ಯಾದಗಿರಿಯಲ್ಲಿ ಬಸ್ ಸಂಚಾರ ಬಂದ್: ಪ್ರಾಣವನ್ನು ಕೈಯಲ್ಲಿ ಹಿಡಿದು ಟಂಟಂ ಗಾಡಿ ಹತ್ತಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು

ಕೊರೊನಾ ಬಳಿಕ ಎಲ್ಲಾ ಗ್ರಾಮಗಳಿಗೆ ಹೋಗುತ್ತಿದ್ದ ಬಸ್ ಸರ್ವಿಸ್ ಬಂದ್ ಮಾಡಲಾಗಿದೆ. ಇನ್ನು ಕೊರೊನಾದಿಂದಾಗಿ ಸಿಬ್ಬಂದಿಗಳ ಕೊರತೆಯಿದೆ ಎಂದು ಸಬೂಬು ನೀಡಿ ಇಲಾಖೆ ಅಧಿಕಾರಿಗಳು ಸಂಚಾರ ಬಂದ್ ಮಾಡಿದ್ದಾರೆ.

  • ಅಮೀನ್ ಹೊಸುರ್
  • Published On - 22:38 PM, 23 Feb 2021
ಯಾದಗಿರಿಯಲ್ಲಿ ಬಸ್ ಸಂಚಾರ ಬಂದ್: ಪ್ರಾಣವನ್ನು ಕೈಯಲ್ಲಿ ಹಿಡಿದು ಟಂಟಂ ಗಾಡಿ ಹತ್ತಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು
ಬಸ್​ಗಳಿಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು

ಯಾದಗಿರಿ: ಕೊರೊನಾದಿಂದ ರಾಜ್ಯಾದ್ಯಾಂತ 9 ತಿಂಗಳು ಬಂದ್ ಆಗಿದ್ದ ಶಾಲಾ ಕಾಲೇಜುಗಳು ಕಳೆದ ಎರಡು ತಿಂಗಳಿನಿಂದ ಆರಂಭವಾಗಿವೆ. ಶಾಲೆಗಳು ಆರಂಭವಾಗಿವೆ ಎಂದು ವಿದ್ಯಾರ್ಥಿಗಳು ಸಹ ಶಾಲೆಗಳ ಕಡೆ ಮುಖ ಮಾಡುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳುವುದ್ದಕ್ಕೆ ಸಂಕಷ್ಟ ಎದುರಾಗಿದೆ. ಶಾಲೆಗಳು ಆರಂಭವಾದ್ರು ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರವಾಗದ ಹಿನ್ನೆಲೆ ವಿದ್ಯಾರ್ಥಿಗಳು ಅಪಾಯದ ಪ್ರಯಾಣ ಮಾಡುತ್ತಿದ್ದಾರೆ.

ಯಾದಗಿರಿಯ ಗ್ರಾಮೀಣ ಭಾಗದಲ್ಲಿ ಶಾಲೆ ಆರಂಭವಾದರೂ ಬಸ್ ಸಂಚಾರಕ್ಕೆ ಮಾತ್ರ ಇನ್ನು ಗ್ರಹಣ ಬಿಟ್ಟಿಲ್ಲ. ಹೀಗಾಗಿ ಸಂಚಾರಕ್ಕೆ ವಿದ್ಯಾರ್ಥಿಗಳು ಗೂಡ್ಸ್ ವಾಹನಗಳಿಗೆ ಜೋತು ಬಿದ್ದು, ಶಾಲೆಗೆ ಬರುತ್ತಿದ್ದಾರೆ. ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆಯುತ್ತ ಬಂದರು ಜಿಲ್ಲೆಯಲ್ಲಿನ ಗ್ರಾಮೀಣ ಭಾಗದಲ್ಲಿ ಸರಿಯಾಗಿ ಸರ್ಕಾರಿ ಬಸ್​ಗಳ ಸಂಚಾರವಾಗುತ್ತಿಲ್ಲ. ಹೀಗಾಗಿ ದೂರದ ಊರುಗಳಿಂದ ಶಾಲೆಗೆ ಬರಬೇಕಾದ ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡುವಂತಾಗಿದೆ.

ಬಸ್ ಬಂದಿಲ್ಲ ಎಂದು ಶಾಲೆಗೆ ಹೋಗುವುದನ್ನು ಬಿಡಲು ಸಾಧ್ಯವಿಲ್ಲ ಹೀಗಾಗಿ ಮಕ್ಕಳು ಗೂಡ್ಸ್ ಹಾಗೂ ಟಂಟಂ ವಾಹನಗಳಲ್ಲಿ ಪ್ರಯಾಣ ಬೆಳೆಸಿ ಶಾಲೆಗೆ ಹೋಗುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣಕ್ಕೆ ಸುತ್ತಲಿನ ಹತ್ತಾರು ಹಳ್ಳಿಯ ವಿದ್ಯಾರ್ಥಿಗಳು ಪ್ರೌಢ ಶಾಲೆ ಹಾಗೂ ಕಾಲೇಜಿಗೆ ಬರುತ್ತಾರೆ. ಆದರೆ ಬಸ್ ಬಾರದ ಕಾರಣಕ್ಕಾಗಿ ಗೂಡ್ಸ್ ಮತ್ತು ಟಂಟಂ ವಾಹನಗಳಲ್ಲಿ 20ರಿಂದ 25 ವಿದ್ಯಾರ್ಥಿಗಳು ಒಂದು ವಾಹನದಲ್ಲಿ ಬರುತ್ತಿದ್ದಾರೆ. ಟಂಟಂ ವಾಹನದಲ್ಲಿ ಜಾಗ ಇಲ್ಲದೆ ಇದ್ದಾಗ ಜೋತು ಬಿದ್ದು ಅಥವಾ ಟಾಪ್ ಮೇಲೆ ಕುಳಿತುಕೊಂಡು ಬರುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ.

