Waxing Allergies Remedies: ವ್ಯಾಕ್ಸಿಂಗ್ ಮಾಡಿದ ನಂತರ ಚರ್ಮದಲ್ಲಿ ತುರಿಕೆ, ದದ್ದುಗಳಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೇ? ಮನೆಮದ್ದು ಇಲ್ಲಿವೆ
ಕೈಕಾಲುಗಳಲ್ಲಿನ ಅನಗತ್ಯ ಕೂದಲುಗಳನ್ನು ತೆಗೆದುಹಾಕಲು, ನಾವು ಹೆಚ್ಚಾಗಿ ಶೇವಿಂಗ್ ಬದಲು ವ್ಯಾಕ್ಸಿಂಗ್ ಮೊರೆ ಹೋಗುತ್ತೇವೆ. ಆದರೆ ವ್ಯಾಕ್ಸಿಂಗ್ ಮಾಡಿದ ನಂತರ ಹಲವು ಬಾರಿ ಚರ್ಮದ ಮೇಲೆ ಕೆಂಪು ಕಲೆಗಳು, ದದ್ದುಗಳು ಕಾಣಿಸಿಕೊಳ್ಳುತ್ತವೆ. ಮಾತ್ರವಲ್ಲದೆ ಚರ್ಮದಲ್ಲಿ ಉರಿ ಉಂಟಾಗಿ ಅದರಿಂದ ಕಿರಿಕಿರಿಯನ್ನು ಅನುಭವಿಸಬೇಕಾಗುತ್ತದೆ. ನೀವು ಈ ಸಮಸ್ಯೆಗೆ ಕೆಲವು ಮನೆಮದ್ದುಗಳ ಸಹಾಯದಿಂದ ಸುಲಭ ಪರಿಹಾರವನ್ನು ಕಂಡುಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ.
ಸುಂದರವಾಗಿ ಕಾಣಲು ಮಹಿಳೆಯರು ಹೆಚ್ಚಾಗಿ ಕೈಕಾಲು ಹಾಗೂ ದೇಹದಲ್ಲಿನ ಅನಗತ್ಯ ಕೂದಲುಗಳನ್ನು ತೆಗೆದುಹಾಕಲು ವ್ಯಾಕ್ಸಿಂಗ್ ಮೊರೆ ಹೋಗುತ್ತಾರೆ. ತ್ವಚೆಯನ್ನು ಸುಂದರವಾಗಿರಿಸಲು ಮತ್ತು ಕೂದಲನ್ನು ಆಳವಾಗಿ ತೆಗೆದುಹಾಕಲು ವ್ಯಾಕ್ಸಿಂಗ್ ಸುಲಭ ಮತ್ತು ಸರಳ ಪರಿಹಾರವಾಗಿದೆ. ಇದರ ಬಳಕೆಯಿಂದ ದೇಹದ ಅನಗತ್ಯ ಕೂದಲುಗಳು ನಿವಾರಣೆಯಾಗಿ ತ್ವಚೆಯು ತುಂಬಾ ಸ್ವಚ್ಛವಾಗಿ ಸುಂದರವಾಗಿ ಕಾಣಿಸಲು ಪ್ರಾರಂಭಿಸುತ್ತದೆ. ಆದರೆ ಅನೇಕ ಬಾರಿ ವ್ಯಾಕ್ಸಿಂಗ್ ಮಾಡಿದ ಬಳಿಕ ಹೆಚ್ಚಿನವರು ಅಲರ್ಜಿ, ತುರಿಕೆ, ತ್ವಚೆಯಲ್ಲಿ ಉರಿ ಕಾಣಿಸಿಕೊಳ್ಳುವುದು, ಕಿರಿಕಿರಿ ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಈ ಸಮಸ್ಯೆಯಿಂದ ಹೇಗೆ ಹೊರ ಬರುವುದು ಎಂದು ಹೆಚ್ಚಿನವರಿಗೆ ತಿಳಿದಿರುವುದಿರುವುದಿಲ್ಲ. ಇಂದು ನಾವು ನಿಮಗೆ ವ್ಯಾಕ್ಸಿಂಗ್ ಮಾಡಿದ ಬಳಿಕ ಚರ್ಮದಲ್ಲಿ ಕಾಣಿಸಿಕೊಳ್ಳುವ ಉರಿ ಹಾಗೂ ದದ್ದುಗಳಂತ ಸಮಸ್ಯೆಗಳನ್ನು ಕಡಿಮೆ ಮಾಡಲು ಸುಲಭ ಪರಿಹಾರದ ಬಗ್ಗೆ ತಿಳಿಸಿಕೊಡುತ್ತೇವೆ.
ವ್ಯಾಕ್ಸಿಂಗ್ ಮಾಡಿದ ನಂತರ ಉಂಟಾಗುವ ಚರ್ಮದ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿವೆ ಸುಲಭ ಪರಿಹಾರಗಳು:
ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ವಾಸ್ತವವಾಗಿ ತೆಂಗಿನೆಣ್ಣೆಯಲ್ಲಿ ಫಿನಾಲಿಕ್ ಆಮ್ಲ ಮತ್ತು ಪಾಲಿಫಿನಾಲ್ ನಂತಹ ಬ್ಯಾಕ್ಟೀರಿಯಾ ವಿರೋಧಿ ಅಂಶಗಳು ಕಂಡುಬರುತ್ತದೆ. ಇದು ಚರ್ಮದಲ್ಲಿ ಕಾಣಿಸಿಕೊಳ್ಳುವ ಉರಿ, ತುರಿಕೆಯ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ವ್ಯಾಕ್ಸಿಂಗ್ ಮಾಡಿದ ಬಳಿಕ ತುರಿಕೆ ಕಾಣಿಸಿಕೊಂಡರೆ ನೀವು ತೆಂಗಿನ ಎಣ್ಣೆಯನ್ನು ತ್ವಚೆಗೆ ಅನ್ವಯಿಸಬಹುದು.
ಅಲೋವೆರಾ ಜೆಲ್:
ಅಲೋವೆರಾ ಚರ್ಮವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಹೀಗಿರುವಾಗ ವ್ಯಾಕ್ಸಿಂಗ್ ಮಾಡಿದ ನಂತರ ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಕಿರಿಕಿರಿ ಕಾಣಿಸಿಕೊಂಡರೆ ನೀವು ತಾಜಾ ಅಲೋವೆರಾ ಜೆಲ್ ಅನ್ವಯಿಸುವ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಆಲಿವ್ ಎಣ್ಣೆ:
ವ್ಯಾಕ್ಸಿಂಗ್ ಮಾಡಿದ ನಂತರ ಚರ್ಮದ ಮೇಲೆ ಕೆಂಪು ದದ್ದುಗಳು ಕಾಣಿಸಿಕೊಂಡಾಗ, ಆಲಿವ್ ಎಣ್ಣೆಯನ್ನು ತ್ವಚೆಗೆ ಹಚ್ಚುವ ಮೂಲಕ ಈ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ ನೀವು ಒಂದು ಚಮಚ ಆಲೀವ್ ಎಣ್ಣೆಗೆ 2 ರಿಂದ 3 ಹನಿ ಟೀ ಟ್ರೀ ಆಯಿಲ್ ನ್ನು ಮಿಶ್ರಣ ಮಾಡಿ ಚರ್ಮಕ್ಕೆ ಅನ್ವಯಿಸಬೇಕು.
ಇದನ್ನೂ ಓದಿ: ಸಂಜೆಯ ಟೀ ಸಮಯಕ್ಕೆ ಮನೆಯಲ್ಲಿಯೇ ಸರಳವಾಗಿ ಮಾಡಿ ಸ್ಟ್ರೀಟ್ ಸ್ಟೈಲ್ ಬ್ರೆಡ್ ಪಕೋಡಾ
ಹಸಿ ಹಾಲು:
ಹಸಿ ಹಾಲು ಚರ್ಮದ ಮೇಲಿನ ಕಿರಿಕಿರಿಯಿಂದ ಪರಿಹಾರವನ್ನು ನೀಡುತ್ತದೆ ಆದ್ದರಿಂದ ವ್ಯಾಕ್ಸಿಂಗ್ ಮಾಡಿದ ನಂತರ ಚರ್ಮದಲ್ಲಿ ಕಿರಿಕಿರಿ ಉಂಟಾದರೆ, ತುರಿಕೆ ಕಾಣಿಸಿಕೊಂಡ ಪ್ರದೇಶಕ್ಕೆ ಹಸಿ ಹಾಲನ್ನು ಅನ್ವಯಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರವನ್ನು ಪಡೆದುಕೊಳ್ಳಬಹುದು.
ಐಸ್ ಕ್ಯೂಬ್:
ಚರ್ಮದ ಮೇಲಿನ ತುರಿಕೆ ಮತ್ತು ದದ್ದುಗಳಿಂದ ಪರಿಹಾರವನ್ನು ಪಡೆಯಲು ನೀವು ಐಸ್ ಕ್ಯೂಬ್ ನ ಸಹಾಯ ಪಡೆಯಬಹುದು. ಆದರೆ ಅದನ್ನು ನೇರವಾಗಿ ತ್ವಚೆಗೆ ಅನ್ವಯಿಸಬೇಡಿ. ಬದಲಿಗೆ ಐಸ್ ಕ್ಯೂಬ್ ತೆಗೆದುಕೊಂಡು ಅದನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿ, ಕಿರಿಕಿರಿ ಉಂಟಾದ ಸ್ಥಳದಲ್ಲಿ ಸ್ವಲ್ಪ ಹೊತ್ತು ಮಸಾಜ್ ಮಾಡುವ ಮೂಲಕ ನೀವು ತುರಿಕೆ ಮತ್ತು ದದ್ದುಗಳಿಂದ ಪರಿಹಾರ ಪಡೆಯಬಹುದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: