
ಕೆಲವೊಂದು ಸಂದರ್ಭ ಸನ್ನಿವೇಶಗಳಲ್ಲಿ ಬಹುತೇಕ ಹೆಚ್ಚಿನವರು ನಾಚಿಕೊಳ್ಳುತ್ತಾರೆ. ಉದಾಹರಣೆಗೆ ಕೆಲವರು ಕೆಲಸದ ವಿಚಾರವಾಗಿ, ಊಟದ ವಿಚಾರವಾಗಿ ಬಹಳಷ್ಟು ಸಂಕೋಚವನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಈ ಒಂದಷ್ಟು ಸಂದರ್ಭಗಳಲ್ಲಿ ನೀವೇನಾದರೂ ನಾಚಿಕೆಯನ್ನು ವ್ಯಕ್ತಪಡಿಸಿದರೆ ಎಲ್ಲವೂ ವ್ಯರ್ಥವಾಗುತ್ತದೆ ಎಂದು ಆಚಾರ್ಯ ಚಾಣಕ್ಯರು (Acharya Chanakya) ಹೇಳುತ್ತಾರೆ. ಇವರು ಯಶಸ್ವಿ, ಸಂತೋಷ ಮತ್ತು ಸಮೃದ್ಧ ಜೀವನ ನಡೆಸಲು ಏನು ಮಾಡಬೇಕು ಎಂಬ ಅನೇಕ ವಿಷಯಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ ಅಲ್ವಾ. ಅದೇ ರೀತಿ ಚಾಣಕ್ಯರು ಹೆಣ್ಣಾಗಲಿ ಅಥವಾ ಗಂಡಾಗಲಿ ಈ ನಾಲ್ಕು ಕೆಲಸಗಳನ್ನು ಮಾಡುವಾಗ ನಾಚಿಕೆ, ಸಂಕೋಚವನ್ನು ಬದಿಗಿಡಬೇಕು ಎಂದಿದ್ದಾರೆ. ಹಾಗಿದ್ರೆ ಆ ನಾಲ್ಕು ವಿಚಾರಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಸಂಪಾದನೆ: ಜೀವನ ನಡೆಸಲು ಹಣ ಎನ್ನುವುದು ಬೇಕೇಬೇಕು. ಹಾಗಾಗಿ ಹಣ ಸಂಪಾದನೆಯ ವಿಚಾರದಲ್ಲಿ ಯಾವುದೇ ನಾಚಿಕೆ, ಸಂಕೋಚ ಪಡಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಣ ಸಂಪಾದಿಸಲು ಕೆಲಸ ಮಾಡುವಾಗ ಯಾರೂ ನಾಚಿಕೆಪಡಬಾರದು. ಏಕೆಂದರೆ ಒಬ್ಬ ವ್ಯಕ್ತಿಯು ಕೆಲಸ ಮಾಡುವಾಗ ನಾಚಿಕೆ ಪಟ್ಟರೆ ಆತ ಒಂದು ರೂಪಾಯಿಯನ್ನು ಸಹ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಷ್ಟವೇ ಹೆಚ್ಚು. ಆದರೆ ಒಂದು ನೆನಪಿಡಿ ಯಾವುದೇ ಕಾರಣಕ್ಕೂ ತಪ್ಪು ದಾರಿಯ ಮೂಲಕ ಹಣ ಸಂಪಾದನೆ ಮಾಡಬಾರದು.
ಸಾಲ ಕೊಟ್ಟ ಹಣ ಕೇಳುವಾಗ: ನೀವು ನಿಮ್ಮ ಹಣವನ್ನು ಯಾರಿಗಾದರೂ ಸಾಲವಾಗಿ ನೀಡಿದ್ದರೆ, ಮತ್ತು ಆ ಹಣವನ್ನು ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ನೀಡದಿದ್ದರೆ ಅದನ್ನು ಮರಳಿ ಕೇಳಲು ಯಾವುದೇ ಸಂಕೋಚ ಪಡಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಈ ವಿಷಯದಲ್ಲಿ ನಾಚಿಕೆ ಪಟ್ಟರೆ ಇದರಿಂದ ನಿಮಗೆಯೇ ನಷ್ಟ. ಹಾಗಾಗಿ ನಿಮ್ಮ ಹಣವನ್ನು ಕೇಳುವಾಗ ನಾಚಿಕೆ ಪಡಬಾರದು.
ಇದನ್ನೂ ಓದಿ: ಲೈಫಲ್ಲಿ ಸಕ್ಸಸ್ ಸಿಗ್ಬೇಕಂದ್ರೆ ಚಾಣಕ್ಯರು ಹೇಳಿದ ಈ ತಂತ್ರಗಳನ್ನು ಅನುಸರಿಸಿ
ಊಟದ ವಿಚಾರದಲ್ಲಿ: ಹೆಣ್ಣಾಗಲಿ ಅಥವಾ ಗಂಡಾಗಲಿ ಊಟದ ವಿಚಾರದಲ್ಲಿ ಯಾವುದೇ ನಾಚಿಕೆ, ಸಂಕೋಚ ಇಟ್ಟುಕೊಳ್ಳಬಾರದು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಅನೇಕ ಜನರು ಎಲ್ಲಾದ್ರೂ ಹೊರಗೆ ಹೋದಾಗ ಊಟದ ವಿಚಾರವಾಗಿ ಕೊಂಚ ಸಂಕೋಚ ಪಡುತ್ತಾರೆ ಮತ್ತು ಯಾರು ಏನನ್ನುತ್ತಾರೋ ಎಂಬ ಕಾರಣಕ್ಕೆ ಹೊಟ್ಟೆ ತುಂಬಾ ಊಟ ಮಾಡಲು ಹಿಂಜರಿಯುತ್ತಾರೆ. ಹೀಗೆ ಮಾಡುವುದರಿಂದ ನಿಮ್ಮ ಹೊಟ್ಟೆಗೆಯೇ ನಷ್ಟ, ನೀವು ಹಸಿವಿನಿಂದಲೇ ಕಾಲ ಕಳೆಯಬೇಕಾಗುತ್ತದೆ. ಹಾಗಾಗಿ ಊಟದ ವಿಚಾರವಾಗಿ ಯಾವುದೇ ಕಾರಣಕ್ಕೂ ನಾಚಿಕೆ ಬೇಡ.
ಕಲಿಕೆಯ ವಿಚಾರದಲ್ಲಿ: ಗುರುಗಳಿಂದ ಶಿಕ್ಷಣ ಅಥವಾ ಯಾರಿಂದಾದರೂ ಒಳ್ಳೆಯ ವಿಚಾರಗಳನ್ನು ಕಲಿಯುವಾಗ ಯಾವುದೇ ಕಾರಣಕ್ಕೂ ಸಂಕೋಚ ಪಡಬಾರದು. ನಿಮಗೆ ಯಾವುದಾದರೂ ವಿಚಾರಗಳ ಬಗ್ಗೆ ಗೊತ್ತಿಲ್ಲ ಎಂದಾದ್ರೆ ನಾಚಿಕೆ, ಸಂಕೋಚವನ್ನು ಬದಿಗಿಟ್ಟು ಅದನ್ನು ಗೊತ್ತಿರುವವರ ಬಳಿ ಕೇಳಿ ಕಲಿಯಿರಿ. ಇದರಿಂದ ನೀವು ಸರಿಯಾದ ಜ್ಞಾನ ಪಡೆಯಲು ಸಾಧ್ಯ. ಈ ವಿಚಾರದಲ್ಲಿ ಸಂಕೋಚ ವ್ಯಕ್ತಪಡಿಸಿದರೆ ನಿಮಗೆ ಜ್ಞಾನ ಲಭ್ಯವಾಗುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯರು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