
ಹಿಂದೆಲ್ಲಾ ನಮ್ಮ ಹಿರಿಯರು ನೂರು ಕಾಲ ಆರೋಗ್ಯವಂತರಾಗಿ ಬದುಕು ಸಾಗಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಚ್ಚಿನವರು ಸಣ್ಣ ವಯಸ್ಸಿನಲ್ಲಿಯೇ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣವೇ ಕಳಪೆ ಜೀವನಶೈಲಿ (Lifestyle) ಮತ್ತು ಅನಾರೋಗ್ಯಕರ ಆಹಾರ ಪದ್ಧತಿ. ಹೀಗಿರುವಾಗ ಆರೋಗ್ಯವಂತರಾಗಿ ನೂರು ಕಾಲ ಜೀವಿಸಬೇಕು ಎಂಬ ಬಯಕೆ ನಿಮಗಿದ್ದರೆ, ಜೀವನಶೈಲಿಯಲ್ಲಿ ಈ ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಿ. ಇದರಿಂದ ಖಂಡಿತವಾಗಿಯೂ ದೀರ್ಘಾಯುಷ್ಯ ನಿಮ್ಮದಾಗುತ್ತದೆ.
ಸಮತೋಲಿತ ಆಹಾರ ಸೇವಿಸಿ: ನೀವು ಏನು ತಿನ್ನುತ್ತೀರೋ ಅದು ನಿಮ್ಮ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹಾಗಾಗಿ ಅನಾರೋಗ್ಯಕರ ಆಹಾರವನ್ನು ಸೇವನೆ ಮಾಡುವುದನ್ನು ತಪ್ಪಿಸಿ, ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರಗಳನ್ನು ಸೇವನೆ ಮಾಡಿ.
ನಿಯಮಿತವಾಗಿ ವ್ಯಾಯಾಮ ಮಾಡಿ:ನಿಯಮಿತ ವ್ಯಾಯಾಮವು ನಿಮ್ಮ ದೇಹವನ್ನು ಬಲಿಷ್ಠವಾಗಿ ಮತ್ತು ಸದೃಢವಾಗಿಡುವುದಲ್ಲದೆ, ನಿಮ್ಮ ಮೆದುಳಿಗೆ ಸಹ ಒಳ್ಳೆಯದು. ವ್ಯಾಯಾಮವು ಒತ್ತಡವನ್ನು ಕಡಿಮೆ ಮಾಡಲು, ನಿದ್ರೆಯನ್ನು ಸುಧಾರಿಸಲು ಮತ್ತು ಹೃದಯ ಕಾಯಿಲೆ, ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಕೇವಲ 5 ನಿಮಿಷಗಳ ವ್ಯಾಯಾಮವು ನಿಮ್ಮ ಆಯುಷ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸಾಕಷ್ಟು ನಿದ್ರೆ ಪಡೆಯಿರಿ: ನಿದ್ರೆಯು ನಿಮ್ಮ ದೇಹವನ್ನು ಚೇತರಿಸಿಕೊಳ್ಳಲು ಮತ್ತು ಶಕ್ತಿಯನ್ನು ತುಂಬಲು ಸಮಯ ನೀಡುತ್ತದೆ. ಪ್ರತಿ ರಾತ್ರಿ 7-8 ಗಂಟೆಗಳ ನಿದ್ರೆ ಮಾಡಿ. ನಿದ್ರೆಯ ಕೊರತೆಯು ತೂಕ ಹೆಚ್ಚಾಗಲು ಮತ್ತು ಕೆಟ್ಟ ಮನಸ್ಥಿತಿಗೆ ಕಾರಣವಾಗಬಹುದು. ಆದ್ದರಿಂದ ಸಾಕಷ್ಟು ನಿದ್ರೆಯನ್ನು ಪಡೆಯಿರಿ
ಒತ್ತಡವನ್ನು ಕಡಿಮೆ ಮಾಡಿ: ಇತ್ತೀಚಿನ ದಿನಗಳಲ್ಲಿ ಒತ್ತಡವು ಸಾಮಾನ್ಯವಾಗಿಬಿಟ್ಟಿದೆ. ಈ ಒತ್ತಡ ಹಲವಾರು ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯವಂತರಾಗಿ ಹೆಚ್ಚು ಕಾಲ ಬಾಳಲು ಒತ್ತಡಮುಕ್ತರಾಗಿರಿ. ಈ ಒತ್ತಡವನ್ನು ಕಡಿಮೆ ಮಾಡಲು, ಯೋಗ, ಧ್ಯಾನ ಅಥವಾ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.
