ಮಕ್ಕಳಿಗೆ ಪಾಠ ಮಾಡಲಿದೆ ಡೋಲ್ಪಿಯೋ ಉಪಕರಣ, ಆಪ್ಟಿಕಲ್ ಇ ಲರ್ನಿಂಗ್‌ನಿಂದ ಇಮ್ಮಡಿಸಿದೆ ವಿದ್ಯಾರ್ಥಿಗಳ ಕಲಿಕಾ ಸಂಭ್ರಮ
ಐಸ್ಪಾರ್ಕ್ ಇನೋವೇಷನ್ ಸಂಸ್ಥೆ ಡೋಲ್ಪಿಯೋ ಎಂಬ ಕಲಿಕಾ ಸಾಧನವನ್ನು ಅಭಿವೃದ್ದಿ ಪಡಿಸಿದ್ದಾರೆ. ಇದನ್ನು ಬಳಸಿಕೊಂಡು ತಂತ್ರಜ್ಞಾನ ಆಧಾರಿತವಾಗಿ ಓದಿ ಕಲಿಯಬಹುದಾಗಿದೆ. ಈಗಾಗಲೇ ಈ ಸಾಧನ ಪರಿಕರಗಳ ಕಿಟ್‌ನ್ನು ನಾಗವಾಲ ಗ್ರಾಮ ಪಂಚಾಯತಿಯ 5 ಸರ್ಕಾರಿ ಶಾಲೆಗಳಿಗೆ ವಿತರಿಸಲಾಗಿದೆ.

ಮೈಸೂರು: ಈಗ ಎಲ್ಲೆಡೆ ಕೊರೊನಾದ್ದೇ ಸದ್ದು. ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿರುವ ಕೊರೊನಾ, ವಿದ್ಯಾರ್ಥಿಗಳ ಭವಿಷ್ಯವನ್ನೂ ಮಂಕಾಗಿಸಿದೆ. ಮಕ್ಕಳಿಗೆ ಶಾಲಾ ಕಲಿಕೆ ಎನ್ನುವುದು ದೂರದ ಬೆಟ್ಟವಾಗಿದೆ. ಈ ಮಧ್ಯೆ ಸರ್ಕಾರ ಆನ್‌ಲೈನ್ ಶಿಕ್ಷಣ, ವಿದ್ಯಾಗಮ ಸೇರಿ ಹಲವು ಸರ್ಕಸ್ ಮಾಡಿದೆ. ಆದರೂ ಪೂರ್ಣಪ್ರಮಾಣದ ಯಶಸ್ಸು ಕಂಡಿಲ್ಲ.
ಇದೀಗ ಗ್ರಾಮೀಣ ಮಕ್ಕಳಿಗಾಗಿ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯವನ್ನು ಜ್ಞಾನ ಕೇಂದ್ರವಾಗಿಸುವ, ‘ಓದುವ ಬೆಳಕು’ ಕಾರ್ಯಕ್ರಮ ಮಕ್ಕಳ ಬಾಳಿಗೆ ಬೆಳಕಾಗಿ ಬಂದಿದೆ. ಮೈಸೂರಿನ ನಾಗವಾಲ ಗ್ರಾಮ ಪಂಚಾಯತಿ ಒಂದು ಹೆಜ್ಜೆ ಮುಂದೆ ಹೋಗಿ ತಂತ್ರಜ್ಞಾನ ಆಧಾರಿತ ‘ಓದುವ ಬೆಳಕು’ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ತಂತ್ರಜ್ಞಾನ ಆಧಾರಿತ ಓದುವ ಬೆಳಕು (ಆಪ್ಟಿಕಲ್ ಇ ಲರ್ನಿಂಗ್) ಐಸ್ಪಾರ್ಕ್ ಇನೋವೇಷನ್ ಸಂಸ್ಥೆ ಡೋಲ್ಪಿಯೋ ಎಂಬ ಕಲಿಕಾ ಸಾಧನವನ್ನು ಅಭಿವೃದ್ದಿ ಪಡಿಸಿದ್ದಾರೆ. ಇದನ್ನು ಬಳಸಿಕೊಂಡು ತಂತ್ರಜ್ಞಾನ ಆಧಾರಿತವಾಗಿ ಓದಿ ಕಲಿಯಬಹುದಾಗಿದೆ. ಈಗಾಗಲೇ ಈ ಸಾಧನ ಪರಿಕರಗಳ ಕಿಟ್‌ನ್ನು ನಾಗವಾಲ ಗ್ರಾಮ ಪಂಚಾಯತಿಯ 5 ಸರ್ಕಾರಿ ಶಾಲೆಗಳಿಗೆ ವಿತರಿಸಲಾಗಿದೆ. ಇದಕ್ಕಾಗಿ 90 ಸಾವಿರ ರೂಪಾಯಿ ವೆಚ್ಚ ಮಾಡಲಾಗಿದೆ.
ಡೋಲ್ಪಿಯೋದಿಂದ ಕಲಿಕೆ ಹೇಗೆ? ಇದು ಡೋಲ್ಪಿಯೋ ವಿನ್ಯಾಸದ ಮಕ್ಕಳ ಸ್ನೇಹಿ ಎಲೆಕ್ಟ್ರಾನಿಕ್ ಉಪಕರಣವಾಗಿದೆ. ವರ್ಣಮಾಲೆ, ಕಾಗುಣಿತ, ನರ್ಸರಿ ಪದ್ಯಗಳು, ಕಥೆಗಳ ಜೊತೆಗೆ ಭಾಷಾ ಪಾಠಗಳನ್ನು ಒಳಗೊಂಡಿರುವ ವಿಶೇಷ ಮುದ್ರಿತ ಪುಸ್ತಕ ಇದಾಗಿದೆ. ಡೋಲ್ಪಿಯೋದಲ್ಲಿ 4,000 ಪದಗಳ ಕನ್ನಡ, ಇಂಗ್ಲಿಷ್, ಹಿಂದಿ, ಗಣಿತ ಸೇರಿದಂತೆ 15 ಪುಸ್ತಕಗಳು ಇರುತ್ತವೆ.
ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಇತರ 10 ಪ್ರಾದೇಶಿಕ ಭಾಷೆಗಳಲ್ಲೂ ವಿವರಣೆ ಇದೆ. ಚಾರ್ಜ್ ಮಾಡಿದ ಡೋಲ್ಪಿಯೋ ಉಪಕರಣವನ್ನು ಪುಸ್ತಕದ ಅಕ್ಷರಗಳು ಅಥವಾ ಚಿತ್ರದ ಮೇಲೆ ಇಟ್ಟರೆ, ಆ ಯಂತ್ರವೇ ಅದರ ಬಗ್ಗೆ ವಿವರಣೆ ನೀಡುತ್ತದೆ. ಒಂದು ಅಕ್ಷರಕ್ಕೆ ಸಂಬಂಧಪಟ್ಟ ಇತರ ಅಕ್ಷರಗಳು, ಪದಗಳು ಮತ್ತು ಅರ್ಥ ಸೇರಿ ಇತರ ವಿವರಣೆಗಳನ್ನೂ ಈ ಉಪಕರಣ ನೀಡುತ್ತದೆ.
ಉದಾಹರಣೆಗೆ ಕ ಎಂಬ ಅಕ್ಷರದ ಮೇಲೆ ಯಂತ್ರವನ್ನು ಇಟ್ಟರೆ ಕ, ಕಾ, ಕಿ, ಕೀ ಹೀಗೆ ಎಲ್ಲಾ ಅಕ್ಷರಗಳನ್ನು ಉಪಕರಣ ಹೇಳುತ್ತದೆ. ಗಾಂಧೀಜಿಯವರ ಚಿತ್ರದ ಮೇಲೆ ಉಪಕರಣವನ್ನು ಇಟ್ಟರೆ ಗಾಂಧೀಜಿಯವರ ಬಗ್ಗೆ ಮಕ್ಕಳಿಗೆ ಬೇಕಾಗುವ ಮಾಹಿತಿಯನ್ನು ಆ ಯಂತ್ರ ನೀಡುತ್ತದೆ.