school in goods

ಟಂಟಂ ಗಾಡಿ ಹತ್ತಿ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು

ಸೈದಾಪುರ ಪಟ್ಟಣದಲ್ಲಿ ಪ್ರೌಢಶಾಲೆ ಹಾಗೂ ಪಿಯುಸಿ ಕಾಲೇಜು ಇರುವ ಕಾರಣಕ್ಕೆ ಸುತ್ತಲಿನ ಕಣೆಕಲ್, ಮಾದ್ವಾರ, ದುಪ್ಪಲಿ, ರಾಂಪುರ, ಕೂಡ್ಲೂರ, ಎಲಸತ್ತಿ, ಇಂಡ್ಲೂರ ಸೇರಿದಂತೆ ಸುಮಾರು 20 ಹಳ್ಳಿಗಳ ನೂರಾರು ಮಕ್ಕಳು ಸೈದಾಪುರ ಪಟ್ಟಣಕ್ಕೆ ವಿದ್ಯೆ ಕಲಿಯುವುದಕ್ಕೆ ಬರುತ್ತಾರೆ. ಇನ್ನು ಕೊರೊನಾ ವಕ್ಕರಿಸಿಕೊಳ್ಳುವುದ್ದಕ್ಕೂ ಮೊದಲು ಈ ಎಲ್ಲಾ ಗ್ರಾಮಗಳಿಗೆ ಬಸ್ ಸಂಚಾರವಾಗುತ್ತಿತ್ತು. ಸರಿಯಾದ ಸಮಯಕ್ಕೆ ಬಸ್ ಬರುತ್ತಿದ್ದ ಕಾರಣಕ್ಕೆ ಮಕ್ಕಳು ಸಹ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಬರುತ್ತಿದ್ದರು.

ಆದರೆ ಈಗ ಕೊರೊನಾ ಬಳಿಕ ಎಲ್ಲಾ ಗ್ರಾಮಗಳಿಗೆ ಹೋಗುತ್ತಿದ್ದ ಬಸ್ ಸರ್ವಿಸ್ ಬಂದ್ ಮಾಡಲಾಗಿದೆ. ಇನ್ನು ಕೊರೊನಾದಿಂದಾಗಿ ಸಿಬ್ಬಂದಿಗಳ ಕೊರೊತೆಯಿದೆ ಎಂದು ಸಬೂಬು ನೀಡಿ ಇಲಾಖೆ ಅಧಿಕಾರಿಗಳು ಸಂಚಾರ ಬಂದ್ ಮಾಡಿದ್ದಾರೆ. ಇನ್ನು ಚಾಲಕರು ವೇಗವಾಗಿ ಓಡಿಸುವ ವಾಹನಗಳಿಗೆ ಜೋತು ಬಿದ್ದು ಬರುತ್ತಿರುವ ವಿದ್ಯಾರ್ಥಿಗಳ ಕೈ ಸ್ವಲ್ಪ ಜಾರಿದ್ರು ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ.

ಒಳಗೆ ಕೂರುವುದಕ್ಕೂ ಜಾಗ ಸಿಕ್ಕಿಲ್ಲ ಎಂದರೆ ವಿದ್ಯಾರ್ಥಿಗಳು ಟಂಟಂ ವಾಹನದ ಮೇಲೆ ಕುಳಿತುಕೊಂಡು ಬರುತ್ತಾರೆ. ಇನ್ನು ಇರುವ ಟಂಟಂ ವಾಹನಗಳೇ ಸರಿಯಾದ ಸಮಯಕ್ಕೆ ಬಾರದ ಹಿನ್ನಲೆ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವುದ್ದಕ್ಕೆ ಆಗದ ಪರಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಾಪ್ರೀಯ.ಆರ್. ಅವರನ್ನು ಕೇಳಿದರೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸರಿಯಾದ ವ್ಯವಸ್ಥೆ ಮಾಡುವಂತೆ ಸೂಚಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರು ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಬಸ್ ವ್ಯವಸ್ಥೆ ಕಲ್ಪಿಸದೆ ವಿದ್ಯಾರ್ಥಿಗಳ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಿ ಮುಂದಾಗುವ ಅನಾಹುತಗಳನ್ನ ತಪ್ಪಿಸಬೇಕಾಗಿದೆ ಎನ್ನುವುದು ಟಿವಿ9 ಡಿಜಿಟಲ್​ನ ಕೋರಿಕೆಯಾಗಿದೆ.

ಇದನ್ನೂ ಓದಿ: School Reopen: ಕರ್ನಾಟಕದಲ್ಲಿ ಇಂದಿನಿಂದ 6 ರಿಂದ 8ನೇ ತರಗತಿಗಳು ಆರಂಭ