ಹಾವೇರಿ : ಅದೆಷ್ಟೋ ಜನ ನಿರ್ಗತಿಕರಿಗೆ ಈಗಲೂ ವಾಸಿಸಲು ಸ್ವಂತ ಮನೆ ಇಲ್ಲ. ಕೆಲವರು ಯಾವ್ಯಾವುದೋ ಕಾರಣಕ್ಕೆ ಮನೆ ಬಿಟ್ಟು ಅನಾಥರಂತೆ ಎಲ್ಲೆಂದರಲ್ಲಿ ವಾಸ ಮಾಡುತ್ತಿರುತ್ತಾರೆ. ಕೆಲವರಂತೂ ಚಳಿ ಮಳೆ ಎನ್ನದೆ ರಸ್ತೆಗಳ ಪಕ್ಕದಲ್ಲೇ ನಿದ್ದೆಗೆ ಜಾರಿರುತ್ತಾರೆ. ಇಂತವರನ್ನು ಹುಡುಕಾಡಿ ಚಳಿಯಿಂದ ರಕ್ಷಿಸಿಕೊಳ್ಳಲು ಕಂಬಳಿಗಳನ್ನು ಕೊಡುವ ಮೂಲಕ ‘ಕನಸಿನ ರಾಣೆಬೆನ್ನೂರು’ ಎಂಬ ವಿಶೇಷ ತಂಡ ಮಾನವೀಯತೆ ಮೆರೆದಿದೆ.
ರಸ್ತೆ ಪಕ್ಕದಲ್ಲೇ ವಾಸ
ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಕುರಬಗೇರಿ ಕ್ರಾಸ್ ಹೀಗೆ ರಾಣೆಬೆನ್ನೂರು ನಗರದ ಕೆಲವೆಡೆ ನಿರ್ಗತಿಕರು ರಸ್ತೆಯ ಪಕ್ಕದಲ್ಲೇ ಮಲಗುತ್ತಿದ್ದರು. ವಯಸ್ಸಾದವರಂತೂ ಚಳಿಗೆ ನಡುಗುತ್ತಾ ನಿದ್ದೆ ಮಾಡುತ್ತಿದ್ದರು. ಕೇವಲ ರಾಣೆಬೆನ್ನೂರು ನಗರ ಒಂದರಲ್ಲಿ ಇಪ್ಪತ್ತು ಜನರು ರಸ್ತೆ ಪಕ್ಕದಲ್ಲಿ ಮಲಗುವುದು ಕಂಡು ಬಂದಿತ್ತು. ಇದನ್ನು ಕಂಡ ವಿಶೇಷ ತಂಡ ನಿರ್ಗತಿಕರಿಗೆ ಸಹಾಯ ಮಾಡಲು ಮುಂದಾಗಿದೆ.
ಪೊಲೀಸರ ಸಹಾಯದಿಂದ ನಿರ್ಗತಿಕರ ಪತ್ತೆ
ಕನಸಿನ ರಾಣೆಬೆನ್ನೂರು ತಂಡದವರು ನಗರದಲ್ಲಿ ರಸ್ತೆಗಳ ಪಕ್ಕದಲ್ಲಿ ಚಳಿಯಲ್ಲಿ ನಡುಗುತ್ತಾ ಮಲಗುತ್ತಿದ್ದ ನಿರ್ಗತಿಕರನ್ನು ಪತ್ತೆಹಚ್ಚಲು ಪೊಲೀಸರ ನೆರವು ಪಡೆದು ಕೊಂಡಿದ್ದಾರೆ. ಪೊಲೀಸರು ರಾತ್ರಿ, ಹಗಲು ಗಸ್ತಿನಲ್ಲಿದ್ದಾಗ ನಿರ್ಗತಿಕರು ಎಲ್ಲೆಂದರಲ್ಲಿ ಮಲಗಿರುವುದು ಕಂಡು ಬರುವುದು ಸಹಜ. ಹೀಗಾಗಿ ತಂಡದ ಸದಸ್ಯರು ಪೊಲೀಸರನ್ನು ಸಂಪರ್ಕಿಸಿ ನಿರ್ಗತಿಕರನ್ನು ಪತ್ತೆ ಮಾಡಿದ್ದಾರೆ.
ನಾವು ಮಾತ್ರ ಮನೆಯಲ್ಲಿ ಬೆಚ್ಚನೆಯ ಹಾಸಿಗೆ ಹೊದ್ದುಕೊಂಡು ಮಲಗುತ್ತೇವೆ. ಆದರೆ ನಿರಾಶ್ರಿತರು ಈ ಚಳಿಗಾಲದಲ್ಲಿ ರಸ್ತೆಗಳ ಪಕ್ಕದಲ್ಲಿ ಚಳಿಯಲ್ಲಿ ಮಲಗುತ್ತಾರೆ. ಇದನ್ನು ನೋಡಿದರೆ ಕರುಳು ಕಿತ್ತು ಬರುತ್ತದೆ. ಹೀಗಾಗಿ ನಮ್ಮ ತಂಡದವರು ಪೊಲೀಸರ ಸಹಕಾರದಿಂದ ನಿರ್ಗತಿಕರನ್ನು ಗುರುತಿಸಿ ಬ್ಲಾಂಕೇಟ್ಗಳನ್ನು ವಿತರಿಸಿದ್ದೇವೆ ಎಂದು ಕನಸಿನ ರಾಣೆಬೆನ್ನೂರು ತಂಡದ ಸಂಯೋಜಕ ಡಾ.ನಾರಾಯಣ ಪವಾರ Tv9 ಡಿಜಿಟಲ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಲಾಕ್ಡೌನ್ನಿಂದ ಬೀದಿಗೆ ಬಿದ್ದಿದ್ದ ನಿರಾಶ್ರಿತರ ಕಣ್ಣೊರೆಸಿ ನೆರವಿಗೆ ನಿಂತ ಯುವಕರ ತಂಡ