Special Story: ನೆಮ್ಮದಿಯ ಜೀವನಕ್ಕೆ ಪರಿಸರ ಸಂರಕ್ಷಣೆ ಅತ್ಯಗತ್ಯ
ಪರಿಸರದ ಸಂರಕ್ಷಣೆ ಎಂಬುದು ನಮ್ಮೆಲ್ಲರ ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೊಬ್ಬರ ಹೊಣೆಗಾರಿಕೆಯೂ ಹೌದು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ವೈಯಕ್ತಿಕವಾಗಿ ನಾವುಗಳು ಏನೆಲ್ಲಾ ಮಾಡಬಹುದು ಎಂಬುದನ್ನು ಯೋಚಿಸಬೇಕು.
ಮಾನವ ಪರಿಸರ ಜೀವಿ. ಮನುಷ್ಯ ಬದುಕಲು ಅನಿವಾರ್ಯವಾಗಿರುವ ಮೂಲ ಆವಶ್ಯಕಗಳು ಸಿಗುವುದೇ ಪರಿಸರದಿಂದ ಎನ್ನುವ ಸತ್ಯ ನಮಗೆಲ್ಲ ತಿಳಿದೇ ಇದೆ. ನಮ್ಮ ಸುತ್ತಮುತ್ತಲಿನ ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಚೆನ್ನಾಗಿರಲು ಸಾಧ್ಯ. ಹಾಗಾಗಿ ನೆಮ್ಮದಿಯ ಹಾಗೂ ಆರೋಗ್ಯಕರ ಬದುಕಿಗೆ ಪರಿಸರವನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯ. ಪರಿಸರದ ಸಂರಕ್ಷಣೆ ಎಂಬುದು ನಮ್ಮೆಲ್ಲರ ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೊಬ್ಬರ ಹೊಣೆಗಾರಿಕೆಯೂ ಹೌದು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ (Environmental Protection)ಗೆ ವೈಯಕ್ತಿಕವಾಗಿ ನಾವು ಏನೆಲ್ಲಾ ಮಾಡಬಹುದು ಎಂಬುದನ್ನು ಯೋಚಿಸಿ.
ಇದನ್ನೂ ಓದಿ: World Environment Day 2022: ವಿಶ್ವ ಪರಿಸರ ದಿನದ ಇತಿಹಾಸ, ಮಹತ್ವ ಮತ್ತು ವಿಶ್ವ ಪರಿಸರ ದಿನ 2022ರ ಥೀಮ್ ಇಲ್ಲಿದೆ
“ಮನೆಗೊಂದು ಮರ, ಊರಿಗೊಂದು ವನ” ಎನ್ನುವ ಮಾತು ಎಲ್ಲರಿಗೂ ಗೊತ್ತಿದೆ. ಆದರೆ ಎಷ್ಟು ಜನ ಈ ಮಾತನ್ನು ಪಾಲಿಸುವುದರಲ್ಲಿ ಯಶಸ್ವಿಯಾಗಿದ್ದಾರೋ ನಾ ಕಾಣೆ? ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ ಶಿಕ್ಷಕರು ವಿಜ್ಞಾನ ಪಾಠ ಮಾಡುವಾಗ ಗಿಡಗಳ ಬಗ್ಗೆ, ಮರಗಳ ಮಹತ್ವದ ಬಗ್ಗೆ, ಪರಿಸರದ ಸಂರಕ್ಷಣೆಯ ಬಗ್ಗೆ ತಿಳಿಸಿಕೊಡುತ್ತಿದ್ದರು. ಟೀಚರ್ ಹೇಳುತ್ತಿದ್ದ ಕಾರಣ ಗಿಡ ನೆಡುವ ಮನಸ್ಸಾದರೂ ಮಾಡುತ್ತಿದ್ದೆವು. ಆದರೀಗ ನಮ್ಮ ಪಾಲಿಗೆ ಪರಿಸರವು, ಪರಿಸರದ ಕಥೆ, ಪರಿಸರದ ಅನುಕೂಲ, ಪರಿಸರ ಸಂರಕ್ಷಣೆಯ ಅಗತ್ಯ, ಪರಿಸರ ಮಾಲಿನ್ಯಗಳ ಬಗ್ಗೆ ಭಾಷಣ, ಪ್ರಬಂಧ, ರಸಪ್ರಶ್ನೆ ಹಾಗೂ ಚರ್ಚಾ ವಿಷಯವಾಗಿ ಉಳಿದುಬಿಟ್ಟಿದೆ. ಅಂದರೆ ಪರಿಸರ ಸಂರಕ್ಷಣೆ ಕೇಲವ ಕಲಿಕಾ ವಿಷಯವಾಗಿ ಮಾರ್ಪಟ್ಟಿದೆ. ಈ ಬಗ್ಗೆ ನಾವು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.
