ರಾಮೇಶ್ವರಕ್ಕೆ ಪ್ರಮುಖ ಸಂಪರ್ಕ ರಸ್ತೆಯಾದ ಪಂಬನ್ ರೈಲು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಏಪ್ರಿಲ್ 6) ಉದ್ಘಾಟಿಸಿದ್ದು, ಈ ಸೇತುವೆ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ರೈಲ್ವೆ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆ ಗಳಿಸಿದೆ. ಈ ಸೇತುವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದನ್ನು 550 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಉದ್ದ 2.08 ಕಿಲೋಮೀಟರ್. ಇದು 99 ಸ್ಪ್ಯಾನ್‌ಗಳನ್ನು ಮತ್ತು 72.5 ಮೀಟರ್‌ಗಳ ವರ್ಟಿಕಲ್ ಲಿಫ್ಟ್ ಸ್ಪ್ಯಾನ್ ಅನ್ನು ಹೊಂದಿದ್ದು, 17 ಮೀಟರ್ ಎತ್ತರಕ್ಕೆ ಏರುತ್ತದೆ. ದೊಡ್ಡ ಹಡಗುಗಳು ಇದರ ಅಡಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ರೈಲುಗಳು ಸಹ ಇದರ ಮೇಲೆ ಅತಿ ವೇಗವಾಗಿ ಪ್ರಯಾಣಿಸಲಿವೆ. ಇದು ರಾಮೇಶ್ವರಂನಿಂದ ಚೆನ್ನೈ ಮತ್ತು ದೇಶದ ಇತರ ಭಾಗಗಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ.
ಪಂಬನ್ ಸೇತುವೆಯ ಕಾರಣದಿಂದಾಗಿ ಇಲ್ಲಿ ನಿಸ್ಸಂದೇಹವಾಗಿ ಪ್ರವಾಸೋದ್ಯಮ ಹೆಚ್ಚಾಗಲಿದೆ. ನೀವು ಕೂಡ ಇಲ್ಲಿಗೆ ಭೇಟಿ ನೀಡುವ ಯೋಚನೆಯಲ್ಲಿದ್ದರೆ ಇಲ್ಲಿನ ಪ್ರಮುಖ ಪ್ರವಾಸಿ ಹಾಗೂ ಆಧ್ಯಾತ್ಮಕ ತಾಣಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ರಾಮನಾಥಸ್ವಾಮಿ ದೇವಾಲಯವು ರಾಮೇಶ್ವರದ ಅತ್ಯಂತ ಪ್ರಸಿದ್ಧ ಆಕರ್ಷಣೆಯಾಗಿದೆ. ಈ ದೇವಾಲಯವು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ, ಆದ್ದರಿಂದ ಇದು ಹಿಂದೂಗಳಿಗೆ ಪ್ರಮುಖವಾದ ಯಾತ್ರಾ ಸ್ಥಳವಾಗಿದೆ. ದೇವಾಲಯದ ವಾಸ್ತುಶಿಲ್ಪವು ಅತ್ಯಂತ ಪ್ರಭಾವಶಾಲಿಯಾಗಿದೆ.
ತನ್ನ ಅದ್ಭುತ ಸೌಂದರ್ಯಕ್ಕೆ ಹೆಸರುವಾಸಿಯಾದ ಧನುಷ್ಕೋಡಿ ಒಂದು ಕಾಲದಲ್ಲಿ ಪ್ರಶಾಂತವಾದ ಕಡಲತೀರದ ಪಟ್ಟಣವಾಗಿತ್ತು. 1964 ರ ವಿನಾಶಕಾರಿ ಚಂಡಮಾರುತದ ನಂತರ, ಹಿಂದಿನ ಗದ್ದಲದ ಪಟ್ಟಣವು ಪರಿತ್ಯಕ್ತ ‘ಭೂತ ಪಟ್ಟಣ’ವಾಗಿ ಮಾರ್ಪಟ್ಟಿತು. ಧನುಷ್ಕೋಡಿಗೆ ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರವು ಸಂಧಿಸುವ ಸ್ಥಳವಾಗಿದ್ದು, ಈ ಸ್ಥಳ ನಿಮ್ಮನ್ನು ನಿಬ್ಬೆರಗಾಗಿಸುವುದಂತೂ ಖಂಡಿತಾ.
ರಾಮಸೇತು ಎಂದೂ ಕರೆಯಲ್ಪಡುವ ಆಡಮ್ ಸೇತುವೆ, ರಾಮಾಯಣ ಮಹಾಕಾವ್ಯದಲ್ಲಿ ಲಂಕಾವನ್ನು ತಲುಪಲು ಭಗವಾನ್ ರಾಮನ ಸೈನ್ಯವು ನಿರ್ಮಿಸಿದ ಸೇತುವೆ ಎಂದು ನಂಬಲಾಗಿದೆ. ಹೆಚ್ಚಿನ ಭಾಗ ಮುಳುಗಿದ್ದರೂ, ರಾಮೇಶ್ವರಂ ಮತ್ತು ಶ್ರೀಲಂಕಾ ನಡುವಿನ ಸುಣ್ಣದ ಕಲ್ಲಿನ ಸರಪಳಿಯು ಕೆಲವು ಪ್ರದೇಶಗಳಲ್ಲಿ ಗೋಚರಿಸುತ್ತದೆ.
ರಾಮೇಶ್ವರಂ ಚಾರ್ ಧಾಮಗಳಲ್ಲಿ ಒಂದಾಗಿದೆ. ಇದು ಹಿಂದೂಗಳಿಗೆ ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿದೆ. ದಂತಕಥೆಗಳ ಪ್ರಕಾರ, ಶಿವನ ಭಕ್ತನಾದ ರಾವಣನನ್ನು ಕೊಂದಿದ್ದಕ್ಕಾಗಿ ಕ್ಷಮೆ ಕೇಳಲು ಶ್ರೀರಾಮ ರಾಮೇಶ್ವರಂನಲ್ಲಿ ಶಿವನನ್ನು ಪ್ರಾರ್ಥಿಸಿದನು. ಪಟ್ಟಣದ ಇತಿಹಾಸವು ಮಹಾಕಾವ್ಯ ರಾಮಾಯಣದೊಂದಿಗೆ ಆಳವಾಗಿ ಹೆಣೆದುಕೊಂಡಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Wed, 9 April 25