Varamahalakshmi Vrata 2024 : ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲೇ ಮಾಡಿ ರುಚಿ ರುಚಿಯಾದ ಹಾಲು ಹೋಳಿಗೆ
ಶ್ರಾವಣ ಮಾಸದಲ್ಲಿ ಹಬ್ಬಗಳು ಬಂತೆಂದರೆ ಸಾಕು, ಮನೆಯಲ್ಲಿ ಹಬ್ಬದ ಅಡುಗೆಗಳು ರೆಡಿಯಾಗುತ್ತದೆ. ಹಬ್ಬ ಹರಿ ದಿನಗಳಲ್ಲಿ ವೈವಿದ್ಯಮಯ ಸಿಹಿ ತಿನಿಸುಗಳನ್ನು ಮಾಡಿದರೆ ಕುಟುಂಬದ ಸದಸ್ಯರೊಂದಿಗೆ ಸೇವಿಸುತ್ತಾರೆ. ಈ ವರ ಮಹಾಲಕ್ಷ್ಮಿ ಹಬ್ಬಕ್ಕೆ ಸಿಹಿತಿಂಡಿ ಮಾಡಿ ದೇವರಿಗೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ವರವನ್ನು ನೀಡುವ ಲಕ್ಷ್ಮಿ ದೇವಿಗೆ ನೈವೇದ್ಯವಿಡಲು ಕೆಲವೇ ಕೆಲವು ನಿಮಿಷದಲ್ಲಿ ಹಾಲು ಹೋಳಿಗೆ ಮಾಡಬಹುದು. ಹಾಗಾದ್ರೆ ರುಚಿಕರವಾದ ಹಾಲು ಹೋಳಿಗೆ ರೆಸಿಪಿಯ ಬಗೆಗಿನ ಮಾಹಿತಿಯೂ ಇಲ್ಲಿದೆ.
ಹಬ್ಬವೆಂದ ಮೇಲೆ ಪೂಜೆ, ಅಲಂಕಾರ ಮಾತ್ರವಲ್ಲದೆ ಹಬ್ಬದ ಅಡುಗೆಯೂ ವಿಶೇಷವಾಗಿರುತ್ತದೆ. ವರಮಹಾಲಕ್ಷ್ಮಿ ವ್ರತದಂದು ಮೊದಲು ಲಕ್ಷ್ಮಿಗೆ ನೈವೇದ್ಯ ಇಡಬೇಕಾಗುತ್ತದೆ. ಅದಲ್ಲದೇ, ಈ ಹಬ್ಬಕ್ಕೆ ಅರಿಶಿನ ಕುಂಕುಮಕ್ಕಾಗಿ ಮನೆಗೆ ಬರುವವರಿಗೆ ವಿವಿಧ ಅಡುಗೆ ತಯಾರಿಸಿ ಬಡಿಸುವ ಖುಷಿಯೇ ಬೇರೆಯಾಗಿರುತ್ತದೆ. ದೇವಿಗೆ ನೈವೇದ್ಯವಾಗಿ ಇಡಲು ಮನೆಯಲ್ಲಿಯೇ ಫಟಾಫಟ್ ಎಂದು ಹಾಲು ಹೋಳಿಗೆ ಸಿಹಿ ತಿನಿಸನ್ನು ಮಾಡಬಹುದು.
ಹಾಲು ಹೋಳಿಗೆ ಬೇಕಾಗುವ ಪದಾರ್ಥಗಳು
* ಒಂದು ಕಪ್ ಗೋಧಿ ಹಿಟ್ಟು
* ಒಂದು ಕಪ್ ಮೈದಾ
* ಒಂದು ಕಪ್ ಚಿರೋಟಿ ರವೆ
* ರುಚಿಗೆ ತಕ್ಕಷ್ಟು ಉಪ್ಪು
* ಎರಡು ಚಮಚ ಎಣ್ಣೆ
* ಬೆಲ್ಲ ಒಂದು ಕಪ್
* ಒಂದು ಕಪ್ ಕಾಯಿತುರಿ
* ಒಂದು ಚಮಚ ಹುರಿದ ಗಸಗಸೆ
* ಒಂದು ಚಮಚ ಹುರಿಗಡಲೆ
* ಏಲಕ್ಕಿ ಪುಡಿ
* ಒಣದ್ರಾಕ್ಷಿ ಮತ್ತು ಗೋಡಂಬಿ
ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯ ಅಲಂಕಾರ ಹೇಗೆ ಮಾಡಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್
ಹಾಲು ಹೋಳಿಗೆ ಮಾಡುವ ವಿಧಾನ
* ಮೊದಲಿಗೆ ಒಂದು ಕಪ್ ಗೋದಿ ಹಿಟ್ಟು, ಒಂದು ಕಪ್ ಮೈದಾ , ಒಂದು ಕಪ್ ಚಿರೋಟಿ ರವೆ , ಎರಡು ಚಮಚ ಎಣ್ಣೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರು ಸೇರಿಸಿ ಗಟ್ಟಿಯಾಗಿ ಕಲೆಸಿಟ್ಟು ಅರ್ಧ ಗಂಟೆ ನೆನೆಯಲು ಬಿಡಬೇಕು.
* ಆ ನಂತರದಲ್ಲಿ ಬೆಲ್ಲ , ಕಾಯಿತುರಿ, ಹುರಿದ ಗಸಗಸೆ, ಹುರಿಗಡಲೆ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಸಣ್ಣಗೆ ರುಬ್ಬಿಟ್ಟುಕೊಳ್ಳಿ.
* ಒಂದು ಪಾತ್ರೆಗೆ ನೀರು ಹಾಕಿ ರುಬ್ಬಿಟ್ಟ ಈ ಮಿಶ್ರಣವನ್ನು ಸೇರಿಸಿ ಪಾಯಸದ ಹದ ಬರುವಂತೆ ಕುದಿಸಿಕೊಳ್ಳಿ. * ಒಣದ್ರಾಕ್ಷಿ ಮತ್ತು ಗೋಡಂಬಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ.
* ಕಲೆಸಿಟ್ಟುಕೊಂಡ ಹಿಟ್ಟನ್ನು ಪೂರಿಯಂತೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಗರಿ ಗರಿಯಾಗಿ ಕರಿದು ಕುದಿಸಿಟ್ಟುಕೊಂಡ ಮಿಶ್ರಣಕ್ಕೆ ಹಾಕಿ ತಕ್ಷಣ ತೆಗೆಯಿರಿ.
* ಅದರ ಮೇಲೆ ಹುರಿದಿಟ್ಟ ಗೋಡಂಬಿ ಹಾಗೂ ಒಣದ್ರಾಕ್ಷಿ ಯನ್ನು ಹಾಕಿದರೆ ಹಾಲು ಹೋಳಿಗೆ ಸವಿಯಲು ಸಿದ್ಧ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