ದಿಲ್ಲಿ ಚುನಾವಣೆಯಲ್ಲಿ ಬಿಜೆಪಿ ಕಮಾಲ್: ಮೋದಿ, ನಡ್ಡಾಗೆ ಪತ್ರದ ಮೂಲಕ ಅಭಿನಂದನೆ ತಿಳಿಸಿದ ಯಡಿಯೂರಪ್ಪ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ಗೆಲುವಿಗೆ ಬಿಎಸ್ ಯಡಿಯೂರಪ್ಪ ಪ್ರಧಾನಿ ಮೋದಿ ಮತ್ತು ಜೆ.ಪಿ. ನಡ್ಡಾಗೆ ಅಭಿನಂದನೆ ಸಲ್ಲಿಸಿದ್ದಾರೆ. 27 ವರ್ಷಗಳ ಬಳಿಕ ಬಿಜೆಪಿ ಈ ಗೆಲುವು ಸಾಧಿಸಿದೆ. ಮೋದಿಯವರ ನಾಯಕತ್ವ ಮತ್ತು ಪಕ್ಷದ ಕಾರ್ಯಕರ್ತರ ಶ್ರಮ ಈ ಗೆಲುವಿಗೆ ಕಾರಣ ಎಂದು ಯಡಿಯೂರಪ್ಪ ಉಲ್ಲೇಖಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 08: ದೆಹಲಿಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (bjp) ಪ್ರಚಂಡ ಗೆಲುವು ಸಾಧಿಸುವ ಮೂಲಕ ಮತ್ತೆ ಇತಿಹಾಸ ಸೃಷ್ಟಿಸಿದೆ. ಒಂದಲ್ಲಾ, ಎರಡಲ್ಲ ಬರೋಬ್ಬರಿ 27 ವರ್ಷಗಳ ಬಳಿಕ ಬಿಜೆಪಿ ಮಹಾ ಯುದ್ಧವನ್ನೇ ಗೆದ್ದಿದೆ. ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸುವ ಮೂಲಕ ಕಮಲ ಕಮಾಲ್ ಮಾಡಿದ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಪತ್ರದ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲೇನಿದೆ?
27 ವರ್ಷಗಳ ನಂತರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಮೊದಲಿಗೆ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಅಸಾಧಾರಣ ಗೆಲುವು ಪ್ರಧಾನಿ ಮೋದಿಯವರ ನಾಯಕತ್ವ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಗೆ ಅವರಿಗಿರುವ ಬದ್ಧತೆಯ ಮೇಲಿನ ಅಚಲ ಸಾರ್ವಜನಿಕ ವಿಶ್ವಾಸದ ಸಂಕೇತವಾಗಿದೆ. ಇತ್ತೀಚಿನ ಚುನಾವಣಾ ಫಲಿತಾಂಶಗಳಲ್ಲಿ ಇದು ಸ್ಪಷ್ಟವಾಗಿದ್ದು, ಮತ್ತೊಮ್ಮೆ ಈಗ ದೆಹಲಿ ಬಿಜೆಪಿಯೊಂದಿಗೆ ದೃಢವಾಗಿ ನಿಂತಿರುವುದು ಇದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಜಕೀಯ ಪಂಡಿತ ರಾಹುಲ್ ಗಾಂಧಿ ಇವಿಎಮ್ ಬಗ್ಗೆ ಮಾತನಾಡುತ್ತಾರೆ: ಸಚಿವ ಜೋಶಿ ವ್ಯಂಗ್ಯ
ಪ್ರಧಾನಿ ಮೋದಿಯವರ ಪ್ರೇರಣಾದಾಯಕ ನಾಯಕತ್ವ ಮತ್ತು ಪಕ್ಷದ ಸಿದ್ದಾಂತ, ಅಭಿವೃದ್ಧಿ, ಸಾಧನೆಗಳು ಮತ್ತು ಬದ್ಧತೆಗಳನ್ನು ಪ್ರತಿಯೊಬ್ಬ ಮತದಾರರಿಗೂ ತಲುಪಿಸಲು ಹಗಲಿರುಳು ಸಮರೋಪಾದಿಯಲ್ಲಿ ಕೆಲಸ ಮಾಡಿದ ನಮ್ಮ ಲಕ್ಷಾಂತರ ಸಮರ್ಪಿತ ಕಾರ್ಯಕರ್ತರ ದಣಿವರಿಯದ ಪ್ರಯತ್ನಗಳಿಂದ ಈ ಅಭೂತಪೂರ್ವ ಗೆಲುವು ಸಾಧ್ಯವಾಗಿದೆ.
ದೆಹಲಿಯಲ್ಲಿ ಸಾಧಿಸಿರುವ ಈ ಪ್ರಮುಖ ಗೆಲುವು, ಪಕ್ಷ, ರಾಷ್ಟ್ರ ಮತ್ತು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನವಭಾರತ ನಿರ್ಮಾಣದ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರತಿಯೊಬ್ಬ ಭಾರತೀಯನಿಗೆ ಅಪಾರ ಹೆಮ್ಮೆಯ ಕ್ಷಣವಾಗಿದೆ. ಪಕ್ಷದ ಈ ಜನಸಮರ್ಥನೆಯ ವಿಜಯಯಾತ್ರೆ ಭಾರತದ ಉಜ್ವಲ ಭವಿಷ್ಯಕ್ಕೆ ದ್ಯೋತಕವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜೆ.ಪಿ.ನಡ್ಡಾಗೆ ಬರೆದ ಪತ್ರದಲ್ಲೇನಿದೆ?
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೂ ಬಿಎಸ್ ಯಡಿಯೂರಪ್ಪ ಪತ್ರ ಬರೆದಿದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸಾಧಿಸಿರುವ ಈ ಐತಿಹಾಸಿಕ ವಿಜಯಕ್ಕಾಗಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಮತ್ತು ಪಕ್ಷದ ಅಧ್ಯಕ್ಷರಾದ ನಿಮ್ಮ ಮಾರ್ಗದರ್ಶನದಲ್ಲಿ ಬಿಜೆಪಿ ದೆಹಲಿಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇದು ನಿಜಕ್ಕೂ ಐತಿಹಾಸಿಕ, ಗಮನಾರ್ಹ ಸಾಧನೆಯಾಗಿದೆ ಎಂದಿದ್ದಾರೆ.
ಪಕ್ಷವು ಜನರೊಂದಿಗೆ ಹೊಂದಿರುವ ಆಳವಾದ ಸಂಪರ್ಕ ಮತ್ತು ಪಕ್ಷದ ಸರಿಸಾಟಿಯಿಲ್ಲದ ಸಂಘಟನಾ ಶಕ್ತಿಯನ್ನು ದೆಹಲಿಯಲ್ಲಿನ ಗೆಲುವು ಪ್ರತಿಬಿಂಬಿಸುತ್ತದೆ. ನಮ್ಮ ಲಕ್ಷಾಂತರ ಸಮರ್ಪಿತ ಕಾರ್ಯಕರ್ತರನ್ನು ಹುರಿದುಂಬಿಸಿ, ಪಕ್ಷವನ್ನು ಶಿಸ್ತುಬದ್ಧ, ಸೈದ್ಧಾಂತಿಕ ಶಕ್ತಿಯಾಗಿ ಮುನ್ನಡೆಸುತ್ತಿರುವುದಕ್ಕಾಗಿ ನಿಮಗೂ ವಿಶೇಷವಾಗಿ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಕಾರ್ಯಕರ್ತರ ದಣಿವರಿಯದ ಪ್ರಯತ್ನಗಳಿಂದಾಗಿ, ಪಕ್ಷದ ಸಂದೇಶ, ನೀತಿ, ನಿಲುವುಗಳು, ಪ್ರತಿ ಮನೆಗೂ ತಲುಪಲು ಸಾಧ್ಯವಾಗಿದೆ. ಇದು ನಿಜಕ್ಕೂ ಪಕ್ಷಕ್ಕೆ ಮತ್ತು ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಎಂದು ಪತ್ರ ಬರೆದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.