Protein: ಬೆಳಗಿನ ಉಪಾಹಾರವೋ, ರಾತ್ರಿ ಊಟವೋ? ಪ್ರೋಟೀನ್ ಸೇವಿಸಲು ಯಾವ ಸಮಯ ಉತ್ತಮ?

ಪ್ರೋಟೀನ್ ದೇಹದ ಆರೋಗ್ಯ ಮತ್ತು ಸ್ನಾಯುಗಳ ಬೆಳವಣಿಗೆಗೆ ಅತ್ಯಗತ್ಯ. ಆದರೆ ಇದನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸುವುದು ಉತ್ತಮವೇ ಅಥವಾ ರಾತ್ರಿ ಊಟದಲ್ಲಿ ಸೇವಿಸಬೇಕೇ? ದಿನದ ಯಾವ ಸಮಯದಲ್ಲಿ ಪ್ರೋಟೀನ್ ಸೇವಿಸಿದರೆ ಹೆಚ್ಚು ಪ್ರಯೋಜನ ಸಿಗುತ್ತದೆ ಮತ್ತು ಅದನ್ನು ಊಟಗಳಲ್ಲಿ ಹೇಗೆ ಹಂಚಿಕೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

Protein: ಬೆಳಗಿನ ಉಪಾಹಾರವೋ, ರಾತ್ರಿ ಊಟವೋ? ಪ್ರೋಟೀನ್ ಸೇವಿಸಲು ಯಾವ ಸಮಯ ಉತ್ತಮ?
Protein
Edited By:

Updated on: Aug 29, 2026 | 1:14 PM

ಮುಖ್ಯಾಂಶಗಳು

  • ಪ್ರೋಟೀನ್ ಸೇವಿಸಲು ಅತ್ಯುತ್ತಮ ಸಮಯ ಯಾವುದು?
  • ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಏಕೆ ಮುಖ್ಯ?
  • ದಿನದ ಊಟಗಳಲ್ಲಿ ಪ್ರೋಟೀನ್ ಅನ್ನು ಹೇಗೆ ಹಂಚಿಕೊಳ್ಳಬೇಕು?

ಆರೋಗ್ಯಕರ ದೇಹಕ್ಕೆ ಪ್ರೋಟೀನ್ (Protein) ಅತ್ಯಗತ್ಯ. ಸ್ನಾಯುಗಳ ಬೆಳವಣಿಗೆ, ದೇಹದ ಶಕ್ತಿ ಹಾಗೂ ಸ್ನಾಯುಗಳ ನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಪ್ರೋಟೀನ್ ಇರುವ ಆಹಾರವನ್ನು ಯಾವ ಸಮಯದಲ್ಲಿ ಸೇವಿಸಬೇಕು? ಬೆಳಗಿನ ಉಪಾಹಾರದಲ್ಲೇ ಸೇವಿಸುವುದು ಉತ್ತಮವೇ ಅಥವಾ ರಾತ್ರಿ ಊಟದಲ್ಲಿ ಸೇವಿಸಿದರೆ ಸಾಕೇ ಎಂಬ ಪ್ರಶ್ನೆ ಹಲವರಲ್ಲಿದೆ.

ತಜ್ಞರ ಪ್ರಕಾರ, ಪ್ರೋಟೀನ್ ಸೇವಿಸಲು ಬೆಳಗ್ಗೆ ಅಥವಾ ರಾತ್ರಿ ಎಂಬ ಒಂದೇ ಒಂದು ‘ಅತ್ಯುತ್ತಮ ಸಮಯ’ ಎಂಬುವುದು ಇಲ್ಲ. ಆದರೆ ದಿನದ ಅಗತ್ಯವಿರುವ ಪ್ರೋಟೀನ್ ಅನ್ನು ಒಂದೇ ಹೊತ್ತಿನ ಊಟದಲ್ಲಿ ಸೇವಿಸುವ ಬದಲು ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ಹಂಚಿಕೊಂಡು ಸೇವಿಸುವುದು ಉತ್ತಮ ವಿಧಾನವಾಗಿದೆ.

ವಿಶೇಷವಾಗಿ ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಇರುವ ಆಹಾರವನ್ನು ಸೇರಿಸಿಕೊಳ್ಳುವುದರಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಪ್ರೋಟೀನ್ ಜೀರ್ಣವಾಗಲು ಕಾರ್ಬೋಹೈಡ್ರೇಟ್‌ಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಪದೇಪದೇ ಹಸಿವಾಗುವುದು ಮತ್ತು ಅನಾರೋಗ್ಯಕರ ಆಹಾರಕ್ಕಾಗಿ ಆಸೆಪಡುವುದನ್ನು ಕಡಿಮೆ ಮಾಡಲು ಸಹಾಯವಾಗಬಹುದು.

