ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯಾ? ಇದು ನಿಮ್ಮ ಹಲ್ಲಿನ ಆರೋಗ್ಯಕ್ಕೆ ಮಾರಕ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 31, 2023 | 4:31 PM

ಸಾಮಾನ್ಯವಾಗಿ ಕೆಲವು ಜನರು ಉಗುರು ಕಚ್ಚುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಏನಾದರೂ ಯೋಚಿಸುವಾಗ ಅಥವಾ ತುಂಬಾ ಉದ್ವೇಗಕ್ಕೆ ಒಳಗಾದಾಗ ಉಗುರುಗಳನ್ನು ಕಚ್ಚುತ್ತಾರೆ. ಈ ಅಭ್ಯಾಸವು ನಿಮ್ಮ ಹಲ್ಲುಗಳ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ. 

ನಿಮಗೆ ಉಗುರು ಕಚ್ಚುವ ಅಭ್ಯಾಸವಿದೆಯಾ? ಇದು ನಿಮ್ಮ ಹಲ್ಲಿನ ಆರೋಗ್ಯಕ್ಕೆ ಮಾರಕ
ಸಾಂದರ್ಭಿಕ ಚಿತ್ರ
Follow us on
ಬಾಲ್ಯದಿಂದಲ್ಲೂ ಎಲ್ಲರಿಗೂ ಒಂದಲ್ಲಾ ಒಂದು ಅಭ್ಯಾಸ ರೂಢಿಯಲ್ಲಿರುತ್ತದೆ. ಅದರಲ್ಲಿ ಒಂದು ಉಗುರು ಕಚ್ಚುವ ಅಭ್ಯಾಸ. ಸಾಮಾನ್ಯವಾಗಿ ಮಕ್ಕಳಿಂದ ವಯಸ್ಕರರವರೆಗೂ ಉಗುರು ಕಚ್ಚುವ ಅಭ್ಯಾಸವನ್ನು ಹೊಂದಿರುತ್ತಾರೆ. ಒತ್ತಡದ ಸಮಯದಲ್ಲಿ ಅನೇಕ ಜನರು ಉಗುರು ಕಚ್ಚುತ್ತಾರೆ. ಇದು ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಈ ಅಭ್ಯಾಸವನ್ನು ಆದಷ್ಟು ಬೇಗ ನಿಲ್ಲಿಸದಿದ್ದರೆ, ಅದು  ಒಂದು ಚಟವಾಗಿ ಬದಲಾಗಬಹುದು ಮತ್ತು ಇದು ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡಬಹುದು. ವಿಶೇಷವಾಗಿ ಹಲ್ಲುಗಳ ಆರೋಗ್ಯಕ್ಕೆ ಈ ಅಭ್ಯಾಸವು ತುಂಬಾ ಅಪಾಯಕಾರಿಯಾಗಿದೆ.

ಜನರು ಉಗುರುಗಳನ್ನು ಏಕೆ ಕಚ್ಚುತ್ತಾರೆ:

ಇದರ ಕಾರಣವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಭಿನ್ನವಾಗಿರಬಹುದು. ಒಂದು ಸಿದ್ಧಾಂತದ ಪ್ರಕಾರ, ಜನರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ಉಗುರುಗಳನ್ನು ಕಚ್ಚುತ್ತಾರಂತೆ. ಹೀಗಿದ್ದರೂ ಇದು ಒಳ್ಳೆಯ ಅಭ್ಯಾಸವಲ್ಲ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡಬಹುದು.

ಉಗುರು ಕಚ್ಚುವ ಅಭ್ಯಾಸದಿಂದ ಯಾರಲ್ಲಿ ಹೆಚ್ಚು ಅಪಾಯ ಕಂಡುಬರುತ್ತದೆ:

ಮಕ್ಕಳು ಮತ್ತು ಹದಿಹರೆಯದವರಲ್ಲಿ ಹೆಚ್ಚು ಉಗುರು ಕಚ್ಚುವಿಕೆಯ ಅಪಾಯ ಕಂಡುಬರುತ್ತದೆ. ಸುಮಾರು 40% ನಷ್ಟು ಮಕ್ಕಳು ಮತ್ತು ಅರ್ಧದಷ್ಟು ಹದಿಹರೆಯದವರು ಉಗುರುಗಳನ್ನು ಕಚ್ಚುತ್ತಾರೆ ಎಂದು ಸಮೀಕ್ಷೆಗಳು ಹೇಳುತ್ತವೆ.

ಉಗುರು ಕಚ್ಚುವಿಕೆ ಮತ್ತು ಹಲ್ಲಿನ ಆರೋಗ್ಯ:

