
ಮನೆಯ ಯಜಮಾನನಾದವನು ಕುಟುಂಬದ (Family) ಆಧಾರಸ್ತಂಭ ಅಂತಾನೇ ಹೇಳಬಹುದು. ಅವನು ಸರಿಯಾದ ದಾರಿಯಲ್ಲಿ ನಡೆದರೆ ಮಾತ್ರ ಕುಟುಂಬ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ. ಅಲ್ಲದೆ ಮನೆಯ ಯಜಮಾನನ ನಡವಳಿಕೆ, ನಿರ್ಧಾರಗಳು ಮತ್ತು ಅಭ್ಯಾಸಗಳು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ. ಅದಕ್ಕಾಗಿಯೇ ಮನೆಯ ಯಜಮಾನನಾದವನು ಜವಾಬ್ದಾರನಾಗಿರಬೇಕು, ಪ್ರತಿಯೊಂದು ನಿರ್ಧಾರವನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಜೊತೆಗೆ ಉತ್ತಮ ಗುಣಗಳನ್ನು ಹೊಂದಿರಬೇಕು. ಆಗ ಮಾತ್ರ ನೆಮ್ಮದಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಅದೇ ಮನೆಯ ಯಜನಮಾನನಿಗೆ ಈ ಕೆಲವೊಂದು ಗುಣಗಳಿದ್ದರೆ, ಮನೆಯ ಶಾಂತಿ, ನೆಮ್ಮದಿಯೇ ಹಾಳಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ರೆ ಯಜಮಾನನ ಯಾವ ಗುಣಗಳು ಮನೆಯ ವಾತಾವರಣವನ್ನು ಹಾಳು ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಅತಿಯಾದ ಖರ್ಚು ಒಳ್ಳೆಯದಲ್ಲ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅತಿಯಾದ ಖರ್ಚುಗಳು ಆರ್ಥಿಕ ಸಮಸ್ಯೆಗಳು ಉದ್ಭವಿಸಲು ಕಾರಣವಾಗುತ್ತದೆ. ಹೀಗಿರುವಾಗ ಮನೆಯ ಯಜಮಾನನೇ ಅತಿಯಾದ ಖರ್ಚುಗಳನ್ನು ಮಾಡಿದರೆ, ಕುಟುಂಬ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ ಮನೆಯ ಶಾಂತಿಯೂ ಹಾಳಾಗುತ್ತದೆ. ಆದ್ದರಿಂದ ಮನೆಯ ಯಜಮಾನ ಹಣವನ್ನು ಅತಿಯಾಗಿ ಖರ್ಚು ಮಾಡಬಾರದು. ಬದಲಿಗೆ ಹಿರಿಯರ ಆರೋಗ್ಯ, ಮಕ್ಕಳ ಶಿಕ್ಷಣ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯಕ್ಕೆ ಆದ್ಯತೆ ನೀಡಬೇಕು.
ಮನೆಯ ಯಜಮಾನನಿಗೆ ಜೂಜಾಟ, ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟಗಳಿದ್ದರೆ, ಇದು ಮನೆಯ ಮೇಲೂ ಪರಿಣಾಮ ಬೀರುತ್ತದೆ. ಹೌದು ಇದು ಗಂಡ ಹೆಂಡತಿಯ ನಡುವೆ ಜಗಳ, ಕುಟುಂಬಸ್ಥರ ನಡುವೆ ಮನಸ್ತಾಪ, ಆರ್ಥಿಕ ಸಂಕಷ್ಟ ಇವೆಲ್ಲದಕ್ಕೂ ಕಾರಣವಾಗುತ್ತದೆ. ಇದರಿಂದ ಮನೆಯ ನೆಮ್ಮದಿಯೇ ಹಾಳಾಗುತ್ತದೆ. ಅಲ್ಲದೆ ಯಜಮಾನನ ಕೆಟ್ಟ ಚಟಗಳು ಮನೆಯ ಗೌರವಕ್ಕೂ ಧಕ್ಕೆ ತರುತ್ತದೆ. ಆದ್ದರಿಂದ ಮನೆಯ ಮುಖ್ಯಸ್ಥನಿಗೆ ಯಾವುದೇ ರೀತಿಯ ಕೆಟ್ಟ ಚಟಗಳಿರಬಾರದು.
ಇದನ್ನೂ ಓದಿ: ಈ ಗುಣಗಳಿರುವ ಗಂಡ್ಮಕ್ಳು ತಮ್ಮ ತಂದೆ-ತಾಯಿ ಹೆಮ್ಮೆ ಪಡುವಂತೆ ಮಾಡುತ್ತಾರೆ
ಮನೆಯ ಮುಖ್ಯಸ್ಥನು ಕುಟುಂಬದಲ್ಲಿನ ಮಹಿಳೆಯರನ್ನು ಗೌರವಿಸಬೇಕು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಮಹಿಳೆಯರಿಗೆ ಸರಿಯಾದ ಗೌರವವನ್ನು ನೀಡದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುವುದಿಲ್ಲ. ಕೆಲವೊಮ್ಮೆ ಮನೆಯ ಯಜಮಾನ ತನ್ನ ಹೆಂಡತಿ, ತಾಯಿ, ಮಗಳ ಅಭಿಪ್ರಾಯಕ್ಕೆ ಬೆಲೆ ನೀಡುವುದಿಲ್ಲ. ಮನೆಯಲ್ಲಿರುವ ಮಹಿಳೆಯರನ್ನು ಕೀಳಾಗಿ ಕಾಣುತ್ತಾರೆ. ಇದು ಮಹಿಳೆಯರ ಮನಸ್ಸಿಗೆ ನೋವನ್ನು ಉಂಟುಮಾಡುತ್ತದೆ. ಅಲ್ಲದೆ ಯಜಮಾನನಾದವನು ಮಹಿಳೆಯರನ್ನು ಕೀಳಾಗಿ ಕಂಡರೆ ಮನೆಯಲ್ಲಿರುವ ಇತರ ಪುರುಷ ಸದಸ್ಯರೂ ಕೂಡ ಇದೇ ಗುಣಗಳನ್ನು ಕಲಿಯುತ್ತಾರೆ. ಈ ಅಭ್ಯಾಸಗಳು ಕುಟುಂಬದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