ಸಕಾರಾತ್ಮಕವಾಗಿ ಯೋಚಿಸಿ: ಸಕಾರಾತ್ಮಕವಾಗಿ ಯೋಚಿಸುವುದರಿಂದ ನೀವು ಹೆಚ್ಚು ಕಾಲ ಬದುಕಲು ಸಹಾಯವಾಗುತ್ತದೆ. ಹಲವಾರು ಅಧ್ಯಯನಗಳು ಸಕಾರಾತ್ಮಕವಾಗಿರುವುದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿವೆ. ನೀವು ಜೀವನದ ಬಗ್ಗೆ ಹೆಚ್ಚು ಸಕಾರಾತ್ಮಕ ಮತ್ತು ಆಶಾವಾದಿಗಳಾಗಿದ್ದಷ್ಟೂ, ನೀವು ಕಡಿಮೆ ಅನಾರೋಗ್ಯವನ್ನು ಅನುಭವಿಸುತ್ತೀರಿ ಮತ್ತು ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತೀರಿ.
ಇದನ್ನೂ ಓದಿ: ಪ್ರತಿದಿನ ದಾಳಿಂಬೆ ಹಣ್ಣು ತಿನ್ನುವುದರಿಂದ ಲಭಿಸುವ ಪ್ರಯೋಜನಗಳೇನು ಗೊತ್ತಾ?
ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ: ಧೂಮಪಾನ ಮತ್ತು ಅತಿಯಾದ ಮದ್ಯಪಾನವು ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಈ ಅಭ್ಯಾಸಗಳು ಹೃದ್ರೋಗ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಇತರ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಮತ್ತು ಆಯುಷ್ಯವನ್ನೂ ಕಡಿಮೆ ಮಾಡುತ್ತದೆ. ಆದ್ದರಿಂದ ಧೂಮಪಾನವನ್ನು ತ್ಯಜಿಸಿ.
ಸಾಮಾಜಿಕ ಸಂಪರ್ಕದಲ್ಲಿರಿ: ಸಾಮಾಜಿಕ ಸಂಪರ್ಕಗಳನ್ನು ಹೊಂದಿರುವುದು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯಿರಿ. ಈ ಅಭ್ಯಾಸವು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ.
ಸಾಧ್ಯವಾದಷ್ಟು ನಡೆಯಿರಿ: ಪ್ರತಿನಿತ್ಯ ವಾಕಿಂಗ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನಡೆಯುವುದು ದೇಹವನ್ನು ಉತ್ತಮ ಸಮತೋಲನದಲ್ಲಿಡುತ್ತದೆ, ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ ಮತ್ತು ಮನಸ್ಥಿತಿಯೂ ಉತ್ತಮವಾಗಿರುತ್ತದೆ.
ನಿಯಮಿತ ವೈದ್ಯಕೀಯ ತಪಾಸಣೆ: ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ಯಾವುದೇ ಕಾಯಿಲೆಗಳಿಗೆ ಸಕಾಲಿಕ ಚಿಕಿತ್ಸೆ ಪಡೆಯಲು ವೈದ್ಯರೊಂದಿಗೆ ನಿಯಮಿತ ಸಮಾಲೋಚನೆಗಳು ಮತ್ತು ತಪಾಸಣೆಗಳು ಅತ್ಯಗತ್ಯ. ಇದು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:14 pm, Wed, 18 March 26