ಇದನ್ನೂ ಓದಿ: World Environment Day: ಜೂನ್ 5ರಂದು ನಡೆಯಬೇಕಿದ್ದ ವಿಶ್ವ ಪರಿಸರ ದಿನ ಆಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಸರ್ಕಾರ
ಮಾನವ ಪರಿಸರದ ಶಿಶು ಎನ್ನುವುದು ಅಕ್ಷರಶಃ ಸತ್ಯ. ಪರಿಸರವಿಲ್ಲದೆ ಮಾನವನ ಜೀವನಕ್ಕೆ ಅರ್ಥವೆಂಬುದೇ ಇಲ್ಲ. ಪ್ರಸ್ತುತ ಮನುಕುಲವು ಅತ್ಯಂತ ದುರಾಸೆಯಿಂದ ಅವನ ಅನುಕೂಲಕ್ಕಾಗಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುತ್ತಿದೆ. ಇದರಿಂದ ಬರೀ ಪರಿಸರವಲ್ಲದೆ ಪ್ರಾಣಿಗಳ ಜೀವ ರಕ್ಷಣೆಗೂ ಹಾನಿಯುಂಟಾಗುತ್ತಿದೆ. ಇದೆಲ್ಲದರ ಜೊತೆಗೆ ಜಲಮಾಲಿನ್ಯ, ವಾಯುಮಾಲಿನ್ಯ, ಮಣ್ಣಿನ ಮಾಲಿನ್ಯ, ಅರಣ್ಯನಾಶ ಹೀಗೆ ಹತ್ತು ಹಲವು ಸಮಸ್ಯೆಗಳು ಪರಿಸರದಲ್ಲಿ ಕಂಡುಬರುತ್ತಿವೆ. ಇದಕ್ಕೆಲ್ಲ ಮೂಲ ಕಾರಣ ಮಾನವನ ದುರಾಸೆ, ಐಶಾರಾಮಿ ಜೀವನ, ಆಧುನಿಕ ಸಮಾಜ, ನಗರಗಳ ಬೆಳವಣಿಗೆ ಹೆಚ್ಚುತ್ತಿರುವ ಕೈಗಾರಿಕೆಗಳು.
ಪರಿಸರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ದಿನವೇ ವಿಶ್ವ ಪರಿಸರ ದಿನ (World Environment Day). ಪ್ರತೀ ವರ್ಷ ಜೂ.೫ ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ನಾವು ನಮ್ಮ ಪರಿಸರದ ಬಗ್ಗೆ ತಿಳಿಯುವ, ಅದರ ಮಹತ್ವ ಅರಿಯುವ ಮಹತ್ತರವಾದ ದಿನವಿದು.
ಇದನ್ನೂ ಓದಿ: World Environment Day 2022: ಉತ್ತಮ ಪರಿಸರಕ್ಕಾಗಿ ನಮ್ಮ ಜೀವನದಲ್ಲಿ ಬದಲಾಯಿಸಿಕೊಳ್ಳಬೇಕಾದ ಕೆಲವು ಅಂಶಗಳು ಇಲ್ಲಿವೆ
ಪರಿಸರ ಸಂರಕ್ಷಣೆಗೆ ನಾವು ಸ್ವಯಂಪ್ರೇರಿತರಾಗಿ ಗಿಡ ನೆಟ್ಟು, ನೀರು ಹಾಕಿ, ಮರಗಳನ್ನು ಬೆಳೆಸಬೇಕಿದೆ. ಪರಿಸರದ ಮೌಲ್ಯವನ್ನು ಎಲ್ಲರೂ ಅರಿತುಕೊಂಡು ಮಲಿನ ಮಾಡದಂತೆ ಸಂರಕ್ಷಣೆ ಮಾಡುವಲ್ಲಿ ಶ್ರಮವಹಿಸಬೇಕಿದೆ. ಇನ್ನು ನಮ್ಮ ಆಪ್ತರ ಸಂತೋಷದ ಕ್ಷಣಗಳಿಗೆ ಕಾರಣರಾಗಲು ನಾವು ಯಾವುದೋ ಲಕ್ಷಾಂತರ ಮೌಲ್ಯದ ಉಡುಗೂರೆ ನೀಡುವ ಬದಲು ಪರಿಸರಕ್ಕೆ ಪೂರಕವಾಗುವಂತೆ ಒಂದು ಗಿಡ ಕೊಟ್ಟರೆ ಅದು ಎಲ್ಲದಕ್ಕಿಂತಲೂ ಅಮೂಲ್ಯವಾದದ್ದು ಎನಿಸಿಕೊಳ್ಳುತ್ತದೆ. ಹೀಗೇ ಯಾವೊದೋ ಒಂದು ನೆಪದ್ಲಲಿ ಪ್ರತೀ ಮನೆಗಳಲ್ಲಿ ಒಂದು ಗಿಡ ನೆಟ್ಟರೆ ಸಾಕು, ತಾನಾಗಿಯೇ ಊರಿನಲ್ಲಿ ವನ ಸೃಷ್ಟಿಯಾಗುತ್ತದೆ.
ಲೇಖನ: ತೇಜಶ್ವಿನಿ ಕಾಂತರಾಜ್, ಬೆಂಗಳೂರು
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Sun, 5 June 22