Rotten Coconut Water: ಒಂದು ತಿಂಗಳು ಫ್ರಿಡ್ಜ್ ನಲ್ಲಿಟ್ಟಿದ್ದ ಎಳನೀರು ಕುಡಿದ ವ್ಯಕ್ತಿ ಸಾವು, ಹಳಸಿದ್ದನ್ನು ಕುಡಿದು ಬ್ರೈನ್ ಡೆಡ್? ವೈದ್ಯರು ಹೇಳಿದ್ದೇನು?
ಹಳಸಿದ ಎಳನೀರು ಕುಡಿದು ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಡೆನ್ಮಾರ್ಕ್ ನಲ್ಲಿ ನಡೆದಿದೆ. ಅಷ್ಟಕ್ಕೂ ಏನಾಯಿತು ಎಂಬುದಕ್ಕೆ ಈ ಸ್ಟೋರಿ ಪೂರ್ತಿಯಾಗಿ ಓದಿ.
ಸಾಮಾನ್ಯವಾಗಿ ಎಳನೀರು(Coconut Water) ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂಬುದು ಈಗಾಗಲೇ ತಿಳಿದಿರುವ ವಿಷಯ. ಆದರೆ ಎಳನೀರು ಕುಡಿದು ಪ್ರಾಣ ಕಳೆದು ಕೊಂಡಿರುವ ಘಟನೆಯನ್ನು ನೀವು ಕೇಳಿದ್ದೀರಾ? ಆದರೆ ಇಂತಹ ಘಟನೆ ಡೆನ್ಮಾರ್ಕ್ ನಲ್ಲಿ ನಡೆದಿದೆ. ಈ ಸುದ್ದಿ ಕೇಳಿದಾಕ್ಷಣ ಏನಾಪ್ಪ ಇದು ಅಂತಾ ಅನ್ಕೊತ್ತೀದ್ದೀರಾ? ಆದರೆ ಇಲ್ಲಿ ಹಳಸಿದ ಎಳನೀರು ಕುಡಿದ ಪರಿಣಾಮ ಸಾವು ಸಂಭವಿಸಿದೆ ಎಂದು ತಿಳಿದು ಬಂದಿದೆ. 69 ವರ್ಷದ ಡೆನ್ಮಾರ್ಕ್ ನಿವಾಸಿ ಎಸಿ ಎಂಬ ಹೆಸರಿನ ವ್ಯಕ್ತಿ ಹಳಸಿದ ಎಳನೀರು ಕುಡಿದ ಕೆಲವೇ ಗಂಟೆಗಳಲ್ಲಿ ಕುಸಿದು ಬಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಡೆನ್ಮಾರ್ಕ್‌ನ ಆರ್ಹಸ್ ಯೂನಿವರ್ಸಿಟಿ ಆಸ್ಪತ್ರೆಯು ಬ್ರೈನ್ ಡೆಡ್ ಎಂದು ವರದಿ ಮಾಡಿದೆ.
ಏನಿದು ಘಟನೆ?
ಎಸಿ ಎಂಬ ವ್ಯಕ್ತಿಯ ಮನೆಯಲ್ಲಿ ಒಂದು ತಿಂಗಳ ಹಿಂದೆಯೇ ತಂದಿರಿಸಿದ್ದ ಎಳನೀರು ಹಳಸಿದೆ ಎಂದು ತಿಳಿಯದೇ ಕುಡಿದ್ದಿದ್ದ. ಎಳನೀರು ಕೊಳೆತಿರುವುದನ್ನು ಅರಿಯುವಷ್ಟರಲ್ಲಿ ಸ್ವಲ್ಪ ಎಳನೀರು ಹೊಟ್ಟೆಯೊಳಗೆ ಹೋಗಿತ್ತು ಎಂದು ಎಸಿ ತನ್ನ ಹೆಂಡತಿಗೆ ತಿಳಿಸಿದ್ದರು ಎಂದು ಯುಎಸ್ ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (NCBI) ವರದಿಯಿಂದ ತಿಳಿದುಬಂದಿದೆ. ಎಳನೀರು ಕುಡಿದ ಸುಮಾರು ಮೂರು ಗಂಟೆಗಳ ನಂತರ, ಎಸಿಗೆ ವಿಚಿತ್ರ ಲಕ್ಷಣಗಳು ಕಾಣಿಸಲಾರಂಭಿಸಿದವು. ಶೀಘ್ರದಲ್ಲೇ ವಾಕರಿಕೆ ಮತ್ತು ವಾಂತಿಯು ಪ್ರಾರಂಭವಾಗಿದೆ. ಕೆಲವೇ ಕ್ಷಣದಲ್ಲಿ ಪ್ರಜ್ಞಾಹೀನನಾಗಿ ನೆಲದ ಮೇಲೆ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಿತಿ ಹದಗೆಟ್ಟಿದ್ದರಿಂದ ಎರಡು ಗಂಟೆಗಳ ನಂತರ ಅವರನ್ನು ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಲಾಯಿತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಆತನ ಬ್ರೈನ್ ಡೆಡ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಶವಪರೀಕ್ಷೆಯ ಪ್ರಕಾರ, ಮೆದುಳಿನಲ್ಲಿ ರಕ್ತಸ್ರಾವವು ಸಾವಿಗೆ ಕಾರಣವೆಂದು ಹೇಳಲಾಗಿದೆ. ಹೆಚ್ಚಿನ ವಿಶ್ಲೇಷಣೆಯು ಎಸಿ ಸೇವಿಸಿದ ಎಳನೀರಿನಲ್ಲಿ ಆರ್ಥ್ರಿನಿಯಮ್ ಸ್ಯಾಕರಿಕೋಲಾ ಎಂಬ ಶಿಲೀಂಧ್ರಗಳ ಬೆಳವಣಿಗೆಯನ್ನು ಬಹಿರಂಗಪಡಿಸಿತು.
ಇದನ್ನು ಓದಿ: ಎಳನೀರು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅತಿಯಾದರೆ ಅಷ್ಟೇ ಕೆಟ್ಟದ್ದೆಂದು ನಿಮಗೆ ಗೊತ್ತೇ?
ಟಾಕ್ಸಿನ್ 3-ನೈಟ್ರೊಪ್ರೊಪಿಯೊನಿಕ್ ಆಮ್ಲವು ಹಳಸಿದ ಆಹಾರಗಳಲ್ಲಿ ಇರುವುದರಿಂದ ಇದು ದೇಹದ ಮೇಲೆ ವಿಷಕಾರಿಯಾಗುವ ಸಾಧ್ಯತೆ ಹೆಚ್ಚಿದೆ. ಪ್ರಾರಂಭದಲ್ಲಿ ಈ ವಿಷವು ವಾಂತಿ, ಅತಿಸಾರ ಕಾರಣವಾಗಿ ಕಾಲ ನಂತರದಲ್ಲಿ ಕೋಮಾ ಮತ್ತು ಸಾವಿಗೆ ಕಾರಣವಾಗಬಹುದು. ಹೀಗಾಗಿ, ಜನರು ತಮ್ಮ ಆಹಾರದ ವಿಶೇಷವಾಗಿ ತಾಜಾ ಉತ್ಪನ್ನಗಳಾದ ಹಣ್ಣುಗಳು ಮತ್ತು ತರಕಾರಿಗಳ ಸೇವನೆಯ ಬಗ್ಗೆ ಜಾಗರೂಕರಾಗಿರುವುದು ಬಹಳ ಮುಖ್ಯ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: