Chanakya Niti: ಜೀವನದಲ್ಲಿ ಈ ಐದು ಜನರನ್ನು ಯಾವುದೇ ಕಾರಣಕ್ಕೂ ನಂಬಬೇಡಿ; ಯಾಕೆ ಗೊತ್ತಾ?
ಆಚಾರ್ಯ ಚಾಣಕ್ಯರು ಸ್ನೇಹ, ದಾಂಪತ್ಯ ಜೀವನ, ಯಶಸ್ವಿ ಜೀವನ ಸೇರಿದಂತೆ ನಮ್ಮ ಜೀವನಕ್ಕೆ ಸಂಬಂಧಿಸಿದಂತಹ ಹಲವು ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಅವರು ಯಾರ ಸಹವಾಸವನ್ನು ಮಾಡಬಾರದು, ಎಂತಹ ಜನಗಳನ್ನು ನಂಬಬಾರದು ಎಂಬುದನ್ನು ಸಹ ನಮ್ಮ ನೀತಿಯಲ್ಲಿ ತಿಳಿಸಿದ್ದಾರೆ. ಚಾಣಕ್ಯರು ಹೇಳಿರುವಂತೆ ಜೀವನದಲ್ಲಿ ಯಾರನ್ನು ನಂಬಬಾರದು ಎಂಬುದನ್ನು ನೋಡೋಣ ಬನ್ನಿ.

ಸ್ನೇಹ, ದಾಂಪತ್ಯ ಸಂಬಂಧವಾಗಿರಲಿ ಅಥವಾ ವ್ಯವಹಾರವಾಗಿರಲಿ ಹೀಗೆ ಜೀವನದ ಪ್ರತಿಯೊಂದು ವಿಷಯದಲ್ಲೂ ನಂಬಿಕೆ (Trust), ವಿಶ್ವಾಸ ಎನ್ನುವಂತಹದ್ದು ತುಂಬಾನೇ ಮುಖ್ಯವಾದದ್ದು. ಒಟ್ಟಿನಲ್ಲಿ ಸಂಬಂಧಗಳು ನಿಂತಿರುವುದೇ ನಂಬಿಕೆಯ ಆಧಾರದ ಮೇಲೆ ಎಂದು ಹೇಳಬಹುದು. ಅದೇ ರೀತಿ ಈ ಒಂದಷ್ಟು ಜನರನ್ನು ಯಾವುದೇ ಕಾರಣಕ್ಕೂ ನಂಬಬಾರದು, ಅವರು ನಿಮ್ಮ ನಂಬಿಕೆಗೆ ಅರ್ಹರಲ್ಲ ಎಂದು ಆಚಾರ್ಯ ಚಾಣಕ್ಯರು (Acharya Chanakya) ಹೇಳುತ್ತಾರೆ. ಚಾಣಕ್ಯರು ಹೇಳಿರುವಂತೆ ಜೀವನದಲ್ಲಿ ಯಾರನ್ನು ನಂಬಬಾರದು, ಎಂತಹ ವ್ಯಕ್ತಿಗಳಿಂದ ದೂರವಿದ್ದಷ್ಟು ಒಳ್ಳೆಯದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಈ ಐದು ಜನರು ನಂಬಿಕೆಗೆ ಅರ್ಹರಲ್ಲ:
ಸುಳ್ಳು ಹೇಳುವವರು: ಪ್ರತಿಯೊಂದು ವಿಷಯಗಳ ಬಗ್ಗೆ ಸುಳ್ಳು ಹೇಳುವವರ ಜೊತೆ ಸ್ನೇಹ ಬೆಳೆಸಿಕೊಳ್ಳಬಾರದು ಎಂದು ಚಾಣಕ್ಯರು ಹೇಳುತ್ತಾರೆ. ಏಕೆಂದರೆ ಸುಳ್ಳು ಹೇಳುವವರೊಂದಿಗೆ ಸಂಬಂಧ ಸ್ಥಿರವಾಗಿರಲು ಸಾಧ್ಯವಿಲ್ಲ. ಈ ಜನರು ಯಾವಾಗಲೂ ತಮ್ಮ ಸ್ವಂತ ಲಾಭಕ್ಕಾಗಿ ನಿಮ್ಮ ಬಳಿ ಸುಳ್ಳು ಹೇಳಬಹುದು, ಮತ್ತು ನಿಮಗೆ ಮೋಸ ಮಾಡುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಇಂತಹವರ ಸಹವಾಸದಿಂದ ದೂರವಿರಿ.
ತಮ್ಮ ಮಾತಿನಿಂದ ಹಿಂದೆ ಸರಿಯುವವರು: ಯಾವಾಗಲೂ ತಮ್ಮ ಮಾತಿನಿಂದ ಹಿಂದೆ ಸರಿಯುವವರು ಮತ್ತು ಯಾವುದೇ ಸ್ಥಿರ ಆಲೋಚನೆಗಳನ್ನು ಹೊಂದಿರದವರು ಎಂದಿಗೂ ನಂಬಿಕಸ್ಥರಾಗಿರಲು ಸಾಧ್ಯವಿಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಇಂತಹ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತು ಬದಲಾಯಿಸುತ್ತಾರೆ ಮತ್ತು ದ್ರೋಹ ಬಗೆಯುತ್ತಾರೆ. ಆದ್ದರಿಂದ ಇವರು ನಿಮ್ಮ ನಂಬಿಕೆಗೆ ಅರ್ಹರಲ್ಲ.
ಅಸೂಯೆ ಪಡುವವರು: ನಿಮ್ಮ ಒಳ್ಳೆಯದು, ಯಶಸ್ಸನ್ನು ನೋಡಿ ಅಸೂಯೆ ಪಡುವವರು ಮತ್ತು ಯಾವಾಗಲೂ ನಿಮ್ಮನ್ನು ಟೀಕಿಸುವಂತಹ ಜನರು ಯಾವತ್ತಿಗೂ ನಿಮ್ಮ ನಂಬಿಕೆಗೆ ಅರ್ಹರಲ್ಲ. ಇಂತಹ ಜನರು ತಮಗೆ ಅವಕಾಶ ಸಿಕ್ಕರೆ ನಿಮ್ಮನ್ನು ಕೆಳಗಿಳಿಸಲು ಅಥವಾ ನಿಮಗೆ ಕೆಟ್ಟದ್ದನ್ನು ಮಾಡಲು ಯತ್ನಿಸುತ್ತಾರೆ. ಇವರು ನಿಮ್ಮ ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಬಯಸುತ್ತಾರೆ, ಹಾಗಾಗಿ ಇಂತಹ ಜನರಿಂದ ಸಾಧ್ಯವಾದಷ್ಟು ದೂರವಿರಿ.
ಇದನ್ನೂ ಓದಿ: ಈ ಅಭ್ಯಾಸಗಳು ಒಬ್ಬ ವ್ಯಕ್ತಿಯನ್ನು ಖಂಡಿತವಾಗಿ ಬಡವನನ್ನಾಗಿ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ
ಭಾವನೆಗಳಿಗೆ ಗೌರವ ನೀಡದವರು: ನಿಮಗೆ ಎಂದಿಗೂ ಪ್ರಾಮುಖ್ಯತೆ ನೀಡದ, ನಿಮ್ಮನ್ನು, ನಿಮ್ಮತನವನ್ನು ಗೌರವಿಸದ ಜನರೂ ನಿಮ್ಮ ನಂಬಿಕೆಗೆ ಅರ್ಹರಲ್ಲ. ಏಕೆಂದರೆ ಅವರಿಗೆ ನಿಮ್ಮ ಮೌಲ್ಯ ಏನೆಂಬುವುದೇ ತಿಳಿದಿರುವುದಿಲ್ಲ ಅಂತಹವರು ತಮ್ಮ ಸ್ವಾರ್ಥಕ್ಕಾಗಿ ನಿಮಗೆ ದ್ರೋಹ ಬಗೆಯುವ ಸಾಧ್ಯತೆಯೂ ಹೆಚ್ಚು. ಹಾಗಾಗಿ ನಿಮ್ಮ ಕಠಿಣ ಪರಿಶ್ರಮ, ಪ್ರೀತಿ ಮತ್ತು ಸಮರ್ಪಣೆಯನ್ನು ಯಾವಾಗಲೂ ಗೌರವಿಸುವ ಜನರೊಂದಿಗೆ ಸ್ನೇಹ ಬೆಳೆಸಿ.
ಸ್ವಾರ್ಥಿಗಳು: ಸ್ವಾರ್ಥಿ ಜನರಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ. ಇಂತಹ ಸ್ವಾರ್ಥಿ ಜನರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಅವರು ನಿಮ್ಮ ಭಾವನೆಗಳನ್ನು ಎಂದಿಗೂ ಗೌರವಿಸುವುದಿಲ್ಲ. ಅವರು ಸ್ವಂತ ಲಾಭಕ್ಕಾಗಿ ಮಾತ್ರ ನಿಮ್ಮ ಸ್ನೇಹವನ್ನು ಬಯಸುತ್ತಾರೆ. ಇಂತಹವರು ಎಂದಿಗೂ ನಿಜವಾದ ಸ್ನೇಹಿತರಾಗಲು ಸಾಧ್ಯವೇ ಇಲ್ಲ. ಇವರು ಯಾವತ್ತಿಗೂ ನಿಮ್ಮ ನಂಬಿಕೆಗೆ ಅರ್ಹರಲ್ಲ. ನಿಮ್ಮ ಜೀವನದಲ್ಲೂ ಇಂತಹ ಜನರಿದ್ದರೆ ಅವರಿಂದ ಸಾಧ್ಯವಾದಷ್ಟು ದೂರವಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








