Monsoon travel tips: ಮಳೆಗಾಲದಲ್ಲಿ ಈ ಸ್ಥಳಗಳಿಗೆ ಪ್ರವಾಸ ಹೋಗೋದನ್ನು ಸಾಧ್ಯವಾದಷ್ಟು ತಪ್ಪಿಸಿ
ಮಳೆಗಾಲದಲ್ಲಿ ಪ್ರಕೃತಿಯ ಸೌಂದರ್ಯ ದುಪ್ಪಟ್ಟಾಗುತ್ತದೆ. ಅದಕ್ಕಾಗಿಯೇ ಈ ಸಮಯದಲ್ಲಿ ಹಚ್ಚ ಹಸಿರಿನ ತಾಣಗಳಿಗೆ ಪ್ರವಾಸ ಹೋಗಲು ಬಹಳ ಜನ ಇಷ್ಟಪಡುತ್ತಾರೆ. ಆದರೆ ಈ ಕೆಲವೊಂದು ಸ್ಥಳಗಳಿಗೆ ಪ್ರವಾಸ ಹೋಗುವ ಯೋಜನೆ ಮಾಡಬಾರದಂತೆ. ಹೌದು ಮಳೆಗಾಲದಲ್ಲಿ ನೀರಿನ ಅಬ್ಬರ, ಭೂ ಕುಸಿತ ಉಂಟಾಗುವ ಕಾರಣ ಈ ಕೆಲವೊಂದು ಸ್ಥಳಗಳಿಗೆ ಈ ಋತುವಿನಲ್ಲಿ ಪ್ರವಾಸ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಆ ಪ್ರದೇಶಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಮಳೆಗಾಲದಲ್ಲಿ ಪ್ರತಿಯೊಂದು ಸುಂದರ ತಾಣವೂ ಸುರಕ್ಷಿತವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ
- ಮಳೆಗಾಲದಲ್ಲಿ ಪ್ರವಾಸ ಹೋಗಬೇಕಾದ ತಾಣವನ್ನು ಬುದ್ಧಿವಂತಿಕೆಯಿಂದ ಆರಿಸಬೇಕು
- ಪ್ರಾಕೃತಿಕ ವಿಕೋಪಗಳು ಸಂಭವಿಸುವಂತಹ ತಾಣಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಕು
ಮಳೆಗಾಲದ (monsoon) ಆಗಮನದೊಂದಿಗೆ ಪ್ರಕೃತಿಯ ಸೌಂದರ್ಯವೂ ಹೆಚ್ಚುತ್ತದೆ. ನದಿ, ಹೊಳೆ, ಜಲಪಾತಗಳು ತುಂಬಿ ಹರಿಯುತ್ತವೆ, ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಪ್ರಕೃತಿಯ ಸೌಂದರ್ಯ ರಾಶಿಯಯನ್ನು ಸವಿಯಲೆಂದೇ ನಮ್ಮ ಜನ ಈ ಸಮಯಲ್ಲಿ ಟ್ರಿಪ್ ಹೋಗಲು ಇಷ್ಟಪಡುತ್ತಾರೆ. ಮಡಿಕೇರಿ, ಚಿಕ್ಕಮಗಳೂರು, ಕೇರಳ ಸೇರಿದಂತೆ ಗಿರಿಧಾಮ, ಜಲಪಾತ ಇತ್ಯಾದಿ ಪ್ರವಾಸಿ ತಾಣಕ್ಕೆ ಟ್ರಿಪ್ ಪ್ಲಾನ್ ಮಾಡುತ್ತಾರೆ. ಮಾನ್ಸೂನ್ ಟ್ರಿಪ್ ಮನಸ್ಸಿಗೆ ಮುದ ನೀಡುವುದೇನೋ ನಿಜ ಆದರೆ ಪ್ರವಾಹ ಭೀತಿ, ಭೂಕುಸಿತ ಇತ್ಯಾದಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಕಾರಣ ಈ ಕೆಲವೊಂದು ಸ್ಥಳಗಳಿಗೆ ಮಳೆಗಾಲದಲ್ಲಿ ಪ್ರವಾಸ ಹೋಗಬಾರದು. ಈ ಬಾರಿ ಮಳೆ ಕಡಿಮೆ ಇದ್ದರೂ ಸಹ ಇಲ್ಲಿಗೆಲ್ಲಾ ಪ್ರವಾಸ ಹೋಗಬೇಡಿ. ಆ ಪ್ರವಾಸಿ ಸ್ಥಳಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಳೆಗಾಲದಲ್ಲಿ ಯಾವ ಸ್ಥಳಗಳಿಗೆ ಪ್ರವಾಸ ಹೋಗೋದನ್ನು ತಪ್ಪಿಸಬೇಕು?
ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶ ಗಿರಿಧಾಮಗಳಿಗೆ ಹೆಸರುವಾಗಿಯಾದ ಸ್ಥಳವಾಗಿದೆ. ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ದುಪ್ಪಟ್ಟಾಗುತ್ತದೆ. ಈ ಪ್ರಕೃತಿ ಸೌಂದರ್ಯವನ್ನು ಸವಿಯಲೆಂದೇ ಪ್ರಕೃತಿ ಪ್ರಿಯರು ದೂರದೂರಗಳಿಂದ ಇಲ್ಲಿ ಪ್ರವಾಸ ಹೋಗುತ್ತಾರೆ. ಆದರೆ ಮಳೆಗಾಲದಲ್ಲಿ ಇಲ್ಲಿಗೆ ಪ್ರವಾಸ ಯೋಜಿಸುವುದು ಸೂಕ್ತವಲ್ಲ. ಏಕೆಂದರೆ ಹಿಮಾಚಲವು ಗುಡ್ಡಗಾಡು ಪ್ರದೇಶವಾಗಿದ್ದು, ಮಳೆಯ ಸಮಯದಲ್ಲಿ ಬಂಡೆಗಳು ಬೀಳುವ, ಗುಡ್ಡಗಳು ಕುಸಿಯುವ ಅಪಾಯವಿದೆ. ಆದ್ದರಿಂದ, ನೀವು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದರೆ, ಮಳೆಗಾಲದ ಮೊದಲು ಅಥವಾ ನಂತರ ಭೇಟಿ ನೀಡಲು ಯೋಜಿಸಿ.
ಉತ್ತರಾಖಂಡ: ಹಿಮಾಚಲ ಪ್ರದೇಶದಂತೆಯೇ, ಉತ್ತರಾಖಂಡವೂ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಇಲ್ಲಿಗೂ ಮಳೆಗಾಲದಲ್ಲಿ ಪ್ರವಾಸ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಇಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಜಾರುವುದಲ್ಲದೆ, ಪರ್ವತ ಪ್ರದೇಶವಾಗಿರುವುದರಿಂದ ಇಲ್ಲಿ ಭೂ ಕುಸಿತದ ಅಪಾಯವೂ ಹೆಚ್ಚಿರುತ್ತದೆ. ಹಾಗಾಗಿ ಇಲ್ಲಿಗೆ ಮಾನ್ಸೂನ್ ಟ್ರಿಪ್ ಯೋಜಿಸಬಾರದು.
ಇದನ್ನೂ ಓದಿ: ಮಳೆಗಾಲದಲ್ಲಿ ಪ್ರವಾಸ ಹೋಗುವಾಗ ಅನುಸರಿಸಲೇಬೇಕಾದ ಸುರಕ್ಷತಾ ಕ್ರಮಗಳಿವು
ಋಷಿಕೇಶ: ಮಳೆಗಾಲದಲ್ಲಿ ಋಷಿಕೇಶಕ್ಕೆ ಭೇಟಿ ನೀಡುವುದನ್ನು ತಪ್ಪಿಸಬೇಕು. ಮಳೆಗಾಲದಲ್ಲಿ ಗಂಗಾ ನದಿಯ ನೀರಿನ ಮಟ್ಟ ಹಠಾತ್ತನೆ ಏರುತ್ತದೆ, ಕೆಲವೊಮ್ಮೆ ಪ್ರವಾಹದಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ಈ ಜಾಗಕ್ಕೆ ಮಳೆಗಾಲದಲ್ಲಿ ಪ್ರವಾಸ ಯೋಜಿಸಬೇಡಿ.
ಕೇರಳ: ದೇವರ ನಾಡು ಕೇರಳ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಜಾಗ. ಅದರಲ್ಲೂ ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ದುಪ್ಪಟ್ಟಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಜನ ವಯನಾಡು, ಮುನ್ನಾರ್‌ಗೆ ಪ್ರವಾಸ ಹೋಗಲು ಯೋಜಿಸುತ್ತಾರೆ. ಆದರೆ ಈ ಪ್ರದೇಶಗಳಲ್ಲಿ ಭೂ ಕುಸಿತಗಳು ಸಂಭವಿಸುವ ಕಾರಣ ಮಳೆಗಾಲದಲ್ಲಿ ಇಲ್ಲಿಗೆ ಪ್ರವಾಸ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ.
ಗಿರಿಧಾಮಗಳು ಬೆಟ್ಟ ಪ್ರದೇಶಗಳು ಮಾತ್ರವಲ್ಲ, ಕರಾವಳಿ ಪ್ರದೇಶ, ಅಪಾಯಕಾರಿ ನದಿ, ಜಲಪಾತಗಳಿರುವ ಸ್ಥಳಗಳಿಗೂ ಭೇಟಿ ನೀಡುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Sat, 11 July 26




