ಯಾಮಾರಿದರೆ ಯಮಲೋಕ: ತೆಪ್ಪದ ಮೇಲಿನ ಬದುಕು.. ಕೇಳೊರಿಲ್ಲ ರೈತನ ಗೋಳು

ಯಾಮಾರಿದರೆ ಯಮಲೋಕ: ತೆಪ್ಪದ ಮೇಲಿನ ಬದುಕು.. ಕೇಳೊರಿಲ್ಲ ರೈತನ ಗೋಳು

ಹಾವೇರಿ: ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮದ ಬಳಿ ನೂರಾರು ಎಕರೆ ವಿಶಾಲವಾದ ಕೆರೆಯಿದೆ. ಕೆರೆಯ ಒಂದು ದಂಡೆಯಲ್ಲಿ ಗ್ರಾಮದ ಬಹುತೇಕ ರೈತರ ಇನ್ನೂರಕ್ಕೂ ಅಧಿಕ ಎಕರೆ ಜಮೀನಿದೆ. ಇಲ್ಲಿನ ರೈತರು ತಮ್ಮ ತಮ್ಮ ಜಮೀನುಗಳಿಗೆ ತೆರಳಲು ಭರಪೂರ ತುಂಬಿರುವ ಕೆರೆ ದಾಟಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಏಕಂದರೆ ಕೆರೆಯ ಒಂದು ದಡದಲ್ಲಿರುವ ಗ್ರಾಮದ ರೈತರ ಜಮೀನುಗಳಿಗೆ ತೆರಳಲು ರಸ್ತೆ ಸಂಪರ್ಕವಿಲ್ಲ. ಹೀಗಾಗಿ ತುಂಬಿದ ಕೆರೆ ದಾಟಿಕೊಂಡು ಜಮೀನುಗಳಿಗೆ ಹೋಗಬೇಕಾಗಿದೆ.‌ ಇನ್ನೂರರಿಂದ ಮುನ್ನೂರು ಮೀಟರ್​ನಷ್ಟು ಕೆರೆಯಲ್ಲಿ ದಾಟಿಕೊಂಡು ಹೋಗಬೇಕು. ಈಜು ಬಲ್ಲ ಕೆಲವು ರೈತರು ಈಜಿಕೊಂಡು ಜಮೀನಿಗೆ ತೆರಳುತ್ತಾರೆ.

ಯಾಮಾರಿದರೆ ಯಮಲೋಕ..
ಶಿಡ್ಲಾಪುರ ಗ್ರಾಮದ ಬಹುತೇಕ ರೈತರು ತೆಪ್ಪದಲ್ಲಿ ಕುಳಿತುಕೊಂಡು ಕೆರೆ ದಾಟಿ ಜಮೀನಿಗೆ ಹೋಗುತ್ತಾರೆ. ತೆಪ್ಪಕ್ಕೆ ಹಗ್ಗವನ್ನು ಕಟ್ಟಿ ಈಜು ಬಲ್ಲ ರೈತರು ಹಗ್ಗ ಹಿಡಿದುಕೊಂಡು ಮುಂದೆ ಹೋಗಬೇಕು. ಉಳಿದಂತೆ ಒಂದು ಬಾರಿಗೆ ಆರೇಳು ಜನರು ತೆಪ್ಪದಲ್ಲಿ ಕುಳಿತು ಸಾಗಬೇಕು. ತೆಪ್ಪದಲ್ಲಿ ಕುಳಿತು ಹೋಗುವಾಗ ರೈತರು ಮತ್ತು ಕೃಷಿ ಕಾರ್ಮಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ.

ಜಮೀನಿಗೆ ಹೋಗುವಾಗ ಯಾವಾಗ ದಡ ಸೇರುತ್ತೇವೆಯೋ ಎನ್ನುವ ಆತಂಕ ಒಂದೆಡೆಯಾದರೆ ಜಮೀನಿನಿಂದ ವಾಪಸ್ ತೆಪ್ಪದಲ್ಲಿ ಬರುವಾಗ ಯಾವಾಗ ಮನೆ ಸೇರುತ್ತೇವೆಯೋ ಎಂಬ ಆತಂಕ ಗ್ರಾಮದ ರೈತರನ್ನು ಕಾಡುತ್ತಿದೆ. ಯಾಕಂದರೆ ತೆಪ್ಪದ ಪ್ರಯಾಣದಲ್ಲಿ ಸ್ವಲ್ಪ ಏರುಪೇರಾದರೂ ತೆಪ್ಪದಲ್ಲಿ ಕುಳಿತು ಸಾಗುವವರು ಯಮಲೋಕ ಸೇರುವುದು ಪಕ್ಕಾ ಎನ್ನುವಂತಿದೆ

ತೆಪ್ಪದ ಪ್ರಯಾಣವೆ ಗತಿ..
ಮಳೆಗಾಲದಲ್ಲಿ ಪ್ರತಿವರ್ಷವೂ ಗ್ರಾಮದ ರೈತರಿಗೆ ಕೆರೆ ದಾಟಿಕೊಂಡು ಜಮೀನುಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಪ್ರತಿ ದಿನಕ್ಕೆ ಇನ್ನೂರು ರುಪಾಯಿ ಬಾಡಿಗೆ ಕೊಟ್ಟು ತೆಪ್ಪವನ್ನು ತಂದು ರೈತರು ಒಂದು ಬಾರಿಗೆ ಆರೇಳು ಜನರಂತೆ ಕುಳಿತು ತೆಪ್ಪದಲ್ಲಿ ಕೆರೆ ದಾಟುತ್ತಾರೆ. ಏಳರಿಂದ ಎಂಟು ಫೀಟ್ ಆಳವಾಗಿರುವ ಕೆರೆಯಲ್ಲಿ ತೆಪ್ಪದಲ್ಲಿ ಕುಳಿತು ಸಾಗುವಾಗ ಎಂಥವರಿಗೂ ಒಂದು ಕ್ಷಣ ಪ್ರಾಣ ಹೋಗಿ ಬಂದ ಅನುಭವ ಆಗುತ್ತದೆ.

ಪ್ರತಿ ವರ್ಷ ಐದಾರು ತಿಂಗಳುಗಳ ಕಾಲ ಇಲ್ಲಿನ ರೈತರು ಈ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಜಮೀನಿಗೆ ಬೀಜ, ಗೊಬ್ಬರ ಹಾಕುವುದು, ದನಕರುಗಳಿಗೆ ಮೇವು ತರುವುದು ಹೀಗೆ ಎಲ್ಲವನ್ನು ಇಲ್ಲಿ ತೆಪ್ಪ ಬಳಸಿಕೊಂಡೆ ಮಾಡಲಾಗುತ್ತದೆ.

ಕೆರೆ ನೀರು ಕಡಿಮೆಯಾಗುವವರೆಗೂ ಬೆಳೆ ಕಟ್ಟಾವೂ ಮಾಡುವ ಹಾಗಿಲ್ಲ..
ತೆಪ್ಪದಲ್ಲಿ ಕಟಾವು ಮಾಡಿದ ಫಸಲನ್ನು ತರುವುದು ಸುಲಭವಲ್ಲ. ಅದು ಆಗದೆ ಇರುವ ಮಾತು. ಹೀಗಾಗಿ ಕೆಲವು‌ ತಿಂಗಳುಗಳ ಕಾಲ ಕಟಾವು ಮಾಡಿದ ಫಸಲನ್ನು ರೈತರು ಜಮೀನಿನಲ್ಲೇ ಇಟ್ಟಿರುತ್ತಾರೆ. ಕೆರೆಯಲ್ಲಿ ನೀರು ಕಡಿಮೆಯಾದಾಗ ಫಸಲನ್ನು ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುತ್ತಾರೆ.

ಇನ್ನು ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಬೋರವೆಲ್‌ನ ಮೋಟಾರ್ ಸ್ಟಾರ್ಟ್ ಮಾಡಲು ಸಹ ಕೆರೆ ದಾಟಿಕೊಂಡು ಹೋಗಬೇಕು. ಕೆರೆಯಲ್ಲಿ ತೆಪ್ಪ ಇದ್ದರೆ ತೆಪ್ಪದಲ್ಲಿ, ತೆಪ್ಪ ಇರದಿದ್ದರೆ ಕೆರೆಯಲ್ಲಿ ಈಜಿಕೊಂಡು ವಾಟರ್ ಮನ್‌ ಕುಡಿಯುವ ನೀರಿನ ಬೋರವೆಲ್ ಸ್ಟಾರ್ಟ್ ಮಾಡಿ ಬರುವ ಪರಿಸ್ಥಿತಿ ಇದೆ.

ಈಡೇರದ ಬ್ರಿಡ್ಜ್ ಬೇಡಿಕೆ..
ಕೆರೆಗೆ ಸೇತುವೆ ನಿರ್ಮಾಣ‌ ಮಾಡಿಸಿಕೊಡುವಂತೆ ಗ್ರಾಮಸ್ಥರು ಹಲವಾರು ಬಾರಿ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕ, ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತಂದಿದ್ದಾರೆ. ಆದರೂ ಈವರೆಗೆ ಸೇತುವೆ ಮಾತ್ರ ನಿರ್ಮಾಣವಾಗಿಲ್ಲ. ಹೀಗಾಗಿ ಗ್ರಾಮದ ರೈತರು ನಿತ್ಯವೂ ಜೀವ ಕೈಯಲ್ಲಿ ಹಿಡಿದುಕೊಂಡು ತೆಪ್ಪದಲ್ಲಿ ಕುಳಿತು ಕೆರೆ ದಾಟಿಕೊಂಡು ಹೋಗಬೇಕಾದ ಸ್ಥಿತಿ ಇದೆ.‌

ಒಂದೆಡೆ ಕೆರೆ ಭರಪೂರ ತುಂಬಿದೆ. ಮತ್ತೊಂದೆಡೆ ಕೃಷಿ ಕೆಲಸಕ್ಕೆ ಕೆರೆ ದಾಟಿಕೊಂಡು ಹೋಗಬೇಕಾದ ಅನಿವಾರ್ಯತೆ. ಸೇತುವೆ ನಿರ್ಮಿಸಿ ಕೊಡುವಂತೆ ಹೇಳಿ ಹೇಳಿ ಸಾಕಾದ ಗ್ರಾಮಸ್ಥರು ನಿತ್ಯವೂ ಜೀವ ಕೈಯಲ್ಲಿ ಹಿಡಿದುಕೊಂಡು ತೆಪ್ಪದಲ್ಲಿ ಜಮೀನಿಗೆ ತೆರಳುತ್ತಿದ್ದಾರೆ. ಯಾವಾಗ ಏನಾಗುತ್ತದೆಯೋ ಎಂಬ ಭಯ ನಿತ್ಯವೂ ಇಲ್ಲಿನ ರೈತರನ್ನು ಕಾಡುತ್ತಿದೆ. ಇನ್ನಾದರೂ ಜಿಲ್ಲಾಡಳಿತ, ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಇಲ್ಲಿನ‌ ಜನರ ಸಮಸ್ಯೆಗೆ ಸ್ಪಂಧಿಸಬೇಕಿದೆ.
-ಪ್ರಭುಗೌಡ ಎನ್.ಪಾಟೀಲ

 

Click on your DTH Provider to Add TV9 Kannada