ಉಪಕರಣದ ವಿಶೇಷತೆಗಳು ಏನೇನು? ಸುಲಭ ಮತ್ತು ವಿದ್ಯಾರ್ಥಿ ಸ್ನೇಹಿ ಉಪಕರಣವಾಗಿರುವ ಇದರಲ್ಲಿ ಎಂಪಿ-3 ಪ್ಲೇಯರ್ ಮತ್ತು ರೆಕಾರ್ಡರ್ ಅಳವಡಿಸಲಾಗಿದೆ. ಇದು ಚಾರ್ಜಿಂಗ್ ಮತ್ತು ಪೋರ್ಟಬಲ್ (ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೊಂಡು ಹೋಗಬಹುದು) ಆಗಿದೆ. ಇಂಟರ್‌ನೆಟ್ ಬಳಸಿ ಹೊಸ ಕಲಿಕಾ ವಿಷಯವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಶಬ್ದ ಉಚ್ಛರಣೆ ವಕ್ಯಾಬುಲರಿಯನ್ನು ಕರಾರುವಾಕ್ಕಾಗಿ ತಿಳಿಯಲಿದೆ.
ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಪೂರಕವಾಗಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದೆ. ಮಕ್ಕಳು ತಪ್ಪು ಮಾಡಿದಲ್ಲಿ ಅದನ್ನು ತಿದ್ದುವ ಕೆಲಸವನ್ನು ಡೋಲ್ಪಿಯೋ ಮಾಡಲಿದೆ. ಗ್ರಾಮೀಣ ಭಾಗದ ಮಕ್ಕಳು ತಂತ್ರಜ್ಞಾನ ಬೆಳವಣಿಗೆ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ಸ್ವತಂತ್ರ ಕಲಿಕೆಯ ಆಸಕ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವಂತಿದೆ. ಮಕ್ಕಳ ಭಾಷೆಯನ್ನು ಶುದ್ಧವಾಗಿಸಲು ಅನುಕೂಲಕರವಾಗಿದೆ. ತಂತ್ರಜ್ಞಾನಾಧಾರಿತ ಕಲಿಕೆಗೆ ಮಕ್ಕಳನ್ನು ಉತ್ತೇಜಿಸುತ್ತದೆ.
ಗ್ರಾಮ ಪಂಚಾಯತಿ ಪಿಡಿಓ ಡಾ. ಶೋಭಾರಾಣಿ ಶ್ರಮ ಗ್ರಾಮ ಪಂಚಾಯಿತಿ ಪಿಡಿಒ ಆಗಿರುವ ಡಾ. ಶೋಭಾರಾಣಿ ಅವರು ನಗರ ಮತ್ತು ಪಟ್ಟಣ ಪ್ರದೇಶಗಳ ಖಾಸಗಿ ಶಾಲೆಗಳಲ್ಲಿನ ಇ-ಲರ್ನಿಂಗ್ ವ್ಯವಸ್ಥೆಯನ್ನು ಕಂಡು ಸರ್ಕಾರಿ ಶಾಲೆಗೆಳಲ್ಲೂ ಈ ಯೋಜನೆಯನ್ನು ಜಾರಿಗೆ ತರಬೇಕು ಎಂಬ ಉದ್ದೇಶದಿಂದ ಮುತುವರ್ಜಿವಹಿಸಿ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಈ ವಿನೂತನ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ.
ಕೊರೊನಾ ಮಹಾಮಾರಿಯಿಂದ ಮುಂದಿನ ಭವಿಷ್ಯದ ಬಗ್ಗೆ ಕಳವಳಗೊಂಡಿದ್ದ ವಿದ್ಯಾರ್ಥಿಗಳು ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಭರವಸೆದಾಯಕವಾಗಿರುವ ಆಪ್ಟಿಕಲ್ ಇ ಲರ್ನಿಂಗ್ ಕಾರ್ಯಕ್ರಮ ಯಶಸ್ವಿಯಾಗಲಿ. ಮಕ್ಕಳ ಕಲಿಕೆ ಸುಲಲಿತವಾಗಲಿ ಅವರ ಭವಿಷ್ಯ ಉಜ್ವಲವಾಗಲಿ ಅನ್ನುವುದು ಎಲ್ಲರ ಆಶಯವಾಗಿದೆ.

ಡೋಲ್ಪಿಯೋ ಉಪಕರಣ ಬಳಸಿ ಕಲಿಕೆ ನಡೆಸುತ್ತಿರುವ ಮಕ್ಕಳು
Published On - 12:03 pm, Mon, 21 December 20