ಅಮೇರಿಕನ್ ಡೆಂಟಲ್ ಅಸೋಸಿಯೇಷನ್ ಪ್ರಕಾರ, ಉಗುರು ಕಚ್ಚುವ ಅಭ್ಯಾಸವು ನಿಮ್ಮ ಹಲ್ಲುಗಳು ಭಾಗವಾಗಲು ಅಥವಾ ಹಲ್ಲುಗಳಲ್ಲಿ ಬಿರುಕು ಮೂಡಲು ಕಾರಣವಾಗಬಹುದು. ಉಗುರುಗಳನ್ನು ಅಗಿಯುವ ಅಭ್ಯಾಸದಿಂದ ಹಲ್ಲುಗಳ ಬೇರುಗಳು ಕೊಳೆಯಬಹುದು. ಈ ಕಾರಣದಿಂದಾಗಿ ಹಲ್ಲುಗಳ ಕೊಳೆಯುವಿಕೆಯ ಅಪಾಯವು ಹೆಚ್ಚಾಗುತ್ತದೆ.
ಸಂಶೋಧನೆಯ ಪ್ರಕಾರ, ಉಗುರು ಕಚ್ಚುವವರಿಗೆ ಬ್ರಕ್ಸಿಸಮ್ ಎಂಬ ಕಾಯಿಲೆ ಬರುವ ಸಾಧ್ಯತೆ ಹೆಚ್ಚು. ಬ್ರಕ್ಸಿಸಮ್ ಕಾಯಿಲೆಯನ್ನು ಆಡುಮಾತಿನಲ್ಲಿ ‘ಹಲ್ಲುಗಳನ್ನು ಕಡಿಯುವುದು’ ಎಂದು ಹೇಳುತ್ತಾರೆ. ಇದನ್ನು ಹೆಚ್ಚಿನ ಜನರು ನಿದ್ದೆಗಣ್ಣಲ್ಲಿ ತಮಗರಿವಿಲ್ಲದಂತೆ ಮಾಡುತ್ತಾರೆ. ಈ ಅಭ್ಯಾಸದಿಂದ ತಲೆನೋವು, ಮುಖದ ನೋವು, ಹಲ್ಲಿನ ಕೊಳೆಯುವಿಕೆಯ ಸಾಧ್ಯತೆಯು ಸಹ ಗಮನಾರ್ಹವಾಗಿ ಹೆಚ್ಚಾಗುತ್ತದೆ.
ಇದನ್ನೂ ಓದಿ: ನಿಮ್ಮ ಉಗುರುಗಳು ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್

ಉಗುರು ಕಚ್ಚುವಿಕೆಯ ಇತರ ಅಪಾಯಗಳು:

ಹಲ್ಲುಗಳಿಗೆ ಹಾನಿ ಮಾಡುವುದರ ಜೊತೆಗೆ ಉಗುರುಗಳನ್ನು ಕಚ್ಚುವುದು ಬ್ಯಾಕ್ಟೀರಿಯಾದ ಅಪಾಯವನ್ನು ಸಹ ಹೆಚ್ಚಿಸುತ್ತದೆ. ಉಗುರು ಕಚ್ಚುವುದರಿಂದ ಹಲ್ಲುಗಳಲ್ಲಿ ಇ.ಕೊಲಿ ಮತ್ತು ಸಾಲ್ಮೊನೆಲ್ಲಾ ನಂತಹ ಅಪಾಯಕಾರಿ ರೋಗ ಉಂಟುಮಾಡುವ ಬ್ಯಾಕ್ಟೀರಿಯಾಗಳು ಸೇರಿಕೊಳ್ಳಬಹುದು. ಈ ಬ್ಯಾಕ್ಟೀರಿಯಗಳು ಬಾಯಿ ಮತ್ತು ಕರುಳನ್ನು ತಲುಪಬಹುದು. ಇದು ಗಂಭೀರ ಜಠರಗರುಳಿನ ಕಾಯಿಲೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ತಮ್ಮ ಉಗುರುಗಳನ್ನು ಕಚ್ಚುವ ಜನರು ಪರೋನಿಚಿಯಾ ಕಾಯಿಲೆಯನನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇದರಿಂದ ಬೆರಳಿನ ಸೋಂಕು, ಊತ, ಬೆರಳುಗಳಲ್ಲಿ ಕೀವು ತುಂಬುವುದು ಮುಂತಾದ ಸಮಸ್ಯೆಗಳನ್ನು ಎದುರಿಸಬೆಕಾಗುತ್ತದೆ.

ಉಗುರು ಕಚ್ಚುವ ಅಭ್ಯಾಸವನ್ನು ಹೋಗಲಾಡಿಸುವುದು ಹೇಗೆ?

ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಅಸೋಸಿಯೇಷನ್ ಉಗುರು ಕಚ್ಚುವ ಅಭ್ಯಾಸವನ್ನು ನಿಲ್ಲಿಸಲು ಕೆಲವು ಸಲಹೆಗಳನ್ನು ಹಂಚಿಕೊಂಡಿದೆ. ಅದರ ಸಹಾಯದಿಂದ ನೀವು ಉಗುರು ಕಚ್ಚುವ ಅಭ್ಯಾಸವನ್ನು ತೊಡೆದುಹಾಕಬಹುದು.
• ಯಾವಾಗಲೂ ಉಗುರನ್ನು ಉದ್ದವಾಗಿ ಬೆಳೆಯಲು ಬಿಡಬೇಡಿ. ಆದಷ್ಟು ಚಿಕ್ಕದಾಗಿರಿಸಿ.
• ಉಗುರುಗಳ ಮೇಲೆ ಉಗುರು ಬಣ್ಣ (ನೈಲ್ ಪಾಲೀಶ್) ವನ್ನು ಹಾಕಿ.
• ನಿಮಗೆ ಉಗುರು ಕಚ್ಚಬೇಕು ಅನಿಸಿದಾಗಲೆಲ್ಲಾ, ನಿಮ್ಮ ಮನಸ್ಸನ್ನು ಗಮನ ಬೇರೆಡೆಗೆ ಇರಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