AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನ 8 ಅತ್ಯಂತ ದುಬಾರಿ ಮದುವೆಗಳಿವು; ಭಾರತೀಯರ ವಿವಾಹಕ್ಕೂ ಇದೆ ಸ್ಥಾನ

ಕೆಲವರು ಸರಳವಾಗಿ ತಮ್ಮ ಮದುವೆಯಾಗಲು ಇಷ್ಟಪಡುತ್ತಾರೆ. ಆದರೆ ಕೆಲವರು ವಿಜೃಂಭಣೆಯಿಂದ ಮದುವೆಯಾಗಲು ಇಷ್ಟಪಡುತ್ತಾರೆ. ಕೆಲವು ಮದುವೆಗಳ ವೈಭವ ದಶಕಗಳು ಕಳೆದರೂ ಜನರ ಮನಸಿನಿಂದ ಮರೆಯಾಗುವುದಿಲ್ಲ. ಅಂತಹ ಜಗತ್ತಿನ ಅತ್ಯಂತ ದುಬಾರಿ ವಿವಾಹಗಳ ಬಗ್ಗೆ ಮಾಹಿತಿ ಇಲ್ಲಿದೆ.

ಜಗತ್ತಿನ 8 ಅತ್ಯಂತ ದುಬಾರಿ ಮದುವೆಗಳಿವು; ಭಾರತೀಯರ ವಿವಾಹಕ್ಕೂ ಇದೆ ಸ್ಥಾನ
ಇಶಾ ಅಂಬಾನಿ ಮದುವೆ
ಸುಷ್ಮಾ ಚಕ್ರೆ
|

Updated on: Jan 17, 2024 | 1:10 PM

Share

ಮದುವೆಯೆಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ಅತ್ಯಂತ ದೊಡ್ಡ ಮತ್ತು ವಿಶೇಷ ಘಟನೆಗಳಲ್ಲಿ ಒಂದಾಗಿದೆ. ವಿಭಿನ್ನ ಸಂಸ್ಕೃತಿಗಳು, ವಿಭಿನ್ನ ಮದುವೆಯ ಆಚರಣೆಗಳಿದ್ದರೂ ಅವೆಲ್ಲವಕ್ಕೂ ಬುನಾದಿ ಗಂಡು-ಹೆಣ್ಣಿನ ನಡುವಿನ ಹೊಂದಾಣಿಕೆ, ಪ್ರೀತಿ ಮತ್ತು ನಂಬಿಕೆ. ಕೆಲವರು ಸರಳವಾಗಿ ತಮ್ಮ ಮದುವೆಯಾಗಲು ಇಷ್ಟಪಡುತ್ತಾರೆ. ಆದರೆ ಕೆಲವರು ವಿಜೃಂಭಣೆಯಿಂದ ಮದುವೆಯಾಗಲು ಇಷ್ಟಪಡುತ್ತಾರೆ. ಈ ಮೂಲಕ ಮದುವೆಯನ್ನು ಅತಿರಂಜಿತ ಮತ್ತು ಸ್ಮರಣೀಯ ದಿನವನ್ನಾಗಿ ಮಾಡುತ್ತಾರೆ. ಕೆಲವು ಮದುವೆಗಳ ವೈಭವ ದಶಕಗಳು ಕಳೆದರೂ ಜನರ ಮನಸಿನಿಂದ ಮರೆಯಾಗುವುದಿಲ್ಲ. ಅಂತಹ ಜಗತ್ತಿನ ಅತ್ಯಂತ ದುಬಾರಿ ವಿವಾಹಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಮೇಡ್‌ಲೈನ್ ಬ್ರಾಕ್‌ವೇ ಮತ್ತು ಜಾಕೋಬ್ ಲಾಗ್ರೋನ್ ಮದುವೆ:

“ಶತಮಾನದ ಮದುವೆ” ಎಂದು ಕರೆಯಲ್ಪಡುವ ಮೇಡ್‌ಲೈನ್ ಬ್ರಾಕ್‌ವೇ ಮತ್ತು ಜಾಕೋಬ್ ಲಾಗ್ರೋನ್ ಅವರ ವಿವಾಹವು 2023ರ ನವೆಂಬರ್ ತಿಂಗಳಲ್ಲಿ ನಡೆಯಿತು. ಇದಕ್ಕೆ ಸುಮಾರು 59 ಮಿಲಿಯನ್ ಡಾಲರ್ (489 ಕೋಟಿ ರೂ.) ವೆಚ್ಚವಾಗಿತ್ತು. ಅವರ ಅದ್ದೂರಿ ವಿವಾಹವನ್ನು ಪ್ಯಾರಿಸ್‌ನ ವರ್ಸೈಲ್ಸ್ ಅರಮನೆಯಲ್ಲಿ ಆಯೋಜಿಸಲಾಗಿತ್ತು. ಎಲ್ಲಾ ಅತಿಥಿಗಳನ್ನು ಖಾಸಗಿ ಜೆಟ್‌ಗಳಲ್ಲಿ ಮದುವೆಯ ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಈ ಮದುವೆಯಲ್ಲಿ ವಧು ಧರಿಸಿದ್ದ ದುಬಾರಿ ಡ್ರೆಸ್​ ಭಾರೀ ಚರ್ಚೆಗೆ ಕಾರಣವಾಗಿತ್ತು. ಮೆಡೆಲಿನ್ ಬ್ರಾಕ್‌ವೇ ಅವರ ಕುಟುಂಬವು ಕಾರ್ ಡೀಲರ್‌ಶಿಪ್ ವ್ಯವಹಾರವನ್ನು ಹೊಂದಿದೆ.

2. ಪ್ರಿನ್ಸ್​ ಚಾರ್ಲ್ಸ್​ ಮತ್ತು ಡಯಾನಾ ಮದುವೆ:

ಇಂಗ್ಲೆಂಡ್​ನ ಪ್ರಿನ್ಸ್ ಚಾರ್ಲ್ಸ್ (ಈಗಿನ ಕಿಂಗ್ ಚಾರ್ಲ್ಸ್ III) ಮತ್ತು ಲೇಡಿ ಡಯಾನಾ 1981ರ ಜುಲೈ 29ರಲ್ಲಿ ವಿವಾಹವಾದರು. ಅವರ ಮದುವೆಯಾಗಿ ದಶಕಗಳು ಕಳೆದರೂ ಆ ಮದುವೆಯ ಅದ್ದೂರಿತನದ ಬಗ್ಗೆ ಇಂದಿಗೂ ಮಾತನಾಡಲಾಗುತ್ತದೆ. ಈ ರಾಜಮನೆತನದ ವಿವಾಹವು ಲಂಡನ್‌ನಲ್ಲಿರುವ ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ನಲ್ಲಿ ನಡೆಯಿತು. ಆಗಿನ ಕಾಲದಲ್ಲಿಯೇ ಇದಕ್ಕೆ ಸುಮಾರು 48 ಮಿಲಿಯನ್ ಡಾಲರ್ (ಸುಮಾರು 398 ಕೋಟಿ ರೂ.) ವೆಚ್ಚವಾಗಿತ್ತು. ಈ ಮದುವೆಯನ್ನು 3,500 ಜನರು ವೈಯಕ್ತಿಕವಾಗಿ ವೀಕ್ಷಿಸಿದ್ದರು. ಪ್ರಪಂಚದಾದ್ಯಂತ ಸುಮಾರು 750 ಮಿಲಿಯನ್ ಜನರು ಟಿವಿಯಲ್ಲಿ ವೀಕ್ಷಿಸಿದರು. ಮದುವೆಯಲ್ಲಿ ಡಯಾನಾ ಧರಿಸಿದ್ದ 10,000 ಮುತ್ತುಗಳು ಮತ್ತು 25 ಅಡಿ ಉದ್ದದ ಟೇಲ್ ಹೊಂದಿರುವ ಸುಂದರವಾದ ಮದುವೆಯ ಗೌನ್ ಬಗ್ಗೆ ಈಗಲೂ ಜನ ಮಾತನಾಡುತ್ತಾರೆ. ಇದು ವಿಶ್ವದ ಅತ್ಯಂತ ಸ್ಮರಣೀಯ ಮತ್ತು ದುಬಾರಿ ರಾಜಮನೆತನದ ವಿವಾಹಗಳಲ್ಲಿ ಒಂದಾಗಿದ್ದರೂ, ಈ ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ. ಈ ದಂಪತಿ 1996ರಲ್ಲಿ ವಿಚ್ಛೇದನ ಪಡೆದರು. ಅದಾದ 1 ವರ್ಷದ ನಂತರ ಡಯಾನಾ ದುರಂತ ಕಾರು ಅಪಘಾತದಲ್ಲಿ ನಿಧನರಾದರು.

ಇದನ್ನೂ ಓದಿ: ಚಳಿಗಾಲದಲ್ಲಿ ನೀವು ಮಾಡುವ ಈ ತಪ್ಪುಗಳಿಂದ ಚರ್ಮ ಒಣಗಬಹುದು ಎಚ್ಚರ!

3. ವನಿಶಾ ಮಿತ್ತಲ್ ಮತ್ತು ಅಮಿತ್ ಭಾಟಿಯಾ ಮದುವೆ:

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಲಕ್ಷ್ಮಿ ಮಿತ್ತಲ್ ಅವರ ಪುತ್ರಿ ವನಿಶಾ ಮಿತ್ತಲ್ 2004ರಲ್ಲಿ ಅಮಿತ್ ಭಾಟಿಯಾ ಅವರನ್ನು ಅದ್ದೂರಿಯಾಗಿ ವಿವಾಹವಾದರು. ಅವರ ನಿಶ್ಚಿತಾರ್ಥದ ಸಮಾರಂಭವು ಪ್ಯಾರಿಸ್‌ನ ವರ್ಸೈಲ್ಸ್ ಅರಮನೆಯಲ್ಲಿ ನಡೆಯಿತು. ಮದುವೆ ಪ್ಯಾರೀಸ್​ನ ಚಟೌ ವೆಕ್ಸ್‌ನಲ್ಲಿ ನಡೆಯಿತು. ಬಳಿಕ ಐಫಲ್ ಟವರ್‌ನಲ್ಲಿ ಪಟಾಕಿ ಪ್ರದರ್ಶನವನ್ನು ಸಹ ಮಾಡಲಾಯಿತು. ಈ ಮದುವೆಗೆ ಸುಮಾರು 60 ಮಿಲಿಯನ್ ಡಾಲರ್ (ಸುಮಾರು INR 240 ಕೋಟಿ ರೂ.) ವೆಚ್ಚವಾಗಿದ್ದರೂ, ಇದು ಹೆಚ್ಚು ಕಾಲ ಉಳಿಯಲಿಲ್ಲ. ಈ ದಂಪತಿ 2013ರಲ್ಲಿ ವಿಚ್ಛೇದನ ಪಡೆದರು.

4. ಇಶಾ ಅಂಬಾನಿ ಮತ್ತು ಆನಂದ್ ಪಿರಮಾಳ್ ಮದುವೆ:

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ 2018ರಲ್ಲಿ ಆನಂದ್ ಪಿರಮಾಳ್ ಅವರನ್ನು ವಿವಾಹವಾದರು. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಅವರ ಮದುವೆಗೆ ಅಂದಾಜು 15 ಮಿಲಿಯನ್ ಡಾಲರ್ (ಸರಿಸುಮಾರು 110 ಕೋಟಿ ರೂ.) ವೆಚ್ಚವಾಗಿದೆ. ಈ ಅದ್ದೂರಿ ಮದುವೆಯಲ್ಲಿ ಬಾಲಿವುಡ್ ಮತ್ತು ಭಾರತದ ರಾಜಕೀಯ ವಲಯದಿಂದ ಸಾಕಷ್ಟು ಜನರು ಭಾಗವಹಿಸಿದ್ದರು. 2022ರ ನವೆಂಬರ್ 19ರಂದು ಇಶಾ ಅಂಬಾನಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು.

5. ಪ್ರಿನ್ಸ್​ ವಿಲಿಯಂ ಮತ್ತು ಕೇಟ್ ಮದುವೆ:

ಇಂಗ್ಲೆಂಡ್​ನ ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್ಟನ್ ಅವರ ವಿವಾಹವು 2011ರಲ್ಲಿ ನಡೆಯಿತು. ಈ ಮದುವೆಗೆ ಸುಮಾರು 34 ಮಿಲಿಯನ್ ಡಾಲರ್ ವೆಚ್ಚವಾಗಿದೆ. ಇದು ಇಲ್ಲಿಯವರೆಗಿನ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ಈ ದಂಪತಿಗಳು 2003ರಿಂದ ಡೇಟಿಂಗ್ ನಡೆಸುತ್ತಿದ್ದರು. ಅವರ ವಿವಾಹವು 2011ರಲ್ಲಿ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ನಡೆಯಿತು. ಈ ದಂಪತಿಗಳು ಈಗ ಪ್ರಿನ್ಸ್ ಮತ್ತು ಪ್ರಿನ್ಸೆಸ್ ಆಫ್ ವೇಲ್ಸ್ ಎಂಬ ಹೆಸರನ್ನು ಹೊಂದಿದ್ದಾರೆ. ಅವರಿಬ್ಬರಿಗೂ 3 ಮಕ್ಕಳಿದ್ದಾರೆ.

6. ವೇಯ್ನ್ ರೂನೇ ಮತ್ತು ಕೊಲೀನ್ ಮ್ಯಾಕ್‌ಲೌಗ್ಲಿನ್ ಮದುವೆ:

ಮ್ಯಾಂಚೆಸ್ಟರ್ ಯುನೈಟೆಡ್‌ನ ಫುಟ್‌ಬಾಲ್ ಆಟಗಾರ ವೇಯ್ನ್ ರೂನೇ ಮತ್ತು ಕೊಲೀನ್ ಮ್ಯಾಕ್‌ಲೌಗ್ಲಿನ್ 2008ರಲ್ಲಿ ಇಟಲಿಯಲ್ಲಿ ವಿವಾಹವಾದರು. 64 ಅತಿಥಿಗಳು 5 ಖಾಸಗಿ ಜೆಟ್‌ಗಳಲ್ಲಿ ಆಗಮಿಸಿ ಈ ಅದ್ದೂರಿ ಮದುವೆಗೆ ಸಾಕ್ಷಿಯಾದರು. ಇದರಲ್ಲಿ ಐರಿಶ್ ಬಾಯ್‌ಬ್ಯಾಂಡ್, ವೆಸ್ಟ್‌ಲೈಫ್ ಸಹ ಪ್ರದರ್ಶನ ನೀಡಿದ್ದರು. ಈ ಮದುವೆಯ ವೆಚ್ಚ 8 ಮಿಲಿಯನ್ ಡಾಲರ್ (ಸುಮಾರು 66 ಕೋಟಿ ರೂ.).

ಇದನ್ನೂ ಓದಿ: ವಾಲ್‌ನಟ್​ನಿಂದ ಚರ್ಮದ ಕಾಂತಿ ಹೆಚ್ಚುತ್ತಾ?

7. ಚೆಲ್ಸಿಯಾ ಕ್ಲಿಂಟನ್ ಮತ್ತು ಮಾರ್ಕ್ ಮೆಜ್ವಿನ್ಸ್ಕಿ ಮದುವೆ:

ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಹಿಲರಿ ಕ್ಲಿಂಟನ್ ಅವರ ಪುತ್ರಿ ಚೆಲ್ಸಿಯಾ ಕ್ಲಿಂಟನ್ ಅವರು 2020ರಲ್ಲಿ ಮಾರ್ಕ್ ಮೆಜ್ವಿನ್ಸ್ಕಿ ಅವರನ್ನು ಅದ್ಧೂರಿಯಾಗಿ ವಿವಾಹವಾದರು. ಅವರ ಅದ್ದೂರಿ ವಿವಾಹ ಸಮಾರಂಭವು ಆಸ್ಟರ್ ಕೋರ್ಟ್‌ನಲ್ಲಿ ನಡೆಯಿತು. ಇದರ ವೆಚ್ಚ 5 ಮಿಲಿಯನ್ ಡಾಲರ್ (ಸುಮಾರು 40 ಕೋಟಿ ರೂ.).

8. ಲಿಜಾ ಮಿನ್ನೆಲ್ಲಿ ಮತ್ತು ಡೇವಿಡ್ ಗೆಸ್ಟ್ ಮದುವೆ:

ಖ್ಯಾತ ಗಾಯಕಿ ಲಿಜಾ ಮಿನ್ನೆಲ್ಲಿ ಮತ್ತು ಡೇವಿಡ್ ಗೆಸ್ಟ್ 2002ರಲ್ಲಿ ಅದ್ದೂರಿಯಾಗಿ ವಿವಾಹವಾದರು. ಅವರ ಮದುವೆಯ ವೆಚ್ಚ ಸರಿಸುಮಾರು 4.2 ಮಿಲಿಯನ್ ಡಾಲರ್. ಅವರ ಅತಿಥಿಗಳ ಪಟ್ಟಿಯಲ್ಲಿ ಎಲಿಜಬೆತ್ ಟೇಲರ್, ಲಿಯಾಮ್ ನೀಸನ್ ಮತ್ತು ಮಿಯಾ ಫಾರೋ ಸೇರಿದಂತೆ ಇತರರಿದ್ದರು. ಅವರ ಮದುವೆಯಲ್ಲಿ ಮೈಕೆಲ್ ಜಾಕ್ಸನ್ ಕೂಡ ಭಾಗವಹಿಸಿದ್ದರು. ಆದರೆ, ಮದುವೆಯಾದ ಒಂದೇ ವರ್ಷದಲ್ಲಿ ಈ ದಂಪತಿ ವಿಚ್ಛೇದನ ಪಡೆದರು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