Atal Bihari Vajpayee Death Anniversary : ಅಟಲ್ ಬಿಹಾರಿ ವಾಜಪೇಯಿ ಬದುಕಿಗೆ ಎಂಟ್ರಿ ಕೊಟ್ಟಿದ್ದ ಆ ಸುಂದರಿ ಯಾರು?
Atal Bihari Vajpayee: ಆಗಸ್ಟ್ 16 ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ತಿಥಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ರಾಜಕೀಯರಂಗದಲ್ಲಿ ಅಜಾತ ಶತ್ರುವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆಯನ್ನು ಎಂದಿಗೂ ಮರೆಯಲೂ ಸಾಧ್ಯವಿಲ್ಲ. ವೈಯುಕ್ತಿಕ ಬದುಕಿನಲ್ಲಿ ವಾಜಪೇಯಿಯವರಿಗೆ ಒಬ್ಬಾಕೆಯ ಪ್ರೇಮ ಮೂಡಿತ್ತು. ಆದರೆ ಕೆಲ ಕಾರಣಗಳಿಂದ ಇಬ್ಬರೂ ದೂರವಾದರು. ಹಾಗಾದ್ರೆ ಅಟಲ್ ಬಿಹಾರಿ ವಾಜಪೇಯಿಯವರ ಬದುಕಿನಲ್ಲಿ ಬಂದಿದ್ದ ಆ ಓರ್ವ ಸುಂದರಿ ಯಾರು? ಅವರಿಬ್ಬರ ಪ್ರೇಮ ಕಥೆಯೂ ಹೇಗಿತ್ತು? ಎನ್ನುವುದರ ಕುತೂಹಲಕಾರಿ ಮಾಹಿತಿಯೂ ಇಲ್ಲಿದೆ.
ಮಾಜಿ ಪ್ರಧಾನಿ ಕವಿ ಹೃದಯವುಳ್ಳ ವ್ಯಕ್ತಿ ಉತ್ತಮ ವಾಗ್ಮಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು 2018 ಆಗಸ್ಟ್ 16 ಇಹಲೋಕ ತ್ಯಜಿಸಿದರು. ನಾಳೆ ಅಟಲ್ ಬಿಹಾರಿ ವಾಜಪೇಯಿ ಅವರ 6ನೇ ವರ್ಷದ ಪುಣ್ಯ ತಿಥಿಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ. ದಿಟ್ಟ ರಾಜಕಾರಣಿಯಾಗಿ, ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಅವರು ಮದುವೆಯಾಗದೇ ಜೀವನ ಕಳೆದರು. ಆದರೆ ಅವರ ಬದುಕಿನಲ್ಲಿ ಓರ್ವ ಸುಂದರಿಯ ಪ್ರವೇಶವಾಗಿತ್ತು. ಅಟಲ್ ಬಿಹಾರಿ ವಾಜಪೇಯಿಯವರು ವೈಯುಕ್ತಿಕ ಬದುಕಿನಲ್ಲಿಯಾದ ಒಂದೇ ಒಂದು ಘಟನೆಯಿಂದ ಮತ್ತೆ ಮದುವೆಯ ಬಗ್ಗೆ ಯೋಚಿಸಲೇ ಇಲ್ಲ.
