Rajiv Kapoor Death: ಬಾಲಿವುಡ್ ಸಿನಿಮಾ ‘ರಾಮ್ ತೇರಿ ಗಂಗಾ ಮೈಲಿ’ ನಟ ರಾಜೀವ್ ಕಪೂರ್ ವಿಧಿವಶ
Actor Rajiv Kapoor Passes Away | ರಾಮ್ ತೇರಿ ಗಂಗಾ ಮೈಲಿ ಚಿತ್ರದ ನಾಯಕ ನಟ ರಾಜೀವ್ ಕಪೂರ್ ಮಂಗಳವಾರ ಹೃದಯಾಘಾತದಿಂದ ಮುಂಬೈಯಲ್ಲಿ ನಿಧನರಾಗಿದ್ದಾರೆ.
ಮುಂಬೈ: ಬಾಲಿವುಡ್ ದಿಗ್ಗಜ ದಿವಂಗತ ರಾಜ್ ಕಪೂರ್ ಅವರ ಪುತ್ರ, ನಟ ರಾಜೀವ್ ಕಪೂರ್ ಮಂಗಳವಾರ ಮುಂಬೈನಲ್ಲಿ ನಿಧನವಾಗಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು. ರಾಜೀವ್ ಅವರಿಗೆ ಇಂದು ಬೆಳಗ್ಗೆ ಹೃದಯಾಘಾತವಾಗಿದೆ. ತಕ್ಷಣವೇ ಅವರನ್ನು ಚೆಂಬೂರ್ನಲ್ಲಿರುವ ಮನೆಯಿಂದ ಇನ್ ಸಾಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಚಿಕಿತ್ಸೆ ಆರಂಭಿಸುವ ಮುನ್ನವೇ ರಾಜೀವ್ ಕೊನೆಯುಸಿರೆಳೆದಿದ್ದಾರೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಕುಟುಂಬದವರು ಹೇಳಿದ್ದಾರೆ.
ಬಾಲಿವುಡ್ ದಿಗ್ಗಜ ರಾಜ್ ಕಪೂರ್ ಮತ್ತು ಕೃಷ್ಣಾ ಕಪೂರ್ ದಂಪತಿ ಮಗನಾಗಿ 1962 ಆಗಸ್ಟ್ 25ರಂದು ರಾಜೀವ್ ಕಪೂರ್ ಜನಿಸಿದರು. 1983ರಲ್ಲಿ ‘ಏಕ್ ಜಾನ್ ಹೇ ಹಮ್’ ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಸಿನಿಮಾವಾಗಿತ್ತು ರಾಮ್ ತೇರಿ ಗಂಗಾ ಮೈಲಿ (1985). ಅದು ರಾಜ್ ಕಪೂರ್ ಅವರು ನಿರ್ದೇಶಿಸಿದ ಕೊನೆಯ ಚಿತ್ರವಾಗಿತ್ತು. ಇನ್ನುಳಿದಂತೆ ಆಸ್ಮಾನ್ (1984) , ಲವರ್ ಬಾಯ್ (1985), ಜಬರ್ದಸ್ತ್ (1985), ಹಮ್ ಚಲೇ ಪರ್ ದೇಸ್ (1988) ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಚಿಂಪೂ ಎಂದೇ ಕರೆಯಲ್ಪಡುವ ರಾಜೀವ್ ಕೆಲವೇ ವರ್ಷಗಳಲ್ಲಿ ನಟನೆ ಬಿಟ್ಟು ಸಿನಿಮಾ ನಿರ್ಮಾಣ ಮತ್ತು ನಿರ್ದೇಶನದತ್ತ ಹೊರಳಿದ್ದರು. 1996ರಲ್ಲಿ ರಾಜೀವ್ ‘ಪ್ರೇಮ್ ಗ್ರಂಥ್’ ಎಂಬ ಸಿನಿಮಾ ನಿರ್ದೇಶಿಸಿದ್ದು ಇದರಲ್ಲಿ ಅವರ ಅಣ್ಣ ರಿಷಿ ಕಪೂರ್ ನಾಯಕ, ಮಾಧುರಿ ದೀಕ್ಷಿತ್ ನಾಯಕಿಯಾಗಿದ್ದರು.
ಸಹೋದರ ರಣ್ಧೀರ್ ಕಪೂರ್ ನಿರ್ದೇಶಿಸಿದ್ದ ‘ಹೆನ್ನಾ’ (1991) ಮತ್ತು ‘ಆ ಅಬ್ ಲೌಟ್ ಚಲೇ’ (1999) ಸಿನಿಮಾದ ನಿರ್ಮಾಪಕರಾಗಿದ್ದರು ರಾಜೀವ್. ಇದಾದ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಅವರು 28 ವರ್ಷಗಳ ನಂತರ ಅಶುತೋಷ್ ಗೌರೀಕರ್ ನಿರ್ದೇಶನದ ‘ಟೂಲ್ಸಿದಾಸ ಜೂನಿಯರ್’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಸಂಜಯ್ ದತ್ ನಾಯಕನಾಗಿರುವ ಈ ಚಿತ್ರ ಕಳೆದ ವರ್ಷ ಘೋಷಣೆಯಾಗಿದ್ದು ಇನ್ನೂ ತೆರೆಕಂಡಿಲ್ಲ.
ರಾಜೀವ್ ಕಪೂರ್ ಅವರ ನಾದಿನಿ ನೀತೂ ಕಪೂರ್ ಇನ್ಸ್ಟಾಗ್ರಾಂನಲ್ಲಿ ರಾಜೀವ್ ಕಪೂರ್ ಅವರ ಫೋಟೊ ಶೇರ್ ಮಾಡಿ RIP ಎಂದು ಬರೆದಿದ್ದಾರೆ.
View this post on Instagram
ಸಂತಾಪ ವ್ಯಕ್ತ ಪಡಿಸಿದ ಸೆಲೆಬ್ರಿಟಿಗಳು ರಾಜ್ ಕಪೂರ್ ಅವರ ಕಿರಿಯ ಪುತ್ರ, ನಟ ರಾಜೀವ್ ಕಪೂರ್ ಇಂದು ಸ್ವರ್ಗಸ್ಥರಾದರು ಎಂಬ ವಿಷಯ ನನಗೆ ಈಗ ತಿಳಿಯಿತು. ಈ ಸುದ್ದಿ ಕೇಳಿ ನನಗೆ ಬೇಸರವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಟ್ವೀಟ್ ಮಾಡಿದ್ದಾರೆ.
Mujhe abhi pata chala ki Raj Kapoor sahab ke chote bete, guni abhineta Rajiv Kapoor ka aaj swargwas hua. Sunke mujhe bahut dukh hua.Ishwar unki aatma ko shanti pradan kare yehi meri prarthana.
— Lata Mangeshkar (@mangeshkarlata) February 9, 2021
ರಾಜೀವ್ ಕಪೂರ್ ಅವರ ನಿಧನದಿಂದ ಅತೀವ ದುಃಖವಾಗಿದೆ. ಕಪೂರ್ ಕುಟುಂಬಕ್ಕೆ ದೇವರು ದುಃಖ ಸಹಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ.
Absolutely heartbroken to hear about the demise of Rajiv Kapoor. A soul gone too soon. My thoughts and prayers are with the Kapoor family in this difficult time. Om Shanti?? pic.twitter.com/Z98vvR0cxk
— Sanjay Dutt (@duttsanjay) February 9, 2021
Published On - 4:40 pm, Tue, 9 February 21