ಬೆಳಗ್ಗೆ ಕೇವಲ ಚಹಾ ಮತ್ತು ಬ್ರೆಡ್ ಸೇವಿಸುವ ಅಭ್ಯಾಸವಿದ್ದರೆ, ಸ್ವಲ್ಪ ಸಮಯದಲ್ಲೇ ಮತ್ತೆ ಹಸಿವಾಗುವ ಸಾಧ್ಯತೆ ಇದೆ. ಇದರ ಬದಲು ಮೊಟ್ಟೆ, ಮೊಸರು, ಪನ್ನೀರ್, ಬೇಳೆ, ಮೊಳಕೆ ಕಾಳುಗಳಂತಹ ಪ್ರೋಟೀನ್ ಸಮೃದ್ಧ ಆಹಾರವನ್ನು ಉಪಾಹಾರದಲ್ಲಿ ಸೇರಿಸಿಕೊಳ್ಳಬಹುದು. ಇದರಿಂದ ದಿನದ ಆರಂಭದಲ್ಲೇ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುವುದರ ಜೊತೆಗೆ ಹಸಿವನ್ನು ನಿಯಂತ್ರಿಸಲು ಸಹ ಸಹಾಯವಾಗುತ್ತದೆ.

ಹಿರಿಯರು, ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವವರು ಹಾಗೂ ಸ್ನಾಯುಗಳನ್ನು ಕಾಪಾಡಿಕೊಳ್ಳಲು ಬಯಸುವವರಿಗೆ ಪ್ರೋಟೀನ್ ಸಮೃದ್ಧ ಉಪಾಹಾರ ಹೆಚ್ಚು ಪ್ರಯೋಜನಕಾರಿಯಾಗಬಹುದು. ದಿನದ ಆರಂಭದಲ್ಲೇ ಸಾಕಷ್ಟು ಪ್ರೋಟೀನ್ ದೊರೆತರೆ ಸ್ನಾಯುಗಳ ನಿರ್ವಹಣೆಗೆ ಸಹಕಾರಿಯಾಗುತ್ತದೆ.

Popcorn Benefits: ಪಾಪ್‌ಕಾರ್ನ್ ಕೇವಲ ಜಂಕ್ ಫುಡ್ ಅಲ್ಲ; ಆರೋಗ್ಯಕ್ಕೂ ಪ್ರಯೋಜನಕಾರಿ

ಹಾಗಂತ ರಾತ್ರಿ ಊಟದಲ್ಲಿ ಪ್ರೋಟೀನ್ ಸೇವಿಸುವುದು ವ್ಯರ್ಥ ಎಂದಲ್ಲ. ದೇಹವು ಒಂದೇ ಊಟದಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅನ್ನು ಜೀರ್ಣಿಸಿಕೊಳ್ಳಬಲ್ಲದು. ಆದರೆ ಸ್ನಾಯುಗಳ ಬೆಳವಣಿಗೆ ಮತ್ತು ನಿರ್ವಹಣೆಯ ದೃಷ್ಟಿಯಿಂದ ದಿನದ ಮೂರು ಪ್ರಮುಖ ಊಟಗಳಲ್ಲೂ ಪ್ರೋಟೀನ್ ಅನ್ನು ಹಂಚಿಕೊಂಡು ಸೇವಿಸುವುದು ಹೆಚ್ಚು ಸಮತೋಲಿತ ವಿಧಾನ ಎಂದು ತಜ್ಞರು ಸಲಹೆ ನೀಡುತ್ತಾರೆ.

ಹೀಗಾಗಿ, ದಿನದ ಬಹುತೇಕ ಪ್ರೋಟೀನ್ ಅನ್ನು ರಾತ್ರಿ ಊಟಕ್ಕೇ ಸೀಮಿತಗೊಳಿಸುವ ಬದಲು, ಬೆಳಗಿನ ಉಪಾಹಾರದಲ್ಲೂ ಪ್ರೋಟೀನ್ ಸೇರಿಸಿಕೊಳ್ಳುವುದು ಉತ್ತಮ. ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟಗಳಲ್ಲಿ ಸಮರ್ಪಕ ಪ್ರಮಾಣದಲ್ಲಿ ಪ್ರೋಟೀನ್ ಇರುವ ಆಹಾರ ಸೇವಿಸುವ ಮೂಲಕ ದೇಹದ ಒಟ್ಟಾರೆ ಪ್ರೋಟೀನ್ ಅಗತ್ಯವನ್ನು ಪೂರೈಸಬಹುದು.

ಆದರೆ ಪ್ರತಿಯೊಬ್ಬರ ಪ್ರೋಟೀನ್ ಅಗತ್ಯವೂ ಒಂದೇ ರೀತಿಯಾಗಿರುವುದಿಲ್ಲ. ಆರೋಗ್ಯ ಸಮಸ್ಯೆ ಅಥವಾ ವಿಶೇಷ ವೈದ್ಯಕೀಯ ಪರಿಸ್ಥಿತಿ ಇರುವವರು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯುವುದು ಉತ್ತಮ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us