ಮದುವೆಯ ಬಗ್ಗೆ ಮಾಧ್ಯಮ ಮಿತ್ರರು ಪ್ರಶ್ನಿಸಿದರೆ ತಮಾಷೆಯಾಗಿ ಉತ್ತರಿಸುತ್ತ ನಗೆ ಚಟಾಕಿ ಹಾರಿಸುತ್ತಲೇ ಇದ್ದರು. ಆದರೆ ಶ್ರೀಮತಿ ರಾಜಕುಮಾರಿ ಕೌಲ್ ಎಂಬವರ ಜೊತೆ ಅಟಲ್ ಪ್ರೇಮ ಸಂಬಂಧ ಹೊಂದಿದ್ದರು ಎನ್ನುವ ಸುದ್ದಿಯೊಂದು ಕೇಳಿ ಬಂದಿತ್ತು. ಆದರೆ ಈ ಕುರಿತಾದ ಸಂದೇಹಗಳಿಗೆ ಇಬ್ಬರೂ ಕೂಡ ಸ್ಪಷ್ಟನೆ ನೀಡಿರಲಿಲ್ಲ. ಹೌದು, ಸರಳ ವ್ಯಕ್ತಿತ್ವದ ಸೌಮ್ಯ ವ್ಯಕ್ತಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಕಾಲೇಜು ದಿನಗಳಲ್ಲೇ ರಾಜಕುಮಾರಿ ಕೌಲ್ ಮೇಲೆ ಪ್ರೀತಿಯಾಗಿತ್ತು.
‘ಅಟಲ್ ಬಿಹಾರಿ ವಾಜಪೇಯಿ: ಎ ಮ್ಯಾನ್ ಆಫ್ ಆಲ್ ಸೀಸನ್ಸ್’ ಪುಸ್ತಕದಲ್ಲಿ ರಾಜಕುಮಾರಿ ಕೌಲ್ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ತಾವು ಬರೆದಿದ್ದ ಪ್ರೇಮ ಪತ್ರವನ್ನು ಲೈಬ್ರರಿಯ ಪುಸ್ತಕದಲ್ಲಿಟ್ಟು ಆಕೆಯ ಕೈ ಸೇರುವಂತೆ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಕೌಲ್ ಮರು ಪ್ರೇಮ ಪತ್ರವನ್ನು ಬರೆದಿದ್ದರು. ಆದರೆ ದುರಾದೃಷ್ಟ ಎನ್ನುವಂತೆ ಆ ಪ್ರೇಮಪತ್ರವು ಬೇರೊಂದು ಪುಸ್ತಕದಲ್ಲಿದ್ದ ಕಾರಣ, ವಾಜಪೇಯಿಯವರ ಕೈ ಸೇರಲೇ ಇಲ್ಲ. ಹೀಗಾಗಿ ಅವಳಿಗೆ ಆಸಕ್ತಿಯಿಲ್ಲ ಎಂದುಕೊಂಡು ಮುಂದೆ ಸಾಗಿದ್ದರು ಅಟಲ್.
ಆದರೆ ರಾಜಕುಮಾರಿಯು ಅಟಲ್ ಅವರನ್ನೇ ಮದುವೆಯಾಗಲು ಬಯಸಿದ್ದರು. ಇಬ್ಬರೂ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದರಾಗಿದ್ದರೂ ಕೂಡ ಇಬ್ಬರ ಕೌಟುಂಬಿಕ ಹಿನ್ನಲೆಯೂ ಬೇರೆಯಾಗಿದ್ದ ಕಾರಣ ರಾಜಕುಮಾರಿ ಕೌಲ್ ಮನೆಯವರಿಂದ ಮದುವೆಗೆ ವಿರೋಧವಿತ್ತು. ಕೊನೆಗೆ ಕಾಲೇಜು ಶಿಕ್ಷಣ ಮುಗಿದ ಬಳಿಕ ದಿಲ್ಲಿ ವಿವಿಯಲ್ಲಿ ಪ್ರೊಫೆಸರ್ ಆಗಿದ್ದ ಬಿ.ಎನ್.ಕೌಲ್ ಎಂಬವರ ಜೊತೆ ರಾಜಕುಮಾರಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಎತ್ತ ಅಟಲ್ ಬಿಹಾರಿಯವರು ಮದುವೆಯಾಗದೇ ಉಳಿದರು. ರಾಜಕುಮಾರಿಯ ಮೂಲಕ ಬಿ.ಎನ್.ಕೌಲ್ ಅವರಿಗೆ ಅಟಲ್ ಪರಿಚಯವಾಗಿ ಸ್ನೇಹವಾಯಿತು. ಹೀಗಿರುವಾಗ ಪ್ರೊ. ಕೌಲ್ ದುರಂತವೊಂದರಲ್ಲಿ ಮೃತಪಟ್ಟಾಗ ಧೈರ್ಯವಾಗಿ ಅಟಲ್ ನಿಂತುಕೊಂಡರು. ಕೊನೆಗೆ ನಮಿತಾರನ್ನು ದತ್ತುಪುತ್ರಿಯನ್ನಾಗಿ ಸ್ವೀಕರಿಸಿದರು.
ಅಂದಿನಿಂದ ರಾಜಕುಮಾರಿ ಹಾಗೂ ಅವರ ಕುಟುಂಬದವರು ಅಟಲ್‌ರೊಂದಿಗೇ ವಾಸಿಸುತ್ತಿದ್ದರು. ಶ್ರೀಮತಿ ರಾಜಕುಮಾರಿ ಕೌಲ್ ಎಂಬವರ ಜೊತೆ ಅಟಲ್ ಪ್ರೇಮ ಸಂಬಂಧ ಹೊಂದಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಅದೆಷ್ಟೋ ಸಲ ಮಾಧ್ಯಮದವರು ವೈವಾಹಿಕ ಜೀವನಕ್ಕೆ ಸಂಬಂಧ ಪಟ್ಟ ಪ್ರಶ್ನೆಗಳನ್ನು ಕೇಳಿದಾಗಲೂ ತಮಾಷೆಯಾಗಿ ಉತ್ತರಿಸುತ್ತಿದ್ದರು. ಒಂದು ಸಲ ಮದುವೆಗೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಆಗ ನಾನು ಅವಿವಾಹಿತ ಆದರೆ ಬ್ರಹ್ಮಚಾರಿಯಲ್ಲ ಎಂದಿದ್ದರು. ಮತ್ತೊಮ್ಮೆ ಪಾರ್ಟಿಯೊಂದರಲ್ಲಿ ಮಹಿಳಾ ಪತ್ರಕರ್ತೆಯೊಬ್ಬರು ವಾಜಪೇಯಿ ಜಿ ನೀವು ಯಾಕೆ ಒಂಟಿಯಾಗಿದ್ದೀರಿ ಎಂದು ಕೇಳಿದ್ದಕ್ಕೆ, ಆದರ್ಶ ಪತ್ನಿಯ ಹುಡುಕಾಟದಲ್ಲಿದ್ದೇನೆ ಎಂದಿದ್ದರು.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲೇ ಮಾಡಿ ರುಚಿ ರುಚಿಯಾದ ಹಾಲು ಹೋಳಿಗೆ
1978ರಲ್ಲಿ ವಾಜಪೇಯಿ ವಿದೇಶಾಂಗ ಸಚಿವರಾಗಿದ್ದರು. ಚೀನಾ ಮತ್ತು ಪಾಕಿಸ್ತಾನದಿಂದ ವಾಪಸಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ವೇಳೆ ರಾಜಕುಮಾರಿ ಕುರಿತು ಪ್ರಶ್ನೆಯೊಂದು ಕೇಳಲಾಗಿತ್ತು. ವಾಜಪೇಯಿ ಜೀ, ಪಾಕಿಸ್ತಾನ, ಕಾಶ್ಮೀರ, ಚೀನಾದ ಮಾತು ಬಿಟ್ಟು ಮಿಸೆಸ್ ಕೌಲ್ ವಿಷಯ ಏನಾಗಿದೆ ಹೇಳಿ ಎಂದು ಕೇಳುತ್ತಿದ್ದಂತೆ, ಸ್ವಲ್ಪ ಸಮಯ ಮೌನವಾಗಿದ್ದ ಅಟಲ್ ಬಿಹಾರಿ, ‘ಇದು ಕಾಶ್ಮೀರದಂತಹ ಸಮಸ್ಯೆ’ ಎಂದು ನಗುತ್ತಲೇ ಉತ್ತರ ನೀಡಿದ್ದರು.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Thu, 15 August 24