷ್ಟಪಡುತ್ತಾರೆ. ಅಪ್ಪ-ಅಮ್ಮ ವಿಚ್ಛೇದನ ಪಡೆದುಕೊಂಡ ನಂತರ ಕಮಲಾ ತಾಯಿಯ ಬಳಿಯೇ ಉಳಿದರು. ತನ್ನ ತಾಯಿ ಕಪ್ಪುವರ್ಣೀಯರ ಸಂಸ್ಕೃತಿಯನ್ನು ಒಪ್ಪಿಕೊಂಡಿದ್ದರು. ತನ್ನ ಇಬ್ಬರು ಪುತ್ರಿಯರನ್ನೂ ಅದೇ ಸಂಸ್ಕೃತಿಯಲ್ಲಿ ಬೆಳೆಸಿದರು. ಭಾರತೀಯ ಸಂಸ್ಕೃತಿಯ ಅರಿವು ನನಗಿದೆ. ಆದರೆ ನನ್ನದು ಆಫ್ರಿಕನ್ ಅಮೆರಿಕನ್ ಬದುಕು ಎಂದು ಕಮಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕಮಲಾ ಹುಟ್ಟಿದ್ದು ಆಕ್ಲೆಂಡ್ನಲ್ಲಿ, ಬೆಳೆದಿದ್ದು ಬರ್ಕೆಲಿ ನಗರದಲ್ಲಿ. ಕಮಲಾ ಪ್ರೌಢಶಾಲೆಗೆ ಹೋಗುವಾಗ ಅವರ ತಾಯಿ ಮೆಕ್ಗಿಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿದ್ದರು. ಹೀಗಾಗಿ ಫ್ರೆಂಚ್ ಭಾಷಿಕ ಕೆನಡಾ ನೆಲದಲ್ಲಿಯೂ ಕಮಲಾ ಕೆಲ ವರ್ಷ ಕಳೆದಿದ್ದಾರೆ. ಹೀಗಾಗಿಯೇ ಅಮೆರಿಕದ ವೈವಿಧ್ಯಮಯ ಬದುಕು, ಸಂಸ್ಕೃತಿಯನ್ನು ಅರಿಯಲು ಕಮಲಾಗೆ ಸಾಧ್ಯವಾಯಿತು. ಅಲ್ಲಿನ ಕಪ್ಪುಜನರಿಂದಿಗೆ ಆತ್ಮೀಯತೆ ಬೆಳೆಸಿಕೊಳ್ಳಲು ಅವಕಾಶ ಸಿಕ್ಕಿತು.
ಅಮೆರಿಕದ ಮುಂದಿನ ಅಧ್ಯಕ್ಷೀಯ ಚುನಾವಣೆ ಬರುವ ಹೊತ್ತಿಗೆ, ಅಂದರೆ 2024ಕ್ಕೆ ಅಧ್ಯಕ್ಷ ಜೋ ಬೈಡನ್ ವಯಸ್ಸು 82 ವರ್ಷ ಆಗಿರುತ್ತೆ. ವಯಸ್ಸಿನ ಕಾರಣಕ್ಕೆ ಬೈಡನ್ ಮತ್ತೆ ಚುನಾವಣೆಗೆ ನಿಲ್ಲದಿದ್ದರೆ ಡೆಮಾಕ್ರಟಿಕ್ ಪಕ್ಷದ ಅತ್ಯುತ್ತಮ ಆಯ್ಕೆಯಾಗಿ ಕಮಲಾ ಹ್ಯಾರಿಸ್ ಇರುತ್ತಾರೆ. ಮುಂದಿನ ಚುನಾವಣೆಯಲ್ಲಿಯೂ ಅಮೆರಿಕ ಮತದಾರರು ಡೆಮಾಕ್ರಟಿಕ್ ಪಕ್ಷವನ್ನೇ ಬೆಂಬಲಿಸಿದರೆ ಮಹಿಳೆಯೊಬ್ಬರು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗುವ ಮೂಲಕ ಮತ್ತೊಂದು ಇತಿಹಾಸ ನಿರ್ಮಾಣವಾಗುತ್ತದೆ.
ಕಮಲಾ ಹ್ಯಾರಿಸ್ ಪದಗ್ರಹಣ: ತಮಿಳುನಾಡಿನ ಪುಟ್ಟ ಹಳ್ಳಿಯಲ್ಲಿ ಸಂಭ್ರಮ.. ಮುರುಕು ತಯಾರಿಸಿದ ಮಹಿಳೆ!
ಒಳಿತು ಬಿತ್ತುವ ಆಶಯ: ಜೋ ಬೈಡೆನ್ಗೆ ಭಾರತ ಮೂಲದ ಅಮೆರಿಕನ್ನರಿಂದ ರಂಗೋಲಿಯ ಸ್ವಾಗತ